ಇಂದಿನ ಇತಿಹಾಸ
ಏಪ್ರಿಲ್ 30
ಪತ್ನಿಯ ಕೊಲೆ ಆಪಾದನೆ ಮೇರೆಗೆ ಗಲ್ಲು ಶಿಕ್ಷೆಗೆ ಗುರಿಯಾದ ಸ್ವಾಮಿ ಶ್ರದ್ಧಾನಂದ ಆಲಿಯಾಸ್ ಮುರಳಿ ಮನೋಹರ ಮಿಶ್ರಾನ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತು. ಸ್ವಾಮಿ ಶ್ರದ್ಧಾನಂದನಿಗೆ 2006ರಲ್ಲಿ ಕರ್ನಾಟಕ ಹೈಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
2009: ಅಕ್ರಮವಾಗಿ 1.50 ಕೋಟಿ ರೂಪಾಯಿಯನ್ನು ಕೊಲ್ಲಿ ರಾಷ್ಟ್ರ ಶಾರ್ಜಾಗೆ ಸಾಗಿಸಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಆದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದರು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಇಂಬಿಯಾಜ್ ಮತ್ತು ಖಾಜಾ ಮೊಯಿನ್ದುದೀನ್ ಬಂಧಿತರು. ಆರೋಪಿಗಳಿಬ್ಬರು ಒಯ್ಯುತ್ತಿದ್ದ ಬ್ಯಾಗನ್ನು ತಪಾಸಣೆಗೆ ಒಳಪಡಿಸಿದಾಗ ಹಣ ಪತ್ತೆಯಾಯಿತು. ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದ ಹಣ ಸಾಗಣೆಯನ್ನು ಡಿಆರ್‌ಐ ಅಧಿಕಾರಿಗಳು ಪತ್ತೆ ಮಾಡಿದರು.
2009: ಇಂಧನ ಕೊರತೆಯಿಂದ ಬಳಲುತ್ತಿರುವ ರಾಜ್ಯಕ್ಕೆ ಮಹಾರಾಷ್ಟ್ರದ 800 ಕಿ.ಮೀಗಳಷ್ಟು ದೂರದ ದಾಬೋಲ್‌ನಿಂದ ಕೊಳವೆ ಮಾರ್ಗದ ಮೂಲಕ ನೈಸರ್ಗಿಕ ಅನಿಲವನ್ನು ಪೂರೈಕೆ ಮಾಡುವ ಮಹತ್ವದ ಯೋಜನೆಗೆ ಅಂಕಿತ ಬಿದ್ದಿತು. ಈ ಮಹತ್ವದ ಒಪ್ಪಂದಕ್ಕೆ ಭಾರತ ಅನಿಲ ಪ್ರಾಧಿಕಾರದ (ಜಿಎಐಎಲ್) ಮಾರುಕಟ್ಟೆ ನಿರ್ದೇಶಕ ಬಿ.ಸಿ.ತ್ರಿಪಾಠಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಧಾಕರ್‌ರಾವ್ ಸಹಿ ಹಾಕಿದರು. ಪರಿಸರ ಹಾಗೂ ಆರ್ಥಿಕ ಕಾರಣಗಳಿಂದಾಗಿ ನೈಸರ್ಗಿಕ ಅನಿಲವನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಪ್ರಾಧಿಕಾರದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಯು.ಡಿ.ಚೌಬೇ, ದಾಬೋಲ್‌ನಲ್ಲಿ ಇಂಧನ ಘಟಕ ಕಾರ್ಯಾರಂಭ ಮಾಡಿದ ಬಳಿಕ ವರ್ಷಕ್ಕೆ ಕನಿಷ್ಠ 2.9 ದಶಲಕ್ಷ ಟನ್‌ಗಳಷ್ಟು ಅನಿಲ ರಾಜ್ಯಕ್ಕೆ ಲಭ್ಯವಾಗುವುದು ಎಂದರು.
2009: ಭಾರತೀಯ ವಾಯು ಪಡೆಯ ಅತ್ಯಾಧುನಿಕ ಯುದ್ಧವಿಮಾನ ಸುಖೋಯ್-30 ಮೊಟ್ಟಮೊದಲ ಬಾರಿಗೆ ರಾಜಸ್ಥಾನದ ಜೈಸಲ್ಮೇರ್ ಗೆ ಸಮೀಪ ಅಪಘಾತಕ್ಕೆ ಈಡಾಗಿ ಇಬ್ಬರು ಪೈಲಟ್‌ಗಳ ಪೈಕಿ ಒಬ್ಬರು ಮೃತರಾದರು. ಪುಣೆ ಘಟಕಕ್ಕೆ ಸೇರಿದ ಸುಖೋಯ್ ವಿಮಾನ ಇಲ್ಲಿಗೆ ಸಮೀಪದಲ್ಲಿರುವ ರಾಜಮಾತಾಯಿ ಗ್ರಾಮದ ಬಳಿ ಬೆಳಿಗ್ಗೆ 10.20ಕ್ಕೆ ಅಭ್ಯಾಸ ನಡೆಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತು.
2009: ಎಲ್‌ಟಿಟಿಇ ನಾಯಕರನ್ನು, ಅದರಲ್ಲೂ ಮುಖ್ಯವಾಗಿ ಅದರ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಅವರನ್ನು ಜೀವಂತ ಸೆರೆ ಹಿಡಿಯುವ ತನಕ ಅಥವಾ ಆತನನ್ನು ಕೊಲ್ಲುವವರೆಗೂ ತಮಿಳು ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಿಲ್ಲದು ಎಂದು ಶ್ರೀಲಂಕಾ ಸ್ಪಷ್ಟಪಡಿಸಿತು. ತಮಿಳು ಉಗ್ರರು ಸಂಪೂರ್ಣ ಸೋಲೊಪ್ಪಿಕೊಳ್ಳುವ ಹಂತದಲ್ಲಿರುವ ಈ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾಗಿ ಕದನ ವಿರಾಮಕ್ಕೆ ಆಗ್ರಹಿಸಿದ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲಿಬಾಂಡ್ ಮತ್ತು ಇತರ ನಿಯೋಗ ಸದಸ್ಯರಿಗೆ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆಯವರ ಸೋದರ ರಕ್ಷಣಾ ಕಾರ್ಯದರ್ಶಿ ಗೊಟಭಯಾ ರಾಜಪಕ್ಸೆ ಈ ಸ್ಪಷ್ಟನೆ ನೀಡಿದರು.
2009: ವಿಶ್ವದ 9 ರಾಷ್ಟ್ರಗಳ 148 ಮಂದಿಯಲ್ಲಿ ಹಂದಿ ಜ್ವರ ದೃಢಪಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತು. ಅಮೆರಿಕವೊಂದರಲ್ಲೇ 91 ಮಂದಿಯಲ್ಲಿ ರೋಗ ಕಾಣಿಸಿಕೊಂಡು, ಒಬ್ಬ ಮೃತನಾಗಿದ್ದಾನೆ. ಮೆಕ್ಸಿಕೊದಲ್ಲಿ 26 ಮಂದಿ ರೋಗಪೀಡಿತರಾಗಿ, 7 ಮಂದಿ ಅಸುನೀಗಿದ್ದಾರೆ. ಆಸ್ಟ್ರಿಯದಲ್ಲಿ ಒಬ್ಬರು, ಕೆನಡಾದಲ್ಲಿ 13 ಮಂದಿ, ಜರ್ಮನಿ, ನ್ಯೂಜಿಲೆಂಡ್‌ನಲ್ಲಿ ತಲಾ ಮೂವರು, ಇಸ್ರೇಲ್‌ನಲ್ಲಿ ಇಬ್ಬರು, ಸ್ಪೇನ್‌ನಲ್ಲಿ ನಾಲ್ವರು ಹಾಗೂ ಬ್ರಿಟನ್‌ನ ಐದು ಮಂದಿಯಲ್ಲಿ ಹಂದಿ ಜ್ವರ ದೃಢಪಟ್ಟಿದೆ ಎಂದು ಸಂಸ್ಥೆ ಹೇಳಿತು. ಆದರೆ ಅನಧಿಕೃತ ವರದಿಗಳ ಪ್ರಕಾರ ಒಟ್ಟು 171 ಜನರು ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ್ದಾರೆ ಎಂದು ಹೇಳಲಾಯಿತು. ಇವರಲ್ಲಿ ಅಮೆರಿಕದ ಒಬ್ಬ ಬಿಟ್ಟರೆ ಉಳಿದವರೆಲ್ಲರೂ ಮೆಕ್ಸಿಕೊದವರು.
2009: ಪಾಕಿಸ್ಥಾನದ ಬಂದರು ನಗರ ಕರಾಚಿಯಲ್ಲಿ ಜನಾಂಗೀಯ ಘರ್ಷಣೆಯಲ್ಲಿ ಕನಿಷ್ಠ 27 ಜನರು ಮೃತರಾಗಿ 36ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಉರ್ದು ಮಾತನಾಡುವ ಮುತ್ತಾಹಿದಾ ಖ್ವಾಮಿ ಚಳವಳಿ (ಎಂಕ್ಯೂಎಂ) ಕಾರ್ಯಕರ್ತರು ಮತ್ತು ಅಲ್ಪಸಂ ಖ್ಯಾತ ಪಸ್ತೂನರ ನಡುವೆ ಜನಾಂಗೀಯ ಸಂಘರ್ಷ ಉಂಟಾಯಿತು. ಖ್ವಾಜಾ ಅಜ್ಮೇರ್ ನಗರದ ಬಳಿ ಬಂದೂಕುಧಾರಿಗಳು ಇಬ್ಬರ ಎಂಕ್ಯೂಎಂ ಬೆಂಬಲಿಗರನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಂತರ ಕರಾಚಿ ನಗರದಾದ್ಯಂತ ಹಿಂಸಾಚಾರ ಹಬ್ಬಿತು.
2009: ಭಾರತದ ರಕ್ಷಣಾ ನೆಲೆಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ತನ್ನ ರಾಷ್ಟ್ರಕ್ಕೆ ರವಾನಿಸುತ್ತಿದ್ದ ಪಾಕಿಸ್ಥಾನದ ವ್ಯಕ್ತಿಯೊಬ್ಬನಿಗೆ ಹೈದರಾಬಾದಿನ ನ್ಯಾಯಾಲಯ 14 ವರ್ಷಗಳ ಕಠಿಣ ಸಜೆ ವಿಧಿಸಿತು. ಮಲಿಕ್ ಅರ್ಷದ್ ಮಹಮೂದ್ (45) ಶಿಕ್ಷೆಗೆ ಒಳಗಾದವನು. ಅಧಿಕೃತ ದಾಖಲೆಗಳಿಲ್ಲದೆ ರಾಷ್ಟ್ರಕ್ಕೆ ನುಸುಳಿದ್ದ ಈತ ಮುಖ್ಯವಾಗಿ ನಗರದ ಸುತ್ತಮುತ್ತ ಇರುವ ರಕ್ಷಣಾ ನೆಲೆಗಳ ಕುರಿತು ಪಾಕಿಸ್ಥಾನಕ್ಕೆ ಇ-ಮೇಲ್ ಮೂಲಕ ಮಾಹಿತಿ ರವಾನಿಸುತ್ತಿದ್ದ. 2004ರ ಮಾರ್ಚ್ 8ರಂದು ಈತನನ್ನು ಬಂಧಿಸಿದ್ದ ಇಲ್ಲಿನ ಪೊಲೀಸರು ಅಪರಾಧದ ಸಂಚು ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿದ್ದರು. ವಿಚಾರಣೆ ನಡೆಸಿದ ಮೊದಲನೇ ಹೆಚ್ಚುವರಿ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶರು ತೀರ್ಪು ನೀಡಿದರು. ಮಲಿಕ್‌ಗೆ ಹಣಕಾಸು ಒದಗಿಸಲು ನೆರವಾದ ಆರೋಪ ಹೊತ್ತಿದ್ದ ನಗರದ ಯುವಕ ಮಿಲಿಂದ್ ದತ್ತಾತ್ರೇಯ ಎಂಬಾತನನ್ನು ನ್ಯಾಯಾಲಯ ಇದೇ ಸಂದರ್ಭದಲ್ಲಿ ಖುಲಾಸೆಗೊಳಿಸಿತು.
2008: ಕಳಸಾ-ಬಂಡೂರಿ ನಾಲಾ ಯೋಜನೆಯ ಕಾಮಗಾರಿ ಸ್ಥಗಿತಗೊಳಿಸಲು ಪಣತೊಟ್ಟ ಗೋವಾ ಸರ್ಕಾರದ ಮತ್ತೊಂದು ಪ್ರಯತ್ನ ವಿಫಲವಾಯಿತು. ವಿವಾದ ಇತ್ಯರ್ಥವಾಗುವವರೆಗೆ ನೀರು ಬಳಸುವುದಿಲ್ಲ ಎಂಬುದಾಗಿ ಕರ್ನಾಟಕ ಮಾಡಿದ ಪ್ರಮಾಣವನ್ನು ಒಪ್ಪಿಕೊಂಡ ಸುಪ್ರೀಂಕೋರ್ಟ್ ಕಾಮಗಾರಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು. `ಸದ್ಯಕ್ಕೆ ನೀರನ್ನು ಬಳಸುವ ಉದ್ದೇಶ ಕರ್ನಾಟಕಕ್ಕೆ ಇಲ್ಲದೇ ಇರುವ ಕಾರಣ ಕಾಮಗಾರಿಗೆ ತಡೆಯಾಜ್ಞೆ ನೀಡುವುದು ಸರಿಯಾಗದು. ಆದರೆ ಯೋಜನೆಯ ಅನುಷ್ಠಾನಕ್ಕೆ ಪೂರ್ವದಲ್ಲಿ ಕೇಂದ್ರ ಅರಣ್ಯ ಇಲಾಖೆಯ ಅನುಮತಿಯನ್ನು ಕರ್ನಾಟಕ ಪಡೆಯಬೇಕು' ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿಗಳಾದ ಆರ್.ವಿ. ರವೀಂದ್ರನ್ ಮತ್ತು ಜೆ.ಬಿ.ಪಾಂಚಾಲ್ ಅವರನ್ನು ಒಳಗೊಂಡ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿತು.
2008: ಇಂಗ್ಲೆಂಡಿನಲ್ಲಿ ವಿಶೇಷವಾಗಿ ಆರೋಗ್ಯ ಇಲಾಖೆಯಲ್ಲಿ ಭಾರತೀಯ ವೈದ್ಯರ ನೇಮಕಾತಿಗೆ ಸಂಬಂಧಿಸಿದಂತೆ ನಡೆದ ಕಾನೂನು ಸಮರದಲ್ಲಿ 'ಹೌಸ್ ಆಫ್ ಲಾರ್ಡ್ಸ್' ಭಾರತೀಯರ ಪರ ಧ್ವನಿ ಎತ್ತಿತು. ಇಂಗ್ಲೆಂಡಿನಲ್ಲಿ ವೈದ್ಯರನ್ನು ನೇಮಕ ಮಾಡಿಕೊಳ್ಳುವಾಗ ಮೊದಲ ಪ್ರಾಶಸ್ತ್ಯವನ್ನು ಯುರೋಪ್ ಮಂದಿಗೇ ನೀಡಬೇಕು. ಒಂದು ವೇಳೆ ಅಲ್ಲಿ ಅರ್ಹರು ಸಿಗದಿದ್ದರೆ ಮಾತ್ರ್ರ ಏಷ್ಯಾ ಮಂದಿ ಅಥವಾ ಭಾರತೀಯರಿಗೆ ಅವಕಾಶ ನೀಡಬೇಕೆಂದು ಇಂಗ್ಲೆಂಡಿನ ಆರೋಗ್ಯ ಇಲಾಖೆಯು 2006ರ ಏಪ್ರಿಲಿನಲ್ಲಿ ಸುತ್ತೋಲೆ ಕಳುಹಿಸಿತ್ತು. ಆಗ ಭಾರತೀಯ ಮೂಲದ ವೈದ್ಯರ ಬ್ರಿಟನ್ ಸಂಸ್ಥೆಯು ಈ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಲೇರಿತ್ತು. ಕೊನೆಗೆ ಇದು ಇಂಗ್ಲೆಂಡಿನ ಪ್ರತಿಷ್ಠಿತ ಶಾಸನ ಸಭೆಯಲ್ಲಿ ಚರ್ಚೆಗೆ ಬಂದು, ಆರೋಗ್ಯ ಇಲಾಖೆಯ ನಿರ್ಧಾರ ತಪ್ಪು ಎಂಬ ತೀರ್ಮಾನ ಹೊರಬಂದಿತು.
2008: ಶಂಕಿತ ಟಿಬೆಟ್ ಸ್ವಾತಂತ್ರ್ಯ ಹೋರಾಟಗಾರನೊಬ್ಬನನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಚೀನಾದ ವಾಯುವ್ಯ ಪ್ರದೇಶದಲ್ಲಿ ನಡೆಯಿತು. ಟಿಬೆಟ್ ಸ್ವಾತಂತ್ರ್ಯ ಹೋರಾಟಗಾರರೊಬ್ಬರನ್ನು ಹತ್ಯೆ ಮಾಡಿರುವುದನ್ನು ಇದೇ ಮೊದಲ ಬಾರಿ ಸರ್ಕಾರ ಅಧಿಕೃತವಾಗಿ ಪ್ರಕಟಿಸಿತು.
2008: ಮಲೇರಿಯಾ ರೋಗ ಪತ್ತೆಗೆ ಇನ್ನು ಗಂಟೆಗಟ್ಟಲೆ ಕಾಯಬೇಕಿಲ್ಲ. ಕೇವಲ ಒಂದು ನಿಮಿಷದೊಳಗೇ ಮಲೇರಿಯಾ ಪತ್ತೆ ಮಾಡಬಲ್ಲ ತಂತ್ರಜ್ಞಾನವೊಂದನ್ನು ಸಂಶೋಧಿಸಿರುವುದಾಗಿ ಅಮೆರಿಕದ ವಿಜ್ಞಾನಿಗಳು ಪ್ರಕಟಿಸಿದರು. ಈ ಹೊಸ ತಂತ್ರಜ್ಞಾನವನ್ನು ಬಳಸಿ ಮಾಡಲಾದ ಪರೀಕ್ಷೆಗಳು ಈ ಹಿಂದಿನ `ರೋಗ ಪತ್ತೆ' ಪರೀಕ್ಷೆಯಷ್ಟೇ ಸಮರ್ಥ ಫಲಿತಾಂಶ ನೀಡಿವೆ ಎಂದು `ಬಯೊಫಿಸಿಕಲ್ ಜರ್ನಲ್' ಪ್ರಕಟಿಸಿತು. ಎಕ್ಸ್ಟರ್ ವಿವಿ ಮತ್ತು ಕೊವೆನ್ಟ್ರಿ ವಿವಿಯ ಸಂಶೋಧಕರನ್ನೊಳಗೊಂಡ ಅಂತಾರಾಷ್ಟ್ರೀಯ ತಂಡ ಸಂಶೋಧಿಸಿದ ಈ ತಂತ್ರಜ್ಞಾನದಲ್ಲಿ ರಕ್ತದಲ್ಲಿ ಇರುವ ಮಲೇರಿಯಾದ ಪರಾವಲಂಬಿ ಜೀವಿ `ಹೆಮೊಜೊಯಿನ್' ಪತ್ತೆ ಮಾಡಲು ಮ್ಯಾಗ್ನೆಟೊ -ಆಪ್ಟಿಕ್ ತಂತ್ರಜ್ಞಾನವನ್ನು ಬಳಸಲಾಯಿತು. ಈ ವಿಧಾನದಲ್ಲಿ ಹೆಮೊಜಾಯಿನ್ಗಳು ಬೆಳಕಿನ ಕಿರಣಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಪಡೆದಿವೆ. ಈ ಅಂಶದಿಂದಾಗಿ ರಕ್ತದಲ್ಲಿರುವ ಮಲೇರಿಯಾದ ಪರಾವಲಂಬಿ ಜೀವಿ ಹೆಮಾಜಾಯಿನನ್ನು ಸುಲಭವಾಗಿ ಪತ್ತೆ ಮಾಡಬಹುದು ಎಂದು ಸಂಶೋಧನೆ ತಿಳಿಸಿತು. ಇದಿಷ್ಟೇ ಅಲ್ಲದೆ ಮಲೇರಿಯಾವನ್ನು ಕೇವಲ ಒಂದು ನಿಮಿಷದೊಳಗೆ ಪತ್ತೆ ಮಾಡುವ ಸಾಧನವೊಂದನ್ನೂ ಕೂಡಾ ಈ ತಂಡ ಕಂಡುಹಿಡಿದಿದೆ. ಈ ಹೊಸ ಸಲಕರಣೆ ರಕ್ತದಲ್ಲಿರುವ ಮಲೇರಿಯಾದ ಪರೋಪಜೀವಿಯನ್ನು ಪತ್ತೆ ಮಾಡಲು ಉಪಯೋಗಿಸುವ ಆರ್ ಡಿ ಟಿ ಎನ್ನುವ ರಾಸಾಯನಿಕ ವಾಹಕಕ್ಕಿಂತ ವಿಭಿನ್ನವಾಗಿ ಕೆಲಸ ಮಾಡುವುದು.
2008: ಪತ್ನಿಯ ಕೊಲೆ ಆಪಾದನೆ ಮೇರೆಗೆ ಗಲ್ಲು ಶಿಕ್ಷೆಗೆ ಗುರಿಯಾದ ಸ್ವಾಮಿ ಶ್ರದ್ಧಾನಂದ ಆಲಿಯಾಸ್ ಮುರಳಿ ಮನೋಹರ ಮಿಶ್ರಾನ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತು. ನ್ಯಾಯಮೂರ್ತಿ ಬಿ.ಎನ್. ಅಗರ ವಾಲ್, ಜಿ.ಎಸ್. ಸಿಂಘ್ವಿ ಹಾಗೂ ಆಫ್ತಾಬ್ ಅವರನ್ನೊಳಗೊಂಡ ಪೀಠವು ಪ್ರಕರಣಕ್ಕೆ ಕುರಿತಂತೆ ಉಭಯತ್ರರ ವಾದ ವಿವಾದಗಳನ್ನು ಆಲಿಸಿತು. ಸ್ವಾಮಿ ಶ್ರದ್ಧಾನಂದನಿಗೆ 2006ರಲ್ಲಿ ಕರ್ನಾಟಕ ಹೈಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. 1991ರಲ್ಲಿ ಸ್ವಾಮಿ ಶ್ರದ್ಧಾನಂದ ತನ್ನ ಪತ್ನಿ ಶಕೀರಾಳನ್ನು ಕೊಲೆ ಮಾಡಿ ನೆಲದಲ್ಲಿ ಹೂತು ಹಾಕಿದ್ದ. ಈಕೆಯ ಪುತ್ರಿ ನೀಡಿದ ದೂರಿನ ಅನುಸಾರ ಮೂರು ವರ್ಷಗಳ ನಂತರ ದೇಹವನ್ನು ಪತ್ತೆಹಚ್ಚಿ ಪ್ರಕರಣದ ವಿಚಾರಣೆ ನಡೆಸಲಾಗಿತ್ತು.
2008: `ಎಲ್ ಎಸ್ ಡಿ' ಔಷಧಿಯನ್ನು ಕಂಡು ಹಿಡಿದು `ಕುಖ್ಯಾತಿ'ಗೆ ಪಾತ್ರರಾಗಿದ್ದ ಆಲ್ಬರ್ಟ್ ಹಾಫ್ಮನ್ (102) ಸ್ವಿಟ್ಜರ್ಲೆಂಡಿನ ಬಾಸೆಲ್ನಲ್ಲಿ ಹಿಂದಿನ ದಿನ ಹೃದಯಾಘಾತದಿಂದ ನಿಧನರಾದರು. ಇವರು ಕಂಡು ಹಿಡಿದ ಅಮಲು ಬರಿಸುವ ಈ `ಎಲ್ ಎಸ್ ಡಿ' ಮಾದಕ ಮದ್ದನ್ನು ಅರವತ್ತರ ದಶಕದಲ್ಲಿ ಜಗತ್ತಿನಾದ್ಯಂತ ಯುವಜನರು ಬಳಸತೊಡಗಿದ್ದರು. ಹೀಗಾಗಿ ಬಹಳಷ್ಟು ದೇಶಗಳಲ್ಲಿ ಇದನ್ನು ನಿಷೇಧಿಸಲಾಗಿತ್ತು.
2008: ಮೇವು ಹಗರಣಕ್ಕೆ ಸಂಬಂಧಿಸಿ 35 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದ ಸಿಬಿಐ ವಿಶೇಷ ನ್ಯಾಯಾಲಯ, ಇವರಲ್ಲಿ 22 ಮಂದಿಗೆ ಮೂರರಿಂದ ಆರು ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಇದಲ್ಲದೆ, ಈ ಎಲ್ಲ 22 ಆರೋಪಿಗಳಿಗೂ ರೂ 3 ಲಕ್ಷದಿಂದ ರೂ 1.2 ಕೋಟಿ ತನಕ ದಂಡವನ್ನೂ ವಿಧಿಸಿ ಸಿಬಿಐ ನ್ಯಾಯಾಧೀಶ ಮನೋರಂಜನ್ ಕಾವಿ ಅವರು ತೀರ್ಪು ಪ್ರಕಟಿಸಿದರು. ನ್ಯಾಯಾಲಯವು ಹಿಂದಿನ ದಿನವಷ್ಟೇ ಇತರ 11 ಆರೋಪಿಗಳಿಗೆ ಮೂರರಿಂದ ಏಳು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಿತು. ಇತರ ಇಬ್ಬರು ಆರೋಪಿಗಳಿಗೆ ಜೈಲು ಮತ್ತು ದಂಡ ಶಿಕ್ಷೆ ವಿಧಿಸಿ ಸಿಬಿಐ ನ್ಯಾಯಾಧೀಶರು ಏಪ್ರಿಲ್ 23ರಂದು ತೀರ್ಪು ನೀಡಿದ್ದರು.
2008: ಸಂಸತ್ತಿನಲ್ಲಿ ಲೋಕಸಭಾ ಸದಸ್ಯರ ನಡವಳಿಕೆಗೆ ಸಂಬಂಧಿಸಿದಂತೆ ಸಂಸದೀಯ ಸಮಿತಿ ಕೆಲವು ನೀತಿ ಸಂಹಿತೆಗಳನ್ನು ಶಿಫಾರಸು ಮಾಡಿದ್ದು ಸದಸ್ಯರು ಇವುಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತಾಗಬೇಕು ಎಂದು ಅಭಿಪ್ರಾಯಪಟ್ಟಿತು. ಈ ಕುರಿತಾದ ತನ್ನ ಎರಡನೇ ವರದಿಯನ್ನು ವಿ. ಕಿಶೋರ್ ಚಂದ್ರ ದೇವ್ ನೇತೃತ್ವದ ಸಮಿತಿಯು ಈದಿನ ಲೋಕಸಭೆಗೆ ಸಲ್ಲಿಸಿತು. ನೀತಿ ಸಂಹಿತೆ ಉಲ್ಲಂಘಿಸಿದವರಿಗೆ ನಾಲ್ಕು ವಿಧವಾದ ಶಿಕ್ಷೆ ನೀಡಬೇಕು ಎಂದು ವರದಿ ಹೇಳಿತು. ನೀತಿ ಸಂಹಿತೆ ಪಾಲನೆ ಮಾಡದೆ ಹೋದ ಸದಸ್ಯರನ್ನು ಕಲಾಪದಿಂದ ಅಮಾನತುಗೊಳಿಸಿ ಅವರನ್ನು ಸದನದಿಂದ ಹೊರಗೆ ಎತ್ತಿಹಾಕುವುದು ಈ ಶಿಕ್ಷೆಯಲ್ಲಿನ ಅತ್ಯುಗ್ರ ಕ್ರಮವಾಗಿದ್ದು, ಎಚ್ಚರಿಕೆ ನೀಡುವುದು, ವಾಗ್ದಂಡನೆ ವಿಧಿಸುವುದು ಮತ್ತು ನಿರ್ದಿಷ್ಟ ಅವಧಿವರೆಗೆ ಅಮಾನತುಗೊಳಿಸುವಂತಹ ಮೂರು ಕ್ರಮಗಳು ಶಿಕ್ಷೆಯ ಮತ್ತಿತರ ಮೂರು ಸ್ವರೂಪದವುಗಳು.
2008: ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ಮಾಜಿ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಅವರು ನಿರ್ದೇಶಕ ರವಿ ಟಂಡನ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಅಕಾಡೆಮಿ ಪುರಸ್ಕಾರ ಪ್ರದಾನ ಮಾಡಿದರು.
2007: ದೇಶದಲ್ಲಿ ಇದೇ ಪ್ರಪ್ರಥಮ ಬಾರಿಗೆ ಮಹಿಳಾ ನೌಕರರನ್ನು ರಾತ್ರಿ ವೇಳೆಯಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲು ರಾಜ್ಯ ಸರ್ಕಾರವು ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ- 1961ಕ್ಕೆ ತಿದ್ದುಪಡಿ ಮಾಡಿತು. ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 2007ನ್ನು ರಾಜ್ಯಪಾಲರ ಒಪ್ಪಿಗೆ ಪಡೆದ ಬಳಿಕ ಈದಿನ ರಾಜ್ಯಪತ್ರದಲ್ಲಿ (ಗೆಜೆಟ್) ಇದನ್ನು ಪ್ರಕಟಿಸಲಾಯಿತು. ಕಾನೂನು 15 ದಿನಗಳಲ್ಲಿ ಜಾರಿಗೆ ಬರುವುದು. ರಾತ್ರಿ ವೇಳೆ ಮಹಿಳೆಯನ್ನು ದುಡಿಸಿಕೊಳ್ಳುವುದು ಅಪರಾಧ ಎಂಬ ಕಾನೂನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಪ್ರಥಮ ರಾಜ್ಯವಾಗಲಿದ್ದು, ಕಾಯ್ದೆ ಜಾರಿಯ ಬಳಿಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯ ಅಡಿಯಲ್ಲಿ ಬರುವ ಅಂಗಡಿ, ವಾಣಿಜ್ಯ ಸಂಸ್ಥೆಗಳಲ್ಲಿ ಮಹಿಳಾ ನೌಕರರು ರಾತ್ರಿ 8 ಗಂಟೆಯ ಬಳಿಕ ದುಡಿಯವಂತಿಲ್ಲ. ಮುದ್ರಣ ಮಾಧ್ಯಮ, ಖಾಸಗಿ ಸಂಸ್ಥೆಗಳು, ಕಚೇರಿಗಳು, ಹೋಟೆಲುಗಳು ಮತ್ತು ಮನರಂಜನಾ ಸಂಸ್ಥೆಗಳಲ್ಲಿ ರಾತ್ರಿ 8 ಗಂಟೆ ಬಳಿಕ ಮಹಿಳೆಯರನ್ನು ದುಡಿಸಿಕೊಂಡರೆ ಅಪರಾಧವಾಗುತ್ತದೆ. ಕಾನೂನು ಉಲ್ಲಂಘನೆಗೆ 6 ತಿಂಗಳು ಶಿಕ್ಷೆ, 10ರಿಂದ 20ಸಾವಿರ ರೂ ದಂಡ ವಿಧಿಸಬಹುದಾಗಿದೆ. ಐಟಿ ಮತ್ತು ಬಿಟಿ ಕ್ಷೇತ್ರವು 2002ರಲ್ಲೇ ರಿಯಾಯ್ತಿ ಪಡೆದ ಕಾರಣ ಈ ಕ್ಷೇತ್ರವನ್ನು ಕಾಯ್ದೆಯಿಂದ ಹೊರಗಿಡಲಾಯಿತು.
2007: ಕರ್ನಾಟಕದ 10 ಜಿಲ್ಲೆಗಳ 68 ತಾಲ್ಲೂಕುಗಳ ಆಯ್ದ ಹೋಬಳಿಗಳಲ್ಲಿ ಹವಾಮಾನ ಅಧಾರಿತ ಕೃಷಿ ವಿಮೆ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿತು. ಕರ್ನಾಟಕವಲ್ಲದೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳ್ಳುವುದು.
2007: ಜಗತ್ತಿನ ಅರ್ಧದಷ್ಟು ಭಾಗಕ್ಕೆ ಪೆಗಾಸಸ್ ಮೈನೈರ್ ಜಿಟಿ 450 ಮೈಕ್ರೋಲೈಟ್ ವಿಮಾನದ ಮೂಲಕ ಸುತ್ತು ಹಾಕುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಬ್ರಿಟನ್ನಿನ ಅಂಧ ವಿಮಾನಯಾನಿ ಮೈಲ್ಸ್ ಹಿಲ್ಟನ್ ಬಾರ್ಬರ್ ತನ್ನ ಸಹ ಚಾಲಕ ರಿಚರ್ಡ್ ಮೆರೆಡಿತ್ ಹಾರ್ಡಿ ಜೊತೆಗೆ ಸಿಡ್ನಿಯ ಬ್ಯಾಂಕ್ಸ್ ಟೌನ್ ವಿಮಾನ ನಿಲ್ದಾಣಕ್ಕೆ ವಾಪಸಾದರು. ಮಾರ್ಚ್ 7ರಂದು ಲಂಡನ್ ಸಮೀಪದ ಬ್ರಿಗ್ಗಿನ್ ಹಿಲ್ ಏರ್ ಫೀಲ್ಡ್ ನಿಂದ 55 ದಿನಗಳ ತಮ್ಮ ಯಾನ ಆರಂಭಿಸಿದ್ದ ಅವರು ವಿಶ್ವದ 21 ರಾಷ್ಟ್ರಗಳ ಮೇಲೆ ಹಾರಾಡಿದರು.
2006: ಆಫ್ಘಾನಿಸ್ಥಾನದ ತಾಲೀಬಾನ್ ಉಗ್ರರು ತಾವು ಅಪಹರಿಸಿ ಒತ್ತೆ ಇಟ್ಟುಕೊಂಡಿದ್ದ ಭಾರತದ ಹೈದರಾಬಾದ್ ಮೂಲದ ದೂರಸಂಪರ್ಕ ಎಂಜಿನಿಯರ್ ಕೆ. ಸೂರ್ಯನಾರಾಯಣ (41) ಅವರನ್ನು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಬರ್ಬರವಾಗಿ ಕೊಂದುಹಾಕಿದರು. ಅಪಹರಣಗೊಂಡಿದ್ದ ಸ್ಥಳಕ್ಕೆ ಅತಿ ಸಮೀಪದಲ್ಲೇ ಈ ಕೃತ್ಯ ನಡೆಯಿತು. ಜಬುಲ್ ಪ್ರಾಂತ್ಯದ ಕ್ವಾಲತ್ ಹಾಗೂ ಘಜ್ನಿ ಮಧ್ಯೆ ಹಳ್ಳವೊಂದರಲ್ಲಿ ಸೂರ್ಯನಾರಾಯಣ ಅವರ ರುಂಡವಿಲ್ಲದ ದೇಹ ಬೆಳಿಗ್ಗೆ ಪತ್ತೆಯಾಗಿ ಅವರ ಹತ್ಯೆ ಘಟನೆ ಬೆಳಕಿಗೆ ಬಂತು. ಸೂರ್ಯನಾರಾಯಣ ಅವರು ಬಹರೇನ್ ಮೂಲದ ಅಲ್- ಮೊಯ್ಡ್ ಕಂಪನಿಗಾಗಿ ಕೆಲಸ ಮಾಡುತಿದ್ದು, ಈ ಕಂಪನಿ ಆಘ್ಘಾನಿಸ್ಥಾನದ ಟೆಲಿಕಾಂ ಕಂಪನಿಗಾಗಿ ಕೆಲಸ ಮಾಡುತ್ತಿತ್ತು. ಉಗ್ರರು ಮೇ 28ರಂದು ಸೂರ್ಯನಾರಾಯಣ ಅವರನ್ನು ಅಪಹರಿಸಿದ್ದರು..
1945: ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಮತ್ತು ಆತನ ಪತ್ನಿ ಇವಾ ಬ್ರೌನ್ ಬರ್ಲಿನ್ನಿನ ಚಾನ್ಸಲರಿ ಕಟ್ಟಡದ ತಳಭಾಗದ ಬಂಕರಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು.
1870: ಚಲನಚಿತ್ರ ನಿರ್ದೇಶಕ ಧುಂಡಿರಾಜ್ ಗೋವಿಂದ್ `ದಾದಾಸಾಹೇಬ್' ಫಾಲ್ಕೆ (1870-1944) ಜನ್ಮದಿನ. ಭಾರತೀಯ ಚಿತ್ರೋದ್ಯಮದ ಜನಕ ಎಂದೇ ಖ್ಯಾತರಾದ ಇವರು ಭಾರತದ ಮೊತ್ತ ಮೊದಲ ಮೂಕಿ ಚಿತ್ರ `ರಾಜಾ ಹರಿಶ್ಚಂದ್ರ'ವನ್ನು ನಿರ್ಮಿಸಿದರು.
1927: ಎಂ. ಫಾತಿಮಾ ಬೀವಿ ಜನ್ಮದಿನ. ಇವರು ಭಾರತದ ಸುಪ್ರೀಂಕೋರ್ಟ್ ನ್ಯಾಯಾಧೀಶಕ್ಕೆ ಸ್ಥಾನಕ್ಕೆ ಏರಿದ ಮೊತ್ತ ಮೊದಲ ಭಾರತೀಯ ಮಹಿಳೆ.
1944: ಖ್ಯಾತ ನೃತ್ಯಪಟು ಸೋನಾಲ್ ಮಾನ್ ಸಿಂಗ್ ಹುಟ್ಟಿದ ದಿನ. ಇವರು ಭರತನಾಟ್ಯ, ಕೂಚಿಪುಡಿ ಮತ್ತು ಒಡಿಸ್ಸಿ ನೃತ್ಯಗಳಲ್ಲಿ ಪ್ರಾವೀಣ್ಯ ಪಡೆದಿರುವ ವ್ಯಕ್ತಿ.
1789: ಜಾರ್ಜ್ ವಾಷಿಂಗ್ಟನ್ ಅವರು ಅಮೆರಿಕದ ಪ್ರಪ್ರಥಮ ಅಧ್ಯಕ್ಷರಾದರು.
1993: ಮಹಿಳಾ ಟೆನಿಸ್ ಪಟು ಮೋನಿಕಾ ಸೆಲೆಸ್ ಗೆ ಜರ್ಮನಿಯ ಹ್ಯಾಂಬರ್ಗಿನಲ್ಲಿ ಟೆನಿಸ್ ಪಂದ್ಯ ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬ ಹಿಂದಿನಿಂದ ಚೂರಿ ಹಾಕಿದ. ಮೋನಿಕಾ ವಿರುದ್ಧ ಸೆಣಸುತ್ತಿದ್ದ ಸ್ಟೆಫಿ ಗ್ರಾಫ್ ಅಭಿಮಾನಿ ತಾನೆಂದು ಹೇಳಿಕೊಂಡ ಆ ವ್ಯಕ್ತಿಯನ್ನು ನಂತರ ದಂಡನೆಗೆ ಗುರಿಪಡಿಸಲಾಯಿತು.