ದೆಹಲಿ, ಅಧಿಕ ಮಾಲಿನ್ಯದ ನಗರಗಳಲ್ಲಿ ಪಟಾಕಿ ನಿಷೇಧ
ನವದೆಹಲಿ: ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್ ) ಹಾಗೂ ಅಧಿಕ ಮಾಲಿನ್ಯ ಇರುವ ಪ್ರದೇಶಗಳಲ್ಲಿ ನವೆಂಬರ್ ೯ರಿಂದ ೩೦ರವರೆಗೆ ಪಟಾಕಿ ಮಾರಾಟ ಮತ್ತು ಬಳಕೆಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸಂಪೂರ್ಣವಾಗಿ ನಿಷೇಧಿಸಿ 2020 ನವೆಂಬರ್ 09ರ ಸೋಮವಾರ ಆದೇಶ ಹೊರಡಿಸಿದೆ.
ಕಳೆದ ವರ್ಷದ ನವೆಂಬರಿನಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಪ್ರಮಾಣದಲ್ಲಿ ಹಾಗೂ ವಾಯು ಮಾಲಿನ್ಯವು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿರುವ ದೆಹಲಿ ಹಾಗೂ ದೇಶದ ಇತರ ನಗರ ಮತ್ತು ಪಟ್ಟಣಗಳಿಗೆ ಈ ಆದೇಶ ಅನ್ವಯವಾಗಲಿದೆ ಎಂದು ಎನ್‌ಜಿಟಿ ಆದೇಶ ತಿಳಿಸಿದೆ.
ಗಾಳಿಯ ಗುಣಮಟ್ಟವು ‘ಮಧ್ಯಮ’ ಅಥವಾ ‘ಸಾಮಾನ್ಯ’ವಾಗಿ ಇರುವ ನಗರ ಮತ್ತು ಪಟ್ಟಣಗಳಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು, ಬಳಸಲು ಅವಕಾಶ ನೀಡಬಹುದು. ಅಲ್ಲೆಲ್ಲ ದೀಪಾವಳಿ, ಕ್ರಿಸ್ಮಸ್, ಹೊಸ ವರ್ಷಾಚರಣೆ ಸಂದರ್ಭಗಳಲ್ಲಿ ಎರಡು ಗಂಟೆಗಳ ಕಾಲ ಪಟಾಕಿ ಸುಡುವುದಕ್ಕೆ ಅವಕಾಶ ನೀಡಿ ಸಂಬಂಧಿಸಿದ ರಾಜ್ಯ ಸರ್ಕಾರಗಳು ಆದೇಶ ಹೊರಡಿಸಬಹುದು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.
ಕೋವಿಡ್-೧೯ ನಿಯಂತ್ರಿಸುವ ನಿಟ್ಟಿನಲ್ಲಿ ವಾಯುಮಾಲಿನ್ಯ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು ಎಂದೂ ಆದೇಶದ ನಿರ್ದೇಶನ ನೀಡಿದೆ.
ಪಟಾಕಿ ನಿಷೇಧ ಕೋರಿ ಇಂಡಿಯನ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಪೂರ್ಣಗೊಳಿಸಿ ನವೆಂಬರ್ ೫ರಂದು ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ಹಸಿರು ಪೀಠ ಸೋಮವಾರ ತೀರ್ಪನ್ನು ಪ್ರಕಟಿಸಿತು.
"ಗಾಳಿಯ ಗುಣಮಟ್ಟ ’ಮಧ್ಯಮ’ ಅಥವಾ ಅದಕ್ಕಿಂತ ಕಡಿಮೆ ಇರುವ ನಗರಗಳು / ಪಟ್ಟಣಗಳು, ಕೇವಲ ಹಸಿರು ಪಟಾಕಿಗಳನ್ನು ಮಾರಾಟ ಮಾಡಬಹುದು. ದೀಪಾವಳಿ, ಛಾತ್, ಹೊಸ ವರ್ಷ / ಕ್ರಿಸ್‌ಮಸ್ ಈವ್ ಮುಂತಾದ ಹಬ್ಬಗಳಲ್ಲಿ ಪಟಾಕಿಗಳನ್ನು ಬಳಸುವ ಮತ್ತು ಸಿಡಿಸುವ ಸಮಯವನ್ನು ಎರಡು ಗಂಟೆಗಳಿಗೆ ಮಿತಿಗೊಳಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ರಾಜ್ಯದಿಂದ ನಿರ್ದಿಷ್ಟ ನಿರ್ದೇಶನ ನೀಡಬಹುದು’ ಎಂದು ಅದೇಶ ಹೇಳಿತು.
"ಇತರ ಸ್ಥಳಗಳಲ್ಲಿ, ನಿಷೇಧ / ನಿರ್ಬಂಧಗಳು ಅಧಿಕಾರಿಗಳ ಆಯ್ಕೆಗೆ ಬಿಟ್ಟದ್ದು. ಆದರೆ ಅಧಿಕಾರಿಗಳ ಆದೇಶದ ಮೇರೆಗೆ ಹೆಚ್ಚು ಕಠಿಣ ಕ್ರಮಗಳಿದ್ದರೆ, ಅದು ಮೇಲುಗೈ ಸಾಧಿಸುತ್ತದೆ" ಎಂದು ನ್ಯಾಯಪೀಠ ಹೇಳಿತು.
ಕೋವಿಡ್-೧೯ ಉಲ್ಬಣಗೊಳ್ಳುವ ಸಾಧ್ಯತೆಯ ಹಿನ್ನೆಲೆಯಲಿ ಎಲ್ಲಾ ಮೂಲಗಳಿಂದ ವಾಯುಮಾಲಿನ್ಯವನ್ನು ತಡೆಗಟ್ಟಲು ವಿಶೇಷ ಅಭಿಯಾನಗಳನ್ನು ಪ್ರಾರಂಭಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎನ್‌ಜಿಟಿ ನಿರ್ದೇಶನ ನೀಡಿತು.
ಈ sಋತುವಿನಲ್ಲಿ ಅತ್ಯಂತ ಗರಿಷ್ಠ ವಾಯುಮಾಲಿನ್ಯ ೪೮೪ ಎಕ್ಯೂಐ (ಸರಾಸರಿ ವಾಯುಗುಣಮಟ್ಟ ಸೂಚ್ಯಂಕ) ಆನಂದ್ ವಿಹಾರದಲ್ಲಿ ಸೋಮವಾರ ದಾಖಲಾಗಿದ್ದು, ಆತಂಕ ಹೆಚ್ಚಿದೆ. ಪಿಎಂ ೨.೫ (ಪಾರ್ಟಿಕ್ಯುಲೇಟ್ ಮ್ಯಾಟರ್) ಕಣಗಳು ಕಂಡು ಬಂದಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಪ್ಪ ಹೊಗೆ ಕಾಣಿಸಿತು.
ಸತತ ಐದನೇ ದಿನವೂ ರಾಜಧಾನಿಯ ಗಾಳಿಯ ಗುಣಮಟ್ಟ ಕಳಪೆಯಾಗಿದ್ದು, ಕೂಳೆ ಸುಡುವಿಕೆಯಿಂದಾಗಿ ಪರಿಸ್ಥಿತಿ ಇನ್ನಷ್ಟು ಕಠಿಣಗೊಂಡಿದೆ. ಗಾಳಿಯ ವೇಗವು ಕೂಳೆ ಸುಡುವಿಕೆಯ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಗರದ ಸರಾಸರಿ ವಾಯು ಗುಣಮಟ್ಟದ ಸೂಚ್ಯಂಕ (ಎಕ್ಯೂಐ) ಬೆಳಿಗ್ಗೆ ೯ ಗಂಟೆಗೆ ೪೬೯ ರಷ್ಟಿತ್ತು. ೨೪-ಗಂಟೆಗಳ ಸರಾಸರಿ ಎಕ್ಯೂಐ ಭಾನುವಾರ ೪೧೬, ಶನಿವಾರ ೪೨೭, ಶುಕ್ರವಾರ ೪೦೬ ಮತ್ತು ಗುರುವಾರ ೪೫೦ ಆಗಿತ್ತು, ಇದು ಕಳೆದ ವರ್ಷ ನವೆಂಬರ್ ೧೫ ರ ನಂತರ ಗರಿಷ್ಠ ೪೫೮ ಆಗಿತ್ತು.
ನೆರೆಯ ನಗರಗಳಾದ ಫರಿದಾಬಾದ್ (೪೬೨), ಗಾಜಿಯಾಬಾದ್ (೪೮೩), ನೋಯ್ಡಾ (೪೭೬), ಗ್ರೇಟರ್ ನೋಯ್ಡಾ (೪೮೨), ಮತ್ತು ಗುರುಗ್ರಾಮ (೪೭೫) ಸಹ ಗಾಳಿಯ ಗುಣಮಟ್ಟದ ತೀವ್ರ ಕುಸಿತವನ್ನು ದಾಖಲಿಸಿದೆ. ಶೂನ್ಯ ಮತ್ತು ೫೦ ರ ನಡುವಿನ ಎಕ್ಯೂಐ ಅನ್ನು "ಉತ್ತಮ", ೫೧ ಮತ್ತು ೧೦೦ "ತೃಪ್ತಿದಾಯಕ", ೧೦೧ ಮತ್ತು ೨೦೦ "ಮಧ್ಯಮ", ೨೦೧ ಮತ್ತು ೩೦೦ ’ಕಳಪೆ’, ೩೦೧ ಮತ್ತು ೪೦೦ "ತುಂಬಾ ಕಳಪೆ", ಮತ್ತು ೪೦೧ ಮತ್ತು ೫೦೦ "ಅಪಾಯಕಾರಿ’ ಎಂದು ಪರಿಗಣಿಸಲಾಗುತ್ತದೆ.
ದೆಹಲಿ-ಎನ್‌ಸಿಆರ್‌ನಲ್ಲಿ ಬೆಳಗ್ಗೆ ೯ ಗಂಟೆಗೆ ಪಿಎಂ ೧೦ ಮಟ್ಟವು ಪ್ರತಿ ಘನ ಮೀಟರ್‌ಗೆ ೫೭೫ ಮೈಕ್ರೊಗ್ರಾಂ (ಗ್ರಾಂ / ಮೀ ೩) ಇತ್ತು, ಇದು ಕಳೆದ ವರ್ಷ ನವೆಂಬರ್ ೧೫ರ ಬಳಿಕದ ಗರಿಷ್ಠ ಮಾಲಿನ್ಯ. ಕಳೆದ ವರ್ಷ ನವೆಂಬರಿನಲ್ಲಿ ೬೩೭ ಗ್ರಾಂ / ಮೀ ೩ ರಷ್ಟಾಗಿದ್ದು, ಸಿಪಿಸಿಬಿ ಅಂಕಿಅಂಶಗಳ ಪ್ರಕಾರ ಗರಿಷ್ಠವಾಗಿತ್ತು. ೧೦೦ ಗ್ರಾಂ / ಮೀ ೩ ಗಿಂತ ಕಡಿಮೆ ಇರುವ ಪಿಎಂ ೧೦ ಮಟ್ಟವನ್ನು ಭಾರತದಲ್ಲಿ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಪಿಎಂ ೧೦ ಎಂಬುದು ೧೦ ಮೈಕ್ರೊಮೀಟರ್ ವ್ಯಾಸವನ್ನು ಹೊಂದಿರುವ ಪಾರ್ಟಿಕ್ಯುಲೇಟ್ ಕಣವಾಗಿದ್ದು ಶ್ವಾಸಕೋಶ ಧಕ್ಕೆ ಉಂಟು ಮಾಡಬಲ್ಲುದು. ಈ ಕಣಗಳಲ್ಲಿ ಧೂಳು, ಪರಾಗ ಇತ್ಯಾದಿಗಳಿರುತ್ತವೆ.
No comments:
Post a Comment