Friday, December 29, 2023

ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

 ಈ ಹಕ್ಕಿ ಕೊಕ್ಕಿನ ಬಣ್ಣ ಬದಲಾಯಿಸುತ್ತದೆ..!

ಇದು ಸುವರ್ಣ ನೋಟ

ಹೌದು. ಇದೊಂದು ವಿಶಿಷ್ಟ ಹಕ್ಕಿ. ಇದರ ಹೆಸರು ಕೆಂಪು ರಾಟವಾಳ. ಕೆಂಪು ಮುನಿಯ ಎಂಬುದಾಗಿಯೂ ಇದನ್ನು ಕರೆಯುತ್ತಾರೆ. ಇಂಗ್ಲೀಷಿನಲ್ಲಿ ಇದನ್ನು ʼರೆಡ್‌ ಮುನಿಯʼ ಎಂಬುದಾಗಿ ಕರೆಯುತ್ತಾರೆ. ಈ ಹಕ್ಕಿಯ ವೈಜ್ಞಾನಿಕ ಹೆಸರು ʼಸ್ಟ್ರಾಬೆರಿ ಪಿಂಚ್‌ʼ ಅಥವಾ ʼಅಮಾಂಡವʼ ಅಂತ.

ಇದೊಂದು ಪುಟ್ಟ ಹಕ್ಕಿ. ಕೆಂಪು ಕೊಕ್ಕು ಮತ್ತು ಬಾಲದ ಸುತ್ತ ಇರುವ ಕಪ್ಪು ಬಣ್ಣದಿಂದ ಇದನ್ನು ಗುರುತಿಸಬಹುದು. ಗಂಡು ಹಕ್ಕಿಯದ್ದು ಸಾಮಾನ್ಯವಾಗಿ ಮಂಕು ಬಣ್ಣ, ಆದರೆ ಬಾಲದ ಕೆಳಗೆ ಕೆಂಪು ಇರುತ್ತದೆ. ಹೆಣ್ಣು ಹಕ್ಕಿಯ ಬಣ್ಣ ಯಾವಾಗಲೂ ಮಂಕು. ರೆಕ್ಕೆಯ ಗರಿಗಳ ಮೇಲೆ ಬಿಳಿಯ ಚುಕ್ಕೆಗಳು ಸ್ವಲ್ಪ ಅಸ್ಪಷ್ಟವಾಗಿ ಕಾಣುತ್ತಿರುತ್ತವೆ.

ಮೈದಾನ, ಎತ್ತರವಾಗಿ ಬೆಳೆದ ಹುಲ್ಲುಗಾವಲು ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕೆಂಪು ಮುನಿಯ ಕಂಡು ಬರುತ್ತವೆ. ಕೆಲವೊಮ್ಮೆ ನೀರಿನ ಬಳಿ ಇರುವ ಪ್ರದೇಶಗಳಲ್ಲಿ ಇರುವುದೂ ಉಂಟು. ಭಾರತ ಬಿಟ್ಟರೆ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಮತ್ತು ಪಾಕಿಸ್ತಾನದಲ್ಲಿ ಈ ಹಕ್ಕಿಯ ವಿವಿಧ ಜಾತಿಗಳು ಕಂಡು ಬರುತ್ತವೆ. ಬರ್ಮಾ, ಚೀನಾ, ಥೈಲ್ಯಾಂಡ್‌, ಇಂಡೋನೇಷಿಯಾ ಮತ್ತು ಕಾಂಬೋಡಿಯಾದಲ್ಲೂ ಇವು ಕಂಡು ಬರುತ್ತವೆ.

ಕಾಳು ಮತ್ತು ಗೆದ್ದಲು ಹುಳಗಳು ಈ ಹಕ್ಕಿಗೆ ಆಹಾರ. ಮುಂಗಾರು ಶುರುವಾಯಿತು ಎಂದರೆ ಸಾಕು ಈ ಹಕ್ಕಿಗಳಿಗೆ ಮಿಲನ ಸಂಭ್ರಮ. ಗಂಡು- ಹೆಣ್ಣು ಹಕ್ಕಿಗಳು ಜೊತೆ ಜೊತೆಯಾಗಿಯೇ ಇರುತ್ತವೆ. ಈ ಸಮಯದಲ್ಲಿ ಗಂಡು ಹಕ್ಕಿಯ ಮೈ ಕೆಂಪು ಬಣ್ಣಕ್ಕೆ ತಿರುಗುತ್ತದೆ. ರೆಕ್ಕೆಗಳು ಕೂಡಾ ವಿವಿಧ ಬಣ್ಣಗಳನ್ನು ಪಡೆಯುತ್ತವೆ.

ಮೊದಲೇ ಹೇಳಿದೆನಲ್ಲ? ಈ ಹಕ್ಕಿಯ ಇನ್ನೊಂದು ವಿಶೇಷವೆಂದರೆ ಕೊಕ್ಕಿನ ಬಣ್ಣವನ್ನು ಕೂಡಾ ಬದಲಿಸಿಕೊಳ್ಳುವುದು. ಅಂದರೆ ಮುಂಗಾರುವಿಗೆ ಮೊದಲು ಅಂದರೆ ಸಾಮಾನ್ಯವಾಗಿ ಏಪ್ರಿಲ್‌ ತಿಂಗಳಲ್ಲಿ ಈ ಹಕ್ಕಿಯ ಕೊಕ್ಕು ಪೂರ್ತಿ ಕಪ್ಪಗೆ ಇರುತ್ತದೆ. ಮುಂಗಾರು ಆಗಮನದ ಹೊತ್ತಿಗೆ ಅಂದರೆ ಮೇ ತಿಂಗಳಲ್ಲಿ ಕೊಕ್ಕು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಮುಂಗಾರು ಮಳೆಯ ಕಾಲ ಮುಗಿದು ಚಳಿಗಾಲ ಬರುವ ಹೊತ್ತಿಗೆ ಅಂದರೆ ನವೆಂಬರ್‌ ಡಿಸೆಂಬರ್‌ ವೇಳೆಗೆ ಕೊಕ್ಕು ಮತ್ತೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಎಂತಹ ಚೋದ್ಯ ಅಲ್ಲವೇ?

ಎತ್ತರವಾಗಿ ಬೆಳೆದ ಹುಲ್ಲಿನ ಮಧ್ಯೆ ಇರುವುದರಿಂದ ಮತ್ತು ಅತ್ಯಂತ ವೇಗವಾಗಿ ರೆಕ್ಕೆಗಳನ್ನು ಬಡಿಯುತ್ತಾ ಹಾರುವುದರಿಂದ ಈ ಪುಟ್ಟ ಹಕ್ಕಿಗಳು ನೋಡಲು ಸಿಗುವುದು ಅಪರೂಪ.

ಆದರೆ ನಮ್ಮ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ ಇದ್ದಾರಲ್ಲ? ಅವರು ಹುಲ್ಲಿನ ಮಧ್ಯೆ ತೂರಿಯಾದರೂ ಫೋಟೋ ಹೊಡೆಯುತ್ತಾರೆ. ಅಂತಹ ಒಂದು ಸಂದರ್ಭದಲ್ಲಿ ನೋಡಿ ಅವರ ಕ್ಯಾಮರಾದಲ್ಲಿ ಈ ರೆಡ್‌ ಮುನಿಯ ಜೋಡಿ ಬಂಧಿಯಾಗಿ ಬಿಟ್ಟವು. ಹೀಗಾಗಿ ಈಗ ನಮಗೆಲ್ಲರಿಗೂ ಅವುಗಳ ಸೊಬಗು ಸವಿಯುವ ಸಂಭ್ರಮ.

ಈ ಹಕ್ಕಿಯ ಸಮೀಪ ನೋಟಕ್ಕೆ ಇಲ್ಲಿರುವ ಫೊಟೋಗಳನ್ನು ಕ್ಲಿಕ್ಕಿಸಿ.
ಈ ಲೇಖನವನ್ನು ಕೇಳಲು ಕೆಳಗೆ  ಕ್ಲಿಕ್‌ ಮಾಡಿರಿ:

ವಿಡಿಯೋ ನೋಡುತ್ತಾ ಈ ಲೇಖನವನ್ನು ಓದಲು ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿ.:

 ಬರಹ: ನೆತ್ರಕೆರೆ ಉದಯಶಂಕರ

-      ಚಿತ್ರಗಳು: ವಿಶ್ವನಾಥ ಸುವರ್ಣ      

ಇವುಗಳನ್ನೂ ಓದಿರಿ:

ಎಲ್ಲಿ ಮಾರಾಯರೇ ಈ ಆಟ? ಇದು ಸುವರ್ಣ ನೋಟ

No comments:

Advertisement