Friday, October 30, 2020

ಪುಲ್ವಾಮಾ ದಾಳಿ: ಕಾಂಗ್ರೆಸ್ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

 ಪುಲ್ವಾಮಾ ದಾಳಿ: ಕಾಂಗ್ರೆಸ್ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

ನವದೆಹಲಿ: ೨೦೧೯ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಪಾಕಿಸ್ತಾನ ಸಚಿವರೊಬ್ಬರು ಬಹಿರಂಗವಾಗಿ ಒಪ್ಪಿಕೊಂಡಿರುವುದು ಕಾಂಗ್ರೆಸ್ ಮತ್ತು ಅದರ ನಾಯಕರನ್ನು ಅನಾವರಣಗೊಳಿಸಿದೆ, ಅವರು ಈಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ 2020 ಅಕ್ಟೋಬರ್ 30 ಶುಕ್ರವಾರ ಆಗ್ರಹಿಸಿತು.

೪೦ ಮಂದಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿಯನ್ನು ಹುತಾತ್ಮರನ್ನಾಗಿಸಿ,  ಉಭಯ ದೇಶಗಳನ್ನು ಯುದ್ಧದ ಅಂಚಿಗೆ ತಂದ ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಪಾಕಿಸ್ತಾನದ ಹಿರಿಯ ಸಚಿವ ಫವಾದ್ ಚೌಧರಿ ಗುರುವಾರ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಒಪ್ಪಿಕೊಂಡಿದ್ದರು. ಆದರೆ ಬಳಿಕತಮ್ಮನ್ನು ತಪ್ಪಾಗಿ ಉಲ್ಲೇಖಿಲಾಗಿದೆ ಎಂದು ಸಮಜಾಯಿಷಿ ನೀಡಿದ್ದರು. ತಾವು ಮಾತನಾಡಿದ್ದು ಪಾಕಿಸ್ತಾನದ "ಪುಲ್ವಾಮಾ ನಂತರದ ಕ್ರಮ" ವನ್ನು ಎಂದು ಅವರು ಪ್ರತಿಪಾದಿಸಿದ್ದರು. ‘ಪುಲ್ವಾಮಾ ಭಯೋತ್ಪಾದಕ ದಾಳಿಯ ಹಿಂದೆ ತನ್ನ ಕೈ ಇತ್ತೆಂಬುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಈಗ, ಫಿತೂರಿ ಸಿದ್ಧಾಂತಗಳ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್ ಮತ್ತು ಇತರರು ದೇಶದ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ಪ್ರಕಾಶ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

"ವಿಶ್ವದ ಎಲ್ಲಿಯಾದರೂ ನಡೆಯುವ ಭಯೋತ್ಪಾದನೆಯ ಬೇರುಗಳು ಪಾಕಿಸ್ತಾನದಲ್ಲಿಯೇ ಇರುತ್ತವೆ. ಆದರೆ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಅವರ ಸಹಚರರು ಪುಲ್ವಾಮಾ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಇಮ್ರಾನ್ ಖಾನ್ ನಡುವಿನ ಪಂದ್ಯದ ಫಿಕ್ಸಿಂಗ್ ಎಂದು ಬಣ್ಣಿಸಿದ್ದು ವಿಪರ್ಯಾಸ. ಇದು ಕಾಂಗ್ರೆಸ್ ಮತ್ತು ಅದರ ನಾಯಕರು ಮೋದಿಯವರ ಮೇಲಿನ ದ್ವೇಷದ ನೆಪದಲ್ಲಿ ಭಾರತ ವಿರೋಧಿಗಳಾಗಿದ್ದಾರೆ ಎಂಬುದನ್ನು ತೋರಿಸಿದೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪತ್ರ ಹೇಳಿದ್ದಾರೆ.

ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸಿದ ಬಿಜೆಪಿಯ ರಾಷ್ಟ್ರೀಯ ಐಟಿ ಉಸ್ತುವಾರಿ ಅಮಿತ್ ಮಾಳವೀಯ ಅವರು ಟ್ವೀಟ್ ಮೂಲಕ "ಇಮ್ರಾನ್ ಖಾನ್ ಅವರ ಸಂಪುಟ ಸಚಿವ ಫವಾದ್ ಹುಸೇನ್ ಅವರು ಪುಲ್ವಾಮಾ ಭಯೋತ್ಪಾದಕ ದಾಳಿ ಪಾಕಿಸ್ತಾನದ ಕಾರ್ಯವೆಂದು ಒಪ್ಪಿಕೊಂಡಿದ್ದಾರೆ ಮತ್ತು ಇಮ್ರಾನ್ ನಾಯಕತ್ವಕ್ಕೆ ಅದರ ಶ್ರೇಯಸ್ಸನ್ನು ಸಲ್ಲಿಸಿದ್ದಾರೆ. ಈಗ ಪಾಕಿಸ್ತಾನಿಗಳ ಪರವಾಗಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ರಾಹುಲ್ ಗಾಂಧಿ, ಫರೂಕ್ ಅಬ್ದುಲ್ಲಾ, ಮಮತಾ ಬ್ಯಾನರ್ಜಿ, ರಾಮ್ಗೋಪಾಲ್ ಯಾದವ್ ಮತ್ತು ಇತರರನ್ನು ಪ್ರಶ್ನಿಸಬೇಕಾಗಿದೆ ಎಂದು ಹೇಳಿದ್ದಾರೆ.

ಪುಲ್ವಾಮಾ ದಾಳಿಯ ಸಮಯವನ್ನು ಉಲ್ಲೇಖಿಸಿದ್ದ ವಿರೋಧ ಪಕ್ಷಗಳ ನಾಯಕರುಲೋಕಸಭಾ ಚುನಾವಣೆಗೆ ತಿಂಗಳುಗಳ ಮುಂಚೆಯೇ ನಡೆದ ಘಟನೆಯಿಂದ ಯಾರಿಗೆ ಪ್ರಯೋಜನವಾಗಲಿದೆ ಎಂಬುದಾಗಿ ಪ್ರಶ್ನಿಸಿದ್ದಕ್ಕೆ ಸಾಕ್ಷಿಯಾಗಿರುವ ಟ್ವೀಟ್, ಸುದ್ದಿ ವರದಿಗಳನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರಿಗೆ ತಮ್ಮ ಖಾತೆಗೆ ಮಾಳವೀಯ ಅವರು ಜೋಡಿಸಿ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಚೌಧರಿ ರಾಷ್ಟ್ರೀಯ ಅಸೆಂಬ್ಲಿ ಚರ್ಚೆಯ ಸಂದರ್ಭದಲ್ಲಿ ಭಾವೋದ್ರೇಕದ ಹೇಳಿಕೆ ನೀಡಿ, "ಹಮ್ನೆ ಹಿಂದೂಸ್ತಾನ್ ಕೊ ಘುಸ್ ಕೆ ಮಾರಾ (ನಾವು ಭಾರತವನ್ನು ಅವರ ಮನೆಯಲ್ಲಿ ಹೊಡೆದಿದ್ದೇವೆ). ಪುಲ್ವಾಮಾದಲ್ಲಿ ನಮ್ಮ ಯಶಸ್ಸು ಇಮ್ರಾನ್ ಖಾನ್ ಅವರ ನಾಯಕತ್ವದಲ್ಲಿ ರಾಷ್ಟ್ರ ಗಳಿಸಿದ ಯಶಸ್ಸಾಗಿದೆ. ನೀವು ಮತ್ತು ನಾವೆಲ್ಲರೂ ಯಶಸ್ಸಿನ ಭಾಗವಾಗಿದ್ದೇವೆ" ಎಂದು ಹೇಳಿಕೊಂಡಿದ್ದರು.

"ಪುಲ್ವಾಮಾದಲ್ಲಿನ ಯಶಸ್ಸು" ಬಗ್ಗೆ ಅವರ ಕೆಲವು ಶಾಸನಕರ್ತರು ಆಕ್ಷೇಪಿಸಿದಾಗ, "ಪುಲ್ವಾಮಾ ಘಟನೆಯ ನಂತರ, ಪಾಕಿಸ್ತಾನವು ಭಾರತೀಯ ಭೂಪ್ರದೇಶದೊಳಗೆ ಅದನ್ನು ಗುರಿಯಾಗಿಸಿಕೊಂಡು ಹೋದಾಗ, ಭಾರತದ ಇಡೀ ಮಾಧ್ಯಮಗಳು ನಾಚಿದವು ಎಂದು ಸಚಿವರು ಹೇಳಿದ್ದರು.

ವಿರೋಧ ಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕ ಅಯಾಜ್ ಸಾದಿಕ್ ಅವರು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು ಮಹತ್ವದ ಸಭೆಯೊಂದರಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಇಲ್ಲದಿದ್ದಲ್ಲಿ ಭಾರತ ದಾಳಿ ನಡೆಸಬಹುದು ಎಂದು ಅವರು ಹೇಳಿದ್ದರು. ವೇಳೆಯಲ್ಲಿ ಪಾಕ್ ಸೇನಾ ಮುಖ್ಯಸ್ಥ ಕಮರ್ ಬಜ್ವಾ ಅವರ ಹಣೆಯಿಂದ ಬೆವರು ಸುರಿಯುತ್ತಿತ್ತು ಮತ್ತು ಕಾಲುಗಳು ನಡುಗುತ್ತಿದ್ದವು ಎಂದು ಬುಧವಾರ ಬಹಿರಂಗ ಪಡಿಸಿದ್ದರು.

ಸಾದಿಕ್ ಹೇಳಿಕೆಯ ಮರುದಿನ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತ ಸಹಾಯಕ ಚೌಧರಿ ಪಾಕ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಹೇಳಿಕೆ ನೀಡಿ, ಪುಲ್ವಾಮಾ ದಾಳಿಯ ಹಿಂದೆ ಪಾಕಿಸ್ತಾನದ ಪಾತ್ರವಿದೆ. ವೈರಿಯನ್ನು ನಾವು ಅವರ ಮನೆಯಲ್ಲೇ ಹೊಡೆದಿದ್ದೇವೆ ಎಂದು ಹೇಳಿಕೆ ನೀಡಿದ್ದರು.

೨೦೧೯ರ ಫೆಬ್ರುವರಿ ೨೭ರಂದು, ತನ್ನ ಮಿಗ್ -೨೧ ಬೈಸನ್ ಜೆಟ್ ವಿಮಾನವನ್ನು ಪಾಕಿಸ್ತಾನದ ಜೆಟ್ಗಳ ಜೊತೆಗಿನಡಾಗ್ ಫೈಟ್ನಲ್ಲಿ ಹೊಡೆದು ಉರುಳಿಸಿದ ಬಳಿಕ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರನ್ನು ಪಾಕ್ ಸೇನೆ ವಶಕ್ಕೆ ಪಡೆದಿತ್ತು.

೨೦೧೯ರ ಫೆಬ್ರವರಿ ೨೬ರ ನಸುಕಿನಲ್ಲಿ ಭಾರತೀಯ ವಾಯುಪಡೆ ಜೆಟ್ ವಿಮಾನಗಳು ಜೆಟ್ಗಳು ಪಾಕಿಸ್ತಾನದ ಖೈಬರ್ ಪಖ್ತೂನ್ ಖ್ವಾದಲ್ಲಿನ ಬಾಲಕೋಟ್ ಜೈಶ್--ಮೊಹಮ್ಮದ್ (ಜೆಎಎಂ) ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ೪೦ ಯೋಧರು ಹುತಾತ್ಮರಾದುದಕ್ಕಾಗಿ  ಪ್ರತೀಕಾರ ತೀರಿಸಿಕೊಂಡಿದ್ದವು.

ಅಮೆರಿಕ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಸಮುದಾಯವು ತನ್ನ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಸುರಕ್ಷಿತ ತಾಣವನ್ನು ನಿರಾಕರಿಸುವಂತೆ ಮತ್ತು ಪುಲ್ವಾಮಾ ದಾಳಿಯ ದುಷ್ಕರ್ಮಿಗಳನ್ನು ಕಟಕಟೆಗೆ ತರುವಂತೆ ಪಾಕಿಸ್ತಾನವನ್ನು ಒತ್ತಾಯಿಸಿದ್ದವು.

No comments:

Advertisement