ಕಾಯ್ದೆ ವಾಪಸ್ ಇಲ್ಲ, ಕನಿಷ್ಠ ಬೆಂಬಲ ಬೆಲೆ ಬಗ್ಗೆ ಕೇಂದ್ರದ ಲಿಖಿತ ಭರವಸೆ
ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಬಗ್ಗೆ ಲಿಖಿತ ಭರವಸೆ, ೭ ವಿಷಯಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಮತ್ತು ಸಿವಿಲ್ ನ್ಯಾಯಾಲಯಗಳಲ್ಲಿ ಮೇಲ್ಮನವಿ ಅವಕಾಶದ ಕೊಡುಗೆಯನ್ನು ಕೇಂದ್ರ ಸರ್ಕಾರವು ಚಳವಳಿ ನಿರತ ರೈತರ ಮುಂದಿಟ್ಟಿದೆ. ಆದರೆ ಕೃಷಿ ಕಾಯ್ದೆಗಳ ಸಂಪೂರ್ಣ ವಾಪಸಾತಿ ಇಲ್ಲ ಎಂದು 2020 ಡಿಸೆಂಬರ್ 09ರ ಬುಧವಾರ ತಿಳಿಸಿದೆ.
ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸಾವಿರಾರು ರೈತರು ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ, ೧೩ ರೈತ ಸಂಘಗಳಿಗೆ ಬುಧವಾರ ಕಳುಹಿಸಿರುವ ಕರಡು ಪ್ರಸ್ತಾವನೆಯಲ್ಲಿ ಸರ್ಕಾರವು ರೈತರ ಅತ್ಯಂತ ಪ್ರಮುಖ ಬೇಡಿಕೆಯಾಗಿರುವ ಕನಿಷ್ಠ ಬೆಂಬಲ ಬೆಲೆಯನ್ನು ಉಳಿಸಿಕೊಳ್ಳುವ ಬಗ್ಗೆ "ಲಿಖಿತ ಭರವಸೆ’ಯನ್ನು ನೀಡುವುದಾಗಿ ತಿಳಿಸಿದೆ.
ಇದರ ಜೊತೆಗೆ ಮಂಡಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಬಗೆಗಿನ ಆತಂಕಗಳ ನಿವಾರಣೆ ಸೇರಿದಂತೆ ಕನಿಷ್ಠ ಏಳು ವಿಷಯಗಳ ಬಗ್ಗೆ ಅಗತ್ಯ ತಿದ್ದುಪಡಿಗಳನ್ನು ಮಾಡಲು ಸರ್ಕಾರ ಪ್ರಸ್ತಾಪಿಸಿದೆ.
ಚಳವಳಿಯ ನೇತೃತ್ವ ವಹಿಸಿರುವ ೧೩ ರೈತ ಸಂಘಗಳಿಗೆ ಕಳುಹಿಸಿದ ಕರಡು ಪ್ರಸ್ತಾವನೆಯಲ್ಲಿ, ಸೆಪ್ಟೆಂಬರಿನಲ್ಲಿ ಜಾರಿಗೆ ತರಲಾದ ಹೊಸ ಕೃಷಿ ಕಾನೂನುಗಳ ಬಗೆಗಿನ ಅವರ ಕಳವಳ ನಿವಾರಿಸಲು ಅಗತ್ಯವಿರುವ ಎಲ್ಲ ಸ್ಪಷ್ಟೀಕರಣಗಳನ್ನು ನೀಡಲು ಸಿದ್ಧ ಎಂದು ಸರ್ಕಾರ ಹೇಳಿದೆ, ಆದರೆ ಕಾನೂನು ರದ್ದು ಪಡಿಸುವಂತೆ ರೈತರು ಆಗ್ರಹಿಸುತ್ತಿರುವ ಮುಖ್ಯ ಬೇಡಿಕೆಯ ಬಗ್ಗೆ ಅದು ಏನನ್ನೂ ಉಲ್ಲೇಖಿಸಿಲ್ಲ.
೧೩ ರೈತ ಸಂಘಗಳ ಮುಖಂಡರೊಂದಿಗೆ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಮೂರು ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರೈತರು ಎತ್ತಿದ ಪ್ರಮುಖ ವಿಷಯಗಳ ಕುರಿತು ಕರಡು ಪ್ರಸ್ತಾವನೆಯನ್ನು ಕಳುಹಿಸುವುದಾಗಿ ಹೇಳಿದ್ದರು, ಆದರೆ ಈ ಸಭೆಯು ಕೃಷಿ ಒಕ್ಕೂಟದ ಮುಖಂಡರೊಂದಿಗಿನ ಬಿಕ್ಕಟ್ಟು ಮುರಿಯಲು ವಿಫಲವಾಯಿತು.
ಬುಧವಾರ ಬೆಳಗ್ಗೆಗೆ ನಿಗದಿಯಾಗಿದ್ದ ಸರ್ಕಾರ ಮತ್ತು ಕೃಷಿ ಒಕ್ಕೂಟದ ಮುಖಂಡರ ನಡುವಣ ಆರನೇ ಸುತ್ತಿನ ಮಾತುಕತೆ ಕೂಡ ರದ್ದುಗೊಂಡಿದೆ. ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರವಾಲ್ ಅವರು ಕಳುಹಿಸಿದ ಪ್ರಸ್ತಾವನೆಯಲ್ಲಿ, ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರು ಹೊಂದಿರುವ ಆಕ್ಷೇಪಣೆಯನ್ನು “ಮುಕ್ತ ಹೃದಯದಿಂದ” ಪರಿಗಣಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.
"ರೈತರ ಕಳವಳವನ್ನು ಮುಕ್ತ ಹೃದಯದಿಂದ ಪರಿಹರಿಸಲು ಮತ್ತು ದೇಶದ ಕೃಷಿ ಸಮುದಾಯವನ್ನು
ಗೌರವಿಸಲು ಸರ್ಕಾರ ಪ್ರಯತ್ನಿಸಿದೆ. ಕಿಸಾನ್ ಒಕ್ಕೂಟಗಳು ತಮ್ಮ ಆಂದೋಲನವನ್ನು ಕೊನೆಗೊಳಿಸುವಂತೆ ಸರ್ಕಾರ ಮನವಿ ಮಾಡುತ್ತದೆ’ ಎಂದು ಅದು ಹೇಳಿದೆ.
ಹೊಸ ಕಾನೂನುಗಳ ನಂತರ ಮಂಡಿಗಳು ದುರ್ಬಲಗೊಳ್ಳುತ್ತವೆ ಎಂಬ ರೈತರ ಆತಂಕಕ್ಕೆ ಸಂಬಂಧಿಸಿದಂತೆ ಕಾಯ್ದೆಗೆ ತಿದ್ದುಪಡಿ ಮಾಡಬಹುದೆಂದು ಸರ್ಕಾರವು ಹೇಳಿದೆ, ಇದರಲ್ಲಿ ರಾಜ್ಯ ಸರ್ಕಾರಗಳು ಮಂಡಿಗಳ ಹೊರಗೆ ಕಾರ್ಯನಿರ್ವಹಿಸುವ ವ್ಯಾಪಾರಿಗಳನ್ನು ನೋಂದಾಯಿಸಬಹುದು. ರಾಜ್ಯಗಳು ಎಪಿಎಂಸಿ (ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ) ಮಂಡಿಗಳಲ್ಲಿ ಬಳಸಿದಂತೆ ತೆರಿಗೆ ಮತ್ತು ಸೆಸ್ ಅನ್ನು ವಿಧಿಸಬಹುದು.
ಕೇವಲ ಪ್ಯಾನ್ ಕಾರ್ಡ್ ಹೊಂದಿರುವ ಯಾರಿಗಾದರೂ ಎಪಿಎಂಸಿ ಮಂಡಿಗಳ ಹೊರಗೆ ವ್ಯಾಪಾರ ಮಾಡಲು ಅವಕಾಶವಿರುವುದರಿಂದ ರೈತರನ್ನು ಮೋಸಗೊಳಿಸಬಹುದು ಎಂಬ ಆತಂಕದ ಮೇರೆಗೆ, ಸರ್ಕಾರವು ಅಂತಹ ಆತಂಕಗಳನ್ನು ತಳ್ಳಿಹಾಕಲು ಬಯಸಿದೆ. ರೈತರ ಸ್ಥಳೀಯ ಪರಿಸ್ಥಿತಿಯನ್ನು
ಗಮನದಲ್ಲಿಟ್ಟುಕೊಂಡು ಅಂತಹ ವ್ಯಾಪಾರಿಗಳನ್ನು ನೋಂದಾಯಿಸುವ ನಿಟ್ಟಿನಲ್ಲಿ ನಿಯಮಗಳನ್ನು ರಚಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಬಹುದು.
ಹೊಸ ಕಾಯ್ದೆಗಳಲ್ಲಿ ವಿವಾದ ಪರಿಹಾರಕ್ಕಾಗಿ ಸಿವಿಲ್ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ರೈತರು ಪಡೆಯದಿರುವ ವಿಷಯದ ಕುರಿತು, ಪ್ರಸ್ತಾಪಿಸಿದ ಅಗರ್ವಾಲ್ ಸಿವಿಲ್ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ತಿದ್ದುಪಡಿ ಮಾಡಲು ಸರ್ಕಾರ ಮುಕ್ತವಾಗಿದೆ ಎಂದು ಹೇಳಿದರು. ಪ್ರಸ್ತುತ, ವಿವಾದ ಪರಿಹಾರಕ್ಕೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಮಟ್ಟದಲ್ಲಿ ದೂರು ನೀಡಲು ಅವಕಾಶವಿದೆ.
ದೊಡ್ಡ ಕಾರ್ಪೋರೇಟ್ಗಳು ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಳುತ್ತವೆ ಎಂಬ ಆತಂಕಕ್ಕೆ ಸಂಬಂಧಿಸಿದಂತೆ, ಮಾತನಾಡಿದ ಅUರ್ವಾಲ್ ಈ ಬಗ್ಗೆ ಈಗಾಗಲೇ ಕಾನೂನುಗಳಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಹೇಳಿದರು.
ಆದರೆ ಇನ್ನೂ ಸ್ಪಷ್ಟತೆಯ ದೃಷ್ಟಿಯಿಂದ, ಯಾವುದೇ ಖರೀದಿದಾರರು ಕೃಷಿಭೂಮಿಯ ವಿರುದ್ಧ ಸಾಲ ಪಡೆಯಲು ಸಾಧ್ಯವಿಲ್ಲ ಅಥವಾ ಅಂತಹ ಯಾವುದೇ ಷರತ್ತು ವಿಧಿಸಲಾಗುವುದಿಲ್ಲ ಎಂದು ರೈತರು ಬರೆಯಬಹುದು.
ಗುತ್ತಿಗೆ ಕೃಷಿಯಡಿಯಲ್ಲಿ ಕೃಷಿಭೂಮಿಯನ್ನು ಲಗತ್ತಿಸುವಾಗ, ಅಸ್ತಿತ್ವದಲ್ಲಿರುವ ನಿಬಂಧನೆ ಸ್ಪಷ್ಟವಾಗಿದೆ ಆದರೆ ಅಗತ್ಯವಿದ್ದರೆ ಅದನ್ನು ಇನ್ನಷ್ಟು ಸ್ಪಷ್ಟಪಡಿಸಬಹುದು ಎಂದು ಸರ್ಕಾರ ಹೇಳಿದೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಆಡಳಿತವನ್ನು ರದ್ದುಗೊಳಿಸುವುದು ಮತ್ತು ವ್ಯಾಪಾರವನ್ನು ಖಾಸಗಿ ಆಟಗಾರರಿಗೆ ವರ್ಗಾಯಿಸುವ ಭಯವನ್ನು ನಿವಾರಿಸಲು, ಅಸ್ತಿತ್ವದಲ್ಲಿರುವ ಎಂಎಸ್ಪಿ ಮುಂದುವರಿಯುತ್ತದೆ ಎಂದು ಲಿಖಿತ ಭರವಸೆ ನೀಡಲು ಸರ್ಕಾರ ಸಿದ್ಧವಾಗಿದೆ ಎಂದು ಅಗರವಾಲ್ ಹೇಳಿದರು.
ಪ್ರಸ್ತಾವಿತ ವಿದ್ಯುತ್ ತಿದ್ದುಪಡಿ ಮಸೂದೆ ೨೦೨೦ನ್ನು ರದ್ದುಗೊಳಿಸುವ ಬೇಡಿಕೆಯ ಮೇರೆಗೆ, ರೈತರಿಗೆ ಈಗಿರುವ ವಿದ್ಯುತ್ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ. ಎನ್ಸಿಆರ್ ಆರ್ಡಿನೆನ್ಸ್ ೨೦೨೦ ರ ವಾಯು ಗುಣಮಟ್ಟ ನಿರ್ವಹಣೆಯನ್ನು ರದ್ದುಗೊಳಿಸುವ ರೈತರ ಬೇಡಿಕೆಯ ಬಗ್ಗೆ ಪ್ರಸ್ತಾಪಿಸಿದ ಸರ್ಕಾರ, ’ಕೃಷಿ ತ್ಯಾಜ್ಯ/ ಕೂಳೆ ಸುಡುವಿಕೆಗೆ ದಂಡ ವಿಧಿಸುವ ನಿಯಮವಿದೆ, ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಹಿಡಿಯಲು ಸಿದ್ಧ’ ಎಂದು ಹೇಳಿದೆ.
ಕರಡು ಪ್ರಸ್ತಾವನೆಯನ್ನು ಬಿಕೆಯು (ಏಕ್ತಾ ಉಗ್ರಾಹಾನ್) ನಾಯಕ ಜೋಗಿಂದರ್ ಸಿಂಗ್ ಉಗ್ರಹಾನ್
ಸೇರಿದಂತೆ ೧೩ ಕೃಷಿ ಸಂಘಗಳ ಮುಖಂಡರಿಗೆ ಕಳುಹಿಸಲಾಗಿದೆ, ಇವು ಸುಮಾರು ೪೦ ಆಂದೋಲನ ನಿರತ ಸಂಘಗಳಲ್ಲಿ ದೊಡ್ಡ ಸಂಘಟನೆಗಳಾಗಿವೆ.
"ರೈತ ಸಂಘಗಳು ಸರ್ಕಾರದಿಂದ ಕರಡು ಪ್ರಸ್ತಾವನೆಯನ್ನು ಸ್ವೀಕರಿಸಿದೆ" ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಸರ್ಕಾರದೊಂದಿಗೆ ನಡೆಯುತ್ತಿರುವ ಮಾತುಕತೆಗಳಲ್ಲಿ ಭಾಗವಹಿಸುತ್ತಿರುವ ಹಲವರು ಸಂಘಟನೆಗಳ ನಾಯಕರಲ್ಲಿ ಅವರು ಒಬ್ಬರಾಗಿದ್ದಾರೆ.
ರೈತರು ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ೨೦೨೦ ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, ೨೦೨೦- ಈ ಎರಡು ಹೊಸ ಕಾನೂನುಗಳಲ್ಲಿ ಏಳು ತಿದ್ದುಪಡಿಗಳನ್ನು ಸರ್ಕಾರ ಪ್ರಸ್ತಾಪಿಸಿದೆ.ಆದಾಗ್ಯೂ, ೨೦೨೦ ರ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಯನ್ನು ಕರಡು ಪ್ರಸ್ತಾವನೆ ಮುಟ್ಟಿಲ್ಲ.
No comments:
Post a Comment