Wednesday, August 17, 2022

ಪಿಂಚಣಿ ಮುಂದೂಡಿದ ವೇತನ, ಪಿಂಚಣಿ ಹಕ್ಕು ಸಾಂವಿಧಾನಿಕ: ಕೇರಳ ಹೈಕೋರ್ಟ್

 ಪಿಂಚಣಿ ಮುಂದೂಡಿದ ವೇತನ, ಪಿಂಚಣಿ ಹಕ್ಕು ಸಾಂವಿಧಾನಿಕ: ಕೇರಳ ಹೈಕೋರ್ಟ್

ತಿರುವನಂತಪುರಂ: ಪಿಂಚಣಿಯು ಉದ್ಯೋಗದಾತರ ಇಚ್ಛೆಯಂತೆ ಪಾವತಿಸಬೇಕಾದ ವರದಾನವಲ್ಲ; ನಿಧಿಯ ಕೊರತೆಯನ್ನು ಸಮರ್ಥಿಸುವ ಮೂಲಕ ಉದ್ಯೋಗದಾತನು ಜವಾಬ್ದಾರಿಯಿಂದ ಹೊರಗುಳಿಯುವಂತಿಲ್ಲ.

ಪಿಂಚಣಿ ಪಡೆಯುವ ಹಕ್ಕು ಸಾಂವಿಧಾನಿಕ ಹಕ್ಕು. ಅದು ಉದ್ಯೋಗದಾತರ ಇಚ್ಛೆಯಂತ ನಿವೃತ್ತ ಉದ್ಯೋಗಿಗಳಿಗೆ ಪಾವತಿ ಮಾಡಬೇಕಾದ ವರದಾನ ಅಲ್ಲ. ನಿಧಿಯ ಕೊರತೆಯನ್ನು ಮುಂದಿಟ್ಟ ಉದ್ಯೋಗದಾತ ತನ್ನ ಜವಾಬ್ದಾರಿ ತಪ್ಪಿಸಿಕೊಳ್ಳುವಂತಿಲ್ಲ ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿದೆ.

೨೦೨೨ರ ಆಗಸ್ಟ್‌ ೫ರ ಶುಕ್ರವಾರ ಈ ಮಹತ್ವದ ತೀರ್ಪು ನೀಡಿದ ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ವಿ.ಜಿ. ಅರುಣ್‌ ಅವರು ʼನಿವೃತ್ತಿ ವೇತನವು ಮುಂದೂಡಿಕೆಯಾಗಿರುವ ವೇತನ. ನಿವೃತ್ತಿ ವೇತನದ ಹಕ್ಕು ಭಾರತೀಯ ಸಂವಿಧಾನದ ೩೦೦ ಎ ವಿಧಿಯ ಅಡಿಯಲ್ಲಿ ಇರುವ ಆಸ್ತಿ ಹಕ್ಕಿಗೆ ಹೋಲುತ್ತದೆ ಎಂದು ಹೇಳಿದರು.

"ಪಿಂಚಣಿಯು ಇನ್ನು ಮುಂದೆ ಉದ್ಯೋಗದಾತರ ಇಚ್ಛೆ ಮತ್ತು ಆಸೆಗಳಿಗೆ ಅನುಗುಣವಾಗಿ ಪಾವತಿಸಬೇಕಾದ ವರದಾನವಲ್ಲ. ಪಿಂಚಣಿಯು ಮುಂದೂಡಿಕೆಯಾಗಿರುವ  ಸಂಬಳವಾಗಿದೆ, ಇದು ಸಂವಿಧಾನದ 300 ಎ ಯಂತೆ ಇರುವ ಆಸ್ತಿ ಹಕ್ಕನ್ನು ಹೋಲುತ್ತದೆ. ಪಿಂಚಣಿ ಹಕ್ಕು, ಮೂಲಭೂತ ಹಕ್ಕಲ್ಲದಿದ್ದರೆ, ಖಂಡಿತವಾಗಿಯೂ ಒಂದು ಸಾಂವಿಧಾನಿಕ ಹಕ್ಕು. ಕಾನೂನಿನ ಅಧಿಕಾರವನ್ನು ಹೊರತುಪಡಿಸಿ ನಿವೃತ್ತ ಉದ್ಯೋಗಿಯು ಈ ಹಕ್ಕಿನಿಂದ ವಂಚಿತರಾಗಲು ಸಾಧ್ಯವಿಲ್ಲ." ಎಂದು ತೀರ್ಪು ಹೇಳಿದೆ.

ರಾಜ್ಯ ಸರ್ಕಾರದ ಸಂಪೂರ್ಣ ಸ್ವಾಮ್ಯದ ನೋಂದಾಯಿತ ಸೊಸೈಟಿಯಾದ ಕೇರಳ ಬುಕ್ಸ್ ಅಂಡ್ ಪಬ್ಲಿಕೇಷನ್ಸ್ ಸೊಸೈಟಿಯ (ಕೆಬಿಪಿಎಸ್) ಹಾಲಿ ಮತ್ತು ನಿವೃತ್ತ ನೌಕರರು ಸಲ್ಲಿಸಿದ ಅರ್ಜಿಗಳ ಸಮೂಹದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ತೀರ್ಪು ನೀಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ವಿವಿಧ ನಿಬಂಧನೆಗಳ ಕಾಯಿದೆ ಮತ್ತು ಉದ್ಯೋಗಿಗಳ ಪಿಂಚಣಿ ಯೋಜನೆಗಳನ್ನು ಕೆಬಿಪಿಎಸ್ ಉದ್ಯೋಗಿಗಳಿಗೆ ಅನ್ವಯಿಸುವಂತೆ ಮಾಡಲಾಗಿದೆ ಎಂದು ಅದು ಹೇಳಿದೆ.

ಕೆಬಿಪಿಎಸ್‌ ಸಂಪೂರ್ಣವಾಗಿ ಸರ್ಕಾರದ ಒಡೆತನದಲ್ಲಿ ಇದ್ದರೂ ಸರ್ಕಾರಿ ನೌಕರರು ಮತ್ತು ಕೆಬಿಪಿಎಸ್‌ ನೌಕರರ ನಡುವಿನ ಸಂಬಳ ಮತ್ತು ಪಿಂಚಣಿಗಳಲ್ಲಿನ ಗಮನಾರ್ಹ ವ್ಯತ್ಯಾಸ ಇರುವುದನ್ನು ಕಾರ್ಮಿಕ ಸಂಘಟನೆಗಳು ಎತ್ತಿ ತೋರಿಸಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಮಿಕ ನ್ಯಾಯಾಲಯದ ನಿರ್ದೇಶನದಂತೆ, ಕೆಬಿಪಿಎಸ್ ನೌಕರರಿಗೆ ಪ್ರತ್ಯೇಕ ಪಿಂಚಣಿ ನಿಧಿಯನ್ನು ರಚಿಸುವ ಸಾಧ್ಯತೆಯ ಬಗ್ಗೆ ವರದಿ ಸಲ್ಲಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿತ್ತು.

ವರದಿಯು ಕೇರಳ ಸೇವಾ ನಿಯಮಗಳ ಭಾಗ III ರ ಅಡಿಯಲ್ಲಿ ಒದಗಿಸಲಾದ ಪಿಂಚಣಿ ಪಾವತಿಯನ್ನು ಸೂಚಿಸಿದೆ ಸರ್ಕಾರ ಮತ್ತು ರಾಜ್ಯದಿಂದ ಬಜೆಟ್ ಬೆಂಬಲದೊಂದಿಗೆ ಅಂತಿಮವಾಗಿ ಕೆಬಿಪಿಎಸ್‌ (KBPS) ನೌಕರರ ಕೊಡುಗೆ ಪಿಂಚಣಿ ಮತ್ತು ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2014 ಇವುಗಳನ್ನು ಪ್ರಕಟಿಸಲು ಮಂಜೂರಾತಿ ನೀಡಲಾಗಿತ್ತು..

ನ್ಯಾಯಾಲಯದಲ್ಲಿ ನಿವೃತ್ತ ನೌಕರರು ವಕೀಲರಾದ ಕಾಳೀಶ್ವರಂ ರಾಜ್ ಮತ್ತು ಟಿ.ಎಂ.ರಾಮನ್ ಕರ್ತಾ ಅವರ ಮೂಲಕ ವಾದ ಮಂಡಿಸಿದರು ಮತ್ತು ಪಿಂಚಣಿ ನಿಯಮಗಳಿಗೆ ಅನುಸಾರವಾಗಿ ನಿವೃತ್ತಿಯಾದ ದಿನಾಂಕದಿಂದ ಪೂರ್ಣ ಪಿಂಚಣಿ ಪಡೆಯಲು ನಿವೃತ್ತರು ಅರ್ಹರು ಎಂದು ವಕೀಲರು ವಾದಿಸಿದರು.

ಮತ್ತೊಂದೆಡೆ, ಹಾಲಿ ನೌಕರರು ವಕೀಲರಾದ ಪಿ. ರಾಮಕೃಷ್ಣನ್ ಮತ್ತು ಶೆರ್ರಿ ಜೆ. ಥಾಮಸ್ ಅವರ ಮೂಲಕ ಹಾಜರಾಗಿ, ಇಪಿಎಫ್ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಉಲ್ಲೇಖಿಸಿ ಪಿಂಚಣಿ ನಿಯಮಾವಳಿಗಳನ್ನು ಸೂಚಿಸುವ ಸರ್ಕಾರಿ ಆದೇಶವನ್ನು ರದ್ದುಗೊಳಿಸಬೇಕು ಎಂದು ಪ್ರತಿಪಾದಿಸಿದರು.

ಕೆಬಿಪಿಎಸ್ ಪರ ವಕೀಲೆ ಲತಾ ಆನಂದ್ ವಾದ ಮಂಡಿಸಿ, ಸೊಸೈಟಿಯು ಭಾರೀ ಲಾಭದಲ್ಲಿ ನಡೆಯುತ್ತಿಲ್ಲ, ಯಾವುದೇ ಸಂದರ್ಭದಲ್ಲೂ ಸೊಸೈಟಿಯಿಂದ ಬರುವ ಆದಾಯವನ್ನು ನಿವೃತ್ತ ನೌಕರರಿಗೆ ಪಿಂಚಣಿ ಪಾವತಿಗೆ ಬಳಸಲಾಗದು. ಈಗಾಗಲೇ ನೀಡಿದ ಕೊಡುಗೆಯನ್ನು ಇಪಿಎಫ್ ಸಂಸ್ಥೆ ಮರುಪಾವತಿಸಿದರೆ ಅಥವಾ ಸರ್ಕಾರದಿಂದ ಬರಬೇಕಾದ ದೊಡ್ಡ ಮೊತ್ತವನ್ನು ಪಾವತಿಸಿದರೆ ಮಾತ್ರ ಪೂರ್ಣ ಪಿಂಚಣಿ ಪಾವತಿಸಬಹುದು ಎಂದು ಹೇಳಿದರು.

ಪಿಂಚಣಿ ನಿಯಮಾವಳಿಗಳ ಪ್ರಕಾರ, ನೌಕರನು ತನ್ನ ನಿವೃತ್ತಿಯ ಮರುದಿನದಿಂದ ಪಿಂಚಣಿಗೆ ಅರ್ಹನಾಗುತ್ತಾನೆ. ಪಿಂಚಣಿದಾರರಿಗೆ ನ್ಯಾಯಸಮ್ಮತವಾಗಿ ಪಾವತಿಸಬೇಕಾದ ಮೊತ್ತಕ್ಕಿಂತ ಕಡಿಮೆ ಮೊತ್ತವನ್ನು ಪಾವತಿಸಲು ಉದ್ಯೋಗದಾತರಿಗೆ ಅನುವು ಮಾಡಿಕೊಡುವ ಯಾವುದೇ ನಿಬಂಧನೆಗಳನ್ನು ನಿಯಮಾವಳಿಗಳು ಒಳಗೊಂಡಿಲ್ಲ ಎಂದು ನ್ಯಾಯಾಲಯವು ವಿಶ್ಲೇಷಿಸಿತು.  

"ಪಿಂಚಣಿ ಮೂಲ ನಿಧಿಯ ಒಂದು ಗಮನಾರ್ಹ ಭಾಗವು ಇಪಿಎಫ್ ಸಂಸ್ಥೆಯಿಂದ ಮರುಪಾವತಿಸಬೇಕಾದ ಮೊತ್ತವನ್ನು ಒಳಗೊಂಡಿರುತ್ತದೆ ಎಂಬುದು ನಿಜವಿರಬಹುದು. ವಾಸ್ತವವಾಗಿ ಇದುವರೆಗೆ ಯಾವುದೇ ಮೊತ್ತವನ್ನು ಮರುಪಾವತಿ ಮಾಡಲಾಗಿಲ್ಲ ಎಂಬ ಅಂಶವೂ ವಿವಾದಿತವಾಗಿಲ್ಲ. ಆಗಲೂ, ಈ ಹಿನ್ನೆಲೆಯಲ್ಲಿ ನಿವೃತ್ತ ನೌಕರರಿಗೆ ಪಿಂಚಣಿ ನಿರಾಕರಿಸಬಹುದೇ ಎಂಬುದೇ ಪ್ರಶ್ನೆ”.

ಸುಪ್ರೀಂ ಕೋರ್ಟ್ ಪೂರ್ವನಿದರ್ಶನಗಳನ್ನು ಅವಲೋಕಿಸಿದ ನಂತರ, ನ್ಯಾಯಮೂರ್ತಿ ಅರುಣ್ ಅವರು ಪಿಂಚಣಿ ಬಾಕಿಯನ್ನು ಪೂರ್ಣವಾಗಿ ಪಾವತಿಸಲು ಕೆಬಿಪಿಎಸ್‌ (KBPS) ಬದ್ಧವಾಗಿದೆ ಎಂದು ಹೇಳಿದರು.

"ಪಿಂಚಣಿ ನಿಯಮಗಳನ್ನು ರೂಪಿಸಿದ ನಂತರ ಮತ್ತು ಇಪಿಎಫ್ ಪಿಂಚಣಿ ನಿಧಿಗೆ ಕೊಡುಗೆ ಪಾವತಿಯನ್ನು ನಿಲ್ಲಿಸಿದ ನಂತರ, ಹಣದ ಕೊರತೆಯನ್ನು ಸಮರ್ಥಿಸುವ ಮೂಲಕ ಸೊಸೈಟಿಯು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ."

ಆದ್ದರಿಂದ, ಕೆಬಿಪಿಎಸ್ ತನ್ನ ಲಾಭ ಅಥವಾ ಆದಾಯದಿಂದ ಅಗತ್ಯವಿರುವ ಹಣವನ್ನು ನೀಡಬೇಕು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತು. ಇಪಿಎಫ್ ಸಂಘಟನೆಯೊಂದಿಗಿನ ವಿವಾದ ಮತ್ತು ಇಪಿಎಫ್ ಕೊಡುಗೆಯನ್ನು ಮರಳಿ ಪಡೆಯುವಲ್ಲಿನ ವಿಳಂಬವು ನಿವೃತ್ತ ಉದ್ಯೋಗಿಗಳಿಗೆ ಅರ್ಹ ಪಿಂಚಣಿಗಳನ್ನು ಪಾವತಿಸದಿರುವುದಕ್ಕೆ ಸಕಾರಣವಾದ ಸ್ವೀಕಾರಾರ್ಹ ಕಾರಣವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟ ಪಡಿಸಿತು.

ಅದರಂತೆ ನಿವೃತ್ತ ಹಾಗೂ ಹಾಲಿ ನೌಕರರು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್‌ ಮಾನ್ಯ ಮಾಡಿತು.

ಇಪಿಎಫ್‌ ಪಿಂಚಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಮೇಲ್ಮನವಿಗಳ ಮೇಲಿನ ತನ್ನ ತೀರ್ಪನ್ನು ಸುಪ್ರೀಂಕೋರ್ಟ್‌ ತ್ರಿಸದಸ್ಯ ಪೀಠ ಕಾಯ್ದಿರಿಸಿದ ಬಳಿಕ ಕೇರಳ ಹೈಕೋರ್ಟ್‌ ಈ ತೀರ್ಪು ಬಂದಿರುವುದು ಗಮನಾರ್ಹವಾಗಿದೆ.

ಪ್ರಕರಣ:: ಅಭಿಲಾಷ್ ಕುಮಾರ್ ಆರ್. ವಿರುದ್ಧ ಕೇರಳ ಬುಕ್ಸ್ ಅಂಡ್ ಪಬ್ಲಿಕೇಷನ್ ಸೊಸೈಟಿ & ಆರ್ಸ್.

ತೀರ್ಪು:  5ನೇ ಆಗಸ್ಟ್ 2022 ಶುಕ್ರವಾರ.

No comments:

Advertisement