₹ 100 ಕೋಟಿ:
ಹೌಹಾರಬೇಡಿ ಇದು ಚುನಾವಣಾ ತಂತ್ರಗಾರಿಕೆ ಶುಲ್ಕ!
ಪ್ರಶಾಂತ್ ಕಿಶೋರ್ ಎಂಬ ಹೆಸರು ಭಾರತದಲ್ಲಿ ಬಹಳಷ್ಟು ಮಂದಿಗೆ ಗೊತ್ತಿರಲಾರದು. ಆದರೆ ರಾಜಕೀಯ ಪಕ್ಷಗಳ ವಲಯದಲ್ಲಿ ಅವರ ಹೆಸರು ಚಿರಪರಿಚಿತ. ಏಕೆಂದರೆ ಇವರು ಚುನಾವಣಾ ತಂತ್ರಗಾರಿಕೆಗೆ ಹೆಸರಾದವರು.
ಆದರೆ ಅವರ ಚುನಾವಣಾ ತಂತ್ರಗಾರಿಕೆ
ಸಲಹೆಗೆ ಶುಲ್ಕ ಎಷ್ಟೆಂದು ಗೊತ್ತಿದೆಯೇ? ಕೇಳಿದರೆ ನೀವು ಹೌಹಾರಿ ಬಿಡಬಹುದು. ಅದಕ್ಕೂ ಮುನ್ನ ಅವರು
ಯಾರು ಯಾರಿಗೆ ಚುನಾವಣೆ ತಂತ್ರಗಾರಿಕೆ ಹೇಳಿಕೊಟ್ಟಿದ್ದರು ಎಂದು ನೋಡೋಣ.
ಪ್ರಶಾಂತ್ ಕಿಶೋರ್ ಅವರ ಚುನಾವಣಾ
ತಂತ್ರಗಾರಿಕೆ ಮೊತ್ತ ಮೊದಲ ಬಾರಿಗೆ ಬಹಿರಂಗಕ್ಕೆ ಬಂದದ್ದು 2014ರಲ್ಲಿ. ಆಗ ಅವರು ಭಾರತೀಯ ಜನತಾ ಪಕ್ಷಕ್ಕೆ ಚುನಾವಣಾ ತಂತ್ರಗಾರಿಕೆಯ ಸಲಹಾಕಾರರಾಗಿದ್ದರು. ನರೇಂದ್ರ ಮೋದಿಯವರ ಪರವಾಗಿ 2014 ರ ಲೋಕಸಭಾ ಪ್ರಚಾರದ ಪ್ರಮುಖ
ತಂತ್ರಗಾರರಾಗಿ ಪ್ರಶಾಂತ್ ಗಮನ ಸೆಳೆದರು. ಇದು
ಬಿಜೆಪಿಗೆ ಪ್ರಚಂಡ ಜಯ ಸಾಧಿಸಲು ಸಹಾಯ ಮಾಡಿತು.
2015ರಲ್ಲಿ ಪ್ರಶಾಂತ್
ಕಿಶೋರ್ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಇಲ್ಲಿ ಅವರು ನಿತೀಶ್ ಕುಮಾರ್ ಅವರ ಜನತಾದಳ (ಯು) ಮತ್ತು ಆರ್
ಜೆಡಿ ಹಾಗೂ ಕಾಂಗ್ರೆಸ್ ಮೈತ್ರಿಕೂಟವನ್ನು ಬೆಂಬಲಿಸಿದರು. ಬಿಜೆಪಿ
ವಿರುದ್ಧ ಮೈತ್ರಿಕೂಟದ ಗೆಲುವಿಗೆ ಕಿಶೋರ್ ಸಲಹೆ
ಕಾರಣವಾಯಿತು.
2017 ರ ಉತ್ತರ ಪ್ರದೇಶ ವಿಧಾನಸಭಾ
ಚುನಾವಣೆಯಲ್ಲಿ ಪ್ರಶಾಂತ್ ಅವರು ಕಾಂಗ್ರೆಸ್ ಜೊತೆಗೆ
ಕೆಲಸ ಮಾಡಿದರು, ಆದರೆ ಅವರ
ತಂತ್ರಗಾರಿಕೆ ಇಲ್ಲಿ ಯಶಸ್ವಿ ಫಲಿತಾಂಶವನ್ನು ನೀಡಲಿಲ್ಲ. ಆದರೆ ಆ ಬಳಿಕ
2021 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ
ಪ್ರಶಾಂತ್ ತಂತ್ರಗಾರಿಕೆ ನೆರವಾಯಿತು.
2019 ರ ಆಂಧ್ರಪ್ರದೇಶ ವಿಧಾನಸಭಾ
ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕೈ ಹಿಡಿದರು.
ಪ್ರಶಾಂತ್ ಕಿಶೋರ್ ತಂತ್ರಗಾರಿಕೆ, ಜಗನ್ ಮೋಹನ್ ರೆಡ್ಡಿ ಮತ್ತು ಅವರ ಪಕ್ಷವಾದ ವೈಎಸ್‌ಆರ್‌ಸಿಪಿಗೆ ಗಮನಾರ್ಹ ಗೆಲುವನ್ನು ತಂದುಕೊಟ್ಟಿತು.
2020 ರ ದೆಹಲಿ ವಿಧಾನಸಭಾ
ಚುನಾವಣೆಯ ಸಮಯದಲ್ಲಿ ಕಿಶೋರ್ ಅವರು ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್
ಆದ್ಮಿ ಪಕ್ಷಕ್ಕೆ ಸಂಕ್ಷಿಪ್ತ ತಂತ್ರಗಾರಿಕೆ ಹೇಳಿಕೊಟ್ಟರು. ಪರಿಣಾಮ ದೆಹಲಿಯಲ್ಲಿ ಆಮ್
ಆದ್ಮಿ ಪಕ್ಷ ಪ್ರಚಂಡ ವಿಜಯ ಸಾಧಿಸಿತು.
2021ರ ಪಶ್ಚಿಮ ಬಂಗಾಳದ ವಿಧಾನಸಭಾ
ಚುನಾವಣೆಯಲ್ಲಿ,
ಬಿಜೆಪಿಯಿಂದ ಕಠಿಣ ಸವಾಲು ಎದುರಿಸಬೇಕಾಗಿ ಬಂದ ಮಮತಾ ಬ್ಯಾನರ್ಜಿ ಮತ್ತು ಅವರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ
ಅಧಿಕಾರ ಉಳಿಸಿಕೊಳ್ಳಲು ನೆರವಾದದ್ದು ಕಿಶೋರ್ ಅವರ ತಂತ್ರಗಾರಿಕೆಯೇ.
ಈ ಮಧ್ಯೆ ಪ್ರಶಾಂತ್ ಕಿಶೋರ್ ಅವರು
ತಮ್ಮದೇ ಆದ ಜನ ಸೂರಜ್ ಪಕ್ಷವನ್ನೂ ಸ್ಥಾಪಿಸಿದ್ದಾರೆ.
ಇಷ್ಟೆಲ್ಲದರ ನಡುವೆ ಅವರು ರಾಜಕೀಯ
ಪಕ್ಷಗಳು ಅಥವಾ ನಾಯಕರಿಗೆ ಕೊಡುವ ಚುನಾವಣಾ ತಂತ್ರಗಾರಿಕೆ ಸಲಹೆ ತುಟ್ಟಿಯೇ ದುಬಾರಿಯೇ ಎಂಬ ಪ್ರಶ್ನೆ
ಹಲವರನ್ನು ಕಾಡುವುದು ಸಹಜ. ಅದು ಗೊತ್ತಾದರೆ ಜನ ಸಾಮಾನ್ಯರು ಹೌ ಹಾರುವುದು ಮಾತ್ರ ಖಂಡಿತ.
ಏಕೆಂದರೆ ಅದು ಎಷ್ಟೆಂಬುದನ್ನು ಸ್ವತಃ
ಪ್ರಶಾಂತ್ ಕಿಶೋರ್ ಅವರೇ ಹೇಳಿದ್ದಾರೆ. ಅಗ್ಗವಲ್ಲ, ತುಂಬಾ ತುಟ್ಟಿಕರ ಎಂಬುದನ್ನು ಇದೀಗ
ಸ್ವತಃ ಪ್ರಶಾಂತ್ ಕಿಶೋರ್ ಅವರೇ ಬಹಿರಂಗ ಪಡಿಸಿದ್ದಾರೆ. ಅಕ್ಟೋಬರ್ 31
ರಂದು, ಮುಂಬರುವ ಬಿಹಾರ ಉಪಚುನಾವಣೆಯ ಪ್ರಚಾರದಲ್ಲಿ ಇದನ್ನು ಬಹಿರಂಗ ಪಡಿಸಿದ ಅವರು ಅದರ
ಮೊತ್ತ 100 ಕೋಟಿ ರೂಪಾಯಿಗಳು ಅಥವಾ ಅದಕ್ಕಿಂತಲೂ ಹೆಚ್ಚು ಎಂದು ಹೇಳಿದ್ದಾರೆ.
ಬಿಹಾರದ ಬೆಳಗಂಜ್‌ನಲ್ಲಿ
ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಶಾಂತ್ ಕಿಶೋರ್, ಮುಸ್ಲಿಂ
ಸಮುದಾಯದ ಸದಸ್ಯರೇ ಹೆಚ್ಚಿದ್ದ ಸಭೆಯಲ್ಲಿ ಮಾತನಾಡುತ್ತಾ, ಜನರು
ತಮ್ಮ ಅಭಿಯಾನಗಳಿಗೆ ಹಣದ ಮೂಲ ಏನು ಎಂದು ಆಗಾಗ ಕೇಳುವುದುಂಟು ಅದರ ಬಗ್ಗೆ ಹೇಳುತ್ತೇನೆ ಕೇಳಿʼ ಎನ್ನುತ್ತಾ
ತಮ್ಮ ಶುಲ್ಕದ ವಿವರ ಬಿಚ್ಚಿಟ್ಟಿದ್ದಾರೆ.
“ವಿವಿಧ ರಾಜ್ಯಗಳಲ್ಲಿ ಹತ್ತು
ಸರ್ಕಾರಗಳು ನನ್ನ ಕಾರ್ಯತಂತ್ರದ ಮೇಲೆ ನಡೆಯುತ್ತಿವೆ. ನನ್ನ ಪ್ರಚಾರಕ್ಕಾಗಿ ಟೆಂಟ್ ಇತ್ಯಾದಿಗಳನ್ನು
ಸ್ಥಾಪಿಸಲು ನನ್ನ ಬಳಿ ಸಾಕಷ್ಟು
ಹಣವಿಲ್ಲ ಎಂದು ನೀವು ಭಾವಿಸುತ್ತೀರಾ? ನಾನು ಅಷ್ಟು ದುರ್ಬಲ ಎಂದು
ನೀವು ಭಾವಿಸುತ್ತೀರಾ?
ಬಿಹಾರದಲ್ಲಿ ನನ್ನಷ್ಟು ಶುಲ್ಕವನ್ನು ಯಾರೂ ಕೇಳಿಲ್ಲ. ನಾನು ಕೇವಲ
ಒಂದು ಚುನಾವಣೆಯಲ್ಲಿ ಯಾರಿಗಾದರೂ ಸಲಹೆ ನೀಡಿದರೆ ಅದಕ್ಕೆ ನನ್ನ
ಶುಲ್ಕ ₹
100 ಕೋಟಿ ರೂಪಾಯಿ ಅಥವಾ ಅದಕ್ಕಿಂತ
ಹೆಚ್ಚು.
ನಾನು ಅಂತಹ ಒಂದು ಚುನಾವಣಾ ಸಲಹೆಯೊಂದಿಗೆ ನನ್ನ ಪ್ರಚಾರವನ್ನು ಮುಂದಿನ
ಎರಡು ವರ್ಷಗಳವರೆಗೆ ಮುಂದುವರಿಸಬಹುದು”
- ಇದು ಪ್ರಶಾಂತ್ ಕಿಶೋರ್ ಅವರ ಮಾತು.
ಬೇಕಿದ್ದರೆ ಈ ಕೆಳಗಿನ ವಿಡಿಯೋ ನೋಡಿ ಅವರ ಮಾತುಗಳನ್ನು ಕೇಳಿಸಿಕೊಳ್ಳಿ:
ಅಥವಾ ಈ ಲಿಂಕ್ ಮೂಲಕ ಪರಿಶೀಲಿಸಿಕೊಳ್ಳಿ: https://twitter.com/i/status/1852360442074562792