Monday, August 29, 2022

ಇಂದಿನ ಇತಿಹಾಸ History Today ಆಗಸ್ಟ್‌ 29

ಇಂದಿನ ಇತಿಹಾಸ History Today ಆಗಸ್ಟ್‌ 29

2022: ನವದೆಹಲಿ: ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಹೊಸ ಮಾಹಿತಿ ಆಧರಿಸಿ, 2016ರಲ್ಲಿ ನಡೆದಿರುವ ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ಬಗ್ಗೆ ವಿಚಾರಣೆಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ 2022 ಆಗಸ್ಟ್‌ 29ರ ಸೋಮವಾರ ತಿರಸ್ಕರಿಸಿತು. ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರನ್ನು ಒಳಗೊಂಡ ಪೀಠವು, ಈ ಹಿಂದಿನ ತ್ರಿಸದಸ್ಯ ಪೀಠವು ನೀಡಿರುವ ತೀರ್ಪುಗಳನ್ನು ಗಮನದಲ್ಲಿಟ್ಟುಕೊಂಡು ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗದು ಎಂದು ಹೇಳಿತು. “ಈ ಒಪ್ಪಂದದಲ್ಲಿ ಲಂಚದ ವ್ಯವಹಾರ ನಡೆದಿದೆ. ಇದನ್ನು ಸಿಬಿಐ ಮತ್ತು ಇ.ಡಿಯಿಂದ ತನಿಖೆ ಮಾಡಿಸಬಹುದು ಎಂದು ವಾದಿಸಿ ಅರ್ಜಿದಾರರಲ್ಲಿ ಒಬ್ಬರಾದ ಶರ್ಮಾ ಎಂಬುವವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

2019: ನವದೆಹಲಿ: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಭಾರತದ ಕ್ರಮದ ಬಳಿಕ ಪ್ರಧಾನಿ ಇಮ್ರಾನ್ ಖಾನರಿಂದ ಹಿಡಿದು ಪಾಕಿಸ್ತಾನದ ರಾಜಕೀಯ ನಾಯಕರು ನೀಡುತ್ತಿರುವ ’ಕಿವಿ ಕೊರೆಯುವ ಹೇಳಿಕೆಗಳಿಗೆ ಈದಿನ ಸುತ್ತಿಗೆಯಿಂದ ಬಡಿದ ಭಾರತ ’ಇವೆಲ್ಲವೂ ಬರಿಯ ಸುಳ್ಳು ಮತ್ತು ವಂಚನೆಯ ಅಬ್ಬರ ಎಂದು ಜರೆಯಿತು. ಈ ಮಧ್ಯೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ’ಕಾಶ್ಮೀರ ಯಾವಾಗ ಪಾಕಿಸ್ತಾನದ್ದಾಗಿತ್ತು?’ ಎಂದು ಪ್ರಶ್ನಿಸಿ ಅದಕ್ಕೆ  ಕಾಶ್ಮೀರದ ಮೇಲೆ ಸ್ಥಾನಾಧಿಕಾರವೇ (ಲೋಕಸ್ ಸ್ಟಾಂಡಿ) ಇಲ್ಲ ಎಂದು ಲೇಹ್‌ನಲ್ಲಿ ಹೇಳಿದರು.  ‘ಪರಿಸ್ಥಿತಿ ಕಳವಳಕಾರಿಯಾಗಿದೆ ಎಂದು ಹುಯಿಲೆಬ್ಬಿಸುವ ಉದ್ದೇಶದಿಂದ ಈ ಹೇಳಿಕೆಗಳನ್ನು ನೀಡಲಾಗುತ್ತಿದೆ. ಆದರೆ ಇವುಗಳು ಮೂಲ ವಾಸ್ತವದಿಂದ ದೂರವಾದ ಹೇಳಿಕೆಗಳು ಎಂದು ನುಡಿದ ಭಾರತ, ’ಭಾರತದ ಆಂತರಿಕ ವಿಷಯದ ಬಗ್ಗೆ ಪಾಕಿಸ್ತಾನಿ ನಾಯಕತ್ವ  ನೀಡುತ್ತಿರುವ ಈ ಬೇಜವಾಬ್ದಾರಿ ಹೇಳಿಕೆಗಳನ್ನು ನಾವು ಅತ್ಯುಗ್ರವಾಗಿ ಖಂಡಿಸುತ್ತೇವೆ ಎಂದು ಹೇಳಿತು. ತಮ್ಮ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ ಕುಮಾರ್ ಅವರು ’ಪಾಕಿಸ್ತಾನಿ ನಾಯಕರ ಕೆಲವು ಹೇಳಿಕೆಗಳು ಪ್ರತಿಕ್ರಿಯಿಸಲು ಕೂಡಾ ಯೋಗ್ಯತೆ ಇಲ್ಲದವು ಎಂದು ನುಡಿದರು.  ಭಾರತದಿಂದ ಖಂಡನೆಗೆ ಈಡಾಗಿರುವ ಪಾಕಿಸ್ತಾನದ ಪ್ರಚೋದನಕಾರೀ ಹೇಳಿಕೆಗಳಲ್ಲಿ ಭಾರತದಲ್ಲಿ ಹಿಂಸೆಯನ್ನು ಪ್ರಚೋದಿಸಲು ಜಿಹಾದ್‌ಗೆ ಕೊಟ್ಟ ಕರೆಯೂ ಸೇರಿದೆ ಎಂದು ರವೀಶ ಕುಮಾರ್ ಹೇಳಿದರು. ಖೈಬರ್ ಫಕ್ತೂನ್ಖಾ ಮುಖ್ಯಮಂತ್ರಿ ಮಹಮೂದ್ ಖಾನ್ ತಮ್ಮ ಭಾಷಣದಲ್ಲಿ ಕಾಶ್ಮೀರಕ್ಕಾಗಿ ಔಪಚಾರಿಕ ’ಜಿಹಾದ್ ಘೋಷಿಸಿದರೆ ’ನಾನು ನನ್ನ ಜನರ ಕಮಾಂಡರ್ ಆಗಲು ಸಿದ್ಧ ಎಂದು ಘೋಷಿಸಿದ್ದರು. ರವೀಶ ಕುಮಾರ್ ಅವರು ಯಾವುದೇ ಹೇಳಿಕೆಯನ್ನು ನಿರ್ದಿಷ್ಟವಾಗಿ ಗುರುತಿಸಲಿಲ್ಲ. ’ಹೇಳಿಕೆಗಳು ಹಲವಾರು ಇವೆ. ಸುಮಾರು ೪೦-೫೦ ಹೇಳಿಕೆಗಳು ಮತ್ತು ಟ್ವೀಟ್‌ಗಳು ಇವುಗಳಲ್ಲಿ ಸೇರಿವೆ ಎಂದು ಅವರು ನುಡಿದರು.  ‘ಈ ಬೇಜವಾಬ್ದಾರೀ ಹೇಳಿಕೆಗಳ ಮುಖ್ಯ ಉದ್ದೇಶ ಪರಿಸ್ಥಿತಿ ಕಳವಳಕಾರಿಯಾಗಿದೆ ಎಂಬಂತಹ ಭಾವನೆ ಮೂಡಿಸುವುದು ಮತ್ತು  ಮತ್ತು ಅದಕ್ಕೆ ಅನುಗುಣವಾದ ಪರಿಸರ ಸೃಷ್ಟಿಸುವುದು. ಆದರೆ ನೈಜ ವಾಸ್ತವ ಸಂಪೂರ್ಣ ಭಿನ್ನವಾಗಿದೆ ಎಂದು ಕುಮಾರ್ ನುಡಿದರು. ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಅವರೇ ಸ್ವತಃ ಈ ಕಸರತ್ತಿನಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದಾರೆ. ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ೩೭೦ನೇ ವಿಧಿಯನ್ನು ಭಾರತ ರದ್ದು ಪಡಿಸಿದ ಬಳಿಕ, ಭಾರತವು ಗಡಿಯಾಚೆಯ ಕ್ರಮ ಕೈಗೊಳ್ಳಲಿದೆ ಎಂದು ಬೊಬ್ಬಿರಿಯುವ ಮೂಲಕ ಖಾನ್ ಅವರು ಹುಯಿಲೆಬ್ಬಿಸುವ ಕಸರತ್ತು ಆರಂಭಿಸಿದ್ದರು. ತೀರಾ ಇತ್ತೀಚೆಗೆ, ಒಂದು ವಾರದ ಹಿಂದೆ ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನ ಒಂದರಲ್ಲಿ ಇಮ್ರಾನ್ ಖಾನ್ ಅವರು ಅಣ್ವಸ್ತ ಘರ್ಷಣೆಯ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದರು. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮಾಡಿದ ತಮ್ಮ ಟಿವಿ ಭಾಷಣದಲ್ಲೂ ಅವರು ಈ ಅಂಶವನ್ನು ಪುನರುಚ್ಚರಿಸಿದ್ದರು. ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ವಿಷಯವನ್ನಾಗಿ ಮಾಡಲು ಪಾಕಿಸ್ತಾನವು ಮಿಲಿಟರಿ ಹಾಗೂ ರಾಜತಾಂತ್ರಿಕ ಮಟ್ಟದ ದ್ವಿಮುಖ ಯತ್ನವನ್ನು ನಡೆಸುತ್ತಿದೆ ಮತ್ತು ಅದನ್ನು ಪರಿಣಾಮಕಾರಿಯನ್ನಾಗಿ ಮಾಡುವ ಸಲುವಾಗಿ ಉಭಯ ರಾಷ್ಟ್ರಗಳ ಮಧ್ಯೆ ಅಣ್ವಸ್ತ್ರ ಸಮರ ನಡೆಯಬಹುದು ಎಂಬ ಹುಯಿಲೆಬ್ಬಿಸುತ್ತಿದೆ ಎಂದು ಭಾರತ ನಂಬಿದೆ.  ಪಾಕಿಸ್ತಾನದ ಹೇಳಿಕೆಗಳನ್ನು ಈದಿನ  ಖಂಡಿಸಿದ ಭಾರತವು, ’ಪಾಕಿಸ್ತಾನದ ಈ ಯತ್ನ ಸಫಲವಾಗುವುದಿಲ್ಲ ಎಂದು ಒತ್ತಿ ಹೇಳಿತು.  ‘ಜಗತ್ತು ಪಾಕಿಸ್ತಾನದ ಆಟವನ್ನು ಗುರುತಿಸಿದೆ ಮತ್ತು ಅದಕ್ಕೆ ಬಲಿ ಬೀಳುವುದಿಲ್ಲ ಎಂಬುದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳುವ ಅಗತ್ಯ ಇದೆ. ಬರಿಯ ಸುಳ್ಳುಗಳು ಮತ್ತು ವಂಚನೆಗಳನ್ನೇ ನೆಚ್ಚಿಕೊಂಡ ಪಾಕಿಸ್ತಾನದ ಪ್ರಚೋದನಾಕಾರಿ ಅಬ್ಬರವನ್ನು ಜಗತ್ತು ಈಗಾಗಲೇ ನೋಡಿದೆ ಎಂದುಜ ರವೀಶ ಕುಮಾರ್ ಹೇಳಿದರು. ಗುಜರಾತಿನ ಬಂದರುಗಳನ್ನು ಗುರಿಯಾಗಿಡಲು ಪಾಕಿಸ್ತಾನ ಮೂಲದ ಭಯೋತ್ಪಾದಕರು ಯತ್ನಿಸುತ್ತಿದ್ದಾರೆ ಎಂಬ ಗುಪ್ತಚರ ವರದಿಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯವು, ’ಪಾಕಿಸ್ತಾನವು ಭಯೋತ್ಪಾದನೆಯನ್ನು ದೇಶದ ನೀತಿಯ ಅಸ್ತ್ರವನ್ನಾಗಿ ಮಾಡಿಕೊಂಡಿರುವುದು ಸರ್ಕಾರಕ್ಕೆ ದೀರ್ಘ ಕಾಲದಿಂದಲೇ ಗೊತ್ತಿದೆ. ಪಾಕಿಸ್ತಾನವು ಸಹಜ ನೆರೆಹೊರೆಯವರಂತೆ ವರ್ತನೆ ಆರಂಭಿಸಿಲು ಇದೀಗ ಸಕಾಲ ಎಂದು ಹೇಳಿತು.  ‘ಸಹಜ ನೆರೆಹೊರೆಯವರಂತೆ ವರ್ತಿಸಲು ಆರಂಭಿಸುವುದು ಅವರಿಗೆ (ಪಾಕಿಸ್ತಾನಕ್ಕೆ) ಒಳ್ಳೆಯದು. ಸಹಜ ನೆರೆಹೊರೆಯವರು ಏನು ಮಾಡುತ್ತಾರೆ?  ನೆರೆಯ ದೇಶಕ್ಕೆ ಭಯೋತ್ಪಾದಕರನ್ನು ನುಗ್ಗಿಸುವುದಿಲ್ಲ. ಸಹಜ ಮಾತುಕತೆ, ಸಹಜ ವ್ಯಾಪಾರ ನಡೆಸುತ್ತಾರೆ. ಆದರೆ ಪಾಕಿಸ್ತಾನದ ಕಡೆಯಿಂದ ಇಂತಹ ವರ್ತನೆ ಕಂಡು ಬರುತ್ತಿಲ್ಲ ಎಂದು ರವೀಶ ಕುಮಾರ್ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬುದಾಗಿ ಆಪಾದಿಸಿ ವಿಶ್ವಸಂಸ್ಥೆಗೆ ಪಾಕಿಸ್ತಾನವು ಬರೆದಿರುವ ಪತ್ರಕ್ಕೆ, ಅದರ ಒಕ್ಕಣೆಯನ್ನು ಬರೆಯಲಾಗಿರುವ ಕಾಗದದ ಚೂರಿನ ಬೆಲೆಯೂ ಇಲ್ಲ. ಪ್ರತಿಕ್ರಿಯಿಸುವ ಮೂಲಕ ಅದಕ್ಕೆ ಬೆಲೆ ತಂದುಕೊಡಲು ಬಯಸುವುದಿಲ್ಲ ಎಂದು ರವೀಶ ಕುಮಾರ್ ನುಡಿದರು.  ಈ ಮಧ್ಯೆ, ಲೇಹ್‌ನಲ್ಲಿ ಡಿಆರ್‌ಡಿಒ ಕಾರ್‍ಯಕ್ರಮದಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ’೩೭೦ನೇ ವಿಧಿ ರದ್ಧತಿಯನ್ನು ಅಂತಾರಾಷ್ಟ್ರೀಯ ವಿಷಯವನ್ನಾಗಿ ಮಾಡುವ ಪಾಕಿಸ್ತಾನದ ಯತ್ನಗಳಿಗೆ ಯಾವುದೇ ರಾಷ್ಟ್ರದ ಬೆಂಬಲವೂ ಇಲ್ಲ, ಏಕೆಂದರೆ ಅದಕ್ಕೆ ಕಾಶ್ಮೀರದ ವಿಷಯದಲ್ಲಿ ಸ್ಥಾನಾಧಿಕಾರವೇ (ಲೋಕಸ್ ಸ್ಟಾಂಡಿ) ಇಲ್ಲ ಎಂದು ಹೇಳಿದರು. ಭಯೋತ್ಪಾದನೆಯನ್ನು ಬಳಸಿ ಭಾರತವನ್ನು ಅಸ್ಥಿರಗೊಳಿಸಲು ನಿರಂತರವಾಗಿ ಪಾಕಿಸ್ತಾನವು ಯತ್ನಿಸುತ್ತಿರುವಾಗ ಭಾರತವು ಅದರೊಂದಿಗೆ ಮಾತುಕತೆ ನಡೆಸುವುದು ಹೇಗೆ ಸಾಧ್ಯ? ಎಂದು ಸಿಂಗ್ ಪ್ರಶ್ನಿಸಿದರು.  ಭಾರತವು ಪಾಕಿಸ್ತಾನದೊಂದಿಗೆ ಒಳ್ಳೆಯ ಹೊರೆಹೊರೆ ಬಾಂಧವ್ಯ ಇಟ್ಟುಕೊಳ್ಳಲು ಬಯಸಿದೆ, ಆದರೆ ಭಾರತಕ್ಕೆ ಭಯೋತ್ಪಾದನೆ ರಫ್ತು ಮಾಡುವ ಚಾಳಿಯನ್ನು ಅದು ಮೊದಲು ನಿಲ್ಲಿಸಬೇಕು ಎಂದು ಗೃಹ ಸಚಿವರು ಹೇಳಿದರು. ಪಾಕಿಸ್ತಾನಕ್ಕೆ ಕಾಶ್ಮೀರ ವಿಚಾರದಲ್ಲಿ ಯಾವುದೇ ಸ್ಥಾನಾಧಿಕಾರ (ಲೋಕಸ್ ಸ್ಟಾಂಡಿ) ಇಲ್ಲ ಎಂದು ಅವರು ನುಡಿದರು.   ‘ಕಾಶ್ಮೀರವು ಯಾವಾಗ ಅದಕ್ಕೆ ಸೇರಿತ್ತು ಎಂಬುದಾಗಿ ನಾನು ಪಾಕಿಸ್ತಾನವನ್ನು ಪ್ರಶ್ನಿಸಬಯಸುತ್ತೇನೆ. ಕಾಶ್ಮೀರವು ಯಾವತ್ತೂ ಭಾರತದ ಭಾಗವಾಗಿಯೇ ಇತ್ತು ಎಂದು ಅವರು ಹೇಳಿದರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದೌರ್ಜನ್ಯಗಳನ್ನು ನಿಲ್ಲಿಸುವತ್ತ ಪಾಕಿಸ್ತಾನ ಮೊದಲು ಗಮನ ಹರಿಸಬೇಕು ಎಂದು ಕೇಂದ್ರ ಸಚಿವರು ನುಡಿದರು.  ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರು ತಮ್ಮ ಜೊತೆಗಿನ ದೂರವಾಣಿ ಸಂಭಾಷಣೆ ವೇಳೆಯಲ್ಲಿ ’೩೭೦ನೇ ವಿಧಿ ರದ್ದು ವಿಚಾರವು ಭಾರತದ ಆಂತರಿಕ ವಿಷಯ ಎಂಬುದಾಗಿ ಹೇಳಿದ್ದಾರೆ ಎಂದು ರಾಜನಾಥ್ ಸಿಂಗ್ ವಿವರಿಸಿದರು. ಕಾಶ್ಮೀರಕ್ಕೆ ಸಂಬಂಧಿಸಿದ ಪ್ರಚಲಿತ ವಿಷಯದಲ್ಲಿ ಯಾವ ರಾಷ್ಟ್ರವೂ ಪಾಕಿಸ್ತಾನದ ಜೊತೆಗೆ ಇಲ್ಲ ಎಂದು ಸಿಂಗ್ ಹೇಳಿದರು. ಅಮೆರಿಕದ ಎಚ್ಚರಿಕೆ: ಈ ಮಧ್ಯೆ, ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರು ಗುರುವಾರ ಪಾಕಿಸ್ತಾನಕ್ಕೆ ನೀಡಿದ ಪರೋಕ್ಷ ಎಚ್ಚರಿಕೆಯೊಂದರಲ್ಲಿ ’ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವಂತೆ ಪಾಕಿಸ್ತಾನಕ್ಕೆ  ಸೂಚಿಸಿತು. ಜಮ್ಮು- ಕಾಶ್ಮೀರವು ಶೀಘ್ರದಲ್ಲೇ ಸಹಜ ರಾಜಕೀಯ ಸ್ಥಾನಮಾನಕ್ಕೆ ಹಿಂತಿರುಗಲಿದೆ ಎಂಬುದಾಗಿ ಪ್ರಧಾನಿ ಮೋದಿ ಅವರು ನೀಡಿರುವ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಕಾಶ್ಮೀರ ಮತ್ತು ಇತರ ವಿಚಾರಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನೇರ ಮಾತುಕತೆಗೆ ಬೆಂಬಲ ನೀಡುವುದನ್ನು ನಾವು ಮುಂದುವರೆಸುತ್ತೇವೆ ಎಂದು ವಕ್ತಾರ ನುಡಿದರು.

2019: ನವದೆಹಲಿ: ಯುದ್ಧೋನ್ಮತ್ತ  ಪಾಕಿಸ್ತಾನವು ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಖಂಡಾಂತರ ಘಜ್ನವಿ ಕ್ಷಿಪಣಿಯ ರಾತ್ರಿ ತರಬೇತಿ ಪರೀಕ್ಷೆಯನು  ಈದಿನ  ನಸುಕಿನಲ್ಲಿ ನಡೆಸಿತು. ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ಸಮಸ್ಯೆಯನ್ನಾಗಿ ಮಾಡುವ ತನ್ನ ಯತ್ನಗಳ ನಡುವೆಯೇ ಪಾಕಿಸ್ತಾನ ಅಣ್ವಸ್ತ್ರ ಸಾಗಣೆ ಶಕ್ತಿಯನ್ನು ಹೊಂದಿರುವಕ್ಷಿಪಣಿ ಪರೀಕ್ಷೆಯನ್ನು ನಡೆಸಿತು. ಕ್ಷಿಪಣಿ ಉಡಾವಣೆ ಯಶಸ್ವಿಯಾಗಿದೆ ಎಂದು ಪಾಕಿಸ್ತಾನ ಸಶಸ್ತ್ರ ಪಡೆಗಳ ವಕ್ತಾರ ಮೇಜರ್ ಜನರಲ್ ಅಸಿಫ್ ಗಫೂರ್ ಟ್ವೀಟ್ ಮಾಡಿದರು.  ಘಜ್ನವಿ ಖಂಡಾಂತರ ಕ್ಷಿಪಣಿಯು ೨೯೦ ಕಿ.ಮೀ ದೂರದವರೆಗೆ ಹಲವಾರು ಮಾದರಿಯ ಸಿಡಿತಲೆಗಳನ್ನು ತಲುಪಿಸುವ ಸಾಮರ್ಥ್ಯ ಹೊಂದಿದೆ ಎಂದು ಮಿಲಿಟರಿ ವಕ್ತಾರರು ತಿಳಿಸಿದರು.  ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಮತ್ತು ಪ್ರಧಾನಿ ಇಮ್ರಾನ್ ಖಾನ್ ಅವರು ಈ ಸಾಧನೆಗಾಗಿ ವಿಜ್ಞಾನಿಗಳ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ರಾಷ್ಟ್ರವನ್ನು ಅಭಿನಂದಿಸಿದ್ದಾರೆ ಎಂದು ಗಫೂರ್  ಹೇಳಿದರು.  ಪಾಕಿಸ್ತಾನವು ಮಿಲಿಟರಿ ಕ್ಷಿಪಣಿ ಉಡಾವಣೆಯ ೩೦ ಸೆಕೆಂಡುಗಳ ವಿಡಿಯೋ ತುಣುಕನ್ನು ಮತ್ತು ಉಡಾವಣೆಗೆ ಮುನ್ನ ಕ್ಷಿಪಣಿಯೊಂದಿಗೆ ಪೋಸ್ ನೀಡಿದ ಮಿಲಿಟರಿ ಅಧಿಕಾರಿಗಳ ಸಮೂಹ ಚಿತ್ರವನ್ನು ಕೂಡಾ ಟ್ವೀಟ್ ಮಾಡಿತು.  ಕಾಶ್ಮೀರ ಸಮಸ್ಯೆಯನ್ನು ರಾಜತಾಂತ್ರಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ವಿಷಯವಾಗಿ ಮಾಡುವ ಹಾಗೂ ಉಭಯ ದೇಶಗಳ ನಡುವೆ ಪರಮಾಣು ಯುದ್ಧ ಭೀತಿಯನ್ನು ಹೆಚ್ಚಿಸುವ ದ್ವಿಮುಖ ಪ್ರಯತ್ನದ ಭಾಗವಾಗಿ ಈ ಕ್ಷಿಪಣಿ ಪರೀಕ್ಷೆ ನಡೆದಿದೆ ಎಂದು ರಾಜತಾಂತ್ರಿಕ ವಲಯಗಳು ಭಾವಿಸಿದವು.

2019: ನವದೆಹಲಿ: ಭಾರತೀಯ ಸಂವಿಧಾನದ ಅಡಿಯಲ್ಲಿ ನೀಡಲಾಗಿದ್ದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಬಳಿಕ, ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆಪಾದಿಸಿ ವಿಶ್ವಸಂಸ್ಥೆಗೆ ಬರೆದ ತನ್ನ ಪತ್ರದಲ್ಲಿ ಪಾಕಿಸ್ತಾನವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಸರನ್ನು ಮಾತ್ರವೇ ಅಲ್ಲ, ಹರಿಯಾಣದ ಮುಖ್ಯಮಂತ್ತಿ ಹಾಗೂ ಬಿಜೆಪಿ ನಾಯಕ ಮನೋಹರಲಾಲ್ ಖಟ್ಟರ್ ಅವರ ಹೆಸರನ್ನು ಕೂಡಾ ಉಲ್ಲೇಖಿಸಿತ್ತು. ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಝಾರಿ ಅವರು ಬರೆದಿರುವ ಪತ್ರದಲ್ಲಿ ಹರಿಯಾಣ ಮುಖ್ಯಮಂತ್ರಿಯವರು ಆಗಸ್ಟ್ ೧೦ರಂದು ’ಕಾಶ್ಮೀರವು ಈಗ ಮುಕ್ತವಾಗಿದ್ದು ಅಲ್ಲಿನ ವಧುಗಳನ್ನು ಇಲ್ಲಿಗೆ ತರಬಹುದು ಎಂಬುದಾಗಿ ಹೇಳಿಕೆ ನೀಡಿದ್ದರು ಎಂದು ಉಲ್ಲೇಖ ಮಾಡಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು. ಮನೋಹರ ಲಾಲ್ ಖಟ್ಟರ್ ಅವರು ಬಳಿಕ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂಬುದಾಗಿ ಹೇಳಿ ಹೇಳಿಕೆಯ ಸಂದರ್ಭದ ಪೂರ್ತಿ ವಿಡಿಯೋವನ್ನು ಟ್ವೀಟ್ ಮಾಡಿದ್ದರು.  ಈ ತಿಂಗಳ ಆದಿಯಲ್ಲಿ ರಾಹುಲ್ ಗಾಂಧಿಯವರು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಬಗ್ಗೆ ಕೇಂದ್ರದಿಂದ ಮಾಹಿತಿ ಕೋರಿದ್ದರು. ’ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂಬ ಕೆಲವು ವರದಿಗಳು ಬಂದಿವೆ. ಲಡಾಖ್ ಹಾಗೂ ಜಮ್ಮು- ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಭಾರತದ ಪ್ರಧಾನಿ ಮತ್ತು ಸರ್ಕಾರ ಅತ್ಯಂತ ಪಾರದರ್ಶಕವಾಗಿರಬೇಕಾದದ್ದು ಅತಿ ಮುಖ್ಯ ಎಂದು ರಾಹುಲ್ ಹೇಳಿದ್ದರು.  ಪಾಕಿಸ್ತಾನವು ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿಯವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿದ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ವಾಕ್ ಸಮರ ನಡೆದಿತ್ತು. ’ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬುದಾಗಿ ಕಾಂಗ್ರೆಸ್ ಮತ್ತು  ರಾಹುಲ್ ಗಾಂಧಿ ಟ್ವೀಟ್ ಮಾಡಿದರೆ, ಬಿಜೆಪಿಯ ಅದನ್ನು  ’ಉಲ್ಟಾ (ಯು ಟರ್ನ್) ಎಂಬುದಾಗಿ ಹೇಳಿ ಟೀಕಿಸಿತ್ತು.  ‘ಕಾಶ್ಮೀರ ಕಣಿವೆಯ ಪರಿಸ್ಥಿತಿ ಬಗ್ಗೆ ತಮ್ಮ ಬೇಜವಾಬ್ದಾರಿ ಹೇಳಿಕೆ ಮೂಲಕ ಕಾಂಗ್ರೆಸ್ ನಾಯಕ ರಾಷ್ಟ್ರಕ್ಕೆ ಅಪಮಾನ ಮಾಡಿದ್ದಾರೆ ಎಂದು ಹೇಳಿದ ಕೇಂದ್ರ, ’ಪಾಕಿಸ್ತಾನವು ವಿಶ್ವಸಂಸ್ಥೆಗೆ ಭಾರತದ ವಿರುದ್ಧ ಸಲ್ಲಿಸಿದ ತನ್ನ ಅರ್ಜಿಯಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಬಳಸಿಕೊಂಡಿದೆ ಎಂದೂ ಸರ್ಕಾರ ಒತ್ತಿ ಹೇಳಿತ್ತು. ದೇಶಾದ್ಯಂತ ವ್ಯಕ್ತವಾದ ತೀವ್ರ ಟೀಕೆಗಳ ಬಳಿಕ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯಿಂದ ಹಿಂದಿನ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ ಎಂದು ಬಿಜೆಪಿ ವಕ್ತಾರ ಪ್ರಕಾಶ ಜಾವಡೇಕರ್ ಹೇಳಿದ್ದರು.  ‘ಕಣಿವೆಯಲ್ಲಿನ ಹಿಂಸಾಚಾರ ಮತ್ತು ಸಾವುಗಳಿಗೆ ಸಂಭವಿಸಿದ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಪಾಕಿಸ್ತಾನವು ಭಾರತದ ವಿರುದ್ಧ ವಿಶ್ವಸಂಸ್ಥೆಗೆ ಸಲ್ಲಿಸಿದ ಅರ್ಜಿಯಲ್ಲಿ ಬಳಕೆ ಮಾಡಿಕೊಂಡಿದೆ. ’ಕಾಶ್ಮೀರದಲ್ಲಿನ ಹಿಂಸಾಚಾರದ ಕೃತ್ಯಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಂತಹ ಪ್ರಮುಖ ರಾಜಕಾರಣಿಗಳೂ ಒಪ್ಪಿಕೊಂಡಿದ್ದಾರೆ ಎಂದು ಜಾವಡೇಕರ್ ಹೇಳಿದ್ದರು.  ಕೇಂದ್ರ ಸರ್ಕಾರವು ರಾಷ್ಟ್ರಪತಿ ಆದಿ ಸೂಚನೆ ಮೂಲಕ ಆಗಸ್ಟ್ ೫ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸುವುದರ ಜೊತೆಗೆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು.

2019: ನವದೆಹಲಿ:  ಐಎನ್‌ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿದೇರ್ಶನಾಲಯದ ಬಂಧನದಿಂದ ರಕ್ಷಣೆ ಕೋರಿ ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಸಲ್ಲಿಸಿರುವ ಅರ್ಜಿಯ ಸಂಬಂಧ ಸೆಪ್ಟೆಂಬರ್ ೫ರಂದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸುಪ್ರೀಂಕೋರ್ಟ್ ತಿಳಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ ವಶದಲ್ಲಿ ತನಿಖೆ ಎದುರಿಸುತ್ತಿರುವ ಮಾಜಿ ಸಚಿವರು, ಜಾರಿ ನಿರ್ದೇಶನಾಯದ ಬಂಧನಕ್ಕೆ ಒಳಗಾಗದಂತೆ ಒಂದು ವಾರದ ಮಧ್ಯಂತರ ರಕ್ಷಣೆ ಪಡೆದರು.  ತಮ್ಮನ್ನು ಸಿಬಿಐ ವಶಕ್ಕೆ ನೀಡಿದ ಆದೇಶವನ್ನು ಪ್ರಶ್ನಿಸಿ ಚಿದಂಬರಂ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು  ಸೆಪ್ಟೆಂಬರ್ ೨ರ ಸೋಮವಾರ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿತು. ಇದಕ್ಕೆ ಮುನ್ನ ಈ ವಾರಾರಂಭದಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ಚಿದಂಬರಂ ಅವರನ್ನು ಪ್ರಶ್ನಿಸುವ ಸಲುವಾಗಿ ಶುಕ್ರವಾರದವರೆಗೆ ವಶದಲ್ಲಿ ಇಟ್ಟುಕೊಳ್ಳಲು ಅನುಮತಿ ನೀಡಿತ್ತು.  ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ತಮ್ಮನ್ನು ಬಂಧಿಸದಂತೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಚಿದಂಬರಂ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರನ್ನು ಒಳಗೊಂಡ  ಚಿದಂಬರಂ ಅವರ ವಕೀಲರ ತಂಡವು  ಮಾಜಿ ಸಚಿವರ ವಿರುದ್ಧ ಜಾರಿ ನಿರ್ದೇಶನಾಲಯದ ಬಳಿ ಯಾವುದೇ ನೈಜ ಸಾಕ್ಷ್ಯಾಧಾರ ಇಲ್ಲ  ಎಂದು ವಾದಿಸಿತು. ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ಚಿದಂಬರಂ ವಕೀಲರ ತಂಡದ ಪ್ರತಿಪಾದನೆಯನ್ನು ತಿರಸ್ಕರಿಸಿ, ತನಿಖೆ ಸಂಸ್ಥೆಗೆ ಚಿದಂಬರಂ ಅವರು ವಿದೇಶದಲ್ಲಿ ಆಸ್ತಿಗಳನ್ನು ಹೊಂದಿರುವ ಬಗೆಗಿನ ನಿರ್ದಿಷ್ಟ ಮಾಹಿತಿಗಳು ಬಂದಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.  ಸಿಬಿಐ ಚಿದಂಬರಂ ಅವರನ್ನು ಆಗಸ್ಟ್ ೨೧ರಂದು ಬಂಧಿಸಿತ್ತು.. ಈದಿನದ ವಿಚಾರಣಾ ಕಲಾಪದ ವೇಳೆಯಲ್ಲಿ ಸುಪ್ರೀಂಕೋರ್ಟ್ ಪೀಠವು ಜಾರಿ ನಿರ್ದೇಶನಾಲಯಕ್ಕೆ ತನ್ನ ಬಳಿ ಇರುವ ಮಾಹಿತಿಯನ್ನು ಮೊಹರಾದ ಲಕೋಟೆಯಲ್ಲಿ ನ್ಯಾಯಾಲಯದ ಪರಾಮರ್ಶೆಗಾಗಿ ಸಲ್ಲಿಸುವಂತೆ ನಿರ್ದೇಶಿಸಿತು. ಇದಕ್ಕೆ ಮುನ್ನ ಮೊಹರಾದ ಲಕೋಟೆಯಲ್ಲಿ ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸುವುದನ್ನು  ವಕೀಲ ಕಪಿಲ್ ಸಿಬಲ್ ಅವರು ವಿರೋಧಿಸಿದರು. ’ಪ್ರಚಂಡ ಅಧಿಕಾರದ ಅಗಾಧತೆಯನ್ನು ನೋಡಿ. ಜಾರಿ ನಿರ್ದೇಶನಾಲಯವು ಮುಂದಿನ ನಾಲ್ಕು ವರ್ಷಗಳಕಾಲ ದೂರನ್ನೇ ಸಲ್ಲಿಸದಿರಬಹುದು ಮತ್ತು ಜಾಮೀನು ಅರ್ಜಿಯನ್ನು ವಿರೋಧಿಸಲು ತನಿಖೆ ಇನ್ನೂ ನಡೆಯುತ್ತಿದೆ ಎಂದು ಪ್ರತಿಪಾದಿಸುತ್ತಾ ಮೊಹರಾದ ಲಕೋಟೆಯಲ್ಲಿ ದಾಖಲೆಗಳನ್ನು ನೀಡಬಹುದು. ವ್ಯಕ್ತಿಯೊಬ್ಬನ ಹಣೆಬರಹ ನಿರ್ಧರಿಸಿಲು ಇಂತಹ ವಿಧಾನಕ್ಕೆ ಅವಕಾಶ ನೀಡಬಹುದೇ?’ ಎಂದು ಸಿಬಲ್ ಪ್ರಶ್ನಿಸಿದರು.  ‘ನನ್ನನ್ನು ಬಂಧಿಸಬಾರದು ಎಂದು ನಾನು ಹೇಳುತ್ತಿಲ್ಲ. ಅವರು ನನ್ನನ್ನು ಕರೆದರು, ಆದರೆ ದಾಖಲೆಗಳನ್ನು ನನ್ನ ಮುಂದಿಡಲಿಲ್ಲ. ಮತ್ತು ನಾನು ಜಾರಿಕೆಯ ಪ್ರವೃತ್ತಿ ತೋರುತ್ತಿರುವ ಕಾರಣ ಹಾಗೂ ಸಹರಿಸದೇ ಇರುವ ಕಾರಣ ನನ್ನನ್ನು ಬಂಧಿಸಬಹುದು ಎಂದು  ನ್ಯಾಯಮೂರ್ತಿಗಳು ಹೇಳುತ್ತಾರೆ. ಇದನ್ನು ಪರೀಕ್ಷಿಸಿ ಎಂದು ಸಿಬಲ್ ಕೋರಿದರು. ಬಂಧಿಸಲು ಏನಾದರೂ ಕಾರಣ ಬೇಕು ಎಂದು ಹೇಳಿದ ಸಿಬಲ್ ’ಚಿದಂಬರಂ ಹೆಸರಿನಲ್ಲಿ ಇರುವ ಒಂದೇ ಒಂದು ಬೇನಾಮಿ ಆಸ್ತಿಯನ್ನು ತೋರಿಸಿ ಎಂದು ಜಾರಿ ನಿರ್ದೇಶನಾಲಯಕ್ಕೆ ಸವಾಲು ಹಾಕಿದರು. ಒಂದೇ ಒಂದು ಆಸ್ತಿ ತೋರಿಸಿದರೆ ನಾನು ಹಿಂದೆ ಸರಿಯುತ್ತೇನೆ ಎಂದು ಸಿಬಲ್ ಹೇಳಿದರು. ಚಿದಂಬರಂ ಬಂಧನಕ್ಕೆ ಇಂದ್ರಾಣಿ ಮುಖರ್ಜಿ ಸಂತಸ: ಈಮಧ್ಯೆ, ತನ್ನ ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿ ಇರುವ ಹಾಗೂ ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿರುವ ಇಂದ್ರಾಣಿ ಮುಖರ್ಜಿ ಅವರು ಗುರುವಾರ ಮಾಜಿ ಸಚಿವ ಪಿ. ಚಿದಂಬರಂ ಬಂಧನಕ್ಕೆ ಸಂತಸ ವ್ಯಕ್ತ ಪಡಿಸಿದರು.   ‘ಚಿದಂಬರಂ ಅವರು ಬಂಧಿತರಾಗಿವುದಕ್ಕೆ ನನಗೆ ಸಂತಸವಾಗಿದೆ. ನಾನು ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದ್ದೇನೆ ಎಂದು ನುಡಿದ ಇಂದ್ರಾಣಿ, ಕಾರ್ತಿ ಚಿದಂಬರಂ ಅವರಿಗೆ ನೀಡಲಾಗಿರುವ ಜಾಮೀನು ಕೂಡಾ ರದ್ದಾಗಲಿ ಎಂದು ಹಾರೈಸಿದರು.  ಶೀನಾ ಬೋರಾ ಹತ್ಯೆ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ತಂದ ಸಂದರ್ಭದಲ್ಲಿ ಚಿದಂಬರಂ ಬಂಧನಕ್ಕೆ ಇಂದ್ರಾಣಿ ತನ್ನ ಮೊದಲ ಪ್ರತಿಕ್ರಿಯೆ ನೀಡಿದರು. ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆರೋಪಿಯಾಗಿದ್ದ ಇಂದ್ರಾಣಿ ಮುಖರ್ಜಿ ಕಳೆದ ವರ್ಷ ಸಿಬಿಐಗೆ ನೀಡಿದ್ದ ಹೇಳಿಕೆಯಲ್ಲಿ, ೨೦೦೭ರಲ್ಲಿ ಚಿದಂಬರಂ ಅವರು ಯುಪಿಎ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದಾಗ ಐಎನ್ ಎಕ್ಸ್ ಮೀಡಿಯಾ ಸಂಸ್ಥೆಗೆ ೩೦೫ ಕೋಟಿ ರೂಪಾಯಿ ವಿದೇಶೀ ನಿಧಿ ಪಡೆಯಲು ಎಫ್‌ಐಪಿಬಿ ಅನುಮತಿ ನೀಡಿದ್ದರ ಹಿಂದಿನ ಲಂಚದ ಬಗ್ಗೆ ತಿಳಿಸಿದ್ದರು ಎನ್ನಲಾಗಿದೆ. ೨೦೧೮ರ ಫೆಬ್ರುವರಿಯಲ್ಲಿ ಇಂದ್ರಾಣಿ ಮುಖರ್ಜಿ ಹೇಳಿಕೆಯನ್ನು ದಾಖಲಿಸಲಾಗಿತ್ತು ಮತ್ತು ಆ ಬಳಿಕ ಕಾರ್ತಿ ಚಿದಂಬರಂ ಅವರನ್ನು ಬಂಧಿಸಲಾಗಿತ್ತು.

2019: ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ “ಫಿಟ್ ಇಂಡಿಯಾ” ಆಂದೋಲನಕ್ಕೆ ಬೆಳಗ್ಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರುರಾಷ್ಟ್ರೀಯ ಕ್ರೀಡಾ ದಿನದಂದೇ ಪ್ರಧಾನಿ ಮೋದಿ ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ ನೀಡಿದರು. ‘ಕ್ರೀಡೆ ಎನ್ನುವುದು ನೇರವಾಗಿ ನಮ್ಮ ದೇಹದ ಫಿಟ್ ನೆಸ್ ಗೆ ಸಂಬಂಧ ಹೊಂದಿದೆಆದರೆ ಇಂದಿನ ಫಿಟ್ ಇಂಡಿಯಾ ಆಂದೋಲನ ಅದಕ್ಕಿಂತ ಸಂಪೂರ್ಣ ಭಿನ್ನವಾದದ್ದುಫಿಟ್ನೆಸ್ ಎಂಬುದು ಕೇವಲ ಕ್ರೀಡೆಯಲ್ಲಆದರೆ ಅದು ನಮ್ಮ ಬದುಕಿನ ಒಂದು ಭಾಗ’ ಎಂದು ಮೋದಿ ಹೇಳಿದರು.

ಇಂದಿನ ಇತಿಹಾಸ  History Today  ಆಗಸ್ಟ್ 29  (2018+ ಹಿಂದಿನವುಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿರಿ)


No comments:

Advertisement