Wednesday, December 9, 2020

ಅತಿ ಪ್ರಜಾಪ್ರಭುತ್ವದಿಂದ ಸುಧಾರಣೆ ಕಷ್ಟ: ಅಮಿತಾಭ್ ಕಾಂತ್

 ಅತಿ ಪ್ರಜಾಪ್ರಭುತ್ವದಿಂದ ಸುಧಾರಣೆ ಕಷ್ಟ: ಅಮಿತಾಭ್ ಕಾಂತ್

ನವದೆಹಲಿ: ವಿವಾದಾತ್ಮಕ ಹೇಳಿಕೆಯೊಂದರಲ್ಲಿ  ನೀತಿ ಆಯೋಗದ ಮುಖ್ಯಸ್ಥ ಅಮಿತಾಭ್ ಕಾಂತ್ ಅವರು ಭಾರತದಲ್ಲಿ ಅತಿಯಾದ ಪ್ರಜಾಪ್ರಭುತ್ವವು ಕಠಿಣ ಸುಧಾರಣೆಗಳ ಜಾರಿಯನ್ನು ಕಠಿಣಗೊಳಿಸುತ್ತಿದೆ ಎಂದು 2020 ಡಿಸೆಂಬರ್ 09ರ ಬುಧವಾರ ಹೇಳಿದರು.

ನಾವು ಹೆಚ್ಚು ಪ್ರಜಾಪ್ರಭುತ್ವವನ್ನು ಹೊಂದಿರುವುದರಿಂದ "ಕಠಿಣ" ಸುಧಾರಣೆಗಳು "ಭಾರತೀಯ ಸಂದರ್ಭದಲ್ಲಿ ಬಹಳ ಕಷ್ಟಕರವಾಗಿದೆ ಎಂದು ಅವರು ಹೇಳಿದರು.

ಆದಾಗ್ಯೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇಂತಹ ಕಠಿಣ ಸುಧಾರಣೆಗಳನ್ನು ತರಲು ಧೈರ್ಯ ಮತ್ತು ದೃಢ ನಿಶ್ಚಯವನ್ನು ತೋರಿಸಿದೆ ಎಂದು ಅವರು ನುಡಿದರು.

ಆನ್ಲೈನ್ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಕಾಂತ್, ಹೊಸ ಕೃಷಿ ಕಾನೂನುಗಳನ್ನು ಬೆಂಬಲಿಸಿದರು ಮತ್ತು ದೇಶದ ಸುಧಾರಣೆಗೆ ಸುಧಾರಣೆಗಳನ್ನು ಜಾರಿಗೆ ತರಬೇಕು ಎಂದು ಪ್ರತಿಪಾದಿಸಿದರು.

ಉತ್ಪಾದನೆಯಲ್ಲಿ ಭಾರತ ಜಾಗತಿಕ ನಾಯಕನಾಗಬೇಕೇ? ಎಂಬ ಪ್ರಶ್ನೆಗೆ ಉತ್ತರಿಸಿದ ನೀತಿ ಆಯೋಗದ ಸಿಇಒ, ಭಾರತದ ಸಂದರ್ಭದಲ್ಲಿ ಕಠಿಣ ಸುಧಾರಣೆಗಳು ಬಹಳ ಕಷ್ಟ, ನಾವು ತುಂಬಾ ಹೆಚ್ಚು ಪ್ರಜಾಪ್ರಭುತ್ವವನ್ನು ಹೊಂದಿದ್ದೇವೆ. ಗಣಿಗಾರಿಕೆ, ಕಲ್ಲಿದ್ದಲು, ಕಾರ್ಮಿಕ, ಕೃಷಿ ಇತ್ಯಾದಿ ಕ್ಷೇತ್ರಗಳಲ್ಲಿ ಬಹಳ ಕಠಿಣ ಸುಧಾರಣೆಗಳನ್ನು ಕೈಗೊಳ್ಳುವ ಧೈರ್ಯ ಮತ್ತು ದೃಢ ನಿಶ್ಚಯವನ್ನು ಮೊದಲ ಬಾರಿಗೆ ಸರ್ಕಾರ ಹೊಂದಿದೆ. ಇವು ಬಹಳ ಕಷ್ಟಕರವಾದ ಸುಧಾರಣೆಗಳು. ಸುಧಾರಣೆಗಳನ್ನು ಕೈಗೊಳ್ಳಲು ನಿಮಗೆ ಪ್ರಚಂಡವಾದ ರಾಜಕೀಯ ಮತ್ತು ಆಡಳಿತಾತ್ಮಕ ಇಚ್ಛಾ ಶಕ್ತಿ ಬೇಕು ಎಂದು ಅವರು ನುಡಿದರು.

ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳು ಆಗಬೇಕಾಗಿದೆ. ಇದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ, ಪ್ರಸ್ತುತ ಸುಧಾರಣೆಗಳಲ್ಲಿ ನಾವು ಮಂಡಿಗಳನ್ನು ದೂರವಿಡುತ್ತೇವೆ ಎಂದು ಯಾರೂ ಹೇಳುತ್ತಿಲ್ಲ, ಮಂಡಿಗಳು ಅಸ್ತಿತ್ವದಲ್ಲಿವೆ, ಎಂಎಸ್ಪಿ ಇರುತ್ತದೆ. ಆದರೆ ರೈತ ತನ್ನ ಬೆಳೆ ಮಾರಾಟ ಮಾಡಲು ಪರ್ಯಾಯ ಆಯ್ಕೆಗಳನ್ನು ಪಡೆಯುತ್ತಾನೆ.  ರೈತನಿಗೆ ಆಯ್ಕೆ ಇರಬೇಕು ಎಂಬದರಲ್ಲಿ ದೊಡ್ಡ ನಂಬಿಕೆ ಇಟ್ಟಿರುವವನು ನಾನು. ನಾವು (ಅವನನ್ನು) ಒಂದೇ ಸ್ಥಳಕ್ಕೆ ಮಾತ್ರ ಹೋಗುವಂತೆ ಏಕೆ ಒತ್ತಾಯಿಸಬೇಕು, ಇತರ ಐದು ಸ್ಥಳಗಳಿಗೆ ಹೋಗಲು ನಾವು ನಿಮಗೆ ಅವಕಾಶ ನೀಡುತ್ತೇವೆ. ಎಂಎಸ್ಪಿಗಿಂತ ಯಾರಾದರೂ ನಿಮಗೆ ಹೆಚ್ಚಿನದನ್ನು ನೀಡುತ್ತಾರೆ ಎಂದಾದರೆ ರೈತ ಅದನ್ನು ಏಕೆ ಪಡೆಯಬಾರದು? ಇದು   ಸುಧಾರಣೆಗಳ ಉದ್ದೇಶ ಎಂದು ಅಮಿತಾಭ್ ಕಾಂತ್ ಹೇಳಿದರು.

ಕನಿಷ್ಠ ಬೆಂಬಲ ಬೆಲೆಯನ್ನು ಕಡ್ಡಾಯಗೊಳಿಸಲು ಕಾನೂನು ರಚಿಸಬೇಕು ಎಂಬ ರೈತರ ಬೇಡಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ರೈತರು ಮತ್ತು ಸರ್ಕಾರದ ಮಧ್ಯೆ ಮಾತುಕತೆ ನಡೆಯುತ್ತಿದೆ. ಆದ್ದರಿಂದ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಅವರು ನುಡಿದರು.

"ನಾನು ನಿಮಗೆ ಹೇಳಿದಂತೆ, ಸಾಗಣೆಯಿಂದ ಅಧಿಕಾರಗಳವರೆಗೆ ಇನ್ನೂ ಅನೇಕ ಸುಧಾರಣೆಗಳನ್ನು ನಾವು ಮಾಡಬೇಕಾಗಿದೆ, ಆದರೆ? ಎಂದು ಪ್ರಶ್ನಿಸಿದ ಅಮಿತಾಭ್, ಸರ್ಕಾರವು ಕಠಿಣ ಸುಧಾರಣೆಗಳನ್ನು ಮಾಡುವ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ. ಮತ್ತು ಪ್ರಮುಖ ಉತ್ಪಾದನಾ ರಾಷ್ಟ್ರವಾಗಲು ನಾವು ಯತ್ನಿಸಬೇಕಾಗಿದೆ. ಚೀನಾದೊಂದಿಗೆ ಸ್ಪರ್ಧಿಸುವುದು ಸುಲಭವಲ್ಲ. ಉತ್ಪಾದನಾ ರಾಷ್ಟ್ರವಾಗುವುದು ಸುಲಭವಲ್ಲ. ಸೆಮಿನಾರ್ಗಳು ಮತ್ತು ವೆಬ್ನಾರ್ಗಳನ್ನು ನಡೆಸುವುದರಿಂದಷ್ಟೇ ಇದು ಸಂಭವಿಸುವುದಿಲ್ಲ. ಇದಕ್ಕೆ ಭಾರತದಲ್ಲಿ ಮೊದಲ ಬಾರಿಗೆ ಪ್ರಯತ್ನಿಸಲಾಗುತ್ತಿರುವ ಅತ್ಯಂತ ಕಠಿಣವಾದ, ನೆಲಮಟ್ಟದ ವಿಧಾನದ ಅಗತ್ಯವಿದೆ ಎಂದು ನೀತಿ ಆಯೋಗದ ಮುಖ್ಯಸ್ಥ ಪ್ರತಿಪಾದಿಸಿದರು.

No comments:

Advertisement