Friday, October 16, 2020

ಹೆಣ್ಣುಮಕ್ಕಳ ಮದುವೆ ವಯಸ್ಸು ಶೀಘ್ರ ಪರಿಷ್ಕರಣೆ: ಪ್ರಧಾನಿ

 ಹೆಣ್ಣುಮಕ್ಕಳ ಮದುವೆ ವಯಸ್ಸು ಶೀಘ್ರ ಪರಿಷ್ಕರಣೆ: ಪ್ರಧಾನಿ

ನವದೆಹಲಿ: ಹೆಣ್ಣು ಮಕ್ಕಳ ಮದುವೆ ವಯಸ್ಸಿನ ಪರಿಷ್ಕರಣೆ ಸಂಬಂಧ ರಚಿಸಲಾಗಿರುವ ಸಮಿತಿಯಿಂದ ವರದಿ ಬಂದ ಬಳಿಕ ಬಾಲಕಿಯರ ಕಾನೂನು ಬದ್ಧ ಮದುವೆಯ ಕನಿಷ್ಠ ವಯಸ್ಸನ್ನು ಪರಿಷ್ಕರಿಸುವ ಬಗ್ಗೆ ಕೇಂದ್ರವು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಅಕ್ಟೋಬರ್ 16  ಶುಕ್ರವಾರ ಹೇಳಿದರು.

ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್ಎಒ) ೭೫ ನೇ ವಾರ್ಷಿಕೋತ್ಸವದಂದು ೭೫ ರೂ.ಗಳ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದ ನಂತರ ವಿಡಿಯೋ ಸಮ್ಮೇಳನವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡುತ್ತಿದ್ದರು.

ಕಳೆದ ಆರು ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಹಲವಾರು ಪ್ರಯತ್ನಗಳಿಂದಾಗಿ ಶಿಕ್ಷಣದಲ್ಲಿ ಬಾಲಕಿಯರ ಒಟ್ಟು ದಾಖಲಾತಿ ಅನುಪಾತವು ದೇಶದಲ್ಲಿ ಮೊದಲ ಬಾರಿಗೆ ಬಾಲಕರಿಗಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರು.

"ಹೆಣ್ಣುಮಕ್ಕಳ ವಿವಾಹದ ಆದರ್ಶ ವಯಸ್ಸು ಯಾವುದು ಎಂದು ನಿರ್ಧರಿಸಲು ಒಂದು ಪ್ರಮುಖ ಚರ್ಚೆ ನಡೆಯುತ್ತಿದೆ ಎಂದು ಪ್ರಧಾನಿ ನುಡಿದರು.

ಬಾಲಕಿಯರ ಮದುವೆ ವಯಸ್ಸಿಗೆ ಸಂಬಂಧಿಸಿದಂತೆ ಸಮಿತಿಯ ವರದಿ ಹಾಗೂ ಸರ್ಕಾರ ಯಾವಾಗ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದಾಗಿ ವಿಚಾರಿಸಿ ದೇಶಾದ್ಯಂತದಿಂದ ತಮಗೆ ಪತ್ರಗಳು ಬರುತ್ತಿವೆ ಎಂದು ಪ್ರಧಾನಿ ಹೇಳಿದರು.

"ನಾನು ಅವರಿಗೆ ಭರವಸೆ ನೀಡಲು ಬಯಸುತ್ತೇನೆ, ವರದಿ ಸಲ್ಲಿಸಿದ ನಂತರ ಸರ್ಕಾರ ಶೀಘ್ರದಲ್ಲೇ ತನ್ನ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಮೋದಿ ಹೇಳಿದರು. ತಮ್ಮ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಮಹಿಳೆಯರಿಗೆ ವಿವಾಹದ ಕನಿಷ್ಠ ವಯಸ್ಸು ಯಾವುದು ಎಂಬುದಾಗಿ ಸರ್ಕಾರ ಚರ್ಚಿಸುತ್ತಿದೆ ಮತ್ತು ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯನ್ನು ರಚಿಸಿದೆ ಎಂದು ಘೋಷಿಸಿದ್ದರು.

ಪ್ರಸ್ತುತ, ಮದುವೆಯ ಕನಿಷ್ಠ ವಯಸ್ಸು ಮಹಿಳೆಯರಿಗೆ ೧೮ ವರ್ಷಗಳು ಮತ್ತು ಪುರುಷರಿಗೆ ೨೧ ವರ್ಷಗಳಾಗಿವೆ.

ಅಪೌಷ್ಟಿಕತೆ ವಿರುದ್ಧ ಹೋರಾಡಲು ಕಳೆದ ಆರು ವರ್ಷಗಳಲ್ಲಿ ತಮ್ಮ ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ಪ್ರಧಾನಿ ಮೋದಿ ಎತ್ತಿ ತೋರಿಸಿದರು.

ಬಡ ಮಹಿಳೆಯರಿಗೆ ಸರ್ಕಾರವು ಕೇವಲ ಒಂದು ರೂಪಾಯಿಗೆ ನೈರ್ಮಲ್ಯ ಪ್ಯಾಡ್ಗಳನ್ನು ನೀಡುತ್ತಿದೆ ಎಂದು ಅವರು ಹೇಳಿದರು.

ಅಪೌಷ್ಟಿಕತೆಯ ಸವಾಲನ್ನು ಎದುರಿಸಲು ತಮ್ಮ ಸರ್ಕಾರ ಸಮಗ್ರ ವಿಧಾನವನ್ನು ಅನುಸರಿಸುತ್ತಿದೆ. ಹೆಚ್ಚಿನ ಅಪೌಷ್ಟಿಕತೆಗೆ ಕಾರಣವಾಗಿರುವ ಎಲ್ಲ ಅಂಶಗಳ ಮೇಲೆ ಕೆಲಸ ಮಾಡಲು ಸರ್ಕಾರ ಬಹು ಆಯಾಮದ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ ಎಂದು ಪ್ರಧಾನಿ ಹೇಳಿದರು.

ಸರ್ಕಾರ ರಾಷ್ಟ್ರೀಯ ಪೌಷ್ಠಿಕಾಂಶ ಮಿಷನ್ ಪ್ರಾರಂಭಿಸಿದೆ ಎಂದು ಹೇಳಿದ ಪ್ರಧಾನಿ,  ಇತರ ಸಾಧನೆಗಳನ್ನು ಉಲ್ಲೇಖಿಸಿ, ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಸರ್ಕಾರವು ದೇಶಾದ್ಯಂತ ೧೧ ಕೋಟಿ ಶೌಚಾಲಯಗಳನ್ನು ನಿರ್ಮಿಸಿದೆ ಮತ್ತು ಕೊಳವೆಗಳ ಕುಡಿಯುವ ನೀರನ್ನು ಒದಗಿಸಲು ಜಲ ಜೀವನ್ ಮಿಷನ್ ಅನ್ನು ಪ್ರಾರಂಭಿಸಿದೆ ಎಂದು ವಿವರಿಸಿದರು.

No comments:

Advertisement