ಇಂದಿನ ಇತಿಹಾಸ History Today ಜುಲೈ 08
2022: ಟೋಕಿಯೊ: ಪಶ್ಚಿಮ ಜಪಾನಿನ ನಾರಾ ನಗರದಲ್ಲಿ ಈದಿನ (2022 ಜುಲೈ 08 ಶುಕ್ರವಾರ) ಚುನಾವಣಾ ಪ್ರಚಾರದ ವೇಳೆ ಗುಂಡಿನ ದಾಳಿಗೆ ಒಳಗಾಗಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ(67) ನಿಧನರಾದರು ಎಂದು ಅಲ್ಲಿನ ಸ್ಥಳೀಯ ಸುದ್ದಿವಾಹಿನಿ ಎನ್‌ಎಚ್‌ಕೆ ವರದಿ ಮಾಡಿತು. ‘ಎಲ್‌ಡಿಪಿಯ (ಲಿಬರೇಶನ್ ಡೆಮಾಕ್ರಟಿಕ್ ಪಾರ್ಟಿ) ಹಿರಿಯ ಅಧಿಕಾರಿ ಪ್ರಕಾರ, ಗುಂಡಿನ ದಾಳಿ ಬಳಿಕ ನಾರಾ ಪ್ರದೇಶದ ಕಶಿಹಾರಾ ನಗರದ ಆಸ್ಪತ್ರೆಗೆ ಶಿಂಜೊ ಅಬೆ ಅವರನ್ನು ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಮೃತರಾದರುʼ ಎಂದು ವರದಿ ತಿಳಿಸಿತು. ಬೆಳಗ್ಗೆ 11.30ರ ಸುಮಾರಿಗೆ ನಾರಾ ಪ್ರದೇಶದಲ್ಲಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾದ ಒಬ್ಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದರು. 2006ರಲ್ಲಿ ತಮ್ಮ 52 ವರ್ಷದ ವಯಸ್ಸಿನಲ್ಲೇ ಪ್ರಧಾನಿ ಹುದ್ದೆಗೇರಿದ್ದ ಶಿಂಜೊ ಅಬೆ, ದೇಶದ ಅತ್ಯುನ್ನತ ಹುದ್ದೆಗೇರಿದ ಅತ್ಯಂತ ಕಿರಿಯ ವ್ಯಕ್ತಿ ಮತ್ತು ಸುದೀರ್ಘ ಕಾಲ ಪ್ರಧಾನಿಯಾಗಿದ್ದ ವ್ಯಕ್ತಿ ಎಂಬ ಖ್ಯಾತಿ ಪಡೆದಿದ್ದರು.
2022: ಶ್ರೀನಗರ: ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಿನ ಪ್ರಸಿದ್ಧ ಯಾತ್ರಾಸ್ಥಳ ಅಮರನಾಥದಲ್ಲಿ ಈದಿನ (2022 ಜುಲೈ 08 ಶುಕ್ರವಾರ) ಸಂಜೆ 5.30ರ ಹೊತ್ತಿಗೆ ಮೇಘ ಸ್ಫೋಟವಾಗಿ, ಕನಿಷ್ಠ 15 ಮಂದಿ ಮೃತರಾಗಿ, 48ಕ್ಕೂ ಹೆಚ್ಚು ಮಂದಿ ಕಣ್ಮರೆಯಾದರು. 25ಕ್ಕೂ ಹೆಚ್ಚು ಡೇರೆಗಳು ನಾಶವಾದವು. ಮೂರು ಸಾಮೂಹಿಕ ಭೋಜನಗೃಹಗಳು ಹಾನಿಗೊಂಡವು ಎಂದು ವರದಿಗಳು ತಿಳಿಸಿದವು.ಮೇಘಸ್ಫೋಟದ ಬಳಿಕ ಭಾರಿ ಮಳೆ ಸುರಿಯಿತು. ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಯಿತು. ವೇಗವಾಗಿ ನುಗ್ಗಿದ ನೀರಿಗೆ ಡೇರೆಗಳು ಕೊಚ್ಚಿ ಹೋದವು. ಪೊಲೀಸ್, ಸೇನೆ ಮತ್ತು ಇಂಡೊ–ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದವು. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಆಘಾತ ವ್ಯಕ್ತಪಡಿಸಿದರು. ಜಮ್ಮು–ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಜತೆಗೂ ಪ್ರಧಾನಿ ಮಾತನಾಡಿದರು.
2020: ನವದೆಹಲಿ: ನೈಜ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ ಕಡಿಮೆ ಮಾಡುವ ಪ್ರಯತ್ನಗಳ ಭಾಗವಾಗಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಲಡಾಖ್ನ ಹಾಟ್ ಸ್ಪ್ರಿಂಗ್ಸ್ ವಲಯದ ಪಹರೆ ಪಾಯಿಂಟ್ ೧೫ರಿಂದ ಎರಡು ಕಿಲೋಮೀಟರ್ನಷ್ಟು ಹಿಂದಕ್ಕೆ ಸರಿದಿದೆ. ಗೋಗ್ರಾದಲ್ಲಿನ ಸೇನಾ ಪಡೆಗಳ ವಾಪಸಾತಿ ಗುರುವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಲ್ಲಿಯೂ ಸಹ ಪೀಪಲ್ಸ್ ಲಿಬರೇಶನ್ ಆರ್ಮಿಯು ೨ ಕಿಲೋಮೀಟರ್ ಹಿಂದಕ್ಕೆ ಸಾಗಲಿದೆ ಎಂದು ಮೂಲಗಳು 2020 ಜುಲೈ 8ರ ಬುಧವಾರ ತಿಳಿಸಿದವು. ಚೀನಾ ಈ ಹಿಂದೆ ಪಹರೆ ಪಾಯಿಂಟ್ ೧೪ ರಿಂದ ಸಂಪೂರ್ಣವಾಗಿ ಹಿಂದೆ ಸರಿದಿತ್ತು. ಈಗ ಚೀನಾ ಪಡೆಗಳು ಕಣಿವೆಯಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಪಕ್ಕದಲ್ಲೇ ಇರುವ ಚೀನೀ ಪ್ರದೇಶದಲ್ಲೇ ಇವೆ ಎಂಬುದನ್ನು ಉಪಗ್ರಹ ಚಿತ್ರಗಳು ಖಚಿತ ಪಡಿಸಿವೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಡುವಿನ ಮಾತುಕತೆಯು ಧನಾತ್ಮಕವಾಗಿತ್ತು ಎಂಬುದಾಗಿ ಬೀಜಿಂಗ್ ಹೇಳಿದ ಬಳಿಕ ಗಡಿಯ ಮುಂಚೂಣಿ ಸ್ಥಳಗಳಿಂದ ಸೇನಾಪಡೆ ವಾಪಸಾತಿಯ ಪ್ರಕ್ರಿಯೆ ಆರಂಭಗೊಂಡಿದೆ. ಚೀನಾ ಮತ್ತು ಭಾರvದ ವಿಶೇಷ ಪ್ರತಿನಿಧಿಗಳಾಗಿರುವ ವಾಂಗ್ ಮತ್ತು ಡೋವಲ್ ಭಾನುವಾರ ಸಂಜೆ ವಿಡಿಯೋ ಸಂಭಾಷಣೆ ಮೂಲಕ ಗಡಿ ಬಿಕ್ಕಟ್ಟು ಇತ್ಯರ್ಥ ಸಾಧ್ಯತೆ ಬಗ್ಗೆ ನಡೆಸಿದ್ದರು. ಪ್ಯಾಂಗೊಂಗ್ ತ್ಸೊ, ಗಲ್ವಾನ್ ಕಣಿವೆ, ಮತ್ತು ಗೋಗ್ರಾ ಹಾಟ್ ಸ್ಪ್ರಿಂಗ್ ಸೇರಿದಂತೆ ಪೂರ್ವ ಲಡಾಖ್ನ ಹಲವಾರು ಪ್ರದೇಶಗಳಲ್ಲಿ ಭಾರತ ಮತ್ತು ಚೀನಾದ ಸೇನೆಗಳು ಎಂಟು ವಾರಗಳ ಕಾಲ ಮುಖಾಮುಖಿಯಾಗಿದ್ದವು. ಚೀನೀ ಸೇನೆಯು ಸೋಮವಾರ ಗಲ್ವಾನ್ ಕಣಿವೆ ಮತ್ತು ಗೋಗ್ರಾ ಹಾಟ್ ಸ್ಪ್ರಿಂಗ್ನಿಂದ ಸೈನಿಕರನ್ನು ಹಿಂತೆಗೆದುಕೊಳ್ಳಲು ಪ್ರಾರಂಭಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ) ಇಂದಿನ ಇತಿಹಾಸ History Today ಜುಲೈ 08 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
2020: ಇಸ್ಲಾಮಾಬಾದ್: ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರು ತೀರ್ಪಿನ ಪುನರ್ ಪರಿಶೀಲಿಸುವಂತೆ ಅರ್ಜಿ ಸಲ್ಲಿಸಲು ನಿರಾಕರಿಸಿದ್ದಾರೆ ಮತ್ತು ಕ್ಷಮಾದಾನ ಅರ್ಜಿ ಪ್ರಕ್ರಿಯೆ ಮುಂದುವರೆಸಲು ನಿರ್ಧರಿಸಿದ್ದಾರೆ ಎಂದು ಪಾಕಿಸ್ತಾನ 2020 ಜುಲೈ 8ರ ಬುಧವಾರ ಹೇಳಿತು. ‘ತೀರ್ಪಿನ ಪುನರ್ ಪರಿಶೀಲನೆಗೆ ಮನವಿ ಮಾಡಿ ಅರ್ಜಿ ಸಲ್ಲಿಸಲು ಜೂನ್ ೧೭ರಂದು ಕುಲಭೂಷಣ್ ಜಾಧವ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ, ಅವರು ನಿರಾಕರಿಸಿದ್ದಾರೆ’ ಎಂದು ಹೆಚ್ಚುವರಿ ಅಟಾರ್ನಿ ಜನರಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪಾಕಿಸ್ತಾನದ ಮಾಧ್ಯಮ ವರದಿ ಮಾಡಿತು. ೨೦೧೭ರ ಏಪ್ರಿಲ್ ೧೭ರಂದು ಸಲ್ಲಿಸಲಾಗಿರುವ, ಇನ್ನೂ ಇತ್ಯರ್ಥಕ್ಕೆ ಬಾಕಿ ಉಳಿದಿರುವ ಕ್ಷಮಾದಾನ ಅರ್ಜಿ ಪ್ರಕ್ರಿಯೆ ಮುಂದುವರೆಸಲು ಜಾಧವ್ ಒಲವು ತೋರಿದ್ದಾರೆ. ಜಾಧವ್ ಅವರಿಗೆ ರಾಜತಾಂತ್ರಿಕ ನೆರವು ಒದಗಿಸಲು ಪಾಕಿಸ್ತಾನ ಸರ್ಕಾರವು ಎರಡನೇ ಬಾರಿಗೆ ಭಾರತಕ್ಕೆ ಅವಕಾಶ ನೀಡಲಿದೆ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ. ಪಾಕಿಸ್ತಾನದ ಪ್ರಕಾರ, ೨೦೧೬ರ ಮಾರ್ಚ್ ೩ರಂದು ಜಾಧವ್ ಅವರನ್ನು ಬಲೂಚಿಸ್ತಾನದಲ್ಲಿ ಬಂಧಿಸಲಾಗಿತ್ತು. ಗೂಢಚರ್ಯೆ ಮತ್ತು ಭಯೋತ್ಪಾದನೆ ಆರೋಪದಲ್ಲಿ ಅವರಿಗೆ ೨೦೧೭ರ ಏಪಿಲ್ ತಿಂಗಳಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಪಾಕಿಸ್ತಾನದ ಸೇನಾ ನ್ಯಾಯಾಲಯ ನೀಡಿದ್ದ ಈ ತೀರ್ಪಿನ ವಿರುದ್ಧ ೨೦೧೭ರ ಮೇ ತಿಂಗಳಲ್ಲಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಕದ ತಟ್ಟಿತ್ತು.ಅಂತಾರಾಷ್ಟ್ರೀಯ ನ್ಯಾಯಾಲಯವು ಕಳೆದ ವರ್ಷ ಜುಲೈ ತಿಂಗಳಲ್ಲಿ ನೀಡಿದ್ದ ತೀರ್ಪಿನಲ್ಲಿ, ಜಾಧವ್ ಅವರಿಗೆ ರಾಜತಾಂತ್ರಿಕ ನೆರವು ಒದಗಿಸಲು ಭಾರತಕ್ಕೆ ಅವಕಾಶ ನೀಡುವಂತೆಯೂ ತೀರ್ಪನ್ನು ಪುನರ್ ಪರಿಶೀಲನೆ ಮಾಡುವಂತೆಯೂ ಪಾಕಿಸ್ತಾನಕ್ಕೆ ಸೂಚಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೋವಿಡ್-೧೯ ಲಸಿಕೆ ಅಥವಾ ಔಷಧದ ಅನುಪಸ್ಥಿತಿಯಲ್ಲಿ ೨೦೨೧ ರ ಚಳಿಗಾಲದ ಅಂತ್ಯದ ವೇಳೆಗೆ ಭಾರತವು ದಿನಕ್ಕೆ ಸುಮಾರು ೨.೮೭ ಲಕ್ಷ ಕೊರೋನಾ ಪ್ರಕರಣಗಳನ್ನು ದಾಖಲಿಸಬಹುದು ಎಂದು ಮೆಸಾಚ್ಯುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಂಶೋಧಕರು ಮಾದರಿ ಅಧ್ಯಯನವೊಂದರಲ್ಲಿ 2020 ಜುಲೈ 8ರ ಬುಧವಾರ ಬಹಿರಂಗ ಪಡಿಸಿದರು. ವಿಶ್ವಾಸಾರ್ಹ ಪರೀಕ್ಷಾ ದತ್ತಾಂಶ ಹೊಂದಿರುವ ೮೪ ದೇಶಗಳ ೪.೭೫ ಬಿಲಿಯನ್ (ಶತಕೋಟಿ) ಸೋಂಕಿತರ ಅಂಕಿಸಂಖ್ಯೆ ಮಾಹಿತಿ (ಡೇಟಾ) ಆಧರಿಸಿ ಸಂಶೋಧಕರು ಕ್ರಿಯಾತ್ಮಕ ಸಾಂಕ್ರಾಮಿಕ ರೋಗಶಾಸ್ತ್ರೀಯ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಪ್ರಿಪ್ರಿಂಟ್ ಪೇಪರ್ನಲ್ಲಿ, ಎಂಐಟಿ ಪ್ರಾಧ್ಯಾಪಕರಾದ ಹಾಝಿರ್ ರಹಮಂದಾದ್ ಮತ್ತು ಜಾನ್ ಸ್ಟರ್ಮನ್, ಹಾಗೂ ಪಿಎಚ್ಡಿ ಅಭ್ಯರ್ಥಿ ತ್ಸೆ ಯಾಂಗ್ ಲಿಮ್ ಅವರು, ೨೦೨೧ ರ ಚಳಿಗಾಲದ ಕೊನೆಯಲ್ಲಿ ದೈನಂದಿನ ಸೋಂಕಿನ ಪ್ರಮಾಣವನ್ನು ಯೋಜಿಸುವ ಮೂಲಕ ಅತಿಬಾಧಿತ ಮೊದಲ ಹತ್ತು ರಾಷ್ಟ್ರUಳ ಸೋಂಕಿನ ಪ್ರಮಾಣವನ್ನು ಅಂದಾಜು ಮಾಡಿದ್ದಾರೆ. ಅದರಂತೆ ಭಾರತದಲ್ಲಿ ದಿನಕ್ಕೆ ೨.೮೭ ಲಕ್ಷ ಸೋಂಕುಗಳು ದಾಖಲಾಗಿದ್ದು, ಭಾರತದ ನಂತರದ ಸ್ಥಾನಗಳಲ್ಲಿ ಅಮೆರಿಕ, ದಕ್ಷಿಣ ಆಫ್ರಿಕಾ, ಇರಾನ್, ಇಂಡೋನೇಷ್ಯಾ, ಇಂಗ್ಲೆಂಡ್, ನೈಜೀರಿಯಾ, ಟರ್ಕಿ, ಫ್ರಾನ್ಸ್ ಮತ್ತು ಜರ್ಮನಿ ನಿಲ್ಲಲಿವೆ. ಆದಾಗ್ಯೂ, ಇದು ಪರೀಕ್ಷೆ, ನಡವಳಿಕೆ ಮತ್ತು ನೀತಿ ಪ್ರತಿಕ್ರಿಯೆಗಳಿಗೆ ಅನುಗುಣವಾಗಿರುತ್ತವೆ ಮತ್ತು ಇದನ್ನು ಸಂಭಾವ್ಯ ಅಪಾಯದ ಸೂಚಕಗಳಾಗಿ ಪರಿಗಣಿಸಬೇಕು, ಭವಿಷ್ಯದ ಪ್ರಕರಣಗಳ ನಿಖರವಾದ ಮುನ್ಸೂಚಯಾಗಿ ಅಲ್ಲ ಎಂದು ಅವರು ಹೇಳಿದ್ದಾರೆ. ಅಪಾಯದ ಗ್ರಹಿಕೆಗೆ ಪ್ರತಿಕ್ರಿಯೆಯಾಗಿ ಹೆಚ್ಚು ಕಠಿಣವಾದ ಪರೀಕ್ಷೆ ಮತ್ತು ಸಂಪರ್ಕಗಳನ್ನು ಕಡಿಮೆ ಮಾಡುವುದರಿಂದ ಭವಿಷ್ಯದ ಪ್ರಕರಣಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ, ಆದರೆ ಸಡಿಲವಾದ ಪ್ರತಿಕ್ರಿಯೆ ಮತ್ತು ಅಪಾಯಗಳ ನಿರ್ಲಕ್ಷ್ಯದಿಂದ ಅಗಾಧವಾಗಿ ಸೋಂಕು ಪ್ರಕರಣಗಳು ಹೆಚ್ಚಬಹುದು ಎಂದು ಸಂಶೋಧಕರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದೇಶಭ್ರಷ್ಟ ಆರ್ಥಿಕ ಅಪರಾಧ ಕಾಯ್ದೆಯ ಅಡಿಯಲ್ಲಿ ವಜ್ರ ವ್ಯಾಪಾರಿ ನೀರವ್ ಮೋದಿಗೆ ಸೇರಿದ ೩೨೯.೬೬ ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ತಾನು ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯವು (ಇಡಿ) 2020 ಜುಲೈ 8ರ ಬುಧವಾರ ತಿಳಿಸಿತು. ಮುಂಬಯಿಯ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ನಡೆದ ೨೦೦ ಕೋಟಿ (೨ ಬಿಲಿಯನ್) ಅಮೆರಿಕನ್ ಡಾಲರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿ ಜಾರಿ ನಿರ್ದೇಶನಾಲಯದ ತನಿಖೆಗೆ ಒಳಪಟ್ಟಿರುವವರಲ್ಲಿ ನೀರವ್ ಮೋದಿ ಮತ್ತು ಆತನ ಚಿಕ್ಕಪ್ಪ ಮೆಹುಲ್ ಚೊಕ್ಸಿ ಸೇರಿದ್ದಾರೆ. ‘ಜಪ್ತಿ ಮಾಡಲಾಗಿರುವ ಆಸ್ತಿಗಳಲ್ಲಿ ಮುಂಬೈಯ ವರ್ಲಿಯಲ್ಲಿರುವ ಸಮುದ್ರ ಮಹಲ್ ಐಕಾನಿಕ್ ಕಟ್ಟಡ, ಅಲಿಬಾಗ್ನಲ್ಲಿ ಇರುವ ಸಮುದ್ರ ತಡಿಯ ತೋಟದ ಮನೆ ಮತ್ತು ಜಾಗ, ಜೈಸಲ್ಮೇರಿನಲ್ಲಿರುವ ಗಾಳಿ ಗಿರಣಿ (ವಿಂಡ್ ಮಿಲ್), ಲಂಡನ್ನಿನಲ್ಲಿ ಇರುವ ಫ್ಲ್ಯಾಟ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ (ಯುಎಇ) ಇರುವ ವಸತಿ ಫ್ಲ್ಯಾಟ್ಗಳು, ಶೇರುಗಳು ಮತ್ತು ಬ್ಯಾಂಕ್ ಠೇವಣಿಗಳು ಸೇರಿವೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಮುಂಬೈಯ ವಿಶೇಷ ನ್ಯಾಯಾಲಯವು ಜೂನ್ ೮ರಂದು ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ಅಧಿಕಾರ ನೀಡಿತ್ತು. ನೀರವ್ ಮೋದಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂಬುದಾಗಿ ಕಳೆದ ವರ್ಷ ಡಿಸೆಂಬರ್ ೫ರಂದು ಇದೇ ನ್ಯಾಯಾಲಯ ಘೋಷಣೆ ಮಾಡಿತ್ತು. ೨೦೧೮ರಲ್ಲಿ ಎಫ್ಇಒ ಕಾಯ್ದೆಯ ಅಡಿಯಲ್ಲಿ ೩೨೯.೬೬ ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದು ಅದನ್ನು ಕೇಂದ್ರ ಸರ್ಕಾರ ವಶಪಡಿಸಿಕೊಂಡಿದೆ ಎಂದು ಇಡಿ ಹೇಳಿತು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನೌಕರರ ಭವಿಷ್ಯನಿಧಿ ಅಡಿಯಲ್ಲಿ ಪಾವತಿ ಮಾಡಲಾಗುವ ಶೇಕಡಾ ೧೨ರಷ್ಟು ನೌಕರರ ಪಾಲು ಮತ್ತು ಶೇಕಡಾ ೧೨ರಷ್ಟು ಮಾಲೀಕರ ಪಾಲು ಸೇರಿದಂತೆ ಒಟ್ಟು ಶೇಕಡಾ ೨೪ರಷ್ಟು ವಂತಿಗೆಗೆ ಸಂಬಂಧಿಸಿದಂತೆ ನೀಡಲಾದ ರಿಯಾಯ್ತಿಯನ್ನು ಜೂನ್ ತಿಂಗಳಿನಿಂದ ಆಗಸ್ಟ್ವರೆಗೆ ಮುಂದಿನ ಮೂರು ತಿಂಗಳುಗಳಿಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟವು 2020 ಜುಲೈ 8ರ ಬುಧವಾರ ಅನುಮೋದನೆ ನೀಡಿತು. ಪ್ರಧಾನಮಂತ್ರಿ ಗರೀಬ ಕಲ್ಯಾಣ ಯೋಜನೆಯ (ಪಿಎಂಜಿಕೆವೈ) ಅಡಿಯಲ್ಲಿ ಸರ್ಕಾರ ಪ್ರಕಟಿಸಿದ ಕೊಡುಗೆಯ ವಿವಿಧ ಕ್ರಮಗಳನ್ನು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ವಿವರಿಸಿದರು. ಮಾಸಿಕ ೧೫,೦೦೦ ರೂಪಾಯಿಗಳಿಗಿಂತ ಕಡಿಮೆ ವೇತನ ಪಡೆಯುವ ಶೇಕಡಾ ೯೦ರಷ್ಟು ನೌಕರರು ಮತ್ತು ೧೦೦ ಮಂದಿಯವರೆಗೆ ನೌಕರರು ಇರುವ ಸಂಸ್ಥೆಗಳಲ್ಲಿ ನೌಕರರು ಪಡೆಯುವ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ವೇತನಗಳಿಗೆ ಈ ಯೋಜನೆ ಅನ್ವಯವಾಗಲಿದೆ. ೩.೬೭ ಲಕ್ಷ ಸಂಸ್ಥೆಗಳಲ್ಲಿ ಕೆಲಸ ಮಾಡುವ ೭೨.೨೨ ಲಕ್ಷ ಕಾರ್ಮಿಕರು ಕೇಂದ್ರ ಸಚಿವ ಸಂಪುಟದ ನಿರ್ಣಯದಿಂದ ಅನುಕೂಲ ಪಡೆಯಲಿದ್ದು ಅಸ್ತವ್ಯಸ್ತತೆಯ ಹೊರತಾಗಿಯೂ ವೇತನ ಪಟ್ಟಿಯಲ್ಲಿ ಮುಂದುವರೆಯಲಿದ್ದಾರೆ. ಈ ಉದ್ದೇಶಕ್ಕಾಗಿ ಸರ್ಕಾರವು ೨೦೨೧ರ ಸಾಲಿನಲ್ಲಿ ೪,೮೦೦ ಕೋಟಿ ರೂಪಾಯಿ ಮೊತ್ತದ ಮುಂಗಡಪತ್ರ ಹಂಚಿಕೆ ಮಾಡಲಿದೆ. ಪ್ರಧಾನ ಮಂತ್ರಿ ರೋಜಗಾರ್ ಪ್ರೋತ್ಸಾಹನ್ ಯೋಜನಾ (ಪಿಎಂಆರ್ಪಿವೈ) ಅಡಿಯಲ್ಲಿ ಜೂನ್ನಿಂದ ಆಗಸ್ಟ್ ತಿಂಗಳವರೆಗಿನ ತಿಂಗಳುಗಳಲ್ಲಿ ಉದ್ಯೋಗದಾತರ ಪಾಲಿನ ಶೇಕಡಾ ೧೨ರಷ್ಟು ವಂತಿಗೆಗೆ ಅರ್ಹರಾಗಿರುವ ಫಲಾನುಭವಿಗಳನ್ನು ಯೋಜನೆಯ ಲಾಭವು ಒಂದರ ಮೇಲೊಂದಾಗದಂತೆ ನೋಡಿಕೊಳ್ಳುವ ಸಲುವಾಗಿ ಹೊರಗಿಡಲಾಗುವುದು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment