ಆರ್ಯ ರಾಜೇಂದ್ರನ್: ಭಾರತದ ಅತಿ ಕಿರಿಯ ಮೇಯರ್
ತಿರುವನಂತಪುರ: ಕೇರಳದ ರಾಜಧಾನಿ ತಿರುವನಂತಪುರದ ೨೧ ವರ್ಷದ ಕಾಲೇಜು ವಿದ್ಯಾರ್ಥಿನಿ ಆರ್ಯ ರಾಜೇಂದ್ರನ್ ಅವರು 2020 ಡಿಸೆಂಬರ್ 25ರ ಶುಕ್ರವಾರ ತಿರುವನಂತಪುರ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿದ್ದು, ದೇಶದಲ್ಲೇ ಅತ್ಯಂತ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುದವನ್ಮುಗಲ್ ನಿಂದ ವಾರ್ಡ್ ಕೌನ್ಸಿಲರ್ ಆಗಿ ಆಯ್ಕೆಯಾದ ಆರ್ಯ ಅವರನ್ನು ಸಿಪಿಎಂ ಜಿಲ್ಲಾ ಸಚಿವಾಲಯ ಸಮಿತಿ ತೆಗೆದುಕೊಂಡಿದೆ. ೨೦೨೦ ರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿಪಿಎಂ ಕಣಕ್ಕಿಳಿದ ಅತ್ಯಂತ ಕಿರಿಯ ಅಭ್ಯರ್ಥಿ ಇವರಾಗಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ಎಡ ಪ್ರಾಬಲ್ಯದ ಸ್ಥಳೀಯ ಸಂಸ್ಥೆಯನ್ನು ಎಲ್‌ಡಿಎಫ್ ತನ್ನ ತೆಕ್ಕೆಯಲ್ಲಿಯೇ ಉಳಿಸಿಕೊಂಡಿದೆ, ಆದರೆ ಅದರ ಇಬ್ಬರು ಮೇಯರ್ ಅಭ್ಯರ್ಥಿಗಳು ಮತ್ತು ಅಸ್ತಿತ್ವದಲ್ಲಿರುವ ಮೇಯರ್ ಸೋತದ್ದರಿಂದ ಅದು ಬಲವಾದ ಹಿನ್ನಡೆ ಎದುರಿಸಿತು. ನಗರದ ಪೆರೂರ್ಕಾಡಾ ವಾರ್ಡ್ ಪ್ರತಿನಿಧಿಸುವ ಹಿರಿಯ ಅಭ್ಯರ್ಥಿ ಜಮೀಲಾ ಶ್ರೀಧರನ್ ಅವರು ಮೇಯರ್ ಆಗಲು ಆರಂಭದಲ್ಲಿ ಪರಿಗಣನೆಯಲ್ಲಿದ್ದರು. ಆದಾಗ್ಯೂ, ಅಪೇಕ್ಷಿತ ಸ್ಥಾನಕ್ಕಾಗಿ ಕಿರಿಯ ವ್ಯಕ್ತಿಯನ್ನು ಆಯ್ಕೆ ಮಾಡುವ ಸಾಮೂಹಿಕ ಒತ್ತಾಯ ಕಂಡು ಬಂದಿತು.
ಆರ್ಯ ಅವರು ತಿರುವನಂತಪುರಂನ ಆಲ್ ಸೇಂಟ್ಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ಗಣಿತ ವಿದ್ಯಾರ್ಥಿನಿಯಾಗಿದ್ದು, ರಾಜಕೀಯವಾಗಿ ಬಹಳ ಸಕ್ರಿಯರಾಗಿದ್ದಾರೆ ಮತ್ತು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯರಾಗಿದ್ದಾರೆ. ಅವರು ಪ್ರಸ್ತುತ ಸಿಪಿಎಂನ ಮಕ್ಕಳ ವಿಭಾಗವಾಗಿರುವ ಬಾಲಸಂಗಂನ ಕೇರಳ ಅಧ್ಯಕ್ಷರಾಗಿದ್ದಾರೆ.
ರಾಜೇಂದ್ರನ್ ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪಕ್ಷವು ತನಗೆ ವಹಿಸಿಕೊಟ್ಟಿರುವ ಪಾತ್ರವನ್ನು ಸಂತೋಷದಿಂದ ಸ್ವೀಕರಿಸುವುದಾಗಿ ಹೇಳಿದರು. ಶಿಕ್ಷಣ ಮತ್ತು ರಾಜಕೀಯ ಕಾರ್ಯಗಳನ್ನು ಜೊತೆ ಜೊತೆಯಾಗಿಯೇ ನಡೆಸಿಕೊಂಡು ಹೋಗುವುದಾಗಿ ಅವರು ಭರವಸೆ ವ್ಯಕ್ತ ಪಡಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆರ್ಯ ಅವರು ಕಿರಿಯ ಅಭ್ಯರ್ಥಿಯಾಗಿದ್ದರು, ಇದರಲ್ಲಿ ಎಡ ಪ್ರಜಾತಾಂತ್ರಿಕ ರಂಗವು ಆರು ಪುರಸಭೆಗಳಲ್ಲಿ ಐದು ಪುರಸಭೆಗಳನ್ನು ಗೆದ್ದುಕೊಂಡಿತು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲೂ ಮೇಲುಗೈ ಸಾಧಿಸಿತು.
No comments:
Post a Comment