Wednesday, May 8, 2024

ನಾಗವಾರ, ಕೆಂಪಾಪುರ, ಹೆಬ್ಬಾಳಕ್ಕೂ ಬರಲಿದೆ ಮೆಟ್ರೋ ಇಂಟರ್‌ ಚೇಂಜ್‌ ನಿಲ್ದಾಣ

 ನಾಗವಾರ, ಕೆಂಪಾಪುರ, ಹೆಬ್ಬಾಳಕ್ಕೂ ಬರಲಿದೆ ಮೆಟ್ರೋ ಇಂಟರ್‌ ಚೇಂಜ್‌ ನಿಲ್ದಾಣ


ಬೆಂಗಳೂರು:
ಕೆ.ಆರ್.‌ ಪುರಂ, ನಾಗವಾರ, ಕೆಂಪಾಪುರ, ಹೆಬ್ಬಾಳ ಸೇರಿದಂತೆ ಬೆಂಗಳೂರು ಮಹಾನಗರದಾದ್ಯಂತ ಒಟ್ಟು 16 ರೈಲು ಬದಲಾವಣೆ ನಿಲ್ದಾಣಗಳನ್ನು (ಇಂಟರ್‌ ಚೇಂಜ್‌ ನಿಲ್ದಾಣ) ಸ್ಥಾಪಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ (ಬಿಎಂಆರ್‌ ಸಿಎಲ್)‌ ನಿರ್ಧರಿಸಿದೆ.

ತನ್ನ ಎರಡು ಮತ್ತು ಮೂರನೇ ಹಂತಗಳಲ್ಲಿ ಇಂಟರ್‌ ರೈಲು ಬದಲಾವಣೆ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ಪ್ರಕಟಿಸಿದೆ.

ಪ್ರಸ್ತುತ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಮೆಜೆಸ್ಟಿಕ್ಕಿನಲ್ಲಿ ಮಾತ್ರವೇ ಇಂತಹ ರೈಲು ಬದಲಾವಣೆ ನಿಲ್ದಾಣ ಅಥವಾ ಇಂಟರ್‌ ಚೇಂಜ್‌ ನಿಲ್ದಾಣ ಇದೆ. ಇಲ್ಲಿ ನೇರಳೆ ಮತ್ತು ಹಸಿರು ಮಾರ್ಗಗಳಿಗೆ ರೈಲು ಬದಲಾವಣೆಗೆ ಅನುಕೂಲವಿದೆ.

ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಕ್ಕಾಗಿ ಈಗ ಈ ಹೊಸ 16 ಇಂಟರ್‌ ಚೇಂಜ್‌ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು.

ಬಿಎಂಆರ್‌ ಸಿಎಲ್‌ ಪ್ರಕಾರ ಹೊಸದಾಗಿ ಸ್ಥಾಪನೆಯಾಗಲಿರುವ 16 ಇಂಟರ್‌ ಚೇಂಜ್‌ ನಿಲ್ದಾಣಗಳ ಪೈಕಿ ಹಳದಿ ಮತ್ತು ಗುಲಾಬಿ ಮಾರ್ಗಗಳನ್ನು ಸಂಪರ್ಕಿಸುವ ಜಯದೇವ ಜಂಕ್ಷನ್‌ ಅತ್ಯಂತ ದೊಡ್ಡ ಇಂಟರ್‌ ಚೇಂಜ್‌ ನಿಲ್ದಾಣ ಆಗಿರುತ್ತದೆ. ಇದರಿಂದ ಪ್ರತಿದಿನ 80,000ದಿಂದ 90,000 ಮಂದಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಪ್ರಸ್ತುತ ನಗರದ ಏಕೈಕ ಇಂಟರ್‌ ಚೇಂಜ್‌ ನಿಲ್ದಾಣವಾಗಿರುವ ಮೆಜೆಸ್ಟಿಕ್‌ ಮೆಟ್ರೋ ನಿಲ್ದಾಣದಲ್ಲಿ  ನೇರಳೆ ಮತ್ತು ಹಸಿರುಮಾರ್ಗಗಳನ್ನು ಸಂಪರ್ಕಿಸುವ ನಿಲ್ದಾಣವಿದ್ದು ಇದರಿಂದ ಪ್ರತಿದಿನ 50,000 ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಹೊಸದಾಗಿ 16 ರೈಲು ಬದಲಾವಣೆ ನಿಲ್ದಾಣಗಳ ಸ್ಥಾಪನೆಯಿಂದ ಮೆಟ್ರೋದ ನೇರಳೆ, ಹಸಿರು, ಗುಲಾಬಿ ಮತ್ತು ನೀಲಿ ಮಾರ್ಗಗಳ ಸಂಪರ್ಕ ಸಾಧ್ಯವಾಗುತ್ತದೆ.

ನಮ್ಮ ಮೆಟ್ರೋ ಮೂಲಗಳ ಪ್ರಕಾರ, ಬನ್ನೇರುಘಟ್ಟ ರಸ್ತೆಯ ಜಯದೇವ ಜಂಕ್ಷನ್‌, ಮಹಾತ್ಮ ಗಾಂಧಿ ರಸ್ತೆ, ಕೆ.ಆರ್.‌ ಪುರಂ, ಹೊಸಹಳ್ಳಿ, ಮೈಸೂರು ರಸ್ತೆ, ಪೀಣ್ಯ, ಆರ್‌ ವಿ ರಸ್ತೆ, ಜೆಪಿ ನಗರ 4ನೇ ಹಂತ, ಡೈರಿ ಸರ್ಕಲ್, ನಾಗವಾರ, ಕೆಂಪಾಪುರ, , ಹೆಬ್ಬಾಳ, ಅಗರ, ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಮತ್ತು ಸುಮನಹಳ್ಳಿ ಕ್ರಾಸ್‌ - ಇಲ್ಲಿ ಇಂಟರ್‌ ಚೇಂಜ್‌ ಮೆಟ್ರೋ ನಿಲ್ದಾಣಗಳು ಬರಲಿವೆ. ಈ ಪೈಕಿ ಜಯದೇವ ಜಂಕ್ಷನ್ನಿನಲ್ಲಿ ಸ್ಥಾಪನೆಯಾಗಲಿರುವ ಬಹು ಹಂತದ ರೈಲು ಬದಲಾವಣೆ ಮೆಟ್ರೋ ನಿಲ್ದಾಣ ನಗರದಲ್ಲೇ ಅತ್ಯಂತ ದೊಡ್ಡ ಮೆಟ್ರೋ ರೈಲು ಬದಲಾವಣೆ ನಿಲ್ದಾಣವಾಗಲಿದೆ.

ಜಯದೇವ ಜಂಕ್ಷನ್‌ ರೈಲು ಬದಲಾವಣೆ ನಿಲ್ದಾಣವು ಈ ವರ್ಷಾಂತ್ಯದಲ್ಲೇ ಆರಂಭವಾಗುವ ನಿರೀಕ್ಷೆ ಇದ್ದು ಇದು ಹಳದಿ ಮತ್ತು ಗುಲಾಬಿ ಮಾರ್ಗಗಳನ್ನು ಸಂಪರ್ಕಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರಕ್ಕೆ ಹೋಗುವ ಹಳದಿ ಮಾರ್ಗ ಮತ್ತು ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಹೋಗುವ ಗುಲಾಬಿ ಮಾರ್ಗಗಳನ್ನು ಇದು ಸಂಪರ್ಕಿಸಲಿದೆ.

ಇದಲ್ಲದೆ, ಹಳದಿ ಮಾರ್ಗದಲ್ಲಿ ರಸ್ತೆ ವಾಹನಗಳು ಮತ್ತು ಮೆಟ್ರೋ ರೈಲುಗಳಿಗಾಗಿ ಪ್ರತ್ಯೇಕ ಹಂತಗಳಿರುವ ಡಬಲ್‌ ಡೆಕ್ಕರ್‌ ಮೇಲ್ಸೇತುವೆಗಳು (ಫ್ಲೈ ಓವರ್)‌ ಇರುವುದು ವಿಶೇಷವಾಗಿದೆ. ಈ ಹೊಸ ವಿನ್ಯಾಸವು  ರಾಗಿ ಗುಡ್ಡದ ಕಡೆಯಿಂದ ಬರುವ ಪ್ರಯಾಣಿಕರಿಗೆ  ಸಿಲ್ಕ್‌ ಬೋರ್ಡ್‌ ಕಡೆಗೆ ನೇರ ಸಂಪರ್ಕವನ್ನು ಒದಗಿಸುತ್ತದೆ. ಅವರು ಸಿಗ್ನಲ್‌ ಗಳಿಗಾಗಿ ನಿಲ್ಲಬೇಕಾಗಿ ಬರುವುದಿಲ್ಲ.

ಇದೊಂದು ಅಪರೂಪದ ಪುಸ್ತಕ- ಇ-ಬುಕ್‌ ರೂಪದಲ್ಲೂ ಲಭ್ಯ
ಕೆಳಗೆ ಕ್ಲಿಕ್‌ ಮಾಡಿ - ಖರೀದಿಸಿ ಓದಿ.

No comments:

Advertisement