Thursday, November 19, 2020

ಹಂಗಾಮೀ ಸಭಾಧ್ಯಕ್ಷರಾಗಿ ಜಿತನ್ ರಾಮ್ ಮಾಂಝಿ

 ಹಂಗಾಮೀ ಸಭಾಧ್ಯಕ್ಷರಾಗಿ ಜಿತನ್ ರಾಮ್ ಮಾಂಝಿ

ಪಾಟ್ನಾ: ಬಿಹಾg ೧೭ನೇ ವಿಧಾನಸಭೆಯ ಅಧಿವೇಶನವನ್ನು ನವೆಂಬರ್ ೨೩ಕ್ಕೆ ಕರೆಯಲಾಗಿದ್ದು, ಹಂಗಾಮೀ ಸಭಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು ರಾಜ್ಯಪಾಲ ಫಾಗು ಚೌಹಾಣ್ ಅವರಿಂದ  2020 ನವೆಂಬರ್ 19ರ  ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

ಇಮಾಮ್ಗಂಜ್ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಮಾಂಝಿ ಅವರನ್ನು ಬಿಹಾರ ವಿಧಾನಸಭೆಯ ಸಭಾಧ್ಯಕ್ಷರ ಆಯ್ಕೆ ಮಾಡುವವರೆಗೆ ಎರಡು ದಿನಗಳ ಅವಧಿಗೆ (ನವೆಂಬರ್ ೨೩ ಮತ್ತು ೨೪) ಹಂಗಾಮೀ ಸಭಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಪಯಣ ಆರಂಭಿಸಿದ್ದ ಮಾಂಝಿ ೧೯೮೦ರಿಂದ ಬಿಹಾರ ವಿಧಾನಸಭೆಯ ಸದಸ್ಯರಾಗಿದ್ದಾರೆ. ಅವರು ೨೦೧೫ರಲ್ಲಿ ತಮ್ಮದೇ ಪಕ್ಷವಾದ ಹಿಂದೂಸ್ತಾನಿ ಅವಮ್ ಮೋರ್ಚಾ-ಜಾತ್ಯತೀತ (ಎಚ್ಎಎಂ) ಹುಟ್ಟು ಹಾಕುವವರೆಗೂ ರಾಜ್ಯದ ಎಲ್ಲಾ ಮುಖ್ಯವಾಹಿನಿಯ ಪಕ್ಷಗಳೊಂದಿಗೆ ಸಂಬಂಧ ಹೊಂದಿದ್ದರು. ೨೦೧೪ರ ಮೇ ೨೦ರಿಂದ ೨೦೧೫ರ ಫೆಬ್ರುವರಿ ೨೦ರವರೆಗೆ ಅವರು ಬಿಹಾರದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು.

೧೬ ನೇ ಬಿಹಾರ ವಿಧಾನಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಸದಾನಂದ್ ಸಿಂಗ್ ಅವರಿಗೆ ಅಂದಿನ ರಾಜ್ಯಪಾಲರು ಮತ್ತು ಭಾರತದ ಹಾಲಿ ರಾಷ್ಟ್ರಪತ್ಷಿ ರಾಮನಾಥ್ ಕೋವಿಂದ್ ಅವರು ಹಂಗಾಮೀ ರಾಜ್ಯಪಾಲರಾಗಿ ಪ್ರಮಾಣವಚನ ಬೋಧಿಸಿದ್ದರು.

ವಿಧಾನಸಭೆಯ ಹಿರಿಯ ಸದಸ್ಯgನ್ನು ಹಂಗಾಮೀ ಸಭಾಧ್ಯಕ್ಷರಾಗಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಎರಡು ದಿನಗಳಲ್ಲಿ, ಬಿಹಾರ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾದ ಎಲ್ಲ ೨೪೩ ಸದಸ್ಯರಿಗೆ ಹಂಗಾಮೀ ಸಭಾಧ್ಯಕ್ಷರು ಪ್ರಮಾಣವಚನ ಬೋಧಿಸಲಿದ್ದಾರೆ. ಕೋವಿಡ್ -೧೯ ಸಾಂಕ್ರಾಮಿಕದ ಮಧ್ಯೆ, ಸದಸ್ಯರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾನದಂಡಗಳನ್ನು ಅನುಸರಿಸಿ ಆಸನ ವ್ಯವಸ್ಥೆಗಳೊಂದಿಗೆ ಸೆಂಟ್ರಲ್ ಹಾಲ್ನಲ್ಲಿ ಅಧಿವೇಶನ ನಡೆಯಲಿದೆ.

ಅಧಿವೇಶನದ ಮೂರನೇ ದಿನ ಸಭಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಬಿಹಾರ ವಿಧಾನಸಭೆ ಮತ್ತು ಬಿಹಾರ ವಿಧಾನಪರಿಷತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ನಾಲ್ಕನೇ ದಿನ ಭಾಷಣ ಮಾಡಲಿದ್ದಾರೆ. ನಂತರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ, ಸರ್ಕಾರದ ಉತ್ತರ ಮತ್ತು ರಾಜ್ಯಪಾರಿಗೆ ಧನ್ಯವಾದ ಅರ್ಪಣಡ ನಡೆಯಲಿದೆ.

ಕೊನೆಯ ದಿನ ಸರ್ಕಾರದ ಪೂರಕ ಬಜೆಟ್ ಕೈಗೆತ್ತಿಕೊಳ್ಳಲಾಗುವುದು.

ಜಂಟಿ ಅಧಿವೇಶನದ ನಂತರ, ಸಾಮಾಜಿಕ ಅಂತರ ಪಾಲನೆಯ ಮಾನದಂಡದ ಅಡಿಯಲ್ಲಿ ಬಿಹಾರ ವಿಧಾನಸಭೆಯಲ್ಲಿಯೇ ಬಿಹಾರ ವಿಧಾನಪರಿಷತ್ತಿನ ಅಧಿವೇಶನ ನಡೆಯಲಿದೆ.

ಉಭಯ ಸದನಗಳ ಶಾಸಕಾಂಗವನ್ನು ಹೊಂದಿರುವ ದೇಶದ ಏಳು ರಾಜ್ಯಗಳಲ್ಲಿ ಬಿಹಾರವೂ ಒಂದಾಗಿದ್ದು ಸದನವು ಕೆಳಮನೆ (ವಿಧಾನಸಭೆ) ಮತ್ತು ಮೇಲ್ಮನೆಯನ್ನು (ವಿಧಾನಪರಿಷತ್) ಕೌನ್ಸಿಲ್) ಹೊಂದಿದೆ.

ಹೊಸ ವಿಧಾನಸಭೆಯಲ್ಲಿ ರಾಷ್ಟ್ರೀಯ ಜನತಾದಳವು (ಆರ್ಜೆಡಿ) ೭೫ ಸದಸ್ಯರನ್ನು ಹೊಂದಿರುವ ಏಕೈಕ ದೊಡ್ಡ ಪಕ್ಷವಾಗಿದ್ದರೆ, ವಿರೋಧೀ ಮಹಾಮೈತ್ರಿಯು ಒಟ್ಟು ೧೧೦ ಸ್ಥಾನಗಳನ್ನು ಹೊಂದಿದೆ.

ಆಡಳಿತಾರೂಢ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟವು (ಎನ್ಡಿಎ) ಬಿಜೆಪಿಯ ೭೪ ಸದಸ್ಯರು ಸೇರಿದಂತೆ ಒಟ್ಟು ೧೨೫ ಸ್ಥಾನಗಳನ್ನು ಹೊಂದಿದೆ. ಸ್ವತಂತ್ರ ಅಭ್ಯರ್ಥಿ ಎನ್ಡಿಎಗೆ ಬೆಂಬಲ ನೀಡಿದ್ದಾರೆ.

ಹೊಸದಾಗಿ ಚುನಾಯಿತವಾದ ಬಿಹಾರ ವಿಧಾನಸಭೆಯಲ್ಲಿ ಅಖಿಲ ಭಾರತ ಮಜ್ಲಿಸ್--ಇತ್ತೀಹಾದುಲ್  ಮುಸ್ಲೀಮೀನ್ (ಎಐಐಎಂಐಎಂ) ಪಕ್ಷದ ಐವರು ಸದಸ್ಯರು ಸೇರಿದಂತೆ ಇನ್ನೂ ಏಳು ಮಂದಿ ಇದ್ದಾರೆ.

No comments:

Advertisement