ನಿಗೂಢ

 ನಿಗೂಢ: ಇಂತಹ ವ್ಯಕ್ತಿ ಇರಲೇ ಇಲ್ಲ..!

ಪ್ರತಿ ವರ್ಷ 500,000 ಕ್ಕೂ ಹೆಚ್ಚು ಜನರು ಯಾವುದೇ ಕುರುಹು ಇಲ್ಲದೆ ಕಣ್ಮರೆಯಾಗುತ್ತಾರೆ.

2009 ರಲ್ಲಿ ನಿಗೂಢ ಘಟನೆಯೊಂದು ಸಂಭವಿಸಿತು.

ಒಬ್ಬ ವ್ಯಕ್ತಿ ಕಾಣಿಸಿಕೊಂಡ. ಆತನ ಗುರುತು ಇಲ್ಲ. ಭೂತಕಾಲದ ವಿವರವಿಲ್ಲ. ಅವನು ಎಲ್ಲಿಂದ ಬಂದ ಎಂಬುದರ ದಾಖಲೆ ಇಲ್ಲ. ಆತ ಹೇಳಿಕೊಂಡ ಪ್ರಕಾರ ಆತನ ಹೆಸರು ಪೀಟರ್‌ ಬರ್ಗ್‌ಮನ್.‌ ಆದರೆ ಇಂತಹ ವ್ಯಕ್ತಿ ಅಸ್ತಿತ್ವದಲ್ಲೇ ಇಲ್ಲ ಎಂಬುದು ದಾಖಲೆಗಳು ಬಹಿರಂಗ ಪಡಿಸಿದ ಸತ್ಯ. ಹೀಗಾಗಿ ಇದು ಸಾರ್ವಕಾಲಿಕ ಅಂತರ್ಜಾಲ ರಹಸ್ಯಗಳಲ್ಲಿ ಒಂದೆಂದು ಪರಿಗಣಿತವಾಗಿದೆ.

ಹಾಗಿದ್ದರೆ ಈ ಘಟನೆ ಏನು?

ಅದು ಜೂನ್ 2009. ತನ್ನನ್ನು ಪೀಟರ್ ಬರ್ಗ್‌ಮನ್ ಎಂದು ಕರೆದುಕೊಂಡ ವ್ಯಕ್ತಿಯೊಬ್ಬ ಐರ್ಲೆಂಡಿನ ಸ್ಲಿಗೊ ಪಟ್ಟಣಕ್ಕೆ ಬಂದ. ಆತ  ಒಂದು ಸಣ್ಣ ಹೋಟೆಲ್‌ಗೆ ಭೇಟಿ ನೀಡಿ, ನಗದು ಪಾವತಿಸಿ ಕೊಠಡಿಯೊಂದನ್ನು ಪಡೆದ. ಆತನ ಬಳಿ ಸವೆದ ಒಂದೇ ಒಂದು ಹಳೆಯ ಚೀಲವಿತ್ತು.

ಆತ ವಿಯೆನ್ನಾದಲ್ಲಿನ ತನ್ನ ವಿಳಾಸವನ್ನು ನೀಡಿದ. ಇದು ಸಾಮಾನ್ಯವೆಂಬಂತೆ ಕಾಣುತ್ತಿತ್ತು. ಆದರೆ ಅಧಿಕಾರಿಗಳಿಗೆ ಅದೇನೋ ಗುಮಾನಿ ಕಾಡಿತು.

ಮೂರು ದಿನಗಳ ಕಾಲ, ಆತ ನೇರಳೆ ಪ್ಲಾಸ್ಟಿಕ್ ಚೀಲದೊಂದಿಗೆ ಹೋಟೆಲ್‌ನಿಂದ ಹೊರಗೆ ಹೋಗುತ್ತಿದ್ದ. ಸಿಸಿಟಿವಿ ಬರ್ಗ್‌ಮನ್ ಪಟ್ಟಣದಾದ್ಯಂತ ನಡೆದಾಡಿದ್ದನ್ನು ಸೆರೆಹಿಡಿದಿದೆ. ಪೊಲೀಸರಿಗೆ ಆತನ ಬಗ್ಗೆ ಅದೇನೋ ಗುಮಾನಿ. ಆತನ ಪ್ರತಿ ನಡೆ, ನುಡಿ, ಹೆಜ್ಜೆಯ ಮೇಲೆ ಗಮನ ಇಟ್ಟರು.

ಪ್ರತಿಬಾರಿ ಹೋಟೆಲ್ಲಿನಿಂದ ಹೊರ ನಡೆಯುವಾಗ ಆತ ನೇರಳೆ ಪ್ಲಾಸ್ಟಿಕ್‌ ಚೀಲವನ್ನು ಹಿಡಿದುಕೊಳ್ಳುತ್ತಿದ್ದ. ಆದರೆ ಪ್ರತಿಬಾರಿ ವಾಪಸ್‌ ಬರುವಾಗಲೂ ಆತನ ಕೈ ಬರಿದಾಗಿ ಇರುತ್ತಿತ್ತು.

ಆತನ ಬಗ್ಗೆ ಪೊಲೀಸರು ಗಮನವಿಟ್ಟಷ್ಟೂ ಆತ ನಿಗೂಢವಾಗುತ್ತಿದ್ದ. ಹಾಗೆಂದು ಬರ್ಗ್‌ಮನ್‌ ಗಮನ ತಪ್ಪಿಸುವಂತೆ ವರ್ತಿಸುತ್ತಿರಲಿಲ್ಲ.

ಆತ ವ್ಯವಸ್ಥಿತವಾಗಿ ತನ್ನನ್ನು ತಾನು ಅಳಿಸಿಕೊಳ್ಳುತ್ತಿದ್ದ. ಆತನ ಬಳಿ ಗುರುತಿನ ಚೀಟಿ ಇರಲಿಲ್ಲ. ಪಾಸ್‌ ಪೋರ್ಟ್‌ ಇರಲಿಲ್ಲ. ಐರ್ಲೆಂಡ್‌ ಪ್ರವೇಶಿಸಿದ್ದಕ್ಕೆ ಯಾವುದೇ ದಾಖಲೆಯೂ ಇರಲಿಲ್ಲ.

ಆತನ ವರ್ತನೆ ಆತ ಎಂದಿಗೂ ಅಸ್ತಿತ್ವದಲ್ಲಿ ಇಲ್ಲದವನಂತೆ ಮತ್ತು ಎಂದಿಗೂ ಪತ್ತೆಯಾಗಲು ಬಯಸದವನಂತೆ ಇತ್ತು.

ಪಟ್ಟಣದಲ್ಲಿ ಸಂಚರಿಸಿದ ಈ ಮೂರು ದಿನಗಳಲ್ಲಿ ಆತ ೧೩ ಬಾರಿ ಸಿಗೋ ಪಟ್ಟಣದ ಬೀದಿಗಳಲ್ಲಿ ನಡೆದಾಡಿದ್ದ.

ಆತನ ಸಂಚಾರ ನಿರ್ದಿಷ್ಟ ಉದ್ದೇಶದ್ದಾಗಿತ್ತು. ಆತ ಎಂದಿಗೂ ಕಾಲಹರಣ ಮಾಡಲಿಲ್ಲ, ಎಂದಿಗೂ ಯಾರ ಗಮನ ಸೆಳೆಯುವಂತೆ ವರ್ತಿಸಲಿಲ್ಲ. ಈ ದಿನಗಳಲ್ಲಿ ಆತ ೮ ಅಂತರ್ದೇಶೀಯ ಅಂಚೆ ಚೀಟಿಗಳನ್ನು ಖರೀದಿಸಿದ.

ಈಗ ಹೀಗೇಕೆ ಎಂದು ಲೆಕ್ಕ ಹಾಕಲು ಪೊಲೀಸರು ಪ್ರಯತ್ನಿಸಿದರು. ಆದರೆ ಆತ ನಿಗೂಢವಾಗುತ್ತಲೇ ಇದ್ದ.

ಮೂರನೇ ದಿನದಂದು, ಬರ್ಗ್‌ಮನ್ ತನ್ನ ಹೋಟೆಲ್‌ನಿಂದ ಕೊಠಡಿ ಖಾಲಿ ಮಾಡಿಸಿಕೊಂಡು ಬಸ್ ನಿಲ್ದಾಣಕ್ಕೆ ನಡೆದ. ಹೋಗುವ ಮುನ್ನ ಆತ ಕ್ಯಾಪುಸಿನೊ ಮತ್ತು ಸ್ಯಾಂಡ್‌ವಿಚ್ಗೆ ಆರ್ಡರ್ ಮಾಡಿದ. ನಂತರ ಮೇಜಿನ ಬಳಿ ಕುಳಿತ. ಮೇಜಿನ ಆಚೀಚೆ ಇದ್ದವರು ಆತ ಚೀಟಿಯೊಂದರಲ್ಲಿ ಏನನ್ನೋ ಬರೆಯುತ್ತಿದ್ದುದನ್ನು ನೋಡಿದರು. ಆ ಚೀಟಿಯನ್ನು ಆತ ಕೆಲ ನಿಮಿಷಗಳ ಕಾಲ ದಿಟ್ಟಿಸಿ ನೋಡಿದ.

ಆ ದಿನ ಮಧ್ಯಾಹ್ನ, ಬರ್ಗ್‌ಮನ್ ರೋಸಸ್ ಪಾಯಿಂಟ್ ಸಮುದ್ರತೀರಕ್ಕಾಗಿ ಬಸ್ ಏರಿದ. ಸಮುದ್ರ ತೀರದಲ್ಲಿ ಆತ ಅತ್ತಿಂದಿತ್ತ, ಹಿಂದಕ್ಕೆ ಮುಂದಕ್ಕೆ ನಡೆದಾಡುತ್ತಿದ್ದುದನ್ನು ಆಸು ಪಾಸಿನಲ್ಲಿ ಇದ್ದವರು ನೋಡಿದರು. ಆತ ಮೈತುಂಬಾ ಬಟ್ಟೆ ಧರಿಸಿಕೊಂಡಿದ್ದ ತನ್ನ ಬೂಟುಗಳನ್ನು ಕೈಗಳಲ್ಲಿ ಹಿಡಿದುಕೊಂಡಿದ್ದ.

ರಾತ್ರಿ ೧೦.೫೦. ಚಂದ್ರನ ಬೆಳಕಿನಲ್ಲಿ, ಆತ ಹೆಜ್ಜೆ ಹಾಕುತ್ತಲೇ ಇದ್ದ. ಯಾರೋ ಅವನೊಂದಿಗೆ ಮಾತನಾಡಿದರು.

ಮರುದಿನ ಬೆಳಗ್ಗೆ ಇಬ್ಬರು- ತಂದೆ ಮತ್ತು ಮಗ ರೋಸೆಸ್ ಪಾಯಿಂಟ್ ಕಡಲ ತೀರದಲ್ಲಿ ನಡೆದಾಡುತ್ತಿದ್ದರು. ಆಗಸದಿಂದ ಹಿಮ ಸುರಿಯುತ್ತಿತ್ತು. ಅವರಿಗೆ ಮರಳಿನಲ್ಲಿ ಏನೋ ಕಂಡಿತು. ಅದು ಮನುಷ್ಯಾಕೃತಿ ಎಂದು ಅವರಿಗೆ ಸ್ಪಷ್ಟವಾಯಿತು. ಸಮೀಪಕ್ಕೆ ಬಂದಾಗ ಸತ್ಯವನ್ನು ನಿರ್ಲಕ್ಷಿಸುವುದು ಅವರಿಗೆ ಅಸಾಧ್ಯವಾಯಿತು.

ರ್ಗ್‌ಮನ್ ನೀರಿನ ಅಂಚಿನಲ್ಲಿ ಶವವಾಗಿ ಬೋರಲು ಮಲಗಿದ್ದ. ಆತ ನೇವಿ ಟಿ-ಶರ್ಟ್ ಮತ್ತು ಕಪ್ಪು ಒಳ ಉಡುಪು ಧರಿಸಿದ್ದ, ಬೇರೇನೂ ಇಲ್ಲ. ಆತನ ಬಟ್ಟೆಗಳನ್ನು ಸಮೀಪದಲ್ಲಿ ಅಂದವಾಗಿ ಮಡಚಿ ಇಡಲಾಗಿತ್ತು.

ನಂತರ ಈ ಬಗ್ಗೆ ವಿಚಿತ್ರವಾದ ವಿವರಗಳು ಬೆಳಕಿಗೆ ಬಂದವು. ಪೊಲೀಸರು ಇದೊಂದು ನೀರಿನಲ್ಲಿ ಮುಳುಗಿದ ಸಾಮಾನ್ಯ ಸಾವು ಎಂದು ಮೊದಲಿಗೆ ಭಾವಿಸಿದರು. ಆದರೆ ಶವದ ಮರಣೋತ್ತರ ಪರೀಕ್ಷೆ ಬೇರೆಯೇ ಕಥೆ ಹೇಳಿತು.

ಆತನ ಶ್ವಾಸಕೋಶದಲ್ಲಿ ನೀರಿರಲಿಲ್ಲ. ಒದ್ದಾಡಿದ ಗುರುತಾಗಲೀ, ಗಾಯದ ಗುರುತಾಗಲೀ ಇರಲಿಲ್ಲ. ಆತನ ಬಳಿ ಇದ್ದ ವಸ್ತುಗಳು ಒಂದೂ ಸಿಗಲಿಲ್ಲ. ಎಲ್ಲವೂ ಕಾಣೆಯಾಗಿದ್ದವು. ಶವ ಪರೀಕ್ಷೆಯು ಅಸಾಮಾನ್ಯವಾದ ವಿವರವನ್ನು ಬಹಿರಂಗ ಪಡಿಸಿತು. ಆತನ ಸಾವಿಗೆ ಅಧಿಕೃತ ಕಾರಣ- ಹೃದಯ ಸ್ತಂಭನವಾಗಿತ್ತು.

ಬಹುಶಃ ಸಮುದ್ರದಲ್ಲಿ ಕಣ್ಮರೆಯಾಗಬಯಸಿದ ಆತನಿಗೆ ಕೆಲವೇ ಕ್ಷಣಗಳ ಮೊದಲ ಹೃತ್ರಿಯೆ ನಿಂತಿತ್ತು. ಈ ಹೃದಯಾಘಾತ ಆಗಿರದೇ ಇದ್ದರೆ ಬಹುಶ ಆತ ಶಾಶ್ವತವಾಗಿ ಕಣ್ಮರೆಯಾಗುತ್ತಿದ್ದ.

ಆದರೆ ಆತನ ಸಾವಿನೊಂದಿಗೆ ಆತನ ನಿಗೂಢತೆ ಕೊನೆಗೊಳ್ಳಲಿಲ್ಲ. ಅದು ಇನ್ನಷ್ಟು ಆಳವಾಯಿತು.

ಪೀಟರ್ ಬರ್ಗ್‌ಮನ್ ಯಾರು?

ಏನಾದರೂ ಮಾರಕ ಕಾಯಿಲೆಗೆ ತುತ್ತಾಗಿ, ಒಂಟಿಯಾಗಿ ಸಾಯಲು ಹೊರಟಿದ್ದನೆ? ಅಥವಾ ತನ್ನನ್ನು ಬೆನ್ನತ್ತಿರುವ ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ಹೊರಟಿದ್ದ ಪಲಾಯನಗಾರನೇ? ತಡವಾಗುವ ಮುನ್ನವೇ ತನ್ನ ಅಸ್ತಿತ್ವವನ್ನು ತಾನೇ ಅಳಿಸಿಹಾಕಲು ಹೊರಟಿ ಮಾಜಿ ಗೂಢಚಾರನೇ?

ಈತನ ನಿಗೂಢತೆಯನ್ನು ಭೇದಿಸಲು ತನಿಖೆ ತೀವ್ರಗೊಂಡಿತು:

ಬಹುಶಃ ಪೀಟರ್ ಬರ್ಗ್‌ಮನ್ ಯಾರಿಂದಲೂ ಓಡಿಹೋಗುತ್ತಿರಲಿಲ್ಲ. ಬಹುಶಃ ಒಬ್ಬಂಟಿಯಾಗಿ ಸಾಯಲು ಬಯಸಿದ್ದ. ಆದರೆ ಆತ ಅದನ್ನು ಮಾಡಿದ ರೀತಿ, ನಕಲಿ ಹೆಸರು, ಅಳಿಸಿಹಾಕಿದ ಗುರುತು, ಕಾಣೆಯಾದ ವಸ್ತುಗಳು... ಆತ  ಉತ್ತರಗಳಿಗಿಂತ ಹೆಚ್ಚಿನ ಪ್ರಶ್ನೆಗಳನ್ನು ಬಿಟ್ಟು ಹೋಗಿದ್ದ. ಉತ್ತರ ಎಂದಿಗೂ ಲಭಿಸಲಿಲ್ಲ.

ಆಧುನಿಕ ಜಗತ್ತಿನಲ್ಲಿ ಯಾರಾದರೂ ನಿಜವಾಗಿಯೂ ಕಣ್ಮರೆಯಾಗಬಹುದೇ? ಅಥವಾ ನಿಮ್ಮನ್ನು ಅಳಿಸಿಕೊಳ್ಳುವ ಕ್ರಿಯೆಯು ನಿಮ್ಮನ್ನು ಶಾಶ್ವತವಾಗಿ ನೆನಪಿಸಿಕೊಳ್ಳುವುದನ್ನು ಖಚಿತಪಡಿಸುತ್ತದೆಯೇ?

ಪೀಟರ್ ಬರ್ಗ್‌ಮನ್ ಸಾವಿನ ಈ ಘಟನೆ ಈಗ ಶಾಶ್ವತ ರಹಸ್ಯ ಮತ್ತು ಇಂಟರ್ನೆಟ್ ಯುಗದ ಶ್ರೇಷ್ಠ ರಹಸ್ಯಗಳಲ್ಲಿ ಒಂದಾಗಿ ಉಳಿದಿದೆ.
(ಪೀಟರ್‌ ಬರ್ಗಮನ್‌ ಕುರಿತ ಈ ಪೋಸ್ಟನ್ನು  ವಾಲ್ಟರ್‌ ಇಗೋ ಎಂಬವರು
ʼಎಕ್ಸ್‌ʼನಲ್ಲಿ (ಹಿಂದಿನ ಟ್ವಿಟ್ಟರ್) ವಿಡಿಯೋಗಳ ಸಹಿತವಾಗಿ ಪೋಸ್ಟ್‌ ಮಾಡಿದ್ದಾರೆ. ಇದು ವೈರಲ್‌ ಆಗಿದ್ದು ೫.೫ ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಲಿಂಕ್‌ ನಲ್ಲಿ ಇದನ್ನು ನೋಡಬಹುದು:  https://x.com/ItsWalterEgo/status/1902713524133990549 ) 

No comments:

Advertisement