ಫಿಜರ್ ಅಂತಿಮ ಪ್ರಯೋಗ: ಕೊರೋನಾ ಲಸಿಕೆ ಶೇ.95 ಪರಿಣಾಮಕಾರಿ
ವಾಷಿಂಗ್ಟನ್: ಬಯೋಟೆಕ್ ಕಂಪೆನಿ ಫಿಜರ್ ತನ್ನ ಪ್ರಾಯೋಗಿಕ ಕೋವಿಡ್ -೧೯ ಲಸಿಕೆಯ ಸಂಪೂರ್ಣ ಅಧ್ಯಯನದಿಂದ ಲಸಿಕೆಯು ೯೫ರಷ್ಟು ಪರಿಣಾಮಕಾರಿ ಎಂಬುದು ದೃಢಪಟ್ಟಿದೆ, ಲಸಿಕೆ ಯಾವುದೇ ಗಂಭೀರ ಅಡ್ಡಪರಿಣಾಮಗಳನ್ನು ತೋರಿಸಿಲ್ಲ ಎಂದು 2020 ನವೆಂಬರ್ 18ರ ಬುಧವಾರ ಪ್ರಕಟಿಸಿತು.
ಮುಂದಿನ ಕೆಲವೇ ದಿನಗಳಲ್ಲಿ ಅಮೆರಿಕದ ಔಷಧ ನಿಯಂತ್ರಕರಿಂದ ತುರ್ತು ಬಳಕೆಯ ದೃಢೀಕರಣಕ್ಕಾಗಿ ಕಂಪೆನಿಯು ಅರ್ಜಿ ಸಲ್ಲಿಸಲಿದೆ ಎಂದು ಫಿಜರ್ ತಿಳಿಸಿತು.
"ಈ ವಿನಾಶಕಾರಿ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಲಸಿಕೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನ ಈ ಐತಿಹಾಸಿಕ ಎಂಟು ತಿಂಗಳ ಪಯಣದಲ್ಲಿ ಪ್ರಯೋಗದ ಫಲಿತಾಂಶಗಳು ಒಂದು ಪ್ರಮುಖ ಹೆಜ್ಜೆಯಾಗಿದೆ" ಎಂದು ಫಿಜರ್ ಸಿಇಒ ಆಲ್ಬರ್ಟ್ ಬೌರ್ಲಾ ಹೇಳಿದರು.
ಕಳೆದ ವಾರ ಕಂಪೆನಿಯು ತನ್ನ ಲಸಿಕೆಯನ್ನು ಬಯೋಟೆಕ್ ಜೊತೆ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದ್ದು, ಹಾಲಿ ೩ ನೇ ಹಂತದ ಪ್ರಯೋಗಗಳಲ್ಲಿ ಕೋವಿಡ್ -೧೯ ಸೋಂಕುಗಳನ್ನು ತಡೆಗಟ್ಟುವಲ್ಲಿ ಶೇಕಡಾ ೯೦ರಷ್ಟು ಪರಿಣಾಮಕಾರಿ ಎಂದು ಘೋಷಿಸಿತ್ತು.
ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಎರಡು ಡೋಸ್ಗಳಲ್ಲಿ ಎರಡನೆಯ ಡೋಸ್ ನೀಡಿಕೆಯ ೭ ದಿನಗಳ ಬಳಿಕ ಮತ್ತು ಮೊದಲನೆಯ ಡೋಸ್ ನೀಡಿದ ೨೮ ದಿನಗಳ ನಂತರ ರೋಗಿಗಳಿಗೆ ರಕ್ಷಣೆಯನ್ನು ಸಾಧಿಸಲಾಗಿತ್ತು.
"ನಮ್ಮ ಹಂತ ೩ ಕೋವಿಡ್ -೧೯ ಲಸಿಕೆ ಪ್ರಯೋಗದ ಮೊದಲ ಫಲಿತಾಂಶವು ಕೋವಿಡ್-೧೯ ಅನ್ನು ತಡೆಗಟ್ಟುವ ನಮ್ಮ ಲಸಿಕೆಯ ಸಾಮರ್ಥ್ಯದ ಆರಂಭಿಕ ಸಾಕ್ಷ್ಯವನ್ನು ಒದಗಿಸುತ್ತದೆ’ ಎಂದು ಬೌರ್ಲಾ ಕಳೆದ ವಾರ ಹೇಳಿದ್ದರು.
"ಈ ಜಾಗತಿಕ ಆರೋಗ್ಯ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ನೆರವಾಗಲು ವಿಶ್ವಾದ್ಯಂತದ ಜನರಿಗೆ ಹೆಚ್ಚು ಅಗತ್ಯವಿರುವ ಔಷಧ ಒದಗಿಸಲು ನಾವು ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಜಗತ್ತಿಗೆ ಹೆಚ್ಚು ಅಗತ್ಯವಿರುವ ಸಮಯದಲ್ಲಿ ನಮ್ಮ ಲಸಿಕೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಾವು ಈ ನಿರ್ಣಾಯಕ ಮೈಲಿಗಲ್ಲನ್ನು ತಲುಪುತ್ತಿದ್ದೇವೆ’ ಎಂದು ಅವರು ಹೇಳಿದ್ದರು.
ಫಿಜರ್ ತನ್ನ ಪ್ರಾಯೋಗಿಕ ಲಸಿಕೆಗಾಗಿ ಅಮೆರಿಕದ ನಾಲ್ಕು ರಾಜ್ಯಗಳಲ್ಲಿ ಮುಂಚೂಣಿ ವಿತರಣಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಲಸಿಕೆಗಳನ್ನು ೨-೮ ಡಿಗ್ರಿ ಸೆಲ್ಸಿಯಸ್ನ ಲಸಿಕೆಗಳ ಪ್ರಮಾಣಕ್ಕಿಂತ ಗಮನಾರ್ಹವಾಗಿ ಕೆಳಗಿರುವ -೭೦ ಡಿಗ್ರಿ ಸೆಲ್ಸಿಯಸ್ನಲ್ಲಿ ಸಾಗಿಸಬೇಕು ಮತ್ತು ಸಂಗ್ರಹಿಸಬೇಕು.
"ಈ ಲಸಿಕೆಯ ಮುಂಚೂಣಿ ವಿತರಣಾ ಫಲಿತಾಂಶಗಳು ಅಮೆರಿಕದ ಇತರ ರಾಜ್ಯಗಳು ಮತ್ತು ಅಂತಾರಾಷ್ಟ್ರೀಯ ಸರ್ಕಾರಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ನಾವು ಭಾವಿಸುತ್ತೇವೆ, ಏಕೆಂದರೆ ಅವರು ಪರಿಣಾಮಕಾರಿ ಕೋವಿಡ್-೧೯ ಲಸಿಕೆ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಿದ್ಧರಾಗಿದ್ದಾರೆ" ಎಂದು ಫಿಜರ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿತ್ತು.
ಒಟ್ಟಾರೆ ಗಾತ್ರ, ಜನಸಂಖ್ಯೆಯ ವೈವಿಧ್ಯತೆ, ರೋಗನಿರೋಧಕ ಮೂಲಸೌಕರ್ಯ, ಮತ್ತು ವೈವಿಧ್ಯಮಯ ನಗರ ಮತ್ತು ಗ್ರಾಮೀಣ ಸೆಟ್ಟಿಂಗ್ಗಳಲ್ಲಿ ವ್ಯಕ್ತಿಗಳನ್ನು ತಲುಪುವ ಅಗತ್ಯತೆಗಳಲ್ಲಿನ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಂಡ ನಂತರ ಈ ಕಾರ್ಯಕ್ರಮಕ್ಕಾಗಿ ರೋಡ್ ಐಲೆಂಡ್, ಟೆಕ್ಸಾಸ್, ನ್ಯೂ ಮೆಕ್ಸಿಕೊ ಮತ್ತು ಟೆನ್ನೆಸ್ಸಿಯನ್ನು ಆಯ್ಕೆ ಮಾಡಲಾಗಿತ್ತು ಎಂದು ಫಿಜರ್ ಹೇಳಿತ್ತು.
ಪ್ರಪಂಚದಾದ್ಯಂತ, ಕೋವಿಡ್ -೧೯ ಸೋಂಕುಗಳ ಪ್ರಮಾಣವು ದಾಖಲೆಯ ಗರಿಷ್ಠ ಮಟ್ಟಕ್ಕೆ ಏರುತ್ತಿದೆ, ಆಸ್ಪತ್ರೆಯ ತೀವ್ರ ನಿಗಾ ಘಟಕಗಳು ಭರ್ತಿಯಾಗುತ್ತಿವೆ ಮತ್ತು ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಪೂರೈಕೆ ಪ್ರಕ್ಷೇಪಗಳ ಆಧಾರದ ಮೇಲೆ, ಕಂಪೆನಿಗಳು ೨೦೨೦ ರಲ್ಲಿ ಜಾಗತಿಕವಾಗಿ ೫೦ ಮಿಲಿಯನ್ ಲಸಿಕೆ ಪ್ರಮಾಣವನ್ನು ಮತ್ತು ೨೦೨೧ ರಲ್ಲಿ ೧.೩ ಬಿಲಿಯನ್ ಡೋಸ್ಗಳನ್ನು ಪೂರೈಸುವ ನಿರೀಕ್ಷೆಯಿದೆ.
ಫಿಜರ್ ಮತ್ತು ಬಯೋಟೆಕ್ ಘೋಷಣೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು ’ಉತ್ತೇಜನಕಾರಿ’ ಎಂದು ಶ್ಲಾಘಿಸಿದೆ. "ಕೋವಿಡ್-೧೯ನ್ನು ಸೋಲಿಸಲು ಹೊಸ ಸುರಕ್ಷಿತ, ಪರಿಣಾಮಕಾರಿ ಸಾಧನಗಳನ್ನು ಅಭಿವೃದ್ಧಿಪಡಿಸುತ್ತಿರುವ ಸುತ್ತಮುತ್ತಲಿನ ಎಲ್ಲಾ ವಿಜ್ಞಾನಿಗಳು ಮತ್ತು ಫಿಜರ್ ಮತ್ತು ಬಯೋಟೆಕ್ನ ಎಲ್ಲ ಪಾಲುದಾರರಿಂದ ಬರುತ್ತಿರುವ ಲಸಿಕೆ ತಯಾರಿಯ ಉತ್ತೇಜನಕಾರಿ ಸುದ್ದಿಗಳನ್ನು ನಾವು ಸ್ವಾಗತಿಸುತ್ತೇವೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಟ್ವೀಟ್ ನಲ್ಲಿ ತಿಳಿಸಿದರು.
No comments:
Post a Comment