ಭಾರತದ ತಲಾ ಜಿಡಿಪಿ ಶೇಕಡಾ ೩೦ಕ್ಕಿಂತ ಹೆಚ್ಚು
ನವದೆಹಲಿ: ೨೦೧೯ ರಲ್ಲಿ ಖರೀದಿ ಸಾಮರ್ಥ್ಯ ಸಮಾನತೆ (ಪಿಪಿಪಿ) ಆಧಾರದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬಾಂಗ್ಲಾದೇಶಕ್ಕಿಂತ ೧೧ ಪಟ್ಟು ಹೆಚ್ಚಾಗಿದೆ ಎಂದು ಸರ್ಕಾರದ ಮೂಲಗಳು 2020 ಅಕ್ಟೋಬರ್ 15ರ ಗುರುವಾರ ತಿಳಿಸಿದವು.
೨೦೧೯ ರಲ್ಲಿ, ಖರೀದಿ ಸಮಾನತೆಯ ನೆಲೆಯಲ್ಲಿ ಭಾರತದ ಜಿಡಿಪಿ ಬಾಂಗ್ಲಾದೇಶಕ್ಕಿಂತ ೧೧ ಪಟ್ಟು ಹೆಚ್ಚಿದ್ದರೆ, ಜನಸಂಖ್ಯೆಯು ೮ ಪಟ್ಟು ಹೆಚ್ಚಾಗಿದೆ. ಕೊಳ್ಳುವ ಶಕ್ತಿ ಸಮಾನತೆಯ ದೃಷ್ಟಿಯಿಂದ, ೨೦೨೦ ಬಾಂಗ್ಲಾದೇಶದ ೫೧೩೯ ಡಾಲರ್‌ಗಳಿಗೆ ಹೋಲಿಸಿದರೆ ಐಎಂಎಫ್ ಭಾರತದ ತಲಾ ಜಿಡಿಪಿಯನ್ನು ೬೨೮೪ ಡಾಲರ್ ಎಂದು ಅಂದಾಜು ಮಾಡಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.
ಐಎಂಎಫ್ ೨೦೨೧ ರಲ್ಲಿ ಭಾರತದ ಜಿಡಿಪಿ ಶೇಕಡಾ ೮.೮ ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜು ಮಾಡಿದೆ. ಇದು ಬಾಂಗ್ಲಾದೇಶದ ಶೇಕಡಾ ೪.೪ರ ಎರಡು ಪಟ್ಟಿನಷ್ಟು ಆಗುತ್ತದೆ ಎಂದು ಮೂಲಗಳು ಹೇಳಿವೆ.
ಹಾಲಿ ಕೇಂದ್ರ ಸರ್ಕಾರದ ಅವಧಿಯಲ್ಲಿ ತಲಾ ಜಿಡಿಪಿಯು ೨೦೧೪-೧೫ರಲ್ಲಿ ಇದ್ದ ೮೩,೦೯೧ ರೂಪಾಯಿಗಳಿಂದ
೨೦೧೯-೨೦ರಲ್ಲಿ
೧,೦೮,೬೨೦ ರೂಪಾಯಿಗಳಿಗೆ ಏರಿದೆ. ಅಂದರೆ ಇದು ಶೇಕಡಾ ೩೦.೭ ರಷ್ಟು ಹೆಚ್ಚಾಗಿದೆ. ಯುಪಿಎ ೨ ರ ಅವಧಿಯಲ್ಲಿ ಇದು ಶೇಕಡಾ ೧೯.೮ ರಷ್ಟು ಹೆಚ್ಚಾಗಿತ್ತು ಎಂದು ಸರ್ಕಾರದ ಮೂಲಗಳು ವಿವರಿಸಿವೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ದೇಶದ ತಲಾ ಒಟ್ಟು ದೇಶೀಯ ಉತ್ಪನ್ನವನ್ನು (ಜಿಡಿಪಿ) ನೆರೆಯ ಬಾಂಗ್ಲಾದೇಶದೊಂದಿಗೆ ಹೋಲಿಸಿದ್ದನ್ನು ಉಲ್ಲೇಖಿಸಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ತರಾಟೆಗೆ ತೆಗೆದುಕೊಂಡಿದ್ದರು.
ಐಎಂಎಫ್-ವರ್ಲ್ಡ್ ಎಕನಾಮಿಕ್ ಔಟ್‌ಲುಕ್‌ನ ಅಂದಾಜನ್ನು ಹಂಚಿಕೊಂಡ ರಾಹುಲ್ ಗಾಂಧಿ, ಮುಂದಿನ ವರ್ಷಗಳಲ್ಲಿ ಬಾಂಗ್ಲಾದೇಶದ ತಲಾ ಜಿಡಿಪಿ ಭಾರತವನ್ನು ಹಿಂದಿಕ್ಕಬಹುದು ಎಂದು ಹೇಳಿದ್ದರು.
ಭಾರತ ಮತ್ತು ಬಾಂಗ್ಲಾದೇಶದ ತಲಾ ಜಿಡಿಪಿ ೨೦೨೦ ಕ್ಕೆ ೧,೮೮೮ ಡಾಲರ್ ಆಗಿರುತ್ತದೆ ಎಂದು ಐಎಂಎಫ್ ಗ್ರಾಫ್ ಅಂದಾಜು ಮಾಡಿತ್ತು.
ರಾಹುಲ್ ಗಾಂಧಿಯವರು ತಮ್ಮ ಟ್ವೀಟ್ ಮೂಲಕ, ಕೇಂದ್ರದಲ್ಲಿ ಆಡಳಿತ ನಡೆಸಿದ ಆರು ವರ್ಷಗಳ ಅವಧಿಯಲ್ಲಿ ಬಿಜೆಪಿಯ ರಾಜಕೀಯ ಕಾರ್ಯಸೂಚಿಯ ಪರಿಣಾಮವಾಗಿ ಭಾರತದ ಜಿಡಿಪಿಯಲ್ಲಿ ಇಳಿಕೆಯಾಗಿದೆ ಎಂದು ಹೇಳಿದ್ದರು.
"ಬಿಜೆಪಿಯ ದ್ವೇಷ ಭರಿತ ಸಾಂಸ್ಕೃತಿಕ ರಾಷ್ಟ್ರೀಯತೆಯ ಆರು ವರ್ಷಗಳ ಘನ ಸಾಧನೆ: ಬಾಂಗ್ಲಾದೇಶ ಭಾರತವನ್ನು ಹಿಂದಿಕ್ಕಲಿದೆ" ಎಂದು ಗಾಂಧಿ ವ್ಯಂಗ್ಯವಾಡಿದ್ದರು.
No comments:
Post a Comment