ಮಾಹಿತಿ ವಿಳಂಬಕ್ಕೆ ಆಯೋಗ ಕುರುಡಾಗುವಂತಿಲ್ಲ: ಕರ್ನಾಟಕ ಹೈಕೋರ್ಟ್
ಬೆಂಗಳೂರು: ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯು (ಪಿಐಒ) ಮಾಹಿತಿ ಒದಗಿಸುವಲ್ಲಿ ಮಾಡುವ ವಿಳಂಬವು ಶಿಕ್ಷಾರ್ಹವಾಗಿದ್ದು, ಇಂತಹ ವಿಳಂಬದ ಬಗ್ಗೆ ಮಾಹಿತಿ ಆಯೋಗವು ಕುರುಡಾಗಿ ಇರಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ
ಕೋರಿದ ಮಾಹಿತಿಯನ್ನು ಒದಗಿಸುವಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಉಂಟಾದ ಅನಗತ್ಯ ವಿಳಂಬಕ್ಕಾಗಿ
ತಪ್ಪಿತಸ್ಥನನ್ನು ಮಾಹಿತಿ ಆಯೋಗವು ಶಿಕ್ಷಿಸದೇ ಇರಲು ಸಾಧ್ಯವಿಲ್ಲ ಎಂದು ಹೇಳಿದ ಹೈಕೋರ್ಟ್ ನ್ಯಾಯಮೂರ್ತಿ
ಕೃಷ್ಣ ಎಸ್ ದೀಕ್ಷಿತ್ ಅವರ ಪೀಠವು ಸಾರ್ವಜನಿಕ ಮಾಹಿತಿ ಅಧಿಕಾರಿಗೆ 25,000 ರೂಪಾಯಿಗಳ
ದಂಡವನ್ನು ವಿಧಿಸಿದೆ.
ಬೆಂಗಳೂರಿನ ಬ್ಲಾಕ್ ಶಿಕ್ಷಣ ಕಚೇರಿಯ
ಸಾರ್ವಜನಿಕ ಮಾಹಿತಿ ಅಧಿಕಾರಿಯು (ಪಿಐಒ) ಕರ್ತವ್ಯಲೋಪ ಎಸಗಿದ್ದಕ್ಕಾಗಿ ಆರ್‌ಟಿಐ ಸೆಕ್ಷನ್ 20 ರ ಅಡಿಯಲ್ಲಿ ಅನುಕರಣೀಯ
ಶಿಕ್ಷೆಯನ್ನು ಕೋರಿ ಸಲ್ಲಿಸಲಾದ ರಿಟ್ ಅರ್ಜಿಯ ವಿಚಾರಣೆಯನ್ನು
ನ್ಯಾಯಾಲಯವು ನಡೆಸಿತ್ತು.
ತಾವು ಕೇಳಿದ ಮಾಹಿತಿಯು ಸುಮಾರು ಎರಡು ವರ್ಷಗಳಷ್ಟು ವಿಳಂಬವಾಗಿ ಒದಗಿಸಲ್ಪಟ್ಟಿದೆ, ಆದರೆ ಮಾಹಿತಿಯನ್ನು ಒದಗಿಸಲಾಗಿದೆ ಎಂದು ಹೇಳಿ ರಾಜ್ಯ ಮಾಹಿತಿ ಆಯೋಗವು ತನ್ನ
ಅರ್ಜಿಯನ್ನು ಇತ್ಯರ್ಥ ಪಡಿಸಿತು. ಆದರೆ ವಾಸ್ತವ ಪ್ರಶ್ನೆ ಏನೆಂದರೆ ರಾಜ್ಯ ಮಾಹಿತಿ ಆಯೋಗವು
ಮಾಹಿತಿ ಒದಗಿಸುವಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಆದ ಅಗಾಧ ವಿಳಂಬದ ಬಗ್ಗೆ ಕಣ್ಣು
ಮುಚ್ಚಿತು ಎಂದು ಎಂದು
ಅರ್ಜಿದಾರರು ನ್ಯಾಯಾಲಯಕ್ಕೆ ನಿವೇದಿಸಿದರು.
"ಪ್ರತಿವಾದಿ-ಆಯೋಗವು ಶಾಸನಬದ್ಧ ಅರೆ ನ್ಯಾಯಾಂಗ
ಸಂಸ್ಥೆಯಾಗಿರುವುದರಿಂದ ಮಹಾರಾಜ ಅಥವಾ ಮೊಘಲ್‌ನಂತೆ ವರ್ತಿಸಲು ಸಾಧ್ಯವಿಲ್ಲ, ಅದರ ಕಾರ್ಯಗಳು ಸಾರ್ವಜನಿಕ ಕಾನೂನಿನ
ಸ್ವರೂಪದವು” ಎಂದು ಹೈಕೋರ್ಟ್ ಈ ಪ್ರಕರಣ ಕುರಿತ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತು.
ಆರ್‌ಟಿಐ ಕಾಯಿದೆಯ ಸೆಕ್ಷನ್ 20, ಮಾಹಿತಿಯನ್ನು ಒದಗಿಸುವಲ್ಲಿ
ಪ್ರತಿ ದಿನದ ವಿಳಂಬಕ್ಕೆ 250 ರೂಪಾಯಿಗಳ ದಂಡವನ್ನು ಸೂಚಿಸುತ್ತದೆ ಎಂದು ಕೋರ್ಟ್ ಗಮನಿಸಿತು. ಸಬ್
ಸೆಕ್ಷನ್ (1) ಗರಿಷ್ಠ 25,000 ರೂಪಾಯಿಗಳ
ದಂಡವನ್ನು ವಿಧಿಸಬಹುದು ಎಂದು ಹೇಳುತ್ತದೆ.
ಅದರಂತೆ, ವಿಳಂಬದ ತಪ್ಪಿಗಾಗಿ ಅರ್ಜಿದಾರರಿಗೆ 25,000 ರೂಪಾಯಿಗಳ ದಂಡ ಮತ್ತು
10,000 ರೂಪಾಯಿಗಳ ಖಟ್ಲೆ ವೆಚ್ಚವನ್ನು ಪಾವತಿ ಮಾಡುವಂತೆ ಹೈಕೋರ್ಟ್ ಪೀಠವು ಪಿಐಒಗೆ ನಿರ್ದೇಶನ ನೀಡಿತು.
"ಭ್ರಷ್ಟಾಚಾರ ಮತ್ತು ತಪ್ಪುಗಳನ್ನು ಎದುರಿಸುವಲ್ಲಿ ಮಾಹಿತಿಯ ಲಭ್ಯತೆಯು ಒಂದು ಪ್ರಮುಖ ಸಾಧನವಾಗಿದೆ.
ತನಿಖಾ ಪತ್ರಕರ್ತರು ಮತ್ತು ಕಾವಲುಗಾರ ನಾಗರಿಕ ಸಮಾಜ ಸಂಸ್ಥೆಗಳು ತಪ್ಪನ್ನು ಬಹಿರಂಗಪಡಿಸಲು
ಮತ್ತು ಅದನ್ನು ಬೇರುಸಹಿತ ಕಿತ್ತುಹಾಕಲು ಮಾಹಿತಿ ಪಡೆಯುವ ಹಕ್ಕನ್ನು ಬಳಸಬಹುದು. ಈ ಕಾನೂನುಗಳು
ಸರ್ಕಾರ ಮತ್ತು ಸಾರ್ವಜನಿಕ ಅಧಿಕಾರಿಗಳು ಜನರ ಸೇವೆ ಸಲ್ಲಿಸಬೇಕು ಎಂಬ ಮೂಲಭೂತ ಕರ್ತವ್ಯವನ್ನು ಪ್ರತಿಬಿಂಬಿಸುತ್ತವೆ. ಇದಲ್ಲದೆ ಮಾಹಿತಿ
ಹಕ್ಕಿನ ವ್ಯಾಪಕವಾದ ಮಾನ್ಯತೆಗೆ ಆಧಾರವಾಗಿರುವ ಇತರ ಹಲವಾರು ಹೆಚ್ಚು ಪ್ರಾಯೋಗಿಕ
ವಿಚಾರಗಳೂ ಇವೆ" ಎಂದು ನ್ಯಾಯಾಲಯ ಹೇಳಿತು.
"ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ನಿಬಂಧನೆಗಳ ಅಡಿಯಲ್ಲಿಯೂ ಸಹ
ಮಾಹಿತಿ ಲಭ್ಯತೆಯ ಹಕ್ಕನ್ನು ಅಭಿವ್ಯಕ್ತಿ
ಸ್ವಾತಂತ್ರ್ಯದ ಒಂದು ಅಂಶವಾಗಿ ಗುರುತಿಸಲಾಗಿದೆ. ಮಾಹಿತಿಯನ್ನು ಹುಡುಕುವ ಮತ್ತು ಸ್ವೀಕರಿಸುವ
ಹಕ್ಕು ಎಂದು ಅದು ಅರ್ಥೈಸಿದೆ.”
"ಸೆಕ್ಷನ್. 20 ರ ಸಬ್ ಸೆಕ್ಷನ್ (1) ನಿಬಂಧನೆಯ ಅಡಿಯಲ್ಲಿ ದಂಡವನ್ನು ವಿಧಿಸುವ ಮೊದಲು ಆರೋಪಿತ ವ್ಯಕ್ತಿಯ ಅಹವಾಲನ್ನು
ಆಲಿಸಬೇಕು. ಆದರೆ ಮಾಹಿತಿಯನ್ನು ಒದಗಿಸುವಲ್ಲಿ ಅಥವಾ ಒದಗಿಸದೇ ಇರುವಲ್ಲಿ ತಾನು ಸಮಂಜಸವಾಗಿ
ಮತ್ತು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಿರುವುದಾಗಿ ಸಾಬೀತು ಪಡಿಸುವ ಜವಾಬ್ದಾರಿಯನ್ನು ಆರೋಪಿತ
ಅಧಿಕಾರಿಯ ಮೇಲೆ ಹೊರಿಸಿದೆ. ಈ ವಿಧಿಯು ಸಂಸತ್ತು ರೂಪಿಸಿರುವ ಕಾನೂನಿನ ಪ್ರಕಾರ ಶಾಸನಬದ್ಧವಾದ ಮಾಹಿತಿಯ ಹಕ್ಕಿನ ಮಹತ್ವ ಏನು ಎಂಬುದನ್ನು ತೋರಿಸುತ್ತದೆ. 2ನೇ ಪ್ರತಿವಾದಿಗೆ ದಂಡ ವಿಧಿಸದೆ ಅರ್ಜಿದಾರರ
ಮನವಿಯನ್ನು ಮುಕ್ತಾಯಗೊಳಿಸುವುದು ಸರಿಯಲ್ಲ”
ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.
ಪ್ರಕರಣ: ಸಿಜೋ ಸೆಬಾಸ್ಟೈನ್ ವಿರುದ್ಧ ಕರ್ನಾಟಕ ಮಾಹಿತಿ ಆಯೋಗ ಮತ್ತು
ಇತರರು
ಆದೇಶದ ದಿನಾಂಕ: 2022 ಜುಲೈ 26.
No comments:
Post a Comment