Monday, July 11, 2022

ನ್ಯಾಯಾಂಗ ನಿಂದನೆ: ವಿಜಯ ಮಲ್ಯಗೆ ಜೈಲು: ಸುಪ್ರೀಂ ಆದೇಶ

 ನ್ಯಾಯಾಂಗ ನಿಂದನೆ: ವಿಜಯ ಮಲ್ಯಗೆ ಜೈಲು: ಸುಪ್ರೀಂ ಆದೇಶ

ನವದೆಹಲಿ: ಉದ್ಯಮಿ ವಿಜ ಮಲ್ಯ ಅವರಿಗೆ ನ್ಯಾಯಾಂಗ ನಿಂದನೆ ಆರೋಪದಡಿ ನಾಲ್ಕು ತಿಂಗಳ ಜೈಲು ಶಿಕ್ಷೆ ಹಾಗೂ ₹2000 ದಂಡ ವಿಧಿಸಿ ಸುಪ್ರೀಂ ಕೋರ್ಟ್ 2022 ಜುಲೈ 11ಸೋಮವಾರ ತೀರ್ಪು ನೀಡಿತು. "ಸಾಕಷ್ಟು ಶಿಕ್ಷೆ ಅತ್ಯಗತ್ಯ. ಮಲ್ಯ ಯಾವುದೇ ಪಶ್ಚಾತ್ತಾಪ ತೋರಿಸಲಿಲ್ಲ" ಎಂದು ಉನ್ನತ ನ್ಯಾಯಾಲಯದ ಪೀಠ ಹೇಳಿತು.

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮಲ್ಯ ಅವರ ಕುಟುಂಬ ಸದಸ್ಯರಿಗೆ ವರ್ಗಾಯಿಸಲಾದ 40 ದಶಲಕ್ಷ ಡಾಲರುಗಳನ್ನು ಹಿಂದಿರುಗಿಸುವಂತೆಯೂ ಸುಪ್ರೀಂ ಕೋರ್ಟ್ ಆದೇಶಿಸಿತು.

ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಮಾರ್ಚ್ 10 ರಂದು ಮದ್ಯದ ದೊರೆ ವಿರುದ್ಧದ ವಿಚಾರಣೆಯ ಬಳಿಕ ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ವಿವಿಧ ಅಂಶಗಳ ಕುರಿತು ಹಿರಿಯ ವಕೀಲ ಮತ್ತು ಅಮಿಕಸ್ ಕ್ಯೂರಿ ಜೈದೀಪ್ ಗುಪ್ತಾ ಅವರನ್ನು ಆಲಿಸಿದ ನಂತರ, ಮಾರ್ಚ್ 15 ರೊಳಗೆ ಲಿಖಿತ ಸಲ್ಲಿಕೆಗಳನ್ನು ಸಲ್ಲಿಸಲು ಮಲ್ಯ ಅವರನ್ನು ಪ್ರತಿನಿಧಿಸುತ್ತಿದ್ದ ವಕೀಲರಿಗೆ ಅನುಮತಿ ನೀಡಲು ಸುಪ್ರೀಂ ಕೋರ್ಟ್ ನಿರ್ಧರಿಸಿತು.

ಇಂಗ್ಲೆಂಡಿನಲ್ಲಿ ಇರುವ
ತಮ್ಮ ಕಕ್ಷಿದಾರರಿಂದ ಯಾವುದೇ ಸೂಚನೆ ತಮಗೆ ಲಭಿಸಿಲ್ಲ. ಹೀಗಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನೀಡಲಾಗುವ ಶಿಕ್ಷೆಯ ಪ್ರಮಾಣ ಬಗ್ಗೆ ವಾದಿಸಲು ಸಾಧ್ಯವಾಗುವುದಿಲ್ಲ ಎಂದು ಮಲ್ಯ ಅವರ ವಕೀಲರು ಮಾರ್ಚ್ 10 ರಂದು ಪೀಠಕ್ಕೆ ತಿಳಿಸಿದ್ದರು.

ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಹಾಜರಾಗಲು ಮಲ್ಯ ಅವರಿಗೆ ಹಲವು ಅವಕಾಶಗಳನ್ನು ನೀಡಲಾಗಿದೆ ಮತ್ತು ಕಳೆದ ವರ್ಷ ನವೆಂಬರ್ 30 ರಂದು ನಿರ್ದಿಷ್ಟ ನಿರ್ದೇಶನಗಳನ್ನು ನೀಡಿತ್ತು ಎಂದು ಪೀಠವು ಹೇಳಿತು.

 ₹9,000 ಕೋಟಿಗೂ ಅಧಿಕ ಮೊತ್ತದ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನು ಮಲ್ಯ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಮಲ್ಯ ಅವರು ಆಸ್ತಿಯನ್ನು ಬಹಿರಂಗಪಡಿಸುತ್ತಿಲ್ಲ ಮತ್ತು ನಿರ್ಬಂಧದ ಆದೇಶಗಳನ್ನು ಉಲ್ಲಂಘಿಸಿ ತಮ್ಮ ಮಕ್ಕಳಿಗೆ ವರ್ಗಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.

2017 ರಲ್ಲಿ ಮಲ್ಯ ಅವರನ್ನು ನ್ಯಾಯಾಂಗ ನಿಂದನೆ ಅಪರಾಧಿ ಎಂದು ಪರಿಗಣಿಸಲಾಗಿತ್ತು ಮತ್ತು ನಂತರ ಅವರಿಗೆ ನೀಡಲಾಗುವ ಉದ್ದೇಶಿತ ಶಿಕ್ಷೆಯ ಕುರಿತು ಅವರನ್ನು ಕೇಳಲು ವಿಷಯವನ್ನು ಪಟ್ಟಿ ಮಾಡಲಾಗಿತ್ತು.

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ತನ್ನ ಮಕ್ಕಳಿಗೆ 40 ದಶಲಕ್ಷ ಅಮೆರಿಕನ್‌ ಡಾಲರುಗಳನ್ನು ವರ್ಗಾವಣೆ ಮಾಡಿದ್ದರ ಸಂಬಂಧ ಸುಪ್ರೀಂಕೋರ್ಟ್‌ ನೀಡಿದ್ದ  2017ರ ತೀರ್ಪನ್ನು ನಿಂದಿಸಿದ ಮಲ್ಯ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿದ್ದರ ವಿರುದ್ಧ ಮಲ್ಯ ಸಲ್ಲಿಸಿದ್ದ ಮನವಿಯನ್ನು 2020 ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

ಮಲ್ಯ ಅವರು ಮಾರ್ಚ್ 2016 ರಿಂದ ಇಂಗ್ಲೆಂಡಿನಲ್ಲಿದ್ದಾರೆ. ಅವರು 2017ರಂ ಏಪ್ರಿಲ್ 18 ರಂದು ಸ್ಕಾಟ್ಲೆಂಡ್ ಯಾರ್ಡ್ ಜಾರಿಗೊಳಿಸಿದ ಹಸ್ತಾಂತರ ವಾರಂಟ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಇದ್ದಾರೆ.

No comments:

Advertisement