ನೇತ್ರದಾನ ಮೂಲಕ ಸಾರ್ಥಕತೆ ಪಡೆದ ಮನುಭಟ್
2022 ಆಗಸ್ಟ್ 13ರ ಶನಿವಾರ. ಅಂತಾರಾಷ್ಟ್ರೀಯ ಅಂಗಾಂಗದಾನದ ದಿನ. ಅಂಗಾಂಗ ದಾನಕ್ಕೆ ಪ್ರೇರೇಪಣೆ ಮೂಡಿಸಲೆಂದೇ ಇರುವ ದಿನ.
ಈ ಹೊತ್ತಿನಲ್ಲಿ ಈ ಹುಡುಗನನ್ನು ನೆನಪಿಸಿಕೊಳ್ಳಬೇಕು.
ಈತ ವಿಟ್ಲದ ಮನು ಭಟ್ ಪೂರ್ಲುಪಾಡಿ. ವಯಸ್ಸು 27 ವರ್ಷ. ಆದರೆ ಬುದ್ದಿ ಕೇವಲ
ಒಂದೂ ಮುಕ್ಕಾಲು ವರ್ಷದ ಮಗುವಿನದ್ದು. ಹೀಗಾಗಿ ಈತ ಪುಟ್ಟ ಬಾಲಕನೂ ಹೌದು, ಯುವಕನೂ ಹೌದು.
ಚಿಕ್ಕವನಾಗಿದ್ದಾಗ ಬಂದಿದ್ದ ಮಿದುಳು ಜ್ವರ ಈತನ ಬುದ್ದಿಯ ಬೆಳವಣಿಗೆಯನ್ನೇ
ಸ್ಥಗಿತಗೊಳಿಸಿತ್ತು. ಆತನ ಚಿಕಿತ್ಸೆಗಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೆ ಅದ್ಯಾವುದೂ ಪ್ರಯೋಜನವಾಗಲಿಲ್ಲ.
ಬದುಕಿ ಬಾಳಿದ ಅಷ್ಟೂ ಕಾಲ ನಿರಂತರವಾಗಿ ಅಮ್ಮ, ದೊಡ್ಡಮ್ಮ, ಅಜ್ಜಿ, ಚಿಕ್ಕಮ್ಮ, ಅಕ್ಕ, ಅಣ್ಣಂದಿರ ಕೈಕೂಸಾಗಿಯೇ ಬದುಕಿದ.
ಯಾರು ಬಂದರೂ ಸರಿ ಮುಗ್ಧ ನಗುವಿನಿಂದ ಗಮನ ಸೆಳೆಯುತ್ತಿದ್ದ ಈತ ಆಸುಪಾಸಿನ ಮಕ್ಕಳಿಗೆಲ್ಲ ಅಚ್ಚುಮೆಚ್ಚು. ಪ್ರತಿವರ್ಷವೂ ಹುಟ್ಟು ಹಬ್ಬ ಬಂದರೆ ಸಾಕು ಈ ಓರಗೆಯ ಮಕ್ಕಳೆಲ್ಲ ಒಂದಾಗಿ ಆತನ ಹುಟ್ಟು ಹಬ್ಬ ಆಚರಿಸುತ್ತಿದ್ದರು. ಸಂಭ್ರಮಿಸುತ್ತಿದ್ದರು. (ವಿಡಿಯೋ ನೋಡಿ)
1994ರ ಏಪ್ರಿಲ್ 24ರಂದು ಜನಿಸಿದ್ದ ಈತ 2022ರ ಜುಲೈ 18ರಂದು ಇಹಲೋಕ
ತ್ಯಜಿಸಿದ. ನಾಲ್ಕು ವರ್ಷಗಳ ಹಿಂದೆ ಹೆಚ್ಚು ಕಡಿಮೆ ತನ್ನಷ್ಟೇ ವಯಸ್ಸಿನಲ್ಲಿ ದೇವರ ಜೊತೆ ಸೇರಿಕೊಂಡ
ಪ್ರೀತಿಯ ಅಣ್ಣ ಅನುಪಕೃಷ್ಣನ ಜೊತೆ ಸೇರಿಕೊಂಡ. ನಾಲ್ಕು ವರ್ಷಗಳ ಹಿಂದೆ ಈತನ ಅಣ್ಣನೂ ಜುಲೈ ತಿಂಗಳ
5ರಂದು ಭಗವಂತನ ಮಡಿಲು ಸೇರಿದ್ದ.
ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದೇಹ ತ್ಯಾಗ ಮಾಡಿದ ಮನುವಿನ ಕಣ್ಣುಗಳು ಕುಟುಂಬ ಸದಸ್ಯರ ಆಶಯದಂತೆ
ಬೇರೊಬ್ಬರ ಬಾಳಿಗೆ ಬೆಳಕಾಗುವ ಸಲುವಾಗಿ ವೈದ್ಯರ ಬಳಿ ಸೇರಿದವು.
ನೇತ್ರ ದಾನದ ಮೂಲಕ ಮನುಭಟ್ ಜೀವನ ಸಾರ್ಥಕತೆ ಪಡೆಯಿತು.
ಅಂಗಾಂಗದಾನದ ಈದಿನ ಮನುವಿನ ಆತ್ಮಕ್ಕೆ ಶಾಂತಿ ಕೋರುವುದರ ಜೊತೆಗೆ ಆತನ
ಜೀವನ ಸಾರ್ಥಕವಾದುದಕ್ಕಾಗಿ ಗೌರವ ಸಲ್ಲಿಸೋಣ.
No comments:
Post a Comment