Showing posts with label ಕಾಂಗ್ರೆಸ್‌. Show all posts
Showing posts with label ಕಾಂಗ್ರೆಸ್‌. Show all posts

Saturday, November 2, 2024

₹ 100 ಕೋಟಿ: ಹೌಹಾರಬೇಡಿ ಇದು ಚುನಾವಣಾ ತಂತ್ರಗಾರಿಕೆ ಶುಲ್ಕ!

₹ 100 ಕೋಟಿ: ಹೌಹಾರಬೇಡಿ ಇದು ಚುನಾವಣಾ ತಂತ್ರಗಾರಿಕೆ ಶುಲ್ಕ!

ಪ್ರಶಾಂತ್‌ ಕಿಶೋರ್‌ ಎಂಬ ಹೆಸರು ಭಾರತದಲ್ಲಿ ಬಹಳಷ್ಟು ಮಂದಿಗೆ ಗೊತ್ತಿರಲಾರದು. ಆದರೆ ರಾಜಕೀಯ ಪಕ್ಷಗಳ ವಲಯದಲ್ಲಿ ಅವರ ಹೆಸರು ಚಿರಪರಿಚಿತ. ಏಕೆಂದರೆ ಇವರು ಚುನಾವಣಾ ತಂತ್ರಗಾರಿಕೆಗೆ ಹೆಸರಾದವರು.

ಆದರೆ ಅವರ ಚುನಾವಣಾ ತಂತ್ರಗಾರಿಕೆ ಸಲಹೆಗೆ ಶುಲ್ಕ ಎಷ್ಟೆಂದು ಗೊತ್ತಿದೆಯೇ? ಕೇಳಿದರೆ ನೀವು ಹೌಹಾರಿ ಬಿಡಬಹುದು. ಅದಕ್ಕೂ ಮುನ್ನ ಅವರು ಯಾರು ಯಾರಿಗೆ ಚುನಾವಣೆ ತಂತ್ರಗಾರಿಕೆ ಹೇಳಿಕೊಟ್ಟಿದ್ದರು ಎಂದು ನೋಡೋಣ.

ಪ್ರಶಾಂತ್‌ ಕಿಶೋರ್‌ ಅವರ ಚುನಾವಣಾ ತಂತ್ರಗಾರಿಕೆ ಮೊತ್ತ ಮೊದಲ ಬಾರಿಗೆ ಬಹಿರಂಗಕ್ಕೆ ಬಂದದ್ದು 2014ರಲ್ಲಿ. ಆಗ ಅವರು ಭಾರತೀಯ ಜನತಾ ಪಕ್ಷಕ್ಕೆ ಚುನಾವಣಾ ತಂತ್ರಗಾರಿಕೆಯ ಸಲಹಾಕಾರರಾಗಿದ್ದರು. ನರೇಂದ್ರ ಮೋದಿಯವರ ಪರವಾಗಿ 2014 ರ ಲೋಕಸಭಾ ಪ್ರಚಾರದ ಪ್ರಮುಖ ತಂತ್ರಗಾರರಾಗಿ ಪ್ರಶಾಂತ್‌ ಗಮನ ಸೆಳೆದರು. ಇದು ಬಿಜೆಪಿಗೆ ಪ್ರಚಂಡ ಜಯ ಸಾಧಿಸಲು ಸಹಾಯ ಮಾಡಿತು.

2015ರಲ್ಲಿ ಪ್ರಶಾಂತ್ ಕಿಶೋರ್ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಇಲ್ಲಿ ಅವರು ನಿತೀಶ್ ಕುಮಾರ್ ಅವರ ಜನತಾದಳ (ಯು) ಮತ್ತು ಆರ್‌ ಜೆಡಿ ಹಾಗೂ ಕಾಂಗ್ರೆಸ್ ಮೈತ್ರಿಕೂಟವನ್ನು ಬೆಂಬಲಿಸಿದರು. ಬಿಜೆಪಿ ವಿರುದ್ಧ ಮೈತ್ರಿಕೂಟದ ಗೆಲುವಿಗೆ ಕಿಶೋರ್‌ ಸಲಹೆ ಕಾರಣವಾಯಿತು.

2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್‌ ಅವರು ಕಾಂಗ್ರೆಸ್‌ ಜೊತೆಗೆ ಕೆಲಸ ಮಾಡಿದರು, ಆದರೆ ಅವರ ತಂತ್ರಗಾರಿಕೆ ಇಲ್ಲಿ ಯಶಸ್ವಿ ಫಲಿತಾಂಶವನ್ನು ನೀಡಲಿಲ್ಲ. ಆದರೆ ಆ ಬಳಿಕ 2021 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಶಾಂತ್‌ ತಂತ್ರಗಾರಿಕೆ ನೆರವಾಯಿತು.

2019 ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕೈ ಹಿಡಿದರು. ಪ್ರಶಾಂತ್‌ ಕಿಶೋರ್‌ ತಂತ್ರಗಾರಿಕೆ, ಜಗನ್ ಮೋಹನ್ ರೆಡ್ಡಿ ಮತ್ತು ಅವರ ಪಕ್ಷವಾದ ವೈಎಸ್‌ಆರ್‌ಸಿಪಿಗೆ ಗಮನಾರ್ಹ ಗೆಲುವನ್ನು ತಂದುಕೊಟ್ಟಿತು.

2020 ರ ದೆಹಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಿಶೋರ್‌ ಅವರು ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಸಂಕ್ಷಿಪ್ತ ತಂತ್ರಗಾರಿಕೆ ಹೇಳಿಕೊಟ್ಟರು. ಪರಿಣಾಮ ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಪ್ರಚಂಡ ವಿಜಯ ಸಾಧಿಸಿತು.

2021ರ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿಯಿಂದ ಕಠಿಣ ಸವಾಲು ಎದುರಿಸಬೇಕಾಗಿ ಬಂದ ಮಮತಾ ಬ್ಯಾನರ್ಜಿ ಮತ್ತು ಅವರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಉಳಿಸಿಕೊಳ್ಳಲು ನೆರವಾದದ್ದು ಕಿಶೋರ್ ಅವರ ತಂತ್ರಗಾರಿಕೆಯೇ.

ಈ ಮಧ್ಯೆ ಪ್ರಶಾಂತ್‌ ಕಿಶೋರ್‌ ಅವರು ತಮ್ಮದೇ ಆದ ಜನ ಸೂರಜ್‌ ಪಕ್ಷವನ್ನೂ ಸ್ಥಾಪಿಸಿದ್ದಾರೆ.

ಇಷ್ಟೆಲ್ಲದರ ನಡುವೆ ಅವರು ರಾಜಕೀಯ ಪಕ್ಷಗಳು ಅಥವಾ ನಾಯಕರಿಗೆ ಕೊಡುವ ಚುನಾವಣಾ ತಂತ್ರಗಾರಿಕೆ ಸಲಹೆ ತುಟ್ಟಿಯೇ ದುಬಾರಿಯೇ ಎಂಬ ಪ್ರಶ್ನೆ ಹಲವರನ್ನು ಕಾಡುವುದು ಸಹಜ. ಅದು ಗೊತ್ತಾದರೆ ಜನ ಸಾಮಾನ್ಯರು ಹೌ ಹಾರುವುದು ಮಾತ್ರ ಖಂಡಿತ.

ಏಕೆಂದರೆ ಅದು ಎಷ್ಟೆಂಬುದನ್ನು ಸ್ವತಃ ಪ್ರಶಾಂತ್‌ ಕಿಶೋರ್‌ ಅವರೇ ಹೇಳಿದ್ದಾರೆ. ಅಗ್ಗವಲ್ಲ, ತುಂಬಾ ತುಟ್ಟಿಕರ ಎಂಬುದನ್ನು ಇದೀಗ ಸ್ವತಃ ಪ್ರಶಾಂತ್‌ ಕಿಶೋರ್‌ ಅವರೇ ಬಹಿರಂಗ ಪಡಿಸಿದ್ದಾರೆ. ಅಕ್ಟೋಬರ್ 31 ರಂದು, ಮುಂಬರುವ ಬಿಹಾರ ಉಪಚುನಾವಣೆಯ ಪ್ರಚಾರದಲ್ಲಿ ಇದನ್ನು ಬಹಿರಂಗ ಪಡಿಸಿದ ಅವರು ಅದರ ಮೊತ್ತ 100 ಕೋಟಿ ರೂಪಾಯಿಗಳು ಅಥವಾ ಅದಕ್ಕಿಂತಲೂ ಹೆಚ್ಚು ಎಂದು ಹೇಳಿದ್ದಾರೆ.

ಬಿಹಾರದ ಬೆಳಗಂಜ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಶಾಂತ್ ಕಿಶೋರ್, ಮುಸ್ಲಿಂ ಸಮುದಾಯದ ಸದಸ್ಯರೇ ಹೆಚ್ಚಿದ್ದ ಸಭೆಯಲ್ಲಿ ಮಾತನಾಡುತ್ತಾ, ಜನರು ತಮ್ಮ ಅಭಿಯಾನಗಳಿಗೆ ಹಣದ ಮೂಲ ಏನು ಎಂದು ಆಗಾಗ ಕೇಳುವುದುಂಟು ಅದರ ಬಗ್ಗೆ ಹೇಳುತ್ತೇನೆ ಕೇಳಿʼ ಎನ್ನುತ್ತಾ ತಮ್ಮ ಶುಲ್ಕದ ವಿವರ ಬಿಚ್ಚಿಟ್ಟಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಹತ್ತು ಸರ್ಕಾರಗಳು ನನ್ನ ಕಾರ್ಯತಂತ್ರದ ಮೇಲೆ ನಡೆಯುತ್ತಿವೆ. ನನ್ನ ಪ್ರಚಾರಕ್ಕಾಗಿ ಟೆಂಟ್‌ ಇತ್ಯಾದಿಗಳನ್ನು  ಸ್ಥಾಪಿಸಲು ನನ್ನ ಬಳಿ ಸಾಕಷ್ಟು ಹಣವಿಲ್ಲ ಎಂದು ನೀವು ಭಾವಿಸುತ್ತೀರಾ? ನಾನು ಅಷ್ಟು ದುರ್ಬಲ ಎಂದು ನೀವು ಭಾವಿಸುತ್ತೀರಾ? ಬಿಹಾರದಲ್ಲಿ ನನ್ನಷ್ಟು ಶುಲ್ಕವನ್ನು ಯಾರೂ ಕೇಳಿಲ್ಲ. ನಾನು ಕೇವಲ ಒಂದು ಚುನಾವಣೆಯಲ್ಲಿ ಯಾರಿಗಾದರೂ ಸಲಹೆ ನೀಡಿದರೆ ಅದಕ್ಕೆ ನನ್ನ ಶುಲ್ಕ ₹ 100 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು. ನಾನು ಅಂತಹ ಒಂದು ಚುನಾವಣಾ ಸಲಹೆಯೊಂದಿಗೆ ನನ್ನ ಪ್ರಚಾರವನ್ನು ಮುಂದಿನ ಎರಡು ವರ್ಷಗಳವರೆಗೆ ಮುಂದುವರಿಸಬಹುದು
- ಇದು ಪ್ರಶಾಂತ್‌ ಕಿಶೋರ್‌ ಅವರ ಮಾತು.

ಬೇಕಿದ್ದರೆ ಈ ಕೆಳಗಿನ ವಿಡಿಯೋ ನೋಡಿ ಅವರ ಮಾತುಗಳನ್ನು ಕೇಳಿಸಿಕೊಳ್ಳಿ: 

ಅಥವಾ ಈ ಲಿಂಕ್‌ ಮೂಲಕ ಪರಿಶೀಲಿಸಿಕೊಳ್ಳಿ: https://twitter.com/i/status/1852360442074562792

Tuesday, June 4, 2024

ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?

 ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?

ವದಹಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಲೋಕಸಭೆಯ 543 ಸ್ಥಾನಗಳಿಗೆ ನಡೆದಿರುವ ಚುನಾವಣೆಯ ಫಲಿತಾಂಶಗಳು ದೇಶವನ್ನು ಕುತೂಹಲಕಾರೀ ಘಟ್ಟಕ್ಕೆ ತಂದು ನಿಲ್ಲಿಸಿವೆ. ಸುಮಾರು 292 ಸ್ಥಾನಗಳ ಸನಿಹದಲ್ಲಿ ಬಂದು ನಿಂತಿರುವ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟವು ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆಯ ಘೋಷಣೆ ಮಾಡಿದೆ.

233 ಸ್ಥಾನಗಳ ಅಂಚಿನಲ್ಲಿ ಇರುವ ಕಾಂಗ್ರೆಸ್‌ ನೇತೃತ್ವದ ‌ʼಇಂಡಿʼ ಐಎನ್‌ ಡಿಐ ಮೈತ್ರಿಕೂಟದೊಂದಿಗೆ ಇಡೀ ದಿನ ಹಾವು -ಏಣಿ ಆಟ ನಡೆಸಿದರೂ, ಅಂತಿಮವಾಗಿ ನಿತೀಶ್‌ ಕುಮಾರ್‌ ನೇತೃತ್ವದ ಜನತಾ ದಳ (ಯು) ಮತ್ತು ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷ (ಟಿಡಿಪಿ) ಎನ್‌ ಡಿಎ ಜೊತೆಗೇ ನಿಲ್ಲುವುದಾಗಿ ಸ್ಪಷ್ಟನೆ ನೀಡುವುದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗಿ ಮುಂದುವರೆಯುವ ಘೋಷಣೆಯನ್ನು ಬಿಜೆಪಿ ಮಾಡಿದೆ.

ರಾತ್ರಿ ದೆಹಲಿಯ ಪಕ್ಷ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮೂರನೇ ಬಾರಿಗೆ ಆಡಳಿತ ನಡೆಸಲು ಬಿಜೆಪಿ ಹಾಗೂ ಎನ್‌ ಡಿಎ ಮೈತ್ರಿಕೂಟಕ್ಕೆ ಆಶೀರ್ವಾದ ಮಾಡಿದ್ದಕ್ಕಾಗಿ ದೇಶದ ಜನತೆಗೆ ವಂದನೆಗಳನ್ನು ಸಲ್ಲಿಸಿದ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಅಗತ್ಯ ಬಹುಮತಕ್ಕಿಂತ ಹೆಚ್ಚಿನ ಸ್ಥಾನ ಗಳಿಸಿರುವ ಎನ್‌ ಡಿಎ ಸರ್ಕಾರ ರಚಿಸುವುದು ಎಂಬುದಾಗಿ ಸ್ಪಷ್ಟ ಪಡಿಸಿದರು.

(ವಿವರಗಳಿಗೆ ಪಕ್ಕದಲ್ಲಿರುವ ಪ್ರಧಾನಿ ಮೋದಿ ಚಿತ್ರ ಕ್ಲಿಕ್‌ ಮಾಡಿ)

ಸುಮಾರು 240 ಸ್ಥಾನಗಳಲ್ಲಿ ಗೆಲುವು/ ಮುನ್ನಡೆ ದಾಖಲಿಸುವುದರೊಂದಿಗೆ ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ), ಎನ್‌ ಡಿಎ ಮೈತ್ರಿಕೂಟಕ್ಕೆ ಬಹುಮತ (292 ಸ್ಥಾನ) ಲಭಿಸಿದ್ದು ಸರ್ಕಾರ ರಚಿಸುವುದು ಖಚಿತ ಎಂಬುದಾಗಿ ಇದಕ್ಕೂ ಮುನ್ನವೇ ಘೋಷಿಸಿತು. ಇಂಡಿ ಮೈತ್ರಿಕೂಟದಿಂದ ಬಿಹಾರದ ಮುಖ್ಯಮಂತ್ರಿ ಉಪಪ್ರಧಾನಿ ಹುದ್ದೆಯ ಆಮಿಷ ಬಂದಿದ್ದರೂ ಜನತಾಳ (ಯು) ಎನ್‌ ಡಿಎ ಮೈತ್ರಿಕೂಟದಲ್ಲೇ ಮುಂದುವರೆಯುವುದಾಗಿ ಪಕ್ಷದ ನಾಯಕ ಕೆ.ಸಿ. ತ್ಯಾಗಿ ಪ್ರಕಟಿಸಿದರು.

ಚುನಾವಣೆಯಲ್ಲಿ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಬಿಜೆಪಿಯು ಭಾರೀ ಹಿನ್ನಡೆ ಅನುಭವಿಸಿದ್ದು ದಿಟವಾಗುತ್ತಿದ್ದಂತೆಯೇ ಎನ್‌ ಡಿಎಯ ಅಂಗಪಕ್ಷವಾದ ತೆಲುಗುದೇಶಂ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಲು ಯತ್ನಿಸಿದ ಇಂಡಿ ಮೈತ್ರಿಕೂಟವು ಆಂದ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಕೊಡುಗೆ ನೀಡುವ ಘೋಷಣೆ ಮಾಡಿದ್ದರೂ, ತೆಲುಗು ದೇಶಂ ಪಕ್ಷ ಕೂಡಾ ಎನ್‌ ಡಿಎ ಮೈತ್ರಿಕೂಟದಲ್ಲೇ ಮುಂದುವರೆಯುವುದಾಗಿ ಘೋಷಿಸಿತು.

ಈ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟವು ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವುದು ಖಚಿತವಾಗುವಂತೆ ಕಂಡು ಬರುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಜಯಭೇರಿ ಭಾರಿಸಿದ್ದರೆ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌  ಕೂಡಾ ಜಯಭೇರಿ ಭಾರಿಸಿದ್ದಾರೆ. ಆದರೆ ಅವರ ಸಂಪುಟದ ಸದಸ್ಯರಾದ ಸ್ಮೃತಿ ಇರಾನಿ, ರಾಜೀವ ಚಂದ್ರಶೇಖರ್‌  ಸೋಲುಂಡಿದ್ದಾರೆ.

ಕ್ಲಿಕ್‌ ಮಾಡಿ ನೋಡಿ- ತಪ್ಪದೇ ಓದಿ. ಇ-ಬುಕ್‌ ಕೂಡಾ ಲಭಿಸುತ್ತದೆ.

ಬಿಜೆಪಿಯು ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಅಸ್ಸಾಂ, ಒಡಿಶಾ, ಬಿಹಾರ,ಗುಜರಾತ್‌, ಕರ್ನಾಟಕ, ಆಂದ್ರ ಪ್ರದೇಶ, ತೆಲಂಗಾಣ ಮತ್ತಿತರ ಕಡೆ ಉತ್ತಮ ಸಾಧನೆ ಮಾಡಿದೆ. ಬಿಜೆಪಿಗೆ ಹಿನ್ನಡೆಯಾಗಿರುವ ರಾಜ್ಯಗಳಲ್ಲಿ ಇಂಡಿ ಮೈತ್ರಿಕೂಟದ ಕಾಂಗ್ರೆಸ್‌, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್‌, ಡಿಎಂಕೆ ಮುನ್ನಡೆ ಸಾಧಿಸಿವೆ. ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಕಾಂಗ್ರೆಸ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತ್ವತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮುನ್ನಡೆ/ ಗೆಲುವು ದಾಖಲಿಸಿವೆ.

ಆಂಧ್ರಪ್ರದೇಶ ವಿಧಾನಸಭೆಗೆ ನಡೆದಿರುವ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ, ಬಿಜೆಪಿ ಮತ್ತು ಜನಸೇನಾ ಪಕ್ಷಗಳನ್ನು ಒಳಗೊಂಡ ಎನ್‌ ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದು, ಒಡಿಶಾ ವಿಧಾನಸಭೆಯಲ್ಲೂ ಬಿಜೆಪಿ ಜಯಭೇರಿ ದಾಖಲಿಸಿದೆ. ಈ ಎರಡೂ ರಾಜ್ಯಗಳಲ್ಲಿ ಎನ್‌ ಡಿಎ ಸರ್ಕಾರ ರಚನೆಯಾಗಲಿದೆ. ಆಂಧ್ರಪ್ರದೇಶದಲ್ಲಿ ಈ ವಾರದಲ್ಲೇ ಸರ್ಕಾರ ರಚಿಸುವುದಾಗಿ ತೆಲುಗುದೇಶಂ ಪಕ್ಷ (ಟಿಡಿಪಿ) ಘೋಷಿಸಿದೆ.

ಈ ಮಧ್ಯೆ, ಜೆಡಿಯುನ ನಿತೀಶ್‌ ಕುಮಾರ್‌ ಅವರಿಗೆ ಉಪ ಪ್ರಧಾನಿ ಹುದ್ದೆ ನೀಡುವುದಾಗಿ ಹೇಳಿರುವ ಇಂಡಿ ಮೈತ್ರಿಕೂಟಕ್ಕೆ ತನ್ನ ಪ್ರಧಾನಿ ಯಾರು ಎಂಬುದೇ ಸ್ಪಷ್ಟವಾಗಿಲ್ಲ. ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ ಬಣವು ರಾಹುಲ್‌ ಗಾಂಧಿ ಪ್ರಧಾನಿಯಾಗಲಿ ಎಂಬುದಾಗಿ ಹೇಳಿದರೆ, ಸಮಾಜವಾದಿ ಪಕ್ಷವು ಅಖಿಲೇಶ  ಯಾದವ್‌ ಪ್ರಧಾನಿಯಾಗಬೇಕು ಎಂದು ಬಯಸಿದೆ. ಎನ್‌ ಸಿಪಿಯ ನಾಯಕ ಶರದ್‌ ಪವಾರ್‌ ಅವರು ಟಿಡಿಪಿಯ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸಿದ್ದಕ್ಕೆ ಅಸಮಾಧಾನ ವ್ಯಕ್ತ ಪಡಿಸಿರುವ ಜಮ್ಮು  ಕಾಶ್ಮೀರದ ಒಮರ್‌ ಅಬ್ದುಲ್ಲ ʼಚುನಾವಣಾ ಪೂರ್ವ ಮೈತ್ರಿಯ ಪ್ರಕಾರವೇ ಮುಂದುವರೆಯೋಣ, ಕುದುರೆ ವ್ಯಾಪಾರ ಬೇಡʼ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ, ಕೇಂದ್ರದಲ್ಲಿ ಸರ್ಕಾರ ರಚನೆಯ ಕಸರತ್ತು ಆರಂಭವಾಗಿದ್ದು, ಒಂದು ವಾರದ ಒಳಗೆ ʼಭಾರತವನ್ನು ಆಳುವವವರು ಯಾರು?ʼ ಎಂಬ ಪ್ರಶ್ನೆಗೆ ಉತ್ತರ ಲಭಿಸಲಿದೆ.

ಚುನಾವಣೆಯ ನಿಖರ ಫಲಿತಾಂಶಕ್ಕಾಗಿ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


Advertisement