ಬ್ಯಾಂಕ್ ಸೇವಾ ಶುಲ್ಕ ಹೆಚ್ಚಳ ಇಲ್ಲ: ಕೇಂದ್ರದ ಸ್ಪಷ್ಟನೆ
ಶುಲ್ಕ
ಹೆಚ್ಚಳ ಹಿಂಪಡೆದ ಬ್ಯಾಂಕ್ ಆಫ್ ಬರೋಡಾ
ನವದೆಹಲಿ: ಸಾರ್ವಜನಿಕ ವಲಯದ ಯಾವುದೇ ಬ್ಯಾಂಕುಗಳಲ್ಲೂ ಸೇವಾ ಶುಲ್ಕ ಹೆಚ್ಚಳ ಆಗಿಲ್ಲ ಎಂಬುದಾಗಿ ಕೇಂದ್ರ ವಿತ್ತ ಸಚಿವಾಲಯವು 2020 ನವೆಂಬರ್ 03ರ ಮಂಗಳವಾರ ಸ್ಪಷ್ಟ ಪಡಿಸಿತು. ಇದೇ ವೇಳೆಗೆ ಬ್ಯಾಂಕ್ ಆಫ್ ಬರೋಡಾ ತನ್ನ ಸೇವಾ ಶುಲ್ಕ ಹೆಚ್ಚಳದ ಕ್ರಮವನ್ನು ಹಿಂಪಡೆದಿದೆ.
ಬ್ಯಾಂಕ್ ಆಫ್ ಬರೋಡಾ ಖಾತೆಯಲ್ಲಿ ತಿಂಗಳೊಂದಕ್ಕೆ ಉಚಿತ ನಗದು ಠೇವಣಿ ವಹಿವಾಟು ಸಂಖ್ಯೆಗೆ ಸಂಬಂಧಿಸಿದಂತೆ ಮಾಡಿದ ಬದಲಾವಣೆಗಳನ್ನು ಹಿಂಪಡೆಯಲು ನಿರ್ಧರಿಸಿದೆ.
ತಿಂಗಳ ಅವಧಿಯಲ್ಲಿ ಉಚಿತ ನಗದು ಠೇವಣಿ ಮತ್ತು ಹಣ ವಾಪಸ್ ಪಡೆಯುವ ವಹಿವಾಟಿನ ಸಂಖ್ಯೆಗೆ ಸಂಬಂಧಿಸಿದಂತೆ ೨೦೨೦ ರ ನವೆಂಬರ್ ೧ ರಿಂದ ಬ್ಯಾಂಕ್ ಆಫ್ ಬರೋಡಾ ಕೆಲವು ಬದಲಾವಣೆಗಳನ್ನು ಮಾಡಿತ್ತು.
ಅದರಂತೆ ಉಚಿತ ನಗದು ಠೇವಣಿ ಮತ್ತು ಹಣ ವಾಪಸ್ ಪಡೆಯುವ ವಹಿವಾಟಿನ ಸಂಖ್ಯೆಯನ್ನು ತಿಂಗಳಿಗೆ ಐದರಿಂದ ತಿಂಗಳಿಗೆ ಮೂರಕ್ಕೆ ಇಳಿಸಲಾಗಿದೆ. ಈ ಉಚಿತ ವಹಿವಾಟುಗಳಿಗಿಂತ ಹೆಚ್ಚಿನ ವಹಿವಾಟಿನ ಶುಲ್ಕಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ವಿತ್ತ ಸಚಿವಾಲಯದ ಹೇಳಿಕೆ ತಿಳಿಸಿದೆ.
"ಪ್ರಸ್ತುತ ಕೋವಿಡ್ ಸಂಬಂಧಿತ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಬದಲಾವಣೆಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ. ಇದಲ್ಲದೆ, ಬೇರೆ ಯಾವುದೇ ಸಾರ್ವಜನಿಕ ವಲಯದ ಬ್ಯಾಂಕು ಕೂಡಾ ಇತ್ತೀಚೆಗೆ ಇಂತಹ ಶುಲ್ಕಗಳನ್ನು ಹೆಚ್ಚಿಸಿಲ್ಲ’ ಎಂದು ವಿತ್ತ ಸಚಿವಾಲಯದ ಹೇಳಿಕೆ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಾರ್ಗಸೂಚಿಗಳ ಪ್ರಕಾರ, ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್ಬಿ) ಸೇರಿದಂತೆ ಎಲ್ಲಾ ಬ್ಯಾಂಕುಗಳು ತಮ್ಮ ಸೇವೆಗಳಿಗೆ ನ್ಯಾಯಯುತ, ಪಾರದರ್ಶಕ ಮತ್ತು ತಾರತಮ್ಯರಹಿತವಾಗಿ ಒಳಗೊಂಡಿರುವ ವೆಚ್ಚಗಳ ಆಧಾರದ ಮೇಲೆ ಶುಲ್ಕ ವಿಧಿಸಲು ಅನುಮತಿ ನೀಡಿದ್ದರೂ, ಕೋವಿಡ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಬ್ಯಾಂಕ್ ಶುಲ್ಕವನ್ನು ಹೆಚ್ಚಿಸಲು ಪ್ರಸ್ತಾಪಿಸಬಾರದು ಎಂದು ಸಾರ್ವಜನಿಕ ವಲಯದ ಇತರ ಬ್ಯಾಂಕುಗಳು ನಿರ್ಧರಿಸಿವೆ ಎಂದು ಹೇಳಿಕೆ ತಿಳಿಸಿದೆ.
ಮೂಲ ಉಳಿತಾಯ ಬ್ಯಾಂಕ್ ಠೇವಣಿ (ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ -ಬಿಎಸ್ಬಿಡಿ) ಖಾತೆಗಳಿಗೆ ಸಂಬಂಧಿಸಿದಂತೆ, ಆರ್ಬಿಐ ನಿಗದಿಪಡಿಸಿದ ಉಚಿತ ಸೇವೆಗಳಿಗಾಗಿ ಸಮಾಜದ ಬಡ ಮತ್ತು ಬ್ಯಾಂಕಿಲ್ಲದ ಭಾಗಗಳಿಂದ ತೆರೆಯಲ್ಪಟ್ಟ ೪೧.೧೩ ಕೋಟಿ ಜನ ಧನ್ ಖಾತೆಗಳು ಸೇರಿದಂತೆ ೬೦.೦೪ ಕೋಟಿ ಖಾತೆಗಳಿಗೆ ಯಾವುದೇ ಸೇವಾ ಶುಲ್ಕ ಅನ್ವಯಿಸುವುದಿಲ್ಲ ಎಂದು ಅದು ಹೇಳಿದೆ.
"ಪ್ರಸ್ತುತ ಚಾಲ್ತಿಯಲ್ಲಿರುವ ಕೋವಿಡ್-೧೯ ಸಾಂಕ್ರಾಮಿಕ ಮತ್ತು ಆರ್ಥಿಕತೆಯ ಮೇಲೆ ಅದರ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು, ಮೇಲಿನ ಸುತ್ತೋಲೆಯನ್ನು ತಕ್ಷಣದಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ" ಎಂದು ಬ್ಯಾಂಕ್ ಆಫ್ ಬರೋಡಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಕ್ರಮವನ್ನು ವಿರೋಧ ಪಕ್ಷಕ್ಕೆ ಸೇರಿದ ರಾಜಕೀಯ ಪಕ್ಷಗಳೂ ಪ್ರತಿಭಟಿಸಿದ್ದವು.
ಸರ್ಕಾರದ ಹಸ್ತಕ್ಷೇಪದ ನಂತರ ಶುಲ್ಕಗಳನ್ನು ಹಿಂಪಡೆದಿರುವ ಸಾಧ್ಯತೆಯಿದೆ ಎಂದು ಎರಡು ಮೂಲಗಳು ತಿಳಿಸಿವೆ.
No comments:
Post a Comment