ಜೋ-ಬಿಡೆನ್ - ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆ (೨೦೨೦) ಫಲಿತಾಂಶಗಳು ಘೋಷಣೆಯಾದ ಬಳಿಕ ಅಧ್ಯಕ್ಷರಾಗಿ (ಚುನಾಯಿತ) ಆಯ್ಕೆಯಾಗಿರುವ ಜೋ ಬಿಡೆನ್ ಅವರ ಜೊತೆ ಇದೇ ಮೊದಲ ಬಾರಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.
ದೂರವಾಣಿ ಕರೆಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಬಿಡೆನ್ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾದ ಕಮಲಾ ಹ್ಯಾರಿಸ್ ಅವರ ವಿಜಯವನ್ನು ಅಭಿನಂದಿಸಿದರು ಮತ್ತು ಭಾರತ-ಅಮೆರಿಕ ಕಾರ್ಯತಂತ್ರದ ಸಹಭಾಗಿತ್ವಕ್ಕೆ ನವದೆಹಲಿಯ ಬದ್ಧತೆಯನ್ನು ಪುನರುಚ್ಚರಿಸಿದರು. ಜೊತೆಗೇ ಪರಸ್ಪರ ಹಂಚಿಕೊಳ್ಳಬೇಕಾದ ಆದ್ಯತೆಗಳು ಮತ್ತು ಕಾಳಜಿಗಳ ಬಗ್ಗೆ ಚರ್ಚಿಸಿದರು.
’ಅಮೆರಿಕದ ಅಧ್ಯಕ್ಷ- ಚುನಾಯಿತ ಜೋ ಬಿಡೆನ್ ಅವರನ್ನು ಅಭಿನಂದಿಸಲು ದೂರವಾಣಿಯಲ್ಲಿ ಮಾತನಾಡಿದೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದರು.
’ಭಾರತ-ಅಮೆರಿಕದ ನಡುವಣ ಕಾರ್ಯತಂತ್ರದ ಸಹಭಾಗಿತ್ವಕ್ಕೆ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸಿದ್ದೇವೆ. ಮತ್ತು ಕೋವಿಡ್-೧೯ ಸಾಂಕ್ರಾಮಿಕ, ಹವಾಮಾನ ಬದಲಾವಣೆ ಮತ್ತು ಹಿಂದೂ ಮಹಾಸಾಗರ-ಶಾಂತ ಸಾಗರ (ಇಂಡೋ-ಪೆಸಿಫಿಕ್) ಪ್ರದೇಶದಲ್ಲಿನ ಸಹಕಾರ ಸೇರಿದಂತೆ ಪರಸ್ಪರ ಹಂಚಿಕೊಳ್ಳುವ ನಮ್ಮ ಆದ್ಯತೆಗಳು ಮತ್ತು ಕಾಳಜಿಗಳ ಬಗ್ಗೆ ಚರ್ಚಿಸಿದ್ದೇವೆ’ ಎಂದು ಪ್ರಧಾನಿ ಮೈಕ್ರೋ ಬ್ಲಾಗಿಂಗ್ ಟ್ವಿಟ್ಟರಿನಲ್ಲಿ ಬರೆದರು.
"ನಾನು ಉಪಾಧ್ಯಕ್ಷ-ಚುನಾಯಿತ ಕಮಲಾ ಹ್ಯಾರಿಸ್ ಅವರಿಗೆ ಆತ್ಮೀಯ ಅಭಿನಂದನೆಗಳನ್ನು ತಿಳಿಸಿದೆ. ಅವರ ಯಶಸ್ಸು ಭಾರತ-ಅಮೆರಿಕ ಸಂಬಂಧಗಳಿಗೆ ಅಪಾರ ಶಕ್ತಿಯ ಮೂಲವಾಗಿರುವ ಭಾರತೀಯ-ಅಮೇರಿಕನ್ ಸಮುದಾಯದ ಸದಸ್ಯರಿಗೆ ಬಹಳ ಹೆಮ್ಮೆ, ರೋಮಾಂಚಕ ಮತ್ತು ಸ್ಫೂರ್ತಿಯಾಗಿದೆ" ಎಂದು ಪ್ರಧಾನಿ ಮೋದಿ ಬರೆದರು.
ಬಿಡೆನ್ ಪರಿವರ್ತನಾ ತಂಡದ ಪ್ರಕಾರ, ಡೆಮೋಕ್ರಾಟ್ ನಾಯಕರು ಕೋವಿಡ್-೧೯ ಮತ್ತು ಜಾಗತಿಕ ಆರ್ಥಿಕತೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಭಾರತದೊಂದಿಗೆ ಕೆಲಸ ಮಾಡಲು ಆಸಕ್ತಿ ಹೊಂದಿದ್ದಾರೆ.
’ಕೋವಿಡ್-೧೯ನ್ನು ಒಳಗೊಂಡಿರುವುದು ಮತ್ತು ಭವಿಷ್ಯದ ಆರೋಗ್ಯ ಬಿಕ್ಕಟ್ಟುಗಳ ವಿರುದ್ಧ ರಕ್ಷಿಸುವುದು, ಹವಾಮಾನ ಬದಲಾವಣೆಯ ಬೆದರಿಕೆಯನ್ನು ನಿಭಾಯಿಸುವುದು, ಜಾಗತಿಕ ಆರ್ಥಿಕ ಚೇತರಿಕೆ ಪ್ರಾರಂಭಿಸುವುದು, ಪ್ರಜಾಪ್ರಭುತ್ವವನ್ನು ಬಲಪಡಿಸುವುದು, ದೇಶ ಮತ್ತು ವಿದೇಶಗಳಲ್ಲಿ, ಮತ್ತು ಸುರಕ್ಷಿತ ಮತ್ತು ಸಮೃದ್ಧವಾದ ಇಂಡೋ-ಪೆಸಿಫಿಕ್ ಪ್ರದೇಶವನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಹಂಚಿಕೆಯ ಜಾಗತಿಕ ಸವಾಲುಗಳ ಕುರಿತು ಪ್ರಧಾನಮಂತ್ರಿಯೊಂದಿಗೆ ನಿಕಟವಾಗಿ ಕೆಲಸ ಮಾಡಲು ತಾವು ಎದುರು ನೋಡುತ್ತಿರುವುದಾಗಿ ಅಧ್ಯಕ್ಷ-ಚುನಾಯಿತರು ಬೊಟ್ಟು ಮಾಡಿದರು ಎಂದು ಬಿಡೆನ್ ಪರಿವರ್ತನಾ ತಂಡದ ಹೇಳಿಕೆ ತಿಳಿಸಿದೆ.
ಬಿಡೆನ್ ಅವರು ತಮಗೆ ಅಭಿನಂದನೆ ಸಲ್ಲಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು "ದಕ್ಷಿಣ ಏಷ್ಯಾ ಮೂಲದ ಮೊದಲ ಉಪಾಧ್ಯಕ್ಷರ ಜೊತೆಗೆ ಅಮೆರಿಕ-ಭಾರತ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವ ಮತ್ತು ವಿಸ್ತರಿಸು ಇಚ್ಛೆಯನ್ನು ವ್ಯಕ್ತಪಡಿಸಿದರು" ಎಂದು ಕರೆಯ ಕುರಿತ ಹೇಳಿಕೆ ತಿಳಿಸಿದೆ.
No comments:
Post a Comment