ಬಲಿಪರು ಇನ್ನು ದಂತಕಥೆ ಮಾತ್ರ….
ಯಕ್ಷ ರಂಗದ ಭೀಷ್ಮ, ಭಾಗವತಿಕೆಯಲ್ಲಿ ತನ್ನದೇ ಮೇರು ಶೈಲಿಯಾದ 'ಬಲಿಪ ಹಾಡುಗಾರಿಕೆ'ಯನ್ನು ದಶಕಗಳಿಂದ ಯಕ್ಷಪ್ರಿಯರಿಗೆ ಉಣಪಡಿಸಿದ ಶ್ರೀಯುತ ಬಲಿಪ ನಾರಾಯಣ ಭಾಗವತರು ಇನ್ನು ಕೇವಲ ದಂತಕಥೆ.
ಬಲಿಪರು (84 ವರ್ಷ) ೨೦೨೩ ಫೆಬ್ರುವರಿ ೧೬ರ ಗುರುವಾರ ನಮ್ಮನ್ನಗಲಿದ್ದಾರೆ. ಅವರ
ಕಂಚಿನ ಕಂಠ ಮೌನವಾಗಿದೆ. ಭಾಗವತಿಕೆಯ ರಂಗದಲ್ಲಿ ಅಗ್ರಜರಾಗಿ ನಿಂತ ಬಲಿಪರು ಮಂಗಳ ಹಾಡಿನೊಂದಿಗೆ ಇಹಲೋಕದ
ಬಂಧ ಕಳಚಿ ಸರ್ವವಂದ್ಯನ ಕಿವಿಗಳನ್ನು ತಂಪಾಗಿಸಲು ನಾಕಕ್ಕೆ ಸರಿದಿದ್ದಾರೆ.
"ನೋಡಿ ನಿರ್ಮಲ ಜಲ ಸಮೀಪದಿ...",
"ಜಗವು ನಿನ್ನಾಧೀನ ಖಗಪತಿ ವಾಹನ...",
"ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೊ",
"ಎಲವೋ ಕುಂತೀ ಸುತನೇ" ಎಂಬಿತ್ಯಾದಿ ವಿವಿಧ ಸ್ವರ
ಏರಿಳಿತದ ಸಮ್ಮಿಲನ-ಸಮತೋಲನ ಹೊಂದಿದ್ದ 'ಬಲಿಪ' ಶೈಲಿಗೆ
ಅದರದ್ದೇ ಆದ ತೂಕ-ಸ್ಥರ...
ಅಜ್ಜ ಬಲಿಪರು ಹುಟ್ಟುಹಾಕಿದ ಯಕ್ಷಗಾನ ತೆಂಕುತಿಟ್ಟು ಹಾಡುಗಾರಿಕೆಯ ಬಲಿಪ ಶೈಲಿಯ ಪ್ರಬಲ ಪ್ರತಿಪಾದಕ,ಕಾಸರಗೋಡು ಪೆರ್ಲ ಪಡ್ರೆಯ ಯಕ್ಷಗಾನ ಸೊಗಡಿನ ಮಣ್ಣಲ್ಲಿ ಹುಟ್ಟಿ ಬೆಳೆದು ಮೂಡುಬಿದಿರೆ ನೂಯಿಯಲ್ಲಿದ್ದು ತನ್ನ ಮುಂದಿನ ತಲೆಮಾರಿಗೆ ಬಲಿಪ ಛಾಪನ್ನು ಮೆರೆದ ಶ್ರೀ ಬಲಿಪ ನಾರಾಯಣ ಭಾಗವತರು ಇನ್ನಿಲ್ಲ ಎಂಬುದು ಎಲ್ಲ ಯಕ್ಷಪ್ರಿಯರಿಗೂ ಆಘಾತಕಾರಿಯಾದ ಸುದ್ದಿ..
ಇನ್ನು ಮುಂದೆ ಅದೊಂದು ನೆನಪು, ದಂತಕತೆ ಮಾತ್ರ. ಕಂಬನಿ ಮಿಡಿವ ಆರ್ದ್ರ ಹೃದಯ ತುಂಬಿದ ಭಾವನೆಗಳೊಂದಿಗೆ ಆ
ಚೇತನಕ್ಕೆ ನಮೋ ನಮಃ...
ಬಲಿಪ ನಾರಾಯಣ ಭಾಗವತರು ಮೂಲತಃ ಕಾಸರಗೋಡು
ಜಿಲ್ಲೆಯ ಪಡ್ರೆ ಗ್ರಾಮದವರು. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಸಮೀಪದ ನೂಯಿ
ಎಂಬಲ್ಲಿ ಸ್ವಗೃಹದಲ್ಲಿ ವಾಸವಾಗಿದ್ದರು, ತೆಂಕುತಿಟ್ಟಿನ ಪ್ರಸಿದ್ಧ ಮತ್ತು ಹಿರಿಯ ಭಾಗವತರು. ಕಟೀಲು ದುರ್ಗಾಪರಮೇಶ್ವರಿ
ಯಕ್ಷಗಾನ ಮೇಳದಲ್ಲಿ ಹಲವಾರು ವರ್ಷ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನದ ಹಲವಾರು
ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನ ಹಾಡುಗಳ ಅನೇಕ ಕೃತಿಗಳನ್ನೂ ರಚಿಸಿದ್ದಾರೆ.
ವೈಯಕ್ತಿಕ ಜೀವನ
ಬಲಿಪರು ಕಾಸರಗೋಡಿನ ಪಡ್ರೆ ಗ್ರಾಮದಲ್ಲಿ ೧೯೩೮ ಮಾರ್ಚ್
೧೩ರಂದು ಜನಿಸಿದರು. ಇವರ ತಂದೆ ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ. ಇವರು ೭ನೇ
ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ತಮ್ಮ ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ
ಕಲಿತು ೧೩ನೇ ವರ್ಷದಲ್ಲಿ ರಂಗ ಪ್ರವೇಶಗೈದರು. ಇವರ ಪತ್ನಿ ಶ್ರೀಮತಿ ಜಯಲಕ್ಷ್ಮಿ.
ಇವರ ನಾಲ್ವರು
ಪುತ್ರರ ಪೈಕಿ, ಮಾಧವ ಬಲಿಪರಿಗೆ ಹಿಮ್ಮೇಳವಾದನ ತಿಳಿದಿದ್ದು,
ಶಿವಶಂಕರ ಬಲಿಪ ಮತ್ತು ದಿ. ಪ್ರಸಾದ ಬಲಿಪರು ಉತ್ತಮ ಭಾಗವತರು, ಪ್ರಸಾದ ಬಲಿಪರು ಕಟೀಲು ಮೇಳದಲ್ಲಿ ಮುಖ್ಯ ಭಾಗವತರಾಗಿ ಸೇವೆ
ಸಲ್ಲಿಸುತ್ತಿದ್ದರು. ಇನ್ನೋರ್ವ ಪುತ್ರ ಶಶಿಧರ್ ಬಲಿಪ ಕೃಷಿಕರು.
ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆ
ಬಲಿಪ ನಾರಾಯಣ ಭಾಗವತರು ಐದು ದಿನದ ದೇವೀ ಮಹಾತ್ಮೆ ಎಂಬ ಮಹಾಪ್ರಸಂಗವನ್ನು ರಚಿಸಿದ್ದು ವೇಣೂರಿನ ಕಜೆ ಸುಬ್ರಹ್ಮಣ್ಯ ಭಟ್ ಮತ್ತು ಅವರ ಸ್ನೇಹಿತರು ಇದನ್ನು ಪ್ರಕಟಿಸಿದ್ದು ಯಕ್ಷಗಾನದ ಇತಿಹಾಸದಲ್ಲೇ ಇದೊಂದು ಮಹತ್ವದ ಕೃತಿಯಾಗಿದೆ.
ಪ್ರಶಸ್ತಿಗಳು
✓ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೨೦೧೦
✓ ಸಾಮಗ
ಪ್ರಶಸ್ತಿ ೨೦೧೨
✓ ಕರ್ನಾಟಕ
ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ `ಜ್ಞಾನ ಪ್ರಶಸ್ತಿ' ೨೦೦೩
✓ ಕರ್ನಾಟಕ
ಜಾನಪದ ಪರಿಷತ್ತು ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ ೨೦೦೨
✓ 71ನೇ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ `ಕರ್ನಾಟಕ ಶ್ರೀ 'ಪ್ರಶಸ್ತಿ,
೨೦೦೩
✓ ಪದವೀಧರ
ಯಕ್ಷಗಾನ ಮಂಡಳಿ ಮುಂಬಯಿ `ಅಗರಿ ಪ್ರಶಸ್ತಿ' ೨೦೦೨
ಶೇಣಿ ಪ್ರಶಸ್ತಿ, ೨೦೦೨
✓ ಕವಿ
ಮುದ್ದಣ ಪುರಸ್ಕಾರ, ೨೦೦೩
✓ಕೂಡ್ಲು ಸುಬ್ರಾಯ
ಶ್ಯಾನುಭೋಗ ಪ್ರಶಸ್ತಿ, ೨೦೦೩
✓ಸ್ಟೇಟ್ ಬ್ಯಾಂಕ್
ಆಫ್ ಮೈಸೂರು ವತಿಯಿಂದ ಬೆಂಗಳೂರಿನ ರಾಜ್ಯಮಟ್ಟದ ಸನ್ಮಾನ,೨೦೦೩
✓ಕರ್ನಾಟಕ ಸಂಘ
ದುಬೈಯಲ್ಲಿ ಸನ್ಮಾನ, ೨೦೦೩
✓ಪಾರ್ತಿಸುಬ್ಬ
ಪ್ರಶಸ್ತಿ
✓ಆಳ್ವಾಸ್ ನುಡಿಸಿರಿ ಪ್ರಶಸ್ತಿ
No comments:
Post a Comment