Saturday, December 19, 2020

ಚಿಂತನ ಶಿಬಿರ: ಸೋನಿಯಾ- ಭಿನ್ನ ಮುಖಂಡರ ಸಭೆ ಅಸ್ತು

 ಚಿಂತನ ಶಿಬಿರ: ಸೋನಿಯಾ- ಭಿನ್ನ ಮುಖಂಡರ ಸಭೆ ಅಸ್ತು

ನವದೆಹಲಿ: ಪಕ್ಷದ ಮುಂದಿನ ದಾರಿ ಬಗ್ಗೆ ಚರ್ಚಿಸಲುಚಿಂತನ ಶಿಬಿರ ನಡೆಸುವ ತೀರ್ಮಾನವನ್ನು 2020 ಡಿಸೆಂಬರ್ 19ರ ಶನಿವಾರ ಇಲ್ಲಿ ನಡೆದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಭಿನ್ನಮತೀಯರ ನಡುವಣ ನಿರ್ಣಾಯಕ ಸಭೆ ಕೈಗೊಂಡಿದೆ.

ನಾಲ್ಕು ಗಂಟೆಗಳ ಕಾಲ ನಡೆದ ಮ್ಯಾರಥಾನ್ ಸಭೆಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪವನ್ ಕುಮಾರ್ ಬನ್ಸಲ್ ಅವರುಚರ್ಚೆಗಳು ಮುಖ್ಯವಾಗಿ ಪಕ್ಷವನ್ನು ಬಲಪಡಿಸುವುದರ ಮೇಲೆ ಕೇಂದ್ರೀಕೃತವಾಗಿದ್ದವು ಎಂದು ಹೇಳಿದರು.

ಅಧ್ಯಕ್ಷರ ಹುದ್ದೆ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸೇರಿದಂತೆ ಪಕ್ಷದ ಸಾಂಸ್ಥಿಕ ಚುನಾವಣೆಗಳನ್ನು ನಡೆಸುವ ಪ್ರಕ್ರಿಯೆಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಮತ್ತು ಕೇಂದ್ರೀಯ ಚುನಾವಣಾ ಪ್ರಾಧಿಕಾರ (ಸಿಇಎ) ನಿಟ್ಟಿನಲ್ಲಿ ಕಾರ್ಯಮಗ್ನವಾಗಿದೆ ಎಂದು ಅವರು ಹೇಳಿದರು.

"ಈಗಾಗಲೇ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ಪಕ್ಷದ ಮುಂದೆ ಒಂದು ಕಾರ್ಯಸೂಚಿ ಇದೆ. ಸಿಇಎ ಅದರ ಬಗ್ಗೆ ಕಾರ್ಯನಿರ್ವಹಿಸುತ್ತಿದೆ ಎಂದು ಬನ್ಸಲ್ ನುಡಿದರು.

ನೀವೆಲ್ಲರೂ ಬಹಳ ದೊಡ್ಡ ಕುಟುಂಬವಾಗಿದ್ದೀರಿ ಮತ್ತು ಎಲ್ಲರೂ ಪಕ್ಷವನ್ನು ಬಲಪಡಿಸಲು ಶ್ರಮಿಸಬೇಕು ಎಂದು ಸೋನಿಯಾ ಗಾಂಧಿ ನಾಯಕರಿಗೆ ತಿಳಿಸಿದರು ಎಂದು ಬನ್ಸಲ್ ಹೇಳಿದರು.

ರಾಹುಲ್ ಗಾಂಧಿ ಕೂಡ ಇದೇ ಮಾದರಿಯಲ್ಲಿ ಮಾತನಾಡಿದ್ದಾರೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಭಿನ್ನಮತೀಯರು ಸೇರಿದಂತೆ ಪಕ್ಷದಲ್ಲಿ ಯಾರಿಗೂ ಯಾವುದೇ ಸಮಸ್ಯೆ ಇಲ್ಲ ಎಂದು ಹಿರಿಯ ನಾಯಕ ಸ್ಪಷ್ಟ ಪಡಿಸಿದರು.

ಪಚಮರ್ಹಿ ಮತ್ತು ಶಿಮ್ಲಾ ಮಾದರಿಯಲ್ಲಿ ಚಿಂತ ಶಿಬಿರ ಶೀಘ್ರದಲ್ಲೇ ನಡೆಯಲಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ೨೩ ಭಿನ್ನಮತೀಯರಲ್ಲಿ ಒಬ್ಬರಾದ ಪೃಥ್ವಿರಾಜ್ ಚವಾಣ್ ಸುದ್ದಿಗಾರರಿಗೆ ತಿಳಿಸಿದರು.

ಸಭೆ ಧನಾತ್ಮಕವಾಗಿದ್ದು, ಭವಿಷ್ಯದಲ್ಲಿ ಇಂತಹ ಹೆಚ್ಚಿನ ಸಂವಾದಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

 

ಗಂಟೆಗಳ ಸಭೆಯಲ್ಲಿ ಏನೇನಾಯಿತು?

ಕೊರೋನವೈರಸ್ ಸಾಂಕ್ರಾಮಿಕ ರೋಗ ಹರಡಿದ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಕ್ಷದ ನಾಯಕತ್ವವನ್ನು ಪ್ರಶ್ನಿಸಿದ ಪತ್ರ ಬರೆದ ಮುಖಂಡರ ಗುಂಪನ್ನು ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ೧೦ ಜನಪಥದಲ್ಲಿ ನಾಲ್ಕು ಗಂಟೆಗಳ ಸುದೀರ್ಘ ಸಭೆ ನಡೆಯಿತು. ಸಭೆಯಲ್ಲಿ ರಾಹುಲ್ ಗಾಂದಿ ಮತ್ತು ಪ್ರಿಯಾಂಕಾ ಗಾಂಧಿ ವಡೇರಾ ಉಪಸ್ಥಿತರಿದ್ದರು.

* ಆಗಸ್ಟ್ ತಿಂಗಳಲ್ಲಿ ೨೩ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಅವರಿಗೆ "ಪೂರ್ಣಾವಧಿಯ ಪರಿಣಾಮಕಾರಿ ನಾಯಕತ್ವ ಕೋರಿ ಪತ್ರ ಬರೆದಿದ್ದರು. ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್, ಮನೀಶ್ ತಿವಾರಿ, ಶಶಿ ತರೂರ್, ವಿವೇಕ್ ತಂಖಾ, ಮುಕುಲ್ ವಾಸ್ನಿಕ್, ಜಿತಿನ್ ಪ್ರಸಾದ, ಭೂಪಿಂದರ್ ಸಿಂಗ್ ಹೂಡಾ, ರಾಜೇಂದರ್ ಕೌರ್ ಭಟ್ಟಲ್, ಎಂ ವೀರಪ್ಪ ಮೊಯಿಲಿ, ಪೃಥ್ಜೈಜ್ ಚೌಧರಿ, ಮಿಲಿಂದ್ ದೇವ್ರಾ, ರಾಜ್ ಬಬ್ಬರ್, ಅರವಿಂದರ್ ಸಿಂಗ್ ಲವ್ಲಿ, ಕೌಲ್ ಸಿಂಗ್ ಠಾಕೂರ್, ಅಖಿಲೇಶ್ ಪ್ರಸಾದ್ ಸಿಂಗ್, ಕುಲದೀಪ್ ಶರ್ಮಾ, ಯೋಗಾನಂದ್ ಶಾಸ್ತ್ರಿ, ಸಂದೀಪ್ ದೀಕ್ಷಿತ್ ಮತ್ತಿತರರು ಪತ್ರಕ್ಕೆ ಸಹಿ ಮಾಡಿದ್ದರು.

* ಪಕ್ಷದಲ್ಲಿ ನಾಯಕತ್ವದ ಅನಿಶ್ಚಿತತೆಯಿಂದ ಕಾರ್ಯಕರ್ತರು ನಿರಾಶೆಗೊಂಡಿದ್ದಾರೆ ಎಂದು ಪತ್ರವು ಬೊಟ್ಟು ಮಾಡಿತ್ತು.

* ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಕಳಪೆ ಸಾಧನೆಯ ನಂತರ ತಲ್ಲಣಗೊಂಡ ನಾಯಕರ ಅಸಮಾಧಾನವು ಬೆಳಕಿಗೆ ಬಂದಿತು.

*ಮುಖತಃ ಸಭೆ ಪಕ್ಷವನ್ನು ಸುವ್ಯವಸ್ಥಿತಗೊಳಿಸುವ ಪ್ರಯತ್ನಗಳ ಸರಣಿಯಲ್ಲಿ ಬಂದಿದ್ದು, ಪಕ್ಷವು ಶೀಘ್ರದಲ್ಲೇ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ನೋಡಲಿದೆ.

* ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಶುಕ್ರವಾರ ಕಾಂಗ್ರೆಸ್ಸಿನ ಬಹುತೇಕ ಸದಸ್ಯರು ರಾಹುಲ್ ಗಾಂಧಿಯವರನ್ನು ಅಧ್ಯಕ್ಷರನ್ನಾಗಿ ಬಯಸಿದ್ದಾರೆ ಎಂದು ಹೇಳಿದ್ದರು. "ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಮತ್ತು ಮೋದಿ ಸರ್ಕಾರವನ್ನು ಎದುರಿಸಲು ರಾಹುಲ್ ಗಾಂಧಿ ಸರಿಯಾದ ವ್ಯಕ್ತಿ ಎಂದು ನಾನೂ ಸೇರಿದಂತೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಲ್ಲಿ ಶೇಕಡಾ ೯೯.೯೯ ರಷ್ಟು ಮಂದಿಯ ನಂಬಿಕೆಯಾಗಿದೆ" ಎಂದು ಅವರು ಹೇಳಿದ್ದರು.

* ಶನಿವಾರದ ಮಾದರಿಯ ಸಭೆಗಳು ಈಗ ಮುಂದಿನ ದಿನಗಳಲ್ಲಿ ನಡೆಯಲಿವೆ.

* ಶನಿವಾರದ ಸಭೆಯಲ್ಲಿ ಕಾಂಗ್ರೆಸ್ ಒಂದು ದೊಡ್ಡ ಕುಟುಂಬ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ ಎಂದು ಪವನ್ ಬನ್ಸಾಲ್ ಸಭೆಯ ಬಳಿಕ ಹೇಳಿದರು.

*ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪಕ್ಷಕ್ಕೆ ಚೈತನ್ಯ ತುಂಬಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲು ಬದ್ಧರಾಗಿದ್ದೇವೆ ಎಂದು ಬನ್ಸಲ್ ನುಡಿದರು.

* ಚುನಾವಣೆಗೆ ತಯಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಾರಿ ಬಗ್ಗೆ ಯೋಜಿಸಲುಚಿಂತನ ಶಿಬಿರ ಅಧಿವೇಶನ ನಡೆಯಲಿದೆ ಎಂದು ಪೃಥ್ವಿರಾಜ್ ಚವಾಣ್ ಹೇಳಿದರು.

No comments:

Advertisement