ಜೆಇಇ (ಮುಖ್ಯ) ಪರೀಕ್ಷೆ ಇನ್ನು ಪ್ರಾದೇಶಿಕ ಭಾಷೆಗಳಲ್ಲಿ
ನವದೆಹಲಿ: ಜೆಇಇ (ಮುಖ್ಯ/ಮೇನ್) ಪರೀಕ್ಷೆಯನ್ನು ೨೦೨೦ರ ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ ಇನ್ನು ಮುಂದೆ ಪ್ರಾದೇಶಿಕ ಭಾಷೆಗಳನ್ನೂ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ ಪೋಖ್ರಿಯಾಲ್ 2020 ಅಕ್ಟೋಬರ್ 22ರ ಗುರುವಾರ ಪ್ರಕಟಿಸಿದರು.
ಜೆಇಇ (ಮುಖ್ಯ) ಪರೀಕ್ಷೆಯನ್ನು ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ ಭಾರತದ ಹೆಚ್ಚಿನ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ಜಂಟಿ ಪ್ರವೇಶ ಮಂಡಳಿ (ಜೆಎಬಿ) ನಿರ್ಧರಿಸಿದೆ ಎಂದು ಪೋಖ್ರಿಯಾಲ್ ಹೇಳಿದರು.
"ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ನಡೆಸಲಾಗುವುದು, ಈ ಪರೀಕ್ಷೆಯ ಆಧಾರದ ಮೇಲೆ ರಾಜ್ಯ ಪ್ರಾದೇಶಿಕ ಕಾಲೇಜುಗಳಿಗೆ ಪ್ರವೇಶವನ್ನು ನಿರ್ಧರಿಸಲಾಗುತ್ತದೆ. ಜೆಇಇ (ಮುಖ್ಯ) ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪ್ರವೇಶಿಸುವ ರಾಜ್ಯಗಳ ರಾಜ್ಯ ಭಾಷೆಯನ್ನು ಸಹ ಇದರ ಅಡಿಯಲ್ಲಿ ಸೇರಿಸಲಾಗುವುದು’ ಎಂದು ಶಿಕ್ಷಣ ಸಚಿವರು ಟ್ವೀಟ್ ಮಾಡಿದರು.
ಪಿಸಾ (ಪಿಐಎಸ್ಎ) ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ದೇಶಗಳು ಮಾತೃಭಾಷೆಯನ್ನು ಬೋಧನಾ ಮಾಧ್ಯಮವಾಗಿ ಬಳಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
"ಜಂಟಿ ಪರೀಕ್ಷಾ ಮಂಡಳಿ (ಜೆಎಬಿ) ನಿರ್ಧಾರವು ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತದೆ’ ಎಂದು ಸಚಿವರು ಹೇಳಿದರು.
ಇತ್ತೀಚೆಗೆ ’ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦’ ಕುರಿತು ವೆಬಿನಾರ್ ಉದ್ದೇಶಿಸಿ ಮಾತನಾಡಿದ್ದ ಪೋಖ್ರಿಯಾಲ್, "ನಾವು ಇಂಗ್ಲಿಷ್ಗೆ ವಿರೋಧಿಯಲ್ಲ ಆದರೆ ಮಾತೃಭಾಷೆಯು ಶಿಕ್ಷಣ ಮಾಧ್ಯಮವಾಗಿ ಭಾರತೀಯ ಭಾಷೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ’ ಎಂದು ಹೇಳಿದ್ದರು.
ಯಾವುದೇ ರಾಜ್ಯದ ಮೇಲೆ ಯಾವುದೇ ಭಾಷೆಯನ್ನು ಹೇರುವ ಉದ್ದೇಶವನ್ನು ಸರ್ಕಾರ ಹೊಂದಿಲ್ಲ ಎಂದು ಶಿಕ್ಷಣ ಸಚಿವರು ಹೇಳಿದರು. "ನಾವು ೨೨ ಭಾರತೀಯ ಭಾಷೆಗಳನ್ನು ಬಲಪಡಿಸುವುದರ ಪರವಾಗಿದ್ದೇವೆ ಮತ್ತು ಈ ಎಲ್ಲಾ ಭಾಷೆಗಳನ್ನು ಉತ್ತೇಜಿಸಲು ನಾವು ಬಯಸುತ್ತೇವೆ’ ಎಂದು ಅವರು ಹೇಳಿದರು.
No comments:
Post a Comment