ನೂತನ ಕೃಷಿ ಕಾಯ್ದೆಗಳಿಗೆ ಬಹುತೇಕ ಭಾರತೀಯರ ಬೆಂಬಲ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪರಿಚಯಿಸಿದ ಹೊಸ ಕೃಷಿ ಸುಧಾರಣೆಗಳ ವಿರುದ್ಧ ರಾಷ್ಟ್ರ ರಾಜಧಾನಿಯ ಸುತ್ತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ಸುದ್ದಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಹೆಚ್ಚಿನ ಭಾರತೀಯರು ಹೊಸ ಕೃಷಿ ಕಾಯ್ದೆಗಳ ಅನುಷ್ಠಾನವನ್ನು ಬೆಂಬಲಿಸಿದ್ದಾರೆ ಮತ್ತು ರೈತರು ಆಂದೋಲನವನ್ನು ಹಿಂತೆಗೆದುಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
೨೨ ರಾಜ್ಯಗಳಲ್ಲಿ ೨,೪೦೦ ಕ್ಕೂ ಹೆಚ್ಚು ಜನರನ್ನು ಸಮೀಕ್ಷೆಗಾಗಿ ಸಂಪರ್ಕಿಸಲಾಗಿದ್ದು, ಬಹುತೇಕ ಮಂದಿ ಹೊಸ ಕೃಷಿ ಸುಧಾರಣಾ ಕಾನೂನುಗಳು ಬೆಳೆಗಾರರಿಗೆ ಪ್ರಯೋಜನವನ್ನು ನೀಡುತ್ತವೆ ಎಂದು ಹೇಳಿದರು.
ಹೆಚ್ಚಿನ ಕೃಷಿ ರಾಜ್ಯಗಳಲ್ಲಿ, ವಿಶೇಷವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹೊಸ ಶಾಸನಗಳಿಗೆ ಬೆಂಬಲವು ಪ್ರಬಲವಾಗಿದೆ ಎಂದು ಅಂಕಿ ಸಂಖ್ಯೆಗಳು ತೋರಿಸಿವೆ.
ಇದಕ್ಕೆ ಹೊರತಾಗಿರುವುದು ಪಂಜಾಬ್, ಅಲ್ಲಿ ಕೃಷಿ ಕ್ಷೇತ್ರದ ಉದಾರೀಕರಣದ ವಿಷಯವು ಹೆಚ್ಚು ರಾಜಕೀಯೀಕರಣಗೊಂಡಿರುವುದರಿಂದ ಬೆಂಬಲವನ್ನು ಸ್ವಲ್ಪ ಕಡಿಮೆಯಾಗಿದೆ.
ದೇಶಾದ್ಯಂತ ಹೊಸ ಕಾನೂನುಗಳಿಗೆ ಒಟ್ಟಾರೆ ಬೆಂಬಲವು ಶೇಕಡಾ ೫೩.೬ ರಷ್ಟಿದೆ ಎಂದು ಸಮೀಕ್ಷೆಯು ಹೇಳಿದೆ. ಶೇಕಡಾ ೫೬.೫೯ ರಷ್ಟು ಜನರು ರೈತರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲು ಇದು ಸಕಾಲ ಎಂಬ ನಂಬಿಕೆ ವ್ಯಕ್ತ ಪಡಿಸಿದರು.
ಕೇಂದ್ರ ಸರ್ಕಾರವು ಪರಿಚಯಿಸಿರುವ ಕೃಷಿ ಸುಧಾರಣೆಗಳು, ಇದೇ ಮೊದಲ ಬಾರಿಗೆ ಎಪಿಎಂಸಿ ನಿಯಂತ್ರಿತ ಮಂಡಿಗಳ ಹೊರಗೆ ಕೃಷಿ ಉತ್ಪನ್ನಗಳ ವ್ಯಾಪಾರಕ್ಕೆ ಅನುಮತಿ ನೀಡಿವೆ. ದೇಶಾದ್ಯಂತ ಖಾಸಗಿ ಮಂಡಿಗಳನ್ನು ಸ್ಥಾಪಿಸಬಹುದು, ಅಲ್ಲಿ ಯಾರಾದರೂ ರೈತರಿಂದ ಉತ್ಪನ್ನಗಳನ್ನು ಖರೀದಿಸಬಹುದು. ರೈತರು ತಮ್ಮ ಉತ್ಪನ್ನಗಳನ್ನು ಯಾರಿಗೆ ಮಾರಾಟ ಮಾಡಬೇಕೆಂಬುದರ ಬಗ್ಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಹೆಚ್ಚಿನ ಖರೀದಿದಾರರು ಲಭಿಸುವುದರಿಂದ ರೈತರಿಗೆ ಉತ್ತಮ ಬೆಲೆಯ ಲಭ್ಯತೆಯ ಅವಕಾಶ ಹೆಚ್ಚು ಎಂದು ಸರ್ಕಾರ ಹೇಳಿದೆ.
ಹೊಸ ಕೃಷಿ ಸುಧಾರಣಾ ಕಾನೂನಿನಡಿಯಲ್ಲಿ ರೈತರಿಗೆ ಉತ್ತಮ ಬೆಲೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಸಮೀಕ್ಷೆಯಲ್ಲಿ ಮಾತನಾಡಿದ ಐವರಲ್ಲಿ ಮೂರಕ್ಕಿಂತ ಹೆಚ್ಚು ಮಂದಿ ಒಪ್ಪಿಕೊಂಡರು.
ಎಪಿಎಂಸಿ ಮಂಡಿಗಳ ಹೊರಗೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಆಯ್ಕೆ ನೀಡುವುದು ಸರಿಯಾದ ನಿರ್ಧಾರವೇ ಎಂಬ ಪ್ರಶ್ನೆಗೆ ಶೇಕಡಾ ೭೩ ಮಂದಿ ಸಕಾರಾತ್ಮಕ ಉತ್ತರ ನೀಡಿದರು.
ಪ್ರತಿಕ್ರಿಯಿಸಿದವರಲ್ಲಿ ಅರ್ಧದಷ್ಟು ಮಂದಿ (ಶೇಕಡಾ ೪೮.೭) ಕೃಷಿ ಸುಧಾರಣೆಗಳ ವಿರೋಧವು ರಾಜಕೀಯ ಪ್ರೇರಿತವಾಗಿದೆ ಎಂದು ಭಾವಿಸಿದರು.
ಅರ್ಧಕ್ಕಿಂತ ಹೆಚ್ಚು (ಶೇಕಡಾ ೫೨.೬೯) ಮಂದಿ ಪ್ರತಿಭಟನಾ ನಿರತ ರೈತರು ಕೃಷಿ ಸುಧಾರಣಾ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಬಾರದು ಮತ್ತು ಸರ್ಕಾರದೊಂದಿಗೆ ರಾಜಿ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.
ಪ್ರತಿಭಟನೆಯಲ್ಲಿ ದೆಹಲಿಯ ಸುತ್ತಲೂ ಬೀಡುಬಿಟ್ಟಿರುವ ರೈತರೊಂದಿಗೆ ಕೇಂದ್ರ ಸರ್ಕಾರ ಹಲವಾರು ಸುತ್ತಿನ ಮಾತುಕತೆ ನಡೆಸಿದೆ ಮತ್ತು ಅವರ ಆತಂಕ ಮತ್ತು ಕಳವಳಗಳನ್ನು ಪರಿಹರಿಸಲು ಹಲವಾರು ರಿಯಾಯಿತಿಗಳನ್ನು ನೀಡಿದೆ, ಆದರೆ ರೈತ ಸಂಘಗಳು ಮೂರು ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿವೆ, ಇದು ಮಾತುಕತೆ ಸ್ಥಗಿತಕ್ಕೆ ಕಾರಣವಾಗಿದೆ.
ಆರು ಸುತ್ತಿನ ಮಾತುಕತೆಯ ನಂತರ, ಕನಿಷ್ಠ ಬೆಂಬಲ ಬೆಲೆಗೆ ಲಿಖಿತ ಗ್ಯಾರಂಟಿ ಸೇರಿದಂತೆ ೨೦ ಗಂಟೆಗಳಿಗಿಂತ ಹೆಚ್ಚು ಕಾಲ ನಡೆದ ಮಾತುಕತೆಯ ಸಮಯದಲ್ಲಿ ರೈತರು ಕೇಳಿದ್ದನ್ನು ಆಧರಿಸಿ ‘ಭರವಸೆ’ ನೀಡುವುದಾಗಿ ಸರ್ಕಾರ ಹೇಳಿದೆ.
ರೈತರಿಗೆ ಸುರಕ್ಷತಾ ಜಾಲವನ್ನು ನೀಡುವ ಮತ್ತು ಪ್ರತಿಭಟನಾ ಗುಂಪುಗಳ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಎಂಎಸ್‌ಪಿಗೆ ಸರ್ಕಾರದ ಲಿಖಿತ ಭರವಸೆ ಸಹ ಸಮೀಕ್ಷೆಗೆ ಪ್ರತಿಕ್ರಿಯಿಸಿದವರ ಬೆಂಬಲವನ್ನು ಪಡೆಯಿತು. ಶೇಕಡಾ ೫೩.೯೪ ರಷ್ಟು ಮಂದಿ ಈ ನಿರ್ಧಾರವನ್ನು ಒಪ್ಪಿದರು.
ಕೃಷಿಯಲ್ಲಿ ಸುಧಾರಣೆ ಮತ್ತು ಆಧುನೀಕರಣಕ್ಕೆ ಬೆಂಬಲವು ಎಲ್ಲ ಪ್ರದೇಶಗಳಲ್ಲಿ (ಶೇಕಡಾ ೭೦ ಕ್ಕಿಂತ ಹೆಚ್ಚು) ಹೆಚ್ಚಾಗಿದೆ ಮತ್ತು ದಕ್ಷಿಣ ರಾಜ್ಯಗಳಲ್ಲಿ ಶೇಕಡಾ ೭೪ ರಷ್ಟು ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ.
ಪರಿಚಯಿಸಲಾದ ಹೊಸ ಕಾನೂನುಗಳಿಗೆ, ಉತ್ತರ ಭಾರತದಿಂದ ಶೇಕಡಾ ೬೩.೭೭ರಷ್ಟು ಅಂದರೆ ಅತಿ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. ಪಶ್ಚಿಮ ಭಾರತದಲ್ಲಿ ಶೇಕಡಾ ೬೨.೯೦ರಷ್ಟು ಬೆಂಬಲ ವ್ಯಕ್ತವಾಗಿದೆ.
ಎಲ್ಲ ವಲಯಗಳಲ್ಲೂ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು ರೈತರಿಗೆ ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಮಂಡಿಗಳ ಹೊರಗೆ ಮಾರಾಟ ಮಾಡುವ ಹಕ್ಕು ನೀಡುವುದನ್ನು ಬೆಂಬಲಿಸಿದ್ದಾರೆ.
No comments:
Post a Comment