ರಿಲಯನ್ಸ್ ಜೊತೆಗಿನ ರಕ್ಷಣಾ ಇಲಾಖೆ ಒಪ್ಪಂದ ರದ್ದು
ನವದೆಹಲಿ: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ನೇವಲ್ ಆಂಡ್ ಇಂಜಿನಿಯರಿಂಗ್ ಲಿಮಿಟೆಡ್‌ಗೆ ನೀಡಲಾಗಿದ್ದ ೨,೫೦೦ ಕೋಟಿ ರೂಪಾಯಿಗಳ ಗುತ್ತಿಗೆ ಒಪ್ಪಂದವನ್ನು ರಕ್ಷಣಾ ಇಲಾಖೆ ರದ್ದು ಪಡಿಸಿದೆ.
ನೌಕಾ ಪಡೆಗಾಗಿ ಕಡಲಾಚೆಯ ಗಸ್ತು ಹಡಗುಗಳ ನಿರ್ಮಾಣಕ್ಕಾಗಿ ಈ ಗುತ್ತಿಗೆ ಟೆಂಡರನ್ನು ರಿಲಯನ್ಸ್ ಕಂಪೆನಿಗೆ ನೀಡಲಾಗಿತ್ತು.
ಆದರೆ ಗಸ್ತು ಹಡಗುಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿರುವುದನ್ನು ಅನುಸರಿಸಿ, ಈ ಒಪ್ಪಂದ ರದ್ದು ಪಡಿಸಲು ಭಾರತೀಯ ಸೇನೆ ನಿರ್ಧರಿಸಿದೆ.
ಎರಡು ವಾರಗಳ ಹಿಂದೆ ಈ ಒಪ್ಪಂದವನ್ನು ರದ್ದು ಪಡಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಸುದ್ದಿ ಮೂಲಗಳು ತಿಳಿಸಿವೆ. ರಿಲಯನ್ಸ್ ಸಂಸ್ಥೆಯು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
೨೦೧೧ರಲ್ಲಿ ಐದು ಯುದ್ಧ ಹಡಗುಗಳ ನಿರ್ಮಾಣಕ್ಕೆ ಗುಜರಾತ್ ಮೂಲದ ಪಿಪ್ವಾವ್ ಡಿಫೆನ್ಸ್ ಆಂಡ್ ಆಫ್‌ಶೋರ್ ಇಂಜಿನಿಯರಿಂಗ್ ಲಿ. ಕಂಪೆನಿ ಜೊತೆ ರಕ್ಷಣಾ ಇಲಾಖೆ ಒಪ್ಪಂದ ಮಾಡಿಕೊಂಡಿತ್ತು. ಆಗ ನಿಖಿಲ್ ಗಾಂಧಿ ಈ ಕಂಪೆನಿಯ ಮಾಲಿಕರಾಗಿದ್ದರು. ನಂತರ ಅನಿಲ್ ಅಂಬಾನಿ ಅವರು ಈ ಕಂಪೆನಿಯನ್ನು ಖರೀದಿಸಿದ್ದರು. ನಂತರ ಕಂಪೆನಿಯ ಹೆಸರನ್ನು ರಿಲಯನ್ಸ್ ನೇವಲ್ ಆಂಡ್ ಇಂಜಿನಿಯರಿಂಗ್ ಲಿಮಿಟೆಡ್ (ಆರ್‌ಎನ್‌ಇಎಲ್ ) ಎಂಬುದಾಗಿ ಬದಲಾಯಿಸಲಾಗಿತ್ತು.
ಸದ್ಯ ಆರ್‌ಎನ್‌ಇಎಲ್ ಸಂಸ್ಥೆಯು ದಿವಾಳಿಯಾಗಿದ್ದು, ಕಂಪೆನಿ ವಿರುದ್ಧ ರಾಷ್ಟ್ರೀಯ ಕಂಪೆನಿ ಕಾನೂನು ಪ್ರಾಧಿಕಾರದಲ್ಲಿ (ಎನ್ಸಿಎಲ್ಟಿ) ದಿವಾಳಿ ಪ್ರಕ್ರಿಯೆ ನಡೆಯುತ್ತಿದೆ.
ಸಾಲ ಮರುಪಾವತಿಗೆ ಕಂಪೆನಿ ವಿಫಲವಾಗುತ್ತಿದ್ದಂತೆಯೇ ಐಡಿಬಿಐ ಬ್ಯಾಂಕ್ ನೇತೃತ್ವದ ಬ್ಯಾಂಕುಗಳ ಒಕ್ಕೂಟವು ರಾಷ್ಟ್ರೀಯ ಕಂಪೆನಿ ಕಾನೂನು ಪ್ರಾಧಿಕಾರದ ಮೆಟ್ಟಿಲೇರಿದೆ.
ಪ್ರಸ್ತುತ ೧೧,೦೦೦ ಕೋಟಿ ರೂಪಾಯಿಗಳ ಸಾಲದ ಹೊರೆ ಕಂಪೆನಿಯ ಮೇಲಿದೆ.
No comments:
Post a Comment