Friday, December 4, 2020

ಎಂಎಸ್‌ಪಿಗಿಂತ ಅಗ್ಗದಲ್ಲಿ ಖರೀದಿ ಕ್ರಿಮಿನಲ್ ಅಪರಾಧ: ಬಿಕೆಎಸ್

 ಎಂಎಸ್ಪಿಗಿಂತ ಅಗ್ಗದಲ್ಲಿ ಖರೀದಿ ಕ್ರಿಮಿನಲ್ ಅಪರಾಧ: ಬಿಕೆಎಸ್

ನವದೆಹಲಿ: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ಬಗೆಗಿನ ತನ್ನ ನಿಲುವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆ ಸಂಯೋಜಿತವಾಗಿರುವ ಭಾರತೀಯ ಕಿಸಾನ್ ಸಂಘ (ಬಿಕೆಎಸ್) 2020 ಡಿಸೆಂಬರ್ 04ರ ಶುಕ್ರವಾರ ಬಹಿರಂಗ ಪಡಿಸಿದ್ದು ಕನಿಷ್ಠ ಬೆಂಬಲ ಬೆಲೆಗಿಂತ (ಎಂಎಸ್ಪಿ) ಅಗ್ಗದ ದರದಲ್ಲಿ ಕೃಷಿ ಉತ್ಪನ್ನಗಳ ಖರೀದಿ ಕ್ರಿಮಿನಲ್ ಅಪರಾಧವಾಗಬೇಕು ಎಂದು ಹೇಳಿದೆ.

ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಆಂದೋಲನದ ಬಗ್ಗೆ ತನ್ನ ಮೌನ ಮುರಿದ ಬಿಕೆಎಸ್, ಸರ್ಕಾರ ಅಥವಾ ಖಾಸಗಿಯವರು ನಡೆಸುವ ಮಾರುಕಟ್ಟೆ ಮಂಡಳಿಗಳಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಖಾತರಿ ಪಡಿಸಬೇಕು ಮತ್ತು ಅದಕ್ಕಿಂತ ಕೆಳಗಿನ zರದಲ್ಲಿ ಆಹಾರ ಧಾನ್ಯಗಳ ಸಂಗ್ರಹವನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡಬೇಕು ಎಂದು ಹೇಳಿತು.

ಖಾಸಗಿ ಖರೀದಿದಾರರು ಎಂಎಸ್ಪಿಗಿಂತ ಕಡಿಮೆ ದರದಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂಬುದನ್ನು ಖಚಿತ ಪಡಿಸುವ ಯಾವುದೇ ನಿಬಂಧನೆ ಕಾಯ್ದೆಯಲ್ಲಿ ಇಲ್ಲ ಎಂಬುದು, ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಗಳು ಹೊಸ ಕಾನೂನುಗಳನ್ನು ಸಂಪೂರ್ಣ ವಾಪಸ್ ಪಡೆಯಬೇಕು ಎಂದು  ಒತ್ತಾಯಿಸುತ್ತಿರುವುದಕ್ಕೆ ಒಂದು ಪ್ರಮುಖ ಕಾರಣವಾಗಿದೆ.

ರೈತರು ಮತ್ತು ಖಾಸಗಿ ಖರೀದಿದಾರರ ನಡುವಣ ವಿವಾದಗಳನ್ನು ಸ್ಥಳೀಯ ಎಸ್ಡಿಎಂಗೆ ನಿರ್ದೇಶಿಸುವ ಕಾಯ್ದೆಯ ಪ್ರಸ್ತುತ ನಿಬಂಧನೆಗೆ ಬದಲಾಗಿ ಇಂತಹ ವಿವಾದಗಳ ಇತ್ಯರ್ಥಕ್ಕಾಗಿ ಸರ್ಕಾರವು ವಿಶೇಷ ಕೃಷಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಬಿಕೆಎಸ್ ಒತ್ತಾಯಿಸಿತು.

"ಒಬ್ಬ ರೈತ ತನ್ನ ಉತ್ಪನ್ನಗಳನ್ನು ಖಾಸಗಿ ಮಂಡಿಗಳಲ್ಲಿ ಅಥವಾ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) (ಸರ್ಕಾರಿ ನಡೆಸುವ ಮಂಡಿಗಳು) ಅಥವಾ ರಸ್ತೆಗಳಲ್ಲಿ ಎಲ್ಲಿ ಮಾರುತ್ತಾನೆ ಎಂಬುದು ಮುಖ್ಯವಲ್ಲ.  ಎಲ್ಲಿ ಮಾರಾಟ ಮಾಡಿದರೂ ರೈತರು ಯಾವಾಗಲೂ ತಮ್ಮ ಎಂಎಸ್ಪಿ ಪಡೆಯಬೇಕು ಎಂಬುದು ನಮ್ಮ ಉದ್ದೇಶ. ಎಂಎಸ್ಪಿಗಿಂತ ಕೆಳಗಿನ ದರದಲ್ಲಿ ಖರೀದಿಸುವುದನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡಬೇಕು "ಎಂದು ಬಿಕೆಎಸ್ ಪ್ರಧಾನ ಕಾರ್ಯದರ್ಶಿ ಬದ್ರಿ ನಾರಾಯಣ್ ಚೌಧರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮೂರು ಕೃಷಿ ಮಸೂದೆಗಳನ್ನು ಅನಾವರಣಗೊಳಿಸಿದ ನಂತರ ಕೇಂದ್ರ ಸರ್ಕಾರದ ವಿರುದ್ಧ ಆಂದೋಲನವನ್ನು ಪ್ರಾರಂಭಿಸಿದ ಮೊದಲ ರೈತ ಸಂಘ ಬಿಕೆಎಸ್ ಎಂದು ಚೌಧರಿ ಹೇಳಿದರು. ದೇಶಾದ್ಯಂತ ಸುಮಾರು ,೦೦೦ ತಹಸಿಲ್ಗಳಲ್ಲಿ ಬಿಕೆಎಸ್ ಪ್ರತಿಭಟನೆ ನಡೆಸಿ, ಕೃಷಿ ಮಸೂದೆಗಳ ಕುರಿತು ೨೦,೦೦೦ ಗ್ರಾಮ ಸಮಿತಿಗಳ  ಮೂಲಕ ರೈತರೊಂದಿಗೆ ಸಮಾಲೋಚನೆ ನಡೆಸಿದೆ ಎಂದು ಅವರು ಹೇಳಿದರು.

ಆದರೆ ಪ್ರಸ್ತುತ ಆಂದೋಲನವು ಹಿಂಸಾತ್ಮಕವಾಗಿದೆ ಎಂಬ ಕಾರಣಕ್ಕಾಗಿ ಅದರಿಂದ ದೂರ ಇರುವ ಆಯ್ಕೆಯನ್ನು ಬಿಕೆಎಸ್ ಮಾಡಿಕೊಂಡಿತ್ತು ಎಂದು ಚೌಧರಿ ನುಡಿದರು.

"ರೈತರು ತಮ್ಮ ಕನಿಷ್ಠ ಬೆಂಬಲ ಬೆಲೆಯನ್ನು ಪಾರದರ್ಶಕ ಕಾಲ ಮಿತಿಯ ಒಳಗೆ ಪಡೆಯುವಂತೆ ಮಾಡುವ ನಿಟ್ಟಿನಲ್ಲಿ ಬಿಕೆಎಸ್ ಪ್ರಯತ್ನಿಸುತ್ತಿದೆ. ರೈತರಿಗಾಗಿ ಕೆಲಸ ಮಾಡುವ ೪೦ ವರ್ಷಗಳ ಇತಿಹಾಸ ನಮ್ಮದು. ಆದರೆ ನಾವು ಯಾವಾಗಲೂ ನಮ್ಮ ಆಂದೋಲನವನ್ನು ಅಹಿಂಸಾತ್ಮಕವಾಗಿರಿಸಿಕೊಳ್ಳುತ್ತೇವೆ. ಆದ್ದರಿಂದ ನಮ್ಮದೇ ಆದ ಗುರಿಗಳಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಚೌಧರಿ ಮಾತು ಸೇರಿಸಿದರು.

ಬಿಕೆಎಸ್ ಮತ್ತು ಸರ್ಕಾರದ ನಡುವಿನ ಸಂವಾದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮಸೂದೆಗಳನ್ನು ಪರಿಚಯಿಸುವ ಮೊದಲು ಸರ್ಕಾರ ತಮ್ಮೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಹೇಳಿದರು.

ರೈತರಿಗೆ ತಮ್ಮ ಬಾಕಿ ಪಡೆಯುವುದಕ್ಕಾಗಿ ಮಾತ್ರ ಬಿಕೆಎಸ್ ಹೋರಾಡುತ್ತಿಲ್ಲ. ಅವರ ಸಮಸ್ಯೆಗಳ ಪರಿಹಾರಕ್ಕೆ ಯಾಂತ್ರಿಕ ವ್ಯವಸ್ಥೆಗಾಗಿಯೂ ಸರ್ಕಾರದ ಮೇಲೆ ಒತ್ತಡ ಹೇರಿದೆ ಎಂದು ಚೌಧರಿ ನುಡಿದರು.

"ಪ್ರಸ್ತುತ ಕಾನೂನು ರೈತ ಮತ್ತು ಖರೀದಿದಾರರ ನಡುವೆ ಯಾವುದೇ ವಿವಾದ ಉಂಟಾದ ಸಂದರ್ಭದಲ್ಲಿ, ಅದನ್ನು ಇತ್ಯರ್ಥ ಪಡಿಸುವ ಪ್ರಾಧಿಕಾರವು ಡಿಎಂ ಮತ್ತು ಎಸ್ಡಿಎಂ ಆಗಿರುತ್ತದೆ ಎಂದು ಹೇಳುತ್ತದೆ. ಯಾವಾಗಲೂ ಸಂದರ್ಶಕರ ಕ್ಯೂ ನಿಲ್ಲಿಸಿಕೊಂಡು ಕಾರ್ ನಿರತರಾಗಿರುವ ಅಧಿಕಾರಶಾಹಿಗಳ ಕಚೇರಿ ಪ್ರವೇಶಿಸಲು ಕೂಡಾ ರೈತರು ಹೇಗೆ ಹೆದರುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ನಾವು ರೈತರಿಗಾಗಿ ವಿಶೇಷ ನ್ಯಾಯಾಲಯಗಳನ್ನು ಕೋರಿದ್ದೇವೆ ಎಂದು ಚೌಧರಿ ಹೇಳಿದರು.

ಪ್ರತಿಭಟನಾ ನಿರತ ರೈತರು ಮತ್ತು ಸರ್ಕಾರ ಇಬ್ಬರ ನಡುವಣ ಬಿಕ್ಕಟ್ಟನ್ನು ಕೊನೆಗೊಳಿಸಲು ಮಧ್ಯಮಮಾರ್ಗದ ಸಲಹೆಯನ್ನು ಚೌಧರಿ ಮಾಡಿದರು.

" ಮೂರು ಕಾನೂನುಗಳನ್ನು ರದ್ದುಪಡಿಸುವುದಕ್ಕಿಂತ ಕಡಿಮೆ ಪ್ರಮಾಣದ ಏನನ್ನೂ ಒಪ್ಪುವುದಿಲ್ಲ ಎಂದು ರೈತರು ಪಟ್ಟು ಹಿಡಿದರೆ ಅದು ಫಲಪ್ರದವಾಗುವುದಿಲ್ಲ. ಜೊತೆಗೆ ಸರ್ಕಾರ ಕೂಡಾ ರೈತರ ಕಳವಳಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಸಮಸ್ಯೆಯ ಇತ್ಯರ್ಥಕ್ಕೆ ಮಧ್ಯಮ ಮಾರ್ಗಕ್ಕೆ ಬರಬೇಕು. ಇದೊಂದೇ ಬಿಕ್ಕಟುಟ ಇತ್ಯರ್ಥಕ್ಕೆ ಇರುವ ಪರಿಹಾರ ಎಂದು ಬಿಕೆಎಸ್ ಪ್ರಧಾನ ಕಾರ್ಯದರ್ಶಿ ನುಡಿದರು.

ಶುಕ್ರವಾರ, ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ರೈತರ ಆಂದೋಲನವು ಒಂಬತ್ತನೇ ದಿನವನ್ನು ಪ್ರವೇಶಿಸಿತು. ಹಿಂದಿನ ದಿನ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪ್ರತಿಭಟನಾ ನಿರತ ರೈತ ಸಂಘಗಳ ಮುಖಂಡರೊಂದಿಗೆ ಏಳು ಗಂಟೆಗಳ ಸುದೀರ್ಘ ಸಭೆ ನಡೆಸಿದ್ದರು. ಸಭೆಯ ನಂತರ, ಕೃಷಿ ಕಾನೂನುಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಸರ್ಕಾರ ಸಿದ್ಧವಿದೆ ಎಂದು ಸಚಿವರು ಸುಳಿವು ನೀಡಿದರು. ಆದರೆ, ಸರ್ಕಾರವು ಕಾನೂನುಗಳನ್ನು ಹಿಂಪಡೆಯಬೇಕು ಮತ್ತು ಅವರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಕೃಷಿ ಸಚಿವರು ಮತ್ತು ರೈತರ ನಡುವೆ ಶನಿವಾರ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.

No comments:

Advertisement