ಕಮಲನಾಥ್ ’ತಾರಾ ಪ್ರಚಾರಕ’ ಸ್ಥಾನಮಾನ ರದ್ದಿಗೆ ಸುಪ್ರೀಂ ತಡೆ
ನವದೆಹಲಿ: ಮುಂಬರುವ ಉಪಚುನಾವಣೆಯಲ್ಲಿ ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಕಮಲನಾಥ್ ಅವರ ’ತಾರಾ ಪ್ರಚಾರಕ’ ಸ್ಥಾನಮಾನವನ್ನು ರದ್ದುಪಡಿಸುವ ಭಾರತದ ಚುನಾವಣಾ ಆಯೋಗದ ಆದೇಶವನ್ನು ಸುಪ್ರೀಂ ಕೋರ್ಟ್ 2020 ನವೆಂಬರ್ 02ರ ಸೋಮವಾರ ತಡೆಹಿಡಿಯಿತು.
ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಸದರಿ ನಿರ್ಧಾರದ ಕುರಿತು ಚುನಾವಣಾ ಆಯೋಗವನ್ನು ಪ್ರಶ್ನಿಸಿತು.
"ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ ೭೭ ರ ಅಡಿಯಲ್ಲಿ ಪಕ್ಷದ ನಾಯಕ ಯಾರು ಎಂದು ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಎಲ್ಲಿದೆ?’ ಎಂದು ಪೀಠ ಕೇಳಿತು.
ಕಮಲನಾಥ್ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ’ಅಕ್ಟೋಬರ್ ೨೬ ರಂದು ಆಯೋಗವು ಸಲಹೆಯನ್ನು ನೀಡಿತ್ತು. ನಂತರ ಅಕ್ಟೋಬರ್ ೧೩gಂದು ಕಾಂಗ್ರೆಸ್ ನಾಯಕ ಮಾಡಿದ ಭಾಷಣದ ಬಗ್ಗೆ ದೂರು ಬಂದಿದೆ ಎಂದು ಹೇಳಿ ಅಕ್ಟೋಬರ್ ೩೦ರಂದು ಆದೇಶ ಹೊರಡಿಸಿದೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯಿಂದ ಈ ಬಗ್ಗೆ ವಿವರಣೆ ಕೇಳಲಾಗಿಲ್ಲ’ ಎಂದು ವಾದಿಸಿದರು.
ಕಮಲನಾಥ್ ಅವರು ಅಕ್ಟೋಬರ್ ೧೩ ರಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಹೇಳಿಕೆ ಮತ್ತು ನಂತರ ಅಕ್ಟೋಬರ್ ೧೮ ರಂದು ಗ್ವಾಲಿಯರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸರಳ ವ್ಯಕ್ತಿ, ಎದುರಾಳಿಯಂತೆ ’ಐಟಂ’ ಅಲ್ಲ ಎಂದು ಹೇಳಿದ್ದು ಈ ಎರಡು ವಿಚಾರಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಕಮಲನಾಥ್ ವಿರುದ್ಧ ಆದೇಶ ಹೊರಡಿಸಿತ್ತು.
ಭಾರತೀಯ ಜನತಾ ಪಕ್ಷವು (ಬಿಜೆಪಿ) ಉಪ ಚುನಾವಣೆಯಲ್ಲಿ ಗ್ವಾಲಿಯರಿನ ದರ್ಬಾ ಸ್ಥಾನದಿಂದ ಸಚಿವೆ ಇಮಾರ್ತಿ ದೇವಿ ಅವರನ್ನು ಕಣಕ್ಕಿಳಿಸಿದೆ.
ಭಾರತದ ಚುನಾವಣಾ ಆಯೋಗವನ್ನು ಹಿರಿಯ ವಕೀಲ ರಾಕೇಶ್ ದ್ವಿವೇದಿ ಪ್ರತಿನಿಧಿಸಿದ್ದು, ನವೆಂಬರ್ ೩ರಂದು ಚುನಾವಣೆಗಳು ನಡೆಯಲಿವೆ. ಪ್ರಚಾರ ಮುಕ್ತಾಯಗೊಂಡಿರುವುದರಿಂದ ಈ ವಿಷಯವು ಪರಿಣಾಮಕಾರಿಯಾಗುವುದಿಲ್ಲ ಎಂದು ದ್ವಿವೇದಿ ಹೇಳಿದರು.
"ಈ ಆದೇಶವನ್ನು ನೀಡುವ ಅಧಿಕಾರ ವ್ಯಾಪ್ತಿ ನಿಮಗೆ ಇಲ್ಲವಾದ ಕಾರಣ ನಾವು ನಿಮ್ಮ ಆದೇಶಕ್ಕೆ ತಡೆ ನೀಡುತ್ತಿದ್ದೇವೆ’ ಎಂದು ನ್ಯಾಯಪೀಠ ಹೇಳಿತು.
ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ ೭೭ (೧) ರ ಅಡಿಯಲ್ಲಿ ತಾರಾ ಪ್ರಚಾರಕರನ್ನು ಆಯ್ಕೆ ಮಾಡುವುದು ರಾಜಕೀಯ ಪಕ್ಷದ ಏಕೈಕ ಹಕ್ಕು ಎಂದು ವಾದಿಸಿದ ಕಮಲನಾಥ್ ಅವರ ಅರ್ಜಿಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ನ್ಯಾಯಾಲಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು.
ಸುಪ್ರೀಂ ಕೋರ್ಟಿನ ತಡೆಯಾಜ್ಞೆಗೆ ಪ್ರತಿಕ್ರಿಯಿಸಿದ ಆಯೋಗವು, ‘ಮಾನ್ಯ ಸುಪ್ರೀಂ ಕೋರ್ಟ್ ಸರ್ವೋಚ್ಚವಾಗಿದೆ. ಈ ವಿಷಯದಲ್ಲಿ ಉತ್ತರವನ್ನು ಸಲ್ಲಿಸಲು ಚುನಾವಣಾ ಆಯೋಗಕ್ಕೆ ಅವಕಾಶ ನೀಡಲಾಗಿದೆ, ಅದನ್ನು ಶೀಘ್ರದಲ್ಲಿಯೇ ಸಲ್ಲಿಸಲಾಗುತ್ತದೆ’ ಎಂದು ಹೇಳಿತು.
ಅಕ್ಟೋಬರ್ ೧೯ ರಂದು ಮಧ್ಯಪ್ರದೇಶದ ಉಪಚುನಾವಣೆಗಳಿಗಾಗಿಗಾಗಿ ಕಾಂಗ್ರೆಸ್ ೨೮ ತಾರಾ ಪ್ರಚಾರಕರ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು.
No comments:
Post a Comment