Friday, September 13, 2024

ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

 ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ

ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ 2024ರ ಸಾರ್ವಜನಿಕ ಗಣೇಶೋತ್ಸವ ಸಡಗರದೊಂದಿಗೆ 2024 ಸೆಪ್ಟೆಂಬರ್‌ 13ರ ಶುಕ್ರವಾರ ಆರಂಭಗೊಂಡಿತು.

ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಸಾರ್ವಜನಿಕ ಸಮಾರಂಭದಲ್ಲಿ ರಾಜ್ಯದ ಕಂದಾಯ ಸಚಿವರೂ  ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ ಆದ ಶ್ರೀ ಕೃಷ್ಣ ಬೈರೇಗೌಡ ಅವರು ಪಾಲ್ಗೊಂಡರು. ಅವರ ಜೊತೆಗೆ ಯುವ ನಾಯಕ ಶ್ರೀ ಶಿವಕುಮಾರ್‌ ಮತ್ತು ಇತರರೂ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಶುಕ್ರವಾರ ಬೆಳಗ್ಗೆ ವಿಗ್ರಹ ಪ್ರತಿಷ್ಠಾಪನೆ, ಪ್ರಾಣಪ್ರತಿಷ್ಠೆ ಮತ್ತು ಗಣಪತಿ ಉಪನಿಷತ್‌ ಸಹಿತ ಪೂಜೆ ನೆರವೇರಿತು. ಸಂಜೆ 6 ಗಂಟೆಗೆ ಬೆಂಗಳೂರಿನ ಸ್ವರ ಚಿರಂತನ ತಂಡದಿಂದ ರಸಮಂಜರಿ ಕಾರ್ಯಕ್ರಮ, ರಾತ್ರಿ 9ಗಂಟೆಗೆ ಮಹಾ ಮಂಗಳಾರತಿ ನೆರವೇರಲಿದೆ.

2024 ಸೆಪ್ಟೆಂಬರ್‌ 14ರ ಶನಿವಾರ ಬೆಳಗ್ಗೆ 9 ಗಂಟೆಗೆ ಕೇರಳ ಚೆಂಡೆ ವಾದನದ ವಿಶೇಷ ಆಕರ್ಷಣೆಯೊಂದಿಗೆ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಮತ್ತು ಅಭಯ ಆಂಜನೇಯ ಪೂಜೆಯ ಜೊತೆಗೆ ಪ್ರತಿಷ್ಠಾಪಿತ ಸಾರ್ವಜನಿಕ ಗಣಪ- ಗೌರಿ ದೇವರಿಗೆ ಗಣಪತಿ ಉಪನಿಷತ್‌ ಸಹಿತ ಪೂಜೆ ನಡೆಯಲಿದೆ ಬೆಳಗ್ಗೆ 9ರಿಂದ 12 ಗಂಟೆಯವರೆಗೆ ಬಡಾವಣೆಯ ಮಕ್ಕಳು, ಮಹಿಳೆಯರಿಗೆ ಆಟೋಟ ಸ್ಪರ್ಧೆ ನಡೆಯಲಿದೆ. ಸಂಜೆ 4 ಗಂಟೆಗೆ ಟಿಸಿಎಲ್‌ ಸೇವಾ ಸಮುದಾಯದಿಂದ ಸಂಗೀತ ಕಚೇರಿ, ರಾತ್ರಿ 7ರಿಂದ ವಿದುಷಿ ಶ್ರೀಮತಿ ಮಧುರಾ ಕಾರಂತ್‌ ಮೈಸೂರು ಅವರಿಂದ ಭರತ ನಾಟ್ಯ, ಆ ಬಳಿಕ ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ನೆರವೇರಲಿದೆ.

2024 ಸೆಪ್ಟೆಂಬರ್‌ 15ರ ಭಾನುವಾರ ಬೆಳಗ್ಗೆ 9.30ಕ್ಕೆ ಗಣಪತಿ ಉಪನಿಷತ್‌ ಸಹಿತ ಪೂಜೆ, ಗಣ ಹವನ ನೆರವೇರಲಿದೆ. ಮಧ್ಯಾಹ್ನ 1ರಿಂದ ಪ್ರಸಾದ  ವಿನಿಯೋಗ, ಸಂಜೆ 5 ಗಂಟೆಗೆ ಮಹಾಪೂಜೆ, ಬಳಿಕ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ಮತ್ತು ವಿಸರ್ಜನೆ ನಡೆಯಲಿದೆ.

ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವೆ ಶೋಭಾ ಕರಂದ್ಲಾಜೆ, ಬಡಾವಣೆಯ ಸ್ಥಾಪಕರಾದ ಮಾಲೂರು ಎಸ್‌ ಎನ್‌ ಕೃಷ್ಣಯ್ಯ ಶೆಟ್ಟಿ ಅವರು ಕೂಡಾ ಪಾಲ್ಗೊಳ್ಳಲಿದ್ದಾರೆ.


ಗಣೇಶೋತ್ಸವ ಕಾರ್ಯಕ್ರಮಕ್ಕೆ ಶ್ರೀಮತಿ ಹೇಮಾ ಮತ್ತು ಕುಟುಂಬದವರು ಗಣೇಶ ವಿಗ್ರಹವನ್ನು ಪ್ರಾಯೋಜಿಸಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಬಡಾವಣೆಯ ಮಹಿಳೆಯರು ಗಣ ಹೋಮದ ಪ್ರಾಯೋಜನೆ ಮಾಡಿದ್ದಾರೆ. ಶ್ರೀ ಮುನಿರಾಜು ಮತ್ತು ಕುಟುಂಬ ಹೂ-ಹಣ್ಣುಗಳನ್ನು ಪ್ರಾಯೋಜಿಸಿದ್ದರೆ, ರಸ ಮಂಜರಿ (ಆರ್ಕೆಸ್ಟ್ರಾ) ಕಾರ್ಯಕ್ರಮಕ್ಕೆ ಶ್ರೀ ಎಚ್. ಶಿವಕುಮಾರ್‌ ಪ್ರಾಯೋಜನೆ ಮಾಡಿದ್ದಾರೆ.

ಪೆಂಡಾಲ್‌ ಮತ್ತು ವೇದಿಕೆಗೆ ಶ್ರೀ ಸಿರಾಜ್‌ ಮತ್ತು ಕುಟುಂಬ ಪ್ರಾಯೋಜನೆ ಮಾಡಿದ್ದರೆ, ಕೇರಳ ಚೆಂಡೆ ವಾದನಕ್ಕೆ ಬಡಾವಣೆಯ ಮಲಯಾಳಿ ಗೆಳೆಯರು ಪ್ರಾಯೋಜನೆ ಮಾಡಿದ್ದಾರೆ. ಶಾಸ್ತ್ರೀಯ ಸಂಗೀತವನ್ನು ಶ್ರೀ ರಾಘವೇಂದ್ರ ಕಾಮತ್‌ ಮತ್ತು ಶ್ರೀ ಮಧು ನಾಯರ್‌ ಪ್ರಾಯೋಜಿಸಿದ್ದಾರೆ.

ಶ್ರೀ ಪ್ರದೀಪ ಶಾಸ್ತ್ರಿ  ಮತ್ತು ಕುಟುಂಬ ಭರತ ನಾಟ್ಯದ ಪ್ರಾಯೋಜಿಕತ್ವ ವಹಿಸಿಕೊಂಡಿದ್ದರೆ ಶ್ರೀ ಎಚ್.ವಿ. ಉದಯಶಂಕರ್‌, ಶ್ರೀ ನಾಗರಾಜ್‌, ಶ್ರೀ ವಿ. ಮುನಿರಾಜು ಮತ್ತು ಶ್ರೀ ಕೃಷ್ಣೋಜಿ ರಾವ್‌ ಪ್ರಸಾದಕ್ಕೆ ಪಾಯೋಜಿಕತ್ವ ವಹಿಸಿಕೊಂಡಿದ್ದಾರೆ.

ಬಡಾವಣೆ ಮತ್ತು ಆಸುಪಾಸಿನ ಭಕ್ತಾದಿಗಳೂ ಉದಾರ ದೇಣಿಗೆ ಮೂಲಕ ಉತ್ಸವ ಯಶಸ್ಸಿಗೆ ಶ್ರಮಿಸಿದ್ದರೆ, ಯುವಕರ ತಂಡ ಗಣಪನ ಸೇವೆಗೆ ಹೆಗಲು ನೀಡಿ ಉತ್ಸವಕ್ಕೆ ಕಳೆಗಟ್ಟಿಸಿದೆ. 



ಇವುಗಳನ್ನೂ ಓದಿರಿ: 

No comments:

Advertisement