Thursday, November 19, 2020

ಕಾಶ್ಮೀರ: ನಾಲ್ವರು ಉಗ್ರರನ್ನು ಸದೆಬಡಿದ ಸೇನೆ

 ಕಾಶ್ಮೀರ:  ನಾಲ್ವರು ಉಗ್ರರನ್ನು ಸದೆಬಡಿದ ಸೇನೆ

ಶ್ರೀನಗರ: ಜಮ್ಮು -ಕಾಶ್ಮೀರ ಕಣಿವೆಯಲ್ಲಿ  2020 ನವೆಂಬರ್ 19ರ  ಗುರುವಾರ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿ ಬಂದಿತು. ನಾಲ್ವರು ಉಗ್ರರನ್ನು ಭಾರತೀಯ ಸೇನೆ ಯಮಲೋಕಕ್ಕೆ ಅಟ್ಟಿತು.  ಜಮ್ಮುವಿನ ನಾಗ್ರೋಟಾದ ಬಾನ್ ಟೋಲ್ ಪ್ಲಾಜಾದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ  ಜೈಶ್--ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಉಗ್ರರನ್ನು ಕೊಲ್ಲಲಾಯಿತು.

ಉಗ್ರರು ಟ್ರಕ್ ಮೂಲಕ ದೇಶದೊಳಗೆ ನುಗ್ಗುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ ಹಾಗೂ ಪೊಲೀಸರು ಬಾನ್ ಟೋಲ್ ಪ್ಲಾಜಾದಲ್ಲಿ ಮುಂಜಾನೆ ತಪಾಸಣೆಗೆ ಮುಂದಾಗಿದ್ದರು. ತಪಾಸಣೆ ನಡೆಸುತ್ತಿದ್ದಂತೆ ಒಂದು ಟ್ರಕ್ಕಿನಿಂದ  ಏಕಾಏಕಿ ಗುಂಡು ಹಾರಿತು.  ಇದಕ್ಕೆ ಭಾರತೀಯ ಸೇನೆ ಕೂಡ ಗುಂಡಿನ ಮೂಲಕವೇ ಪ್ರತ್ಯುತ್ತರ ನೀಡಿತು.  ಸುಮಾರು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆಯುತ್ತಿದ್ದಂತೆ, ಟ್ರಕ್ಕಿನಲ್ಲಿದ್ದ ಕೆಲ ಉಗ್ರರು ಸ್ಥಳದಿಂದ ಕಾಲ್ಕಿತ್ತುಕೊಂಡು ಅಲ್ಲೇ ಪಕ್ಕದಲ್ಲಿದ್ದ ಕಾಡಿಗೆ ನುಗ್ಗಿದರು.

ಭಾರತೀಯ ಸೇನೆಯ ಯೋಧರು ತಮ್ಮ ಪರಿಶ್ರಮದ ಮೂಲಕ ಟ್ರಕ್ಕಿನಲ್ಲಿದ್ದ ಹಾಗೂ ಕಾಡಿಗೆ ಓಡಿ ಹೋಗಿದ್ದ ನಾಲ್ವರು ಉಗ್ರರನ್ನು ಕೊನೆಗೂ ಕೊಂದು ಹಾಕಿದರು.  ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದ್ದು, ಎಲ್ಲಾ ಉಗ್ರರರನ್ನು ಗುಂಡಿನ ಘರ್ಷಣೆಯಲ್ಲಿ ಕೊಲ್ಲಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

2020 ನವೆಂಬರ್ 18ರ ಬುಧವಾರ ಸಂಜೆ ಸಿಆರ್ ಪಿಎಫ್  ಯೋಧರನ್ನು ಗುರಿಯಾಗಿಸಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು ಇದರಿಂದ ಹನ್ನೆರಡು ಮಂದಿ ನಾಗರಿಕರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಕಣಿವೆಯಲ್ಲಿ  ಇಂತಹ ಘಟನೆಗಳು ನಡೆಯುತ್ತಲೇ ಇವೆ.  ಪಾಕಿಸ್ತಾನ ಬೆಂಬಲಿತ  ಉಗ್ರರು ಕುಕೃತ್ಯ ನಡೆಸಲು ಮುಂದಾಗುತ್ತಿದ್ದಾರೆ ಎಂದು ಸುದ್ದಿ ಮೂಲಗಳು ಹೇಳಿದವು.

No comments:

Advertisement