Monday, August 16, 2021

ತಾಲೀಬಾನ್ ಬಲೆಯೊಳಕ್ಕೆ ಅಪಘಾನಿಸ್ಥಾನ!

 ತಾಲೀಬಾನ್  ಬಲೆಯೊಳಕ್ಕೆ ಅಪಘಾನಿಸ್ಥಾನ!

 ಮಹಿಳೆಯರಿಗೆ ಮಧ್ಯಯುಗದ ಕಾನೂನು, ಕಲ್ಲೇಟು, ಬಿಗಿ  ಬಟ್ಟೆಗೆ  ಗಲ್ಲು..!

ನವದೆಹಲಿ, ಆಗಸ್ಟ್ 15, 2021: ಅವರೀಗ ಮನಬಿಚ್ಚಿ ಮಾತನಾಡುವಂತಿಲ್ಲ,  ಪುರುಷರೊಂದಿಗೆ ಕೆಲಸ ಮಾಡುವಂತಿಲ್ಲ,  ವ್ಯಭಿಚಾರಕ್ಕಿಳಿದರೆ  ಕಲ್ಲೇಟು ತಿನ್ನಬೇಕು, ಎಲ್ಲೇ ಇರಲಿ ಸಾಂಪ್ರದಾಯಿಕ ಉಡುಗೆಯಲ್ಲೇ ಇರಬೇಕು.  ಇದು ಕಟ್ಟುಕತೆಯಲ್ಲ. ಅಫ್ಘಾನಿಸ್ಥಾನ ಈಗಿನ ಕಥೆ.

ಅಮೆರಿಕ ತನ್ನ  ಸೈನ್ಯವನ್ನು ರಾಷ್ಟ್ರದಿಂದ ಹಿಂತೆಗೆದುಕೊಂಡ ನಂತರ ಭಯೋತ್ಪಾದಕ ಗುಂಪು ತಾಲಿಬಾನ್ ಅಫ್ಘಾನಿಸ್ತಾನದ ಬಹುಪಾಲು ಪ್ರದೇಶವನ್ನು ವಶಪಡಿಸಿಕೊಂಡಿದ್ದರಿಂದ ಲಕ್ಷಾಂತರ ಹುಡುಗಿಯರು ಮತ್ತು ಮಹಿಳೆಯರು ಈಗಾಗಲೇ ಎದುರಿಸಲಾರಂಭಿಸಿದ ಕಟು ವಾಸ್ತವ.

2021ರ ಆಗಸ್ಟ್ ಆಗಸ್ಟ್ 15ರ ಭಾನುವಾರ ಭಾರತದಲ್ಲಿ ಯಾವುದೇ ಜಾತಿ ಭೇದವಿಲ್ಲದೆ, ಸಮಸ್ತ ಭಾರತೀಯರು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದಾಗಲೇ, ನೆರೆಯ ಅಫ್ಘಾನಿಸ್ಥಾನದ ಅಧ್ಯ್ಷಕ್ಷ ಅಶ್ರಫ್ ಘನೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಕಾಬೂಲ್ ತ್ಯಜಿಸಿದರು.ವರದಿಗಳ ಪ್ರಕಾರ ಅವರು ತಾಜಿಕಿಸ್ಥಾನದಲ್ಲಿ ಆಶ್ರಯ ಪಡೆಯಲು ಧಾವಿಸಿದ್ದಾರೆ. ಇದಕ್ಕೆ ಕಾರಣ ಮತಾಂಧ ತಾಲಿಬಾನ್ ಉಗ್ರಗಾಮಿಗಳು ಇಡೀ ಅಫ್ಘಾನಿಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅಫ್ಘಾನಿಸ್ಥಾನದಲ್ಲಿ ಮಧ್ಯಯುಗದ ಲಿಂಗ ನಿಯಮಗಳನ್ನು ಜಾರಿಗೊಳಿಸಿದ್ದು.

ಮತಾಂಧ  ಗುಂಪು 1996 ರಿಂದ 2001 ರವರೆಗೆ ಅಫ್ಘಾನಿಸ್ಥಾನವನ್ನು  ಆಳಿದಾಗ ಅವರು ಶರಿಯಾ ಕಾನೂನನ್ನು ಜಾರಿಗೆ ತಂದಿದ್ದರು. ಅವರ ಪ್ರಕಾರ  ಇಸ್ಲಾಮಿಕ್ ಕಾನೂನಿನ ಕಟ್ಟುನಿಟ್ಟಾದ ವ್ಯಾಖ್ಯಾನ ಏನೆಂದರೆ ಮಹಿಳೆಯರು ಕೆಲಸ ಮಾಡಲು ಸಾಧ್ಯವಿಲ್ಲ, ಹುಡುಗಿಯರು ಶಾಲೆಗೆ ಹೋಗುವುದಕ್ಕೆ ನಿಷೇಧ ಮತ್ತು ಮಹಿಳೆಯರು ಸಾರ್ವಜನಿಕವಾಗಿ ಮುಖವನ್ನು ಮುಚ್ಚಿಕೊಂಡಿರಬೇಕು. ಇಷ್ಟೇ ಅಲ್ಲ ಮನೆಯಿಂದ ಹೊರಕ್ಕೆ ಹೋಗಬೇಕಿದ್ದರೆ ಮಹಿಳೆಯುರು  ಯಾವಾಗಲೂ ಪುರುಷನೊಂದಿಗೆ ಇರತಕ್ಕದ್ದು.

ವಿಶ್ವಸಂಸ್ಥೆಯ ವರದಿಗಳ ಪ್ರಕಾರ  2021ರ  ಜುಲೈ  ಆರಂಭದಿಂದಲೂ ಅಫ್ಘಾನಿಸ್ತಾನದಲ್ಲಿ ನಾಗರಿಕರ ಸಾವು ಸುಮಾರು  ಶೇಕಡಾ 50ನ್ನು ಮೀರಿದೆ.  2009 ರಲ್ಲಿ ಸಂಭವಿಸಿದ ದಾಖಲೆ ಸಾವುಗಳ ಬಳಿಕ, ಯಾವುದೇ  ಯಾವುದೇ ವರ್ಷದ ಮೊದಲ ಆರು ತಿಂಗಳಲ್ಲಿ  ಅತ್ಯಂತ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಕೊಲ್ಲಲ್ಪಟ್ಟದ್ದು ಮತ್ತು ಗಾಯಗೊಂಡದ್ದು ಈ ಜುಲೈ ತಿಂಗಳಲ್ಲೇ. ಅಂದರೆ  ತಾಲಿಬಾನ್ ಅಧಿಕಾರವನ್ನು ಕೈವಶ ಪಡಿಸಿಕೊಳ್ಳಲು ಸಜ್ಜಾಗಿದ್ದ ಸಮಯದಲ್ಲೇ.

ಹಾಗಾದರೆ ತಾಲಿಬಾನ್ ಮತಾಂಧ ಭಯೋತ್ಪಾದಕ ಗುಂಪಿನ ಮಧ್ಯಯುಗದ  ಕಾರ್ಯವೈಖರಿ ಏನು? ಅವರ ಆಳ್ವಿಕೆಯಲ್ಲಿ ಮಹಿಳೆಯರಿಗೆ ಕಾದಿರುವ  ಕರಾಳ ಭವಿಷ್ಯದ ನೋಟ  ಏನು?

ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ ಅದರ ಚಿತ್ರಣ ಹೀಗಿದೆ:.

ಮಹಿಳೆಯರಿಗಾಗಿ ತಾಲಿಬಾನ್ ನಿಯಮಗಳು:

·      


   ರಕ್ತ ಸಂಬಂಧಿ ಜೊತೆಗೆ ಇರದ ಅಥವಾ ಬುರ್ಕಾ ಇಲ್ಲದ  ಮಹಿಳೆಯರು ರಸ್ತೆಯಲ್ಲಿ ಕಾಣಿಸಬಾರದು.

·         ಯಾವುದೇ ಹೆಣ್ಣಿನ ಹೆಜ್ಜೆಯ ಸದ್ದು ಪುರುಷರಿಗೆ ಕೇಳಬಾರದು. ಮಹಿಳೆಯರು  ಎತ್ತರದ ಹಿಮ್ಮಡಿಯ ಪಾದರಕ್ಷೆಗಳನ್ನು ಧರಿಸಬಾರದು.

·          ಸಾರ್ವಜನಿಕವಾಗಿ ಜೋರಾಗಿ ಮಾತನಾಡುವ ಮಹಿಳೆಯ ಧ್ವನಿ ಅಪರಿಚಿತರಿಗೆ  ಕೇಳಬಾರದು.

·         ಮಹಿಳೆಯರನ್ನು ಬೀದಿಯಿಂದ ನೋಡದಂತೆ ತಡೆಯಲು, ಮನೆಗಳ ನೆಲ ಮಟ್ಟದ  ಎಲ್ಲ ಕಿಟಕಿ ಬಾಗಿಲುಗಳನ್ನು ಮತ್ತು ವಸತಿ ಕಟ್ಟಡಗಳ ಮೊದಲ ಮಹಡಿಗಳನ್ನು ಬಾಪರದೆಗಳಿಂದ ಮುಚ್ಚಿರಬೇಕು.

·         ಮಹಿಳೆಯರು ತಮ್ಮ ಫೊಟೋ  ತೆಗೆಯುವುದು, ಚಿತ್ರೀಕರಿಸುವುದು ಅಥವಾ ಪತ್ರಿಕೆಗಳು ಇಲ್ಲವೇ ಪುಸ್ತಕಗಳಲ್ಲಿ ಅಥವಾ ಅಂಗಡಿಗಳಲ್ಲಿ ಇಲ್ಲವೇ  ಮನೆಯಲ್ಲಿ ಪ್ರದರ್ಶಿಸುವುದಕ್ಕೆ  ನಿಷೇಧ.

·          ಯಾವುದೇ ಸ್ಥಳದ ಹೆಸರುಗಳಿಂದ "ಮಹಿಳೆಯರು" ಪದವನ್ನು ಕಿತ್ತು ಹಾಕಬೇಕು.

·          ಮಹಿಳೆಯರು ತಮ್ಮ ಬಾಲ್ಕನಿಯಲ್ಲಿ ಕಾಣಿಸಿಕೊಳ್ಳಲು ಅವಕಾಶವಿಲ್ಲ.

·         ರೇಡಿಯೋ, ಟೆಲಿವಿಷನ್ ಅಥವಾ ಯಾವುದೇ ಸಾರ್ವಜನಿಕ ಕೂಟದಲ್ಲಿ ಮಹಿಳೆಯರು ಕಾಣಿಸಿಕೊಳ್ಳುವುದಕ್ಕೆ ನಿಷೇಧ.

ಬಲವಂತದ ಮದುವೆ..

ತಾಲಿಬಾನಿಗಳು  ಮನೆ ಮನೆಗೆ ತೆರಳಿ, 12 ರಿಂದ 45 ವರ್ಷದೊಳಗಿನ ಮಹಿಳೆಯರು ಮತ್ತು ಹುಡುಗಿಯರ ಪಟ್ಟಿಗಳನ್ನು ತಯಾರಿಸುತ್ತಿದ್ದು, ಈ  ಹುಡುಗಿಯರು, ಮಹಿಳೆಯರನ್ನು ಇಸ್ಲಾಮೀ  ಹೋರಾಟಗಾರರನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದಾರೆ.

 ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನದ ಹಲವು ಪ್ರಾಂತೀಯ ರಾಜಧಾನಿಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದರ  ಮಧ್ಯೆ, ತಾಲಿಬಾನ್ ಕಮಾಂಡರ್ಗಳು,  ಸಮುದಾಯಗಳ ಅವಿವಾಹಿತ ಮಹಿಳೆಯರನ್ನು ತಮ್ಮ ಹೋರಾಟಗಾರರ "ಪತ್ನಿಯರನ್ನಾಗಿ" ಪರಿವರ್ತಿಸಬೇಕು ಎಂದು ಒತ್ತಾಯಿಸಿದ್ದಾರೆ. ಮಾನವ ಹಕ್ಕುಗಳ ಗುಂಪುಗಳ ಪ್ರಕಾರ  ಈ ವರ್ತನೆ ‘ಲೈಂಗಿಕ ದೌರ್ಜನ್ಯ’ ವ್ಯಾಪ್ತಿಗೆ ಬರುತ್ತದೆ..

ಶಿಕ್ಷಣ, ಮಹತ್ವಾಕಾಂಕ್ಷೆಗಳು ಮೂಲೆಪಾಲು!

ತಾಲಿಬಾನ್  ಗುಂಪು ಶಾಲೆಗಳನ್ನು ಮುಚ್ಚುವುದರ ಜೊತೆಗೆ ಮಹಿಳೆಯರು ವಿಶ್ವವಿದ್ಯಾನಿಲಯಗಳಿಗೆ ಅಥವಾ ಅವರ ಕೆಲಸದ ಸ್ಥಳಗಳಿಗೆ  ಪ್ರವೇಶಿಸುವುದನ್ನು ನಿಷೇಧಿಸಿದೆ. ಈಗಾಗಲೇ  ಶಾಸಕರು, ಪತ್ರಕರ್ತರು, ವೈದ್ಯರು, ದಾದಿಯರು, ಶಿಕ್ಷಕರು ಮತ್ತು ನಿರ್ವಾಹಕರು ಸೇರಿದಂತೆ ಸಾರ್ವಜನಿಕ ಜೀವನವನ್ಜು ಪ್ರವೇಶಿಸಿದ ಅಫ್ಘಾನ್ ಮಹಿಳೆಯರಿಗೆ ಈಗಾಗಲೇ ಹೇಳಲಾಗದ ಹಾನಿ ಎಸಗಲಾಗಿದೆ.

ಈ ವಿದ್ಯಾವಂತ ಯುವತಿಯರು  ಪ್ರಜಾತಾಂತ್ರಿಕ  ನಾಗರಿಕ ಸಮಾಜ ನಿರ್ಮಾಣಕ್ಕಾಗಿ ಪುರುಷ ಸಹೋದ್ಯೋಗಿಗಳ ಜೊತೆಯಲ್ಲಿ ಕೆಲಸ ಮಾಡಿದ್ದು ತಮ್ಮ ಶ್ರಮವು ಭವಿಷ್ಯದ ಪೀಳಿಗೆಯ ಮಹಿಳೆಯರಿಗೆ ಯಶಸ್ವಿಯಾಗಲು ದಾರಿ ಮಾಡಿಕೊಡುತ್ತದೆ ಎಂದು ಅವರು ಹಾರೈಸಿದ್ದರು.

ಆದರೆ, ಈಗ  ತಮ್ಮ ಶಿಕ್ಷಣ ಮತ್ತು ಮಹತ್ವಾಕಾಂಕ್ಷೆಗಳು ವ್ಯರ್ಥವಾಗುತ್ತವೆ ಎಂದು ಹೆದರಿಕೊಂಡಿರುವ  ಅನೇಕ ಯುವತಿಯರಲ್ಲಿ, 26ರ ಹರೆಯ ಜಹ್ರಾ  ಒಬ್ಬರು. ಅಫ್ಘಾನಿಸ್ತಾನದ ಮೂರನೇ ಅತಿದೊಡ್ಡ ನಗರವಾದ ಹೆರಾತ್‌, ತಾಲಿಬಾನ್ಗಳು ಅಟ್ಟಹಾಸ ಗೈಯುತ್ತಾ  ಇಸ್ಲಾಮಿಕ್ ಘೋಷಣೆಯೊಂದಿಗೆ ತಮ್ಮ ಬಿಳಿ ಧ್ವಜಗಳನ್ನು ಹಾರಿಸಿದ್ದನ್ನು  ಅವರು ಕಣ್ಣಾರೆ ಕಂಡರು.

ಮಹಿಳಾ ಹಕ್ಕುಗಳನ್ನು ಪ್ರತಿಪಾದಿಸುವ ಲಾಭೋದ್ದೇಶವಿಲ್ಲದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಜಹ್ರಾ, ಅಸೋಸಿಯೇಟೆಡ್ ಪ್ರೆಸ್ಗೆ, ನೀಡಿದ ಸಂದರ್ಶನದಲ್ಲಿ  "ನಾನು ಆಘಾತಕ್ಕೊಳಗಾಗಿದ್ದೇನೆ."  ಎಂದು ಹೇಳಿದರು.

‘ಕಷ್ಟಪಟ್ಟು ದುಡಿದ ಮತ್ತು ಕಲಿಯಲು ಮತ್ತು ಮುಂದುವರೆಯಲು ಪ್ರಯತ್ನಿಸಿದ ಮಹಿಳೆಯಾಗಿ, ನಾನು ಈಗ ಹೇಗೆ ಅಡಗಿಕೊಳ್ಳಬೇಕು ಮತ್ತು ಮನೆಯಲ್ಲಿಯೇ ಇರಬೇಕೆ?’ ಎಂದು ಅವರು ಪ್ರಶ್ನಿಸಿದರು. ಒಂದು ತಿಂಗಳ ಹಿಂದೆ, ತಾಲಿಬಾನ್ ಮುಚ್ಚಿಸಿದ್ದ ಕಚೇರಿಯಲ್ಲಿ ದುಡಿಯುತ್ತಿದ್ದ  ಜಹ್ರಾ  ಬಳಿಕ ಕಚೇರಿಗೆ ಹೋಗುವುದನ್ನು ನಿಲ್ಲಿಸಿದ್ದರು. ಮತ್ತು ಮನೆಯಿಂದಲೇ ಕೆಲಸ ಮಾಡಲು ಆರಂಭಿಸಿದ್ದರು. ಆದರೆ ಈಗ ಮನೆಯಿಂದ ಕೆಲಸ ಮಾಡಲೂ ಅವರಿಗೆ ಆಗುತ್ತಿಲ್ಲ.

ಕಂದಹಾರ್ ಮತ್ತು ಹೆರಾತ್ ನಗರಗಳ  ಎರಡು ಬ್ಯಾಂಕ್ ಶಾಖೆಗಳಲ್ಲಿ ಮಹಿಳಾ ಉದ್ಯೋಗಿಗಳು, ಜುಲೈ ತಿಂಗಳಲ್ಲಿ ತಾಲಿಬಾನ್ ಬಂದೂಕುಧಾರಿಗಳಿಂದ ಕಿರುಕುಳಕ್ಕೊಳಗಾದರು. ಬಂದೂಕುಧಾರಿಗಳು ಮಹಿಳೆಯರನ್ನು ಮನೆಗಳಿಗೆ ಅಟ್ಟಿದರು ಮತ್ತು ಪುನಃ ಕೆಲಸಕ್ಕೆ ಬರಬಾರದು, ಅವರ ಬದಲಿಗೆ ಪುರುಷ ಸಂಬಂಧಿಗಳು ಆ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

"ಕೆಲಸ ಮಾಡಲು ಅವಕಾಶ ನೀಡದಿರುವುದು ನಿಜಕ್ಕೂ ವಿಚಿತ್ರವಾಗಿದೆ, ಆದರೆ ಇದು ಈಗಿನ ಸ್ಥಿತಿ ‘ ಎಂದು ಬ್ಯಾಂಕಿನ  ಅಕೌಂಟ್ಸ್  ವಿಭಾಗದಲ್ಲಿ ಕೆಲಸ ಮಾಡಿದ 43 ವರ್ಷದ ಮಹಿಳೆ ನೂರ್ ಖಟೇರಾ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದರು.

 "ನಾನು ಇಂಗ್ಲಿಷ್ ಕಲಿತಿದ್ದೇನೆ  ಮತ್ತು ಕಂಪ್ಯೂಟರನ್ನು  ಹೇಗೆ ನಿರ್ವಹಿಸಬೇಕು ಎಂದು ಕಲಿತಿದ್ದೇನೆ, ಆದರೆ ಈಗ ನಾನು ಹೆಚ್ಚು ಮಹಿಳೆಯರೊಂದಿಗೆ ಕೆಲಸ ಮಾಡುವ ಸ್ಥಳವನ್ನು ಹುಡುಕಬೇಕಾಗಿದೆ.’ ಎಂದು ಅವರು ಹೇಳಿದರು.

'ಪುರುಷ ಸಂಬಂಧಿ ಜೊತೆಗಿಲ್ಲದಿದ್ದರೆ ಮನೆಯಲ್ಲೇ ಬಂದಿ!

ತಾಲಿಬಾನ್ ನಿಯಮಗಳ ಪ್ರಕಾರ, ಪುರುಷ ಬೆಂಗಾವಲು ಇಲ್ಲದೆ ಮಹಿಳೆಯರು ತಮ್ಮ ಮನೆಯಿಂದ ಹೊರಬರಲು ಸಾಧ್ಯವಿಲ್ಲ, ಅಥವಾ ಅವರು ಧರಿಸಲು ಬಯಸುವ ಬಟ್ಟೆಗಳನ್ನು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳುವಂತಿಲ್ಲ.

ಅಫ್ಘಾನಿಸ್ಥಾನದ  ಉತ್ತರ ಬಾಲ್ಖ್ ಪ್ರಾಂತ್ಯದಲ್ಲಿ ಯುವತಿಯೊಬ್ಬಳು ಬಿಗಿಯಾದ ಬಟ್ಟೆಗಳನ್ನು ಧರಿಸಿದ್ದಕ್ಕಾಗಿ ಮತ್ತು ಒಬ್ಬ ಪುರುಷ ಸಂಬಂಧಿಯ ಜೊತೆಗಿಲ್ಲದ ಕಾರಣಕ್ಕಾಗಿ ಇತ್ತೀಚೆಗೆ ತಾಲಿಬಾನ್ ಗುಂಪಿನಿಂದ  ಕೊಲ್ಲಲ್ಪಟ್ಟರು ಎಂದು ವರದಿಗಳು ಹೇಳುತ್ತವೆ.

"
ಮಹಿಳೆಯನ್ನು ತಾಲಿಬಾನ್ ನಿಯಂತ್ರಣದಲ್ಲಿರುವ ಸಮರ್ ಖಂಡ್ ಗ್ರಾಮದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ" ಎಂದು ಅಫ್ಘಾನಿಸ್ಥಾನದಲ್ಲಿ  ರೇಡಿಯೋ ಆಜಾದಿ ವರದಿ ಮಾಡಿದೆ.  21 ವರ್ಷದ ನತದೃಷ್ಟೆಯನ್ನು  ನಜಾನಿನ್ ಎಂದು ಗುರುತಿಸಲಾಗಿದೆ.  ಆಕೆ,  ಮಜರ್--ಷರೀಫ್ಗಾಗಿ ವಾಹನ ಹತ್ತಲು ತನ್ನ ಮನೆಯಿಂದ ಹೊರಬಂದಾಗ ಹಲ್ಲೆ ನಡೆಸಲಾಯಿತು’ ಎಂದು ಪೊಲೀಸರು ಹೇಳಿದರು. ವಿರೋಧಾಬಾಸದ ಸಂಗತಿ ಏನೆಂದರೆ ಆ ವೇಳೆಯಲ್ಲಿ ಧರಿಸಿದ್ದ ಬುರ್ಖಾ ಕೂಡಾ ಆಕೆಯ ನೆರವಿಗೆ ಬರಲಿಲ್ಲ.

ಕ್ರೂರ ಶಿಕ್ಷೆಗಳು

ತಾಲಿಬಾನ್ ಆಳ್ವಿಕೆಯಲ್ಲಿ, ನಿಯಮಗಳನ್ನು ಉಲ್ಲಂಘಿಸಿದ ಮಹಿಳೆಯರು ಕೆಲವೊಮ್ಮೆ ತಾಲಿಬಾನ್ ಧಾರ್ಮಿಕ ಪೊಲೀಸರಿಂದ ಅವಮಾನ ಮತ್ತು ಸಾರ್ವಜನಿಕ ಛಡಿ ಏಟುಗಳನ್ನೂ ತಿನ್ನುತ್ತಿದ್ದಾರೆ.. ತಾಲಿಬಾನ್ ಸಾರ್ವಜನಿಕ ಮರಣದಂಡನೆಯನ್ನು ಸಹ  ಜಾರಿ ಮಾಡಿದೆ.  ಕಳ್ಳರ ಕೈಗಳನ್ನು ಕತ್ತರಿಸುತ್ತಿದೆ. ಮತ್ತು ವ್ಯಭಿಚಾರದ ಆರೋಪ ಹೊತ್ತ  ಮಹಿಳೆಯರನ್ನು ಬಹಿರಂಗವಾಗಿ ಕಲ್ಲೇಟಿನ ಶಿಕ್ಷೆಗೆ ಗುರಿ ಪಡಿಸುತ್ತಿದೆ.

ಮಹಿಳೆಯರ ಮೇಲೆ ತಾಲಿಬಾನ್ ನಡೆಸಿದ ಕ್ರೂರ ಶಿಕ್ಷೆಗಳ  ಹಿಂದಿನ ಕೆಲವು ಉದಾಹರಣೆಗಳು ಇಲ್ಲಿವೆ ನೋಡಿ:

·          1996 ಅಕ್ಟೋಬರ್ ತಿಂಗಳಲ್ಲಿ, ಮಹಿಳೆಯು ತನ್ನ ಬೆರಳುಗಳ ಮೇಲೆ ಉಗುರು ವಾರ್ನಿಷ್ ಧರಿಸಿದ್ದರಿಂದ ಆಕೆಯ ಹೆಬ್ಬೆರಳಿನ ತುದಿಯನ್ನು ಕತ್ತರಿಸಲಾಯಿತು.

·         ರೇಡಿಯೋ ಶರಿಯಾ ಪ್ರಕಾರ, 225 ಕಾಬೂಲ್ ಮಹಿಳೆಯರನ್ನು 1996 ಡಿಸೆಂಬರ್ನಲ್ಲಿ ಶರಿಯಾ ಕೋಡ್ ಡ್ರೆಸ್ ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲಾಯಿತು ಮತ್ತು ಶಿಕ್ಷಿಸಲಾಯಿತು. ಮಹಿಳೆಯರ ಕಾಲುಗಳು ಮತ್ತು ಬೆನ್ನಿನ ಮೇಲೆ ಚಾಟಿ ಏಟು ನೀಡಲಾಯಿತು..

·         1999 ರಲ್ಲಿ, ತನ್ನ ಗಂಡನನ್ನು ಕೊಂದ ಆಪಾದನೆಯಲ್ಲಿ ಘಾಜಿ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ  30,000 ಪ್ರೇಕ್ಷಕರ ಸಮ್ಮುಖದಲ್ಲಿ ಏಳು ಮಕ್ಕಳ ಅಫ್ಘಾನ್ ತಾಯಿಯನ್ನು ಗಲ್ಲಿಗೇರಿಸಲಾಯಿತು.  ಈ ಮರಣದಂಡನೆಗೆ ಗುರಿಯಾಗುವ ಮುನ್ನ ಆಕೆ  ಮೂರು ವರ್ಷಗಳ ಕಾಲ ಸೆರೆವಾಸ ಅನುಭವಿಸಿದಳು ಮತ್ತು ಸಾಯುವವರೆಗೂ ಚಿತ್ರಹಿಂಸೆಗೊಳಗಾದಳು, ಆದರೆ ತನ್ನ ಮಗಳನ್ನು ರಕ್ಷಿಸುವ ಸಲುವಾಗಿ ಅವಳು ತಪ್ಪೊಪ್ಪಿಕೊಳ್ಳಲು ನಿರಾಕರಿಸಿದಳು. ( ವಾಸ್ತವವಾಗಿ ಈ ಪುತ್ರಿಯೇ ನಿಜವಾದ ಅಪರಾಧಿ ಎಂದು ವರದಿಗಳು ಹೇಳಿವೆ).

·        


ಬೀಡ್ ಆಯಿಷಾ ಎಂಬ ಅಫಘಾನ್ ಹುಡುಗಿಯನ್ನು ಬಾಡ್ ಎಂದು ಕರೆಯಲಾಗುವ ಬುಡಕಟ್ಟು ವಿವಾದ-ಪರಿಹಾರ ಪ್ರಕ್ರಿಯೆಯ ಮೂಲಕ ಇನ್ನೊಂದು ಕುಟುಂಬಕ್ಕೆ ಮದುವೆ ಮಾಡಲಾಯಿತು. ಅವಳು ಕುಟುಂಬದಲ್ಲಿ ಅನುಭವಿಸಿದ ಹಿಂಸೆಯಿಂದ ತಪ್ಪಿಸಿಕೊಂಡಾಗ, ತಾಲಿಬಾನ್ ಕಮಾಂಡರ್ ಆಕೆಯನ್ನು "ಹಳ್ಳಿಯ ಇತರ ಹುಡುಗಿಯರು ಅದೇ ರೀತಿ ಮಾಡಲು ಪ್ರಯತ್ನಿಸಿದರೆ ಎಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಜಗತ್ತಿಗೆ ತಿಳಿಯಲಿ"  ಎಂದು ಘೋಷಣೆ ಮಾಡಿ ಆಕೆಗೆ ಶಿಕ್ಷೆಯನ್ನು ಘೋಷಿಸಿದ. ತತ್ ಕ್ಷಣವೇ ಆಕೆಯ  ಅವಳ ಕಿವಿ ಮತ್ತು ಮೂಗು ತುಂಡಾಯಿತು, ಮತ್ತು ಅವಳನ್ನು ಹಾಗೆಯೇ ಕಿವಿ, ಮೂಗುಗಳಿಂದ ರಕ್ತ ಸುರಿಯುತ್ತಾ ಸಾಯುವವರೆಗೂ ಬಿಡುವ ಶಿಕ್ಷೆಯನ್ನು ವಿಧಿಸಲಾಯಿತು.

ಆಧುನಿಕ ಯುಗದಲ್ಲೂ ಮಧ್ಯಯುಗದ ಮತಾಂಧ ಅಟ್ಟಹಾಸಕ್ಕೆ ಇದೀಗ ಅಪಘಾನಿಸ್ಥಾನ ಆಡುಂಬೊಲವಾಗಿದೆ.

-       ನೆತ್ರಕೆರೆ ಉದಯಶಂಕರ

No comments:

Advertisement