ಒಂದು ರಾಷ್ಟ್ರ, ಒಂದು ಚುನಾವಣೆ: ಮತ್ತೆ ಪ್ರಧಾನಿ ಬ್ಯಾಟಿಂಗ್
ನವದೆಹಲಿ: ಕೆಲವು ತಿಂಗಳುಗಳಿಗೊಮ್ಮೆ ನಡೆಯುವ ಚುನಾವಣೆಗಳ ಮಾದರಿ ನೀತಿ ಸಂಹಿತೆಯಿಂದಾಗಿ ಅಭಿವೃದ್ಧಿಗೆ ಆಗುವ ಪ್ರಭಾವಗಳನ್ನು ನಿವಾರಿಸಲು ’ಒಂದು ರಾಷ್ಟ್ರ- ಒಂದು ಚುನಾವಣೆ’ ಮತ್ತು ಎಲ್ಲ ಮತದಾನಕ್ಕೆ ಒಂದೇ ಮತದಾರರ ಪಟ್ಟಿ ಭಾರತದ ಅಗತ್ಯವಾಗಿದೆ’ ಎಂಬುದಾಗಿ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ’ಒಂದು ರಾಷ್ಟ್ರ- ಒಂದು ಚುನಾವಣೆ’ಯ ಪರವಾಗಿ 2020 ನವೆಂಬರ 26ರ ಗುರುವಾರ ಮತ್ತೊಮ್ಮೆ ಬ್ಯಾಟ್ ಬೀಸಿದರು.
ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಸಭಾಧ್ಯಕ್ಷರ ೮೦ ನೇ ಅಖಿಲ ಭಾರತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮಾತನಾಡಿದರು.
’ಈ ಎರಡು ವಿಷಯಗಳ ಹೊರತಾಗಿ, ಶಾಸನ ಪುಸ್ತಕಗಳ ಭಾಷೆಯನ್ನು ಸರಳೀಕರಿಸಲು ಮತ್ತು ಅನಗತ್ಯ ಕಾನೂನುಗಳನ್ನು ಕಿತ್ತುಹಾಕಲು ಸುಲಭವಾದ ಪ್ರಕ್ರಿಯೆಗೆ ಅವಕಾಶ ಮಾಡಿಕೊಡುವತ್ತ ಚಿಂತಿಸುವಂತೆ’ ಪ್ರಧಾನಿ ಸಭಾಧ್ಯಕ್ಷರನ್ನು ಕೋರಿದರು.
‘ಒಂದು ರಾಷ್ಟ್ರ, ಒಂದು ಚುನಾವಣೆ’ ಕೇವಲ ಚರ್ಚೆಯ ವಿಷಯವಲ್ಲ, ದೇಶದ ಅವಶ್ಯಕತೆಯಾಗಿದೆ. ಪ್ರತಿ ಕೆಲವು ತಿಂಗಳಿಗೊಮ್ಮೆ ವಿವಿಧ ಸ್ಥಳಗಳಲ್ಲಿ ಚುನಾವಣೆಗಳು ನಡೆಯುತ್ತವೆ ಮತ್ತು ಇದು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತದೆ ಮತ್ತು ಇದರ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಆಳವಾದ ಅಧ್ಯಯನ ಮತ್ತು ಚರ್ಚೆಯನ್ನು ನಡೆಸುವುದು ಅತ್ಯಗತ್ಯ’ ಎಂದು ಮೋದಿ ಹೇಳಿದರು.
‘ಲೋಕಸಭೆ, ವಿಧಾನಸಭೆ ಮತ್ತು ಇತರ ಚುನಾವಣೆಗಳಿಗೆ ಕೇವಲ ಒಂದು ಮತದಾರರ ಪಟ್ಟಿಯನ್ನು ಬಳಸಬೇಕು. ನಾವು ಸಮಯ ಮತ್ತು ಹಣವನ್ನು ಏಕೆ ವ್ಯರ್ಥ ಮಾಡುತ್ತಿದ್ದೇವೆ?’ ಎಂದು ಪ್ರಶ್ನಿಸಿದ ಪ್ರಧಾನಿ, ರಾಜ್ಯದ ಮೂರು ವಿಭಾಗಗಳಾದ ’ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಸಮನ್ವಯದ ಅಗತ್ಯವನ್ನು’ ಒತ್ತಿಹೇಳಿದರು. ಅವರವರ ಪಾತ್ರದಿಂದ ಶಿಷ್ಟಾಚಾರದವರೆಗಿನ ಎಲ್ಲವನ್ನೂ ಸಂವಿಧಾನದಲ್ಲಿಯೇ ವಿವರಿಸಲಾಗಿದೆ ಎಂದು ಪ್ರಧಾನಿ ನುಡಿದರು.
"೧೯೭೦ ರ ದಶಕದಲ್ಲಿ, ಅಧಿಕಾರದ ಘನತೆಯನ್ನು ಬೇರ್ಪಡಿಸುವ ಹಾಗೂ ಉಲ್ಲಂಘಿಸುವ ಪ್ರಯತ್ನ ಹೇಗೆ ನಡೆಯಿತು ಎಂಬುದನ್ನು ನಾವು ನೋಡಿದ್ದೇವೆ, ಆದರೆ ದೇಶವು ಸಂವಿಧಾನದಿಂದಲೇ ಇದಕ್ಕೆ ಉತ್ತರವನ್ನು ಪಡೆದುಕೊಂಡಿದೆ. ತುರ್ತು ಪರಿಸ್ಥಿತಿಯ ನಂತರ, ತಪಾಸಣೆ ಮತ್ತು ಸಮತೋಲನ ವ್ಯವಸ್ಥೆಯು ಬಲವಾಯಿತು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಮೂರೂ ಈ ಅವಧಿಯಿಂದ ಸಾಕಷ್ಟು ಕಲಿತವು ಮತ್ತು ಮುಂದಕ್ಕೆ ಸಾಗಿದವು’ ಎಂದು ಮೋದಿ ಹೇಳಿದರು.
ಅಣೆಕಟ್ಟು ಕೆಲಸ
ಸರ್ದಾರ್ ಸರೋವರ ಅಣೆಕಟ್ಟು ಪೂರ್ಣಗೊಳ್ಳಲು ಅವರ ಅಂದಿನ ಗುಜರಾತ್ ಸರ್ಕಾರದ ಕೆಲಸವನ್ನು ವಿವರಿಸಲು ಮೋದಿ ಪ್ರಬಲ ಪದಗಳನ್ನು ಬಳಸಿದರು, ಇದಕ್ಕೆ ಉದಾಹರಣೆಯಾಗಿ ‘ರಾಷ್ಟ್ರೀಯ ಹಿತಾಸಕ್ತಿಯನ್ನು ಮರೆಮಾಡಲು ರಾಜಕೀಯಕ್ಕೆ ಹೇಗೆ ಅನುಮತಿ ನೀಡಲಾಗಿದೆ’ ಎಂದು ಅವರು ವಿವರಿಸಿದರು.
‘ರಾಜಕೀಯವು ಜನರನ್ನು ಮತ್ತು ರಾಷ್ಟ್ರದ ಮೊದಲ ನೀತಿಗಳನ್ನು ಸ್ವಾಧೀನಪಡಿಸಿಕೊಂಡಾಗ, ರಾಷ್ಟ್ರವು ಪ್ರತಿಕೂಲ ಬೆಲೆ ತೆರಬೇಕಾಗುತ್ತದೆ. ಅಭಿವೃದ್ಧಿಗೆ ಆದ್ಯತೆ ನೀಡಿದ್ದರೆ ಇದು[ಸರ್ದಾರ್ ಸರೋವರ ಅಣೆಕಟ್ಟಿನ ಪೂರ್ಣಗೊಳಿಸುವಿಕೆ] ಮೊದಲೇ ಆಗಬಹುದಿತ್ತು. ಅದನ್ನು ಸ್ಥಗಿತಗೊಳಿಸಿದವರಿಗೆ ಪಶ್ಚಾತ್ತಾಪವಿಲ್ಲ’ ಎಂದು ಪ್ರಧಾನಿ ಹೇಳಿದರು.
ಸರ್ದಾರ್ ಪಟೇಲ್ ಅವರ ಪ್ರತಿಮೆಯ ಬಗ್ಗೆ ಮಾತನಾಡಿದ ಮೋದಿ, ಪಟೇಲ್ ಬಿಜೆಪಿ ಅಥವಾ ಜನ ಸಂಘದಿಂದ ಬಂದವರಲ್ಲ. ಆದರೂ ನಮ್ಮ ಸರ್ಕಾರವು ಇದನ್ನು ನಿರ್ಮಿಸಿದೆ ಎಂದು ಮೋದಿ ಹೇಳಿದರು.
"೨೧ ನೇ ಶತಮಾನದಲ್ಲಿ ಸವಾಲುಗಳನ್ನು ತೆಗೆದುಕೊಳ್ಳಲು ಸಂವಿಧಾನವು ನಮಗೆ ಮಾರ್ಗದರ್ಶಕ ಬೆಕಾಗಿದೆ ಮತ್ತು ಪ್ರತಿ ನಿರ್ಧಾರಕ್ಕೂ ರಾಷ್ಟ್ರೀಯ ಹಿತಾಸಕ್ತಿ ನಮ್ಮ ಆಧಾರವಾಗಿರಬೇಕು" ಎಂದು ಅವರು ಒತ್ತಾಯಿಸಿದರು.
೨೦೦೮ ರಲ್ಲಿ ಇದೇ ದಿನ (೨೬/೧೧) ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆದದ್ದನ್ನು ಪ್ರಧಾನಿ ನೆನಪಿಸಿಕೊಂಡರು ಮತ್ತು ಭಾರತವು ಈಗ "ಹೊಸ ನೀತಿ ಮತ್ತು ಹೊಸ ಪ್ರಕ್ರಿಯೆಯೊಂದಿಗೆ" ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದೆ ಎಂದು ಪ್ರತಿಪಾದಿಸಿದರು.
೨೬/೧೧ ದೇಶದ ಮೇಲೆ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿ ಎಂದು ಅವರು ಬೊಟ್ಟು ಮಾಡಿದರು. "ಭಾರತವು ೨೬/೧೧ ಮುಂಬೈ ಭಯೋತ್ಪಾದಕ ದಾಳಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಮತ್ತು ಈಗ ಭಯೋತ್ಪಾದನೆಯೊಂದಿಗೆ ಹೊಸ ನೀತಿ ಮತ್ತು ವಿಧಾನದಲ್ಲಿ ಹೋರಾಡುತ್ತಿದೆ" ಎಂದು ಅವರು ಅಭಿಪ್ರಾಯಪಟ್ಟರು.
ಸಂಸತ್ತು ಮತ್ತು ಶಾಸಕಾಂಗಗಳ ಸಭಾಧ್ಯಕ್ಷರ ಅಖಿಲ ಭಾರತ ಸಮ್ಮೇಳನ ೧೯೨೧ ರಲ್ಲಿ ಪ್ರಾರಂಭವಾಯಿತು, ಮತ್ತು ಗುಜರಾತ್ ಕಾರ್ಯಕ್ರಮವು ಅದರ ಶತಮಾನೋತ್ಸವವನ್ನು ಸೂಚಿಸುತ್ತದೆ. ‘ಶಾಸಕಾಂಗ, ಕಾಯಾಂಗ ಮತ್ತು ನ್ಯಾಯಾಂಗದ ನಡುವಣ ಸಾಮರಸ್ಯ ಸಮನ್ವಯ- ರೋಮಾಂಚಕ ಪ್ರಜಾಪ್ರಭುತ್ವದ ಕೀ’ ಎಂಬುದು ಈ ವರ್ಷದ ಸಮ್ಮೇಳನದ ವಿಷಯವಾಗಿತ್ತು.
No comments:
Post a Comment