Showing posts with label ಕೇರಳ. Show all posts
Showing posts with label ಕೇರಳ. Show all posts

Thursday, March 20, 2025

ಪುಟ್ಟ ಬಾಲಕಿಯ ಸಂಗೀತ ಪ್ರವಾಹಕ್ಕೆ ಖಾಕಿ ತಡೆ!

 ಪುಟ್ಟ ಬಾಲಕಿಯ ಸಂಗೀತ ಪ್ರವಾಹಕ್ಕೆ ಖಾಕಿ ತಡೆ!

ತ್ತು ವರುಷದ ಪುಟ್ಟ ಬಾಲಕಿ ಗಂಗಾ ಶಶಿಧರನ್‌ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿರುವ ಅದ್ಭುತ ಸಂಗೀತ ಪ್ರತಿಭೆ. ಈಕೆಯ ಪಿಟೀಲು ವಾದನದ ಮಾಧುರ್ಯಕ್ಕೆ ತಲೆದೂಗದವರಿಲ್ಲ.

ಆದರೆ ಇತ್ತೀಚೆಗೆ ಕೇರಳದ ಅಲಪ್ಪುಳದ ಕೊಟ್ಟಂಕುಲಂಗರ ದೇವಸ್ಥಾನದಲ್ಲಿ ಈಕೆಯ ಭಕ್ತಿ ಸಂಗೀತಕ್ಕೆ ಪೊಲೀಸರ ತಡೆ ಬಿತ್ತು. ದೇವಸ್ಥಾನದಲ್ಲಿ ಇನ್ನೂ ಉತ್ಸವ ಮುಂದುವರೆದಿತ್ತು. ದೇವಸ್ಥಾನ ಸಮೀಪದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಪುಟ್ಟ ಬಾಲಕಿ ಶಶಿ ಭಾವಪೂರ್ಣವಾಗಿ ಪಿಟೀಲು ವಾದನದಲ್ಲಿ ನಿರತಳಾಗಿದ್ದಳು.

ಆಕೆ ನುಡಿಸುತ್ತಿದ್ದ ʼಮರುತಮಲೈ ಮಾಮನಿಯೇ ಮುರುಗಯ್ಯʼ ತಮಿಳು ಹಾಡಿಗೆ ಅಲ್ಲಿ ನೆರೆದಿದ್ದ ಸಹಸ್ರಾರು ಮಂದಿ ತಲೆದೂಗುತ್ತಾ ಕುಳಿತಿದ್ದರು.

ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವರು ʼರಾತ್ರಿ ೧೦ ಗಂಟೆಯಾಗಿದೆ. ಕಚೇರಿ ನಿಲ್ಲಿಸುʼ ಎಂದು ಆಕೆಯ ಬಳಿಗೆ ವೇದಿಕೆಯೇರಿ ಬಂದು ಸೂಚಿಸಿದರು. ಈ ದಿಢೀರ್‌ ಸೂಚನೆಯಿಂದ ಪುಟ್ಟ ಬಾಲಕಿ ಆಘಾತಕ್ಕೆ ಒಳಗಾದಳು. ನೆರೆದಿದ್ದ ಜನರೂ ದಿಗ್ಭ್ರಮೆಗೊಂಡರು. ಪೊಲೀಸರೂ ಬಂದು ಸಂಗೀತ ಕಾರ್ಯಕ್ರಮ ನಿಲ್ಲಿಸಿದರು.

ಕೊನೆಗೆ ಆ ಪುಟ್ಟ ಬಾಲಕಿ ಕೊಠಡಿಯೊಂದರಲ್ತಲಿ ಪ್ರೀತಿಯ ಪಿಟೀಲನ್ನು ಹಿಡಿದುಕೊಂಡು ಕುಳಿತಿದ್ದ ದೃಶ್ಯವನ್ನು ಕೂಡಾ ಸೇರಿಸಿ ಮಲಯಾಳಂ ಮನೋರಮಾ ವರದಿ ಮಾಡಿದೆ.

ಪುಟ್ಟ ಬಾಲಕಿಯ ಪಿಟೀಲುವಾದನಕ್ಕೆ ತಡೆ ಹಾಕಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ. 

ಈ ಘಟನೆ ಬಗ್ಗೆ ನಿಮಗೆ ಏನನ್ನಿಸಿತು? ಕಾಮೆಂಟ್ಸ್‌ ವಿಭಾಗದಲ್ಲಿ ಬರೆಯಿರಿ.

ಬಾಲಕಿಯ ಮಧುರವಾದ ಪಿಟೀಲು ಧ್ವನಿ ಆಲಿಸಲು ಈ ಕೆಳಗಿನ ಸುದ್ದಿಯಲ್ಲಿನ ವಿಡಿಯೋ ನೋಡಿರಿ:

ಪುಸ್ತಕಗಳ ಬಿಡುಗಡೆ ಹೀಗಾಯ್ತು ನೋಡಿ…

Saturday, November 23, 2024

ಬಲ್ಲಿರೇನಯ್ಯಾ? ಚುನಾವಣೆಗಳಲ್ಲಿ ಗೆದ್ದವರು ಯಾರೆಂದುಕೊಂಡಿದ್ದೀರಿ?

  ಬಲ್ಲಿರೇನಯ್ಯಾ? ಚುನಾವಣೆಗಳಲ್ಲಿ ಗೆದ್ದವರು

ಯಾರೆಂದುಕೊಂಡಿದ್ದೀರಿ?


ಭಾರತದಲ್ಲಿ ನಡೆದ
 ವಿವಿಧ ಚುನಾವಣೆಗಳಲ್ಲಿ ಗೆದ್ದವರು ಯಾರೆಂದುಕೊಂಡಿದ್ದೀರಿ? ಕುತೂಹಲಕಾರಿ ಚುನಾವಣೆಗಳ ಫಲಿತಾಂಶಗಳು ಇಲ್ಲಿ ಕ್ಷಣ ಕ್ಷಣಕ್ಕೂ ಪ್ರತಿಫಲಿಸುತ್ತವೆ. ಮೇಲಿನ ಚಿತ್ರದ ಕಿರೀಟವನ್ನು ಕ್ಲಿಕ್‌ ಮಾಡಿ ತಿಳಿದುಕೊಳ್ಳಿ.

ಕ್ಲಿಕ್‌ ಮಾಡಿರಿ: http://www.paryaya.com/p/blog-page_3.html

Wednesday, June 12, 2024

ಕುವೈತ್ ಅಗ್ನಿ ದುರಂತ: 40 ಭಾರತೀಯರ ಸಾವು

 ಕುವೈತ್ ಅಗ್ನಿ ದುರಂತ: 40 ಭಾರತೀಯರ ಸಾವು

ವದೆಹಲಿ: ಕುವೈತ್‌ನಲ್ಲಿ ಡಜನ್‌ಗಟ್ಟಲೆ ಕಾರ್ಮಿಕರು ವಾಸಿಸುತ್ತಿದ್ದ ಆರು ಅಂತಸ್ತಿನ ಕಟ್ಟಡಕ್ಕೆ 2024 ಜೂನ್‌ 12ರ ಬುಧವಾರ ನಸುಕಿನಲ್ಲಿ ಬೆಂಕಿ ತಗುಲಿದ ಪರಿಣಾಮವಾಗಿ ಕನಿಷ್ಠ 40 ಭಾರತೀಯರು ಸೇರಿದಂತೆ ಸುಮಾರು 49 ಮಂದಿ ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ನಿವಾಸಿಗಳು ಮಲಗಿದ್ದ ಕಾರಣ ಹೊಗೆಯಿಂದ ಉಸಿರುಗಟ್ಟಿ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುವೈತ್‌ನ ದಕ್ಷಿಣ ಅಹ್ಮದಿ ಗವರ್ನರೇಟ್‌ನ ಮಂಗಾಫ್ ಪ್ರದೇಶದಲ್ಲಿ ಕಟ್ಟಡದ ಕೆಳ ಮಹಡಿಯಲ್ಲಿನ ಅಡುಗೆಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅರಬ್ ಟೈಮ್ಸ್ ಪ್ರಕಾರ, ಮೃತರಲ್ಲಿ ಹೆಚ್ಚಿನವರು ಕೇರಳ, ತಮಿಳುನಾಡು ಮತ್ತು ಉತ್ತರ ಭಾರತದ ರಾಜ್ಯಗಳವರು, ಅವರ ವಯಸ್ಸು 20 ರಿಂದ 50 ವರ್ಷಗಳು.
ತಲಾ 2 ಲಕ್ಷ ರೂ ಪರಿಹಾರ: ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತಲಾ 2 ಲಕ್ಷ ರೂಪಾಯಿಗಳ ಎಕ್ಸ್‌ ಗ್ರಾಷಿಯಾ ಪರಿಹಾರ ಘೋಷಿಸಿದ್ದಾರೆ. ಪ್ರಧಾನಿಯವರ ಸೂಚನೆ ಮೇರೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್‌ ಸಿಂಗ್‌ ಅವರು ತುರ್ತಾಗಿ ಕುವೈತಿಗೆ ಪಯಣಿಸಿದ್ದಾರೆ.  
ಕುವೈತ್‌ನ ಉಪ ಪ್ರಧಾನ ಮಂತ್ರಿ ಹಾಗೂ ಆಂತರಿಕ ಸಚಿವ ಶೇಖ್ ಫಹಾದ್ ಅಲ್-ಯೂಸುಫ್ ಅಲ್-ಸಬಾಹ್ ಅವರು ಅಗ್ನಿ ದುರಂತವು "ಕಂಪೆನಿ ಮತ್ತು ಕಟ್ಟಡ ಮಾಲೀಕರ ದುರಾಸೆಯ ಪರಿಣಾಮವಾಗಿದೆ" ಎಂದು ಹೇಳಿದ್ದಾರೆ.
ಕಟ್ಟಡವನ್ನು ಎನ್‌ಬಿಟಿಸಿ ಗ್ರೂಪ್ ಬಾಡಿಗೆಗೆ ಪಡೆದಿದ್ದು, ಮಲಯಾಳಿ ಉದ್ಯಮಿ ಕೆ.ಜಿ.ಅಬ್ರಹಾಂ ಒಡೆತನದಲ್ಲಿದೆ. ಗಲ್ಫ್‌ನಲ್ಲಿ ಕಡಿಮೆ ಸಂಬಳದ, ನೀಲಿ ಕಾಲರ್ ಕೆಲಸಗಾರರು ಹೆಚ್ಚಾಗಿ ಕಿಕ್ಕಿರಿದ ವಸತಿಗಳಲ್ಲಿ ವಾಸಿಸುತ್ತಾರೆ.
ಅಗ್ನಿ ದುರಂತ ಸಂಭವಿಸಿದ ಕಟ್ಟಡದ ಹೊರಗೆ ಕುವೈಟ್ ಅಗ್ನಿಶಾಮಕ ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್‌ಗಳು ಜಮಾಯಿಸಿವೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ.
ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದರು. ಸಭೆಯ ನಂತರ ಶೀಘ್ರದಲ್ಲೇ ಕುವೈತ್‌ಗೆ ತೆರಳುವುದಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (MoS) ಕೀರ್ತಿ ವರ್ಧನ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

Thursday, May 30, 2024

ಕೇರಳಕ್ಕೆ ಬಂತು ಮುಂಗಾರು, ಭಾರೀ ಮಳೆ, ಯೆಲ್ಲೋ ಅಲರ್ಟ್‌

 ಕೇರಳಕ್ಕೆ ಬಂತು ಮುಂಗಾರು, ಭಾರೀ ಮಳೆ, ಯೆಲ್ಲೋ ಅಲರ್ಟ್‌

ತಿರುವನಂತಪುರಂ: ಕೇರಳ ಮತ್ತು ಈಶಾನ್ಯ ಭಾರತದ ಬಹುತೇಕ ಭಾಗಗಳಿಗೆ  ಈದಿನ (30 ಮೇ 2024) ನೈಋತ್ಯ ಮುಂಗಾರು ಆಗಮಿಸಿದೆ, ಕೇರಳದಲ್ಲಿ ಮತ್ತು ಮಣಿಪುರದಲ್ಲಿ ಭಾರೀ ಮಳೆ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಟಿಸಿದೆ.

ಮೇ 31 ರ ವೇಳೆಗೆ ಕೇರಳದ ಮೇಲೆ ಮುಂಗಾರು ಪ್ರಾರಂಭವಾಗಲಿದೆ ಎಂದು ಹವಾಮಾನ ಇಲಾಖೆ ಇದಕ್ಕೆ ಮುನ್ನ ಮೊದಲು ಘೋಷಿಸಿತ್ತು. ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಭಾರೀ ಮಳೆಯಾಗುತ್ತಿದೆ, ಇದರ ಪರಿಣಾಮವಾಗಿ ಮೇ ತಿಂಗಳಲ್ಲಿ ಹೆಚ್ಚುವರಿ ಮಳೆಯಾಗಿದೆ ಎಂದು ಹವಾಮಾನ ಕಚೇರಿಯ ಅಂಕಿಅಂಶಗಳು ಹೇಳಿವೆ.

ಕೇರಳಕ್ಕೆ ಸಾಮಾನ್ಯವಾಗಿ ನೈಋತ್ಯ ಮುಂಗಾರು ಜೂನ್‌ 1ರಂದು ಪ್ರಾರಂಭವಾಗುತ್ತದೆ. ಹಾಗೆಯೇ ಈಶಾನ್ಯ ಭಾರತದ  ಅರುಣಾಚಲ ಪ್ರದೇಶ, ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನಲ್ಲಿ ಜೂನ್ 5 ರಂದು ಮುಂಗಾರು ಆಗಮಿಸುವುದು ವಾಡಿಕೆಯಾಗಿದೆ..

ಮುಂಗಾರು ಆಗಮನದ ಹಿನ್ನೆಲೆಯಲ್ಲಿ ಐಎಂಡಿಯು ತನ್ನ ಮುನ್ಸೂಚನೆಯನ್ನು ಪರಿಷ್ಕರಿಸಿದೆ ಮತ್ತು ಗುರುವಾರ ಕೇರಳದ 14 ಜಿಲ್ಲೆಗಳಿಗೆ ಹಳದಿ ಎಚ್ಚರಿಕೆಯನ್ನು ನೀಡಿದೆ. ಹಳದಿ ಎಚ್ಚರಿಕೆಯ ಪ್ರಕಾರ 64.5 ಎಂಎಂನಿಂದ 115.5 ಎಂಎಂವರೆಗೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.

ಯಾವ ಯಾವ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ?

ಮೇ 31: ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್

ಜೂನ್ 1: ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು, ಕಾಸರಗೋಡು

ಜೂನ್ 2: ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು, ಕಾಸರಗೋಡು.

Monday, May 1, 2023

ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ..

 ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ..

ಹೌದು. ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ. ಇದು ಬೆಂಗಳೂರಿನ ಗಿರಿನಗರದ ಮೂಲ ದೇವರಾದ ಮಹಾಗಣಪತಿಯ ರಥೋತ್ಸವ.
ಬೆಂಗಳೂರಿನ ಗಿರಿನಗರದಲ್ಲಿ ಮಹಾಗಣಪತಿ ರಥೋತ್ಸವ ಏಪ್ರಿಲ್‌ ೨೬ರಿಂದ ಮೇ ೦೧ರವರೆಗೆ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಿತು.

ಕರ್ನಾಟಕದ ಪಶ್ಚಿಮ ಕರಾವಳಿಯ ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಹಾಗೂ ಕೇರಳದಲ್ಲಿ ನಡೆಯುವ ಮಾದರಿಯಲ್ಲಿ ಜಾತ್ರೆ ಹಾಗೂ ರಥೋತ್ಸವ ಇಲ್ಲಿನ ಆಸುಪಾಸಿನ ಭಕ್ತಾದಿಗಳನ್ನು ವಿಶೇಷವಾಗಿ ಆಕರ್ಷಿಸಿತು.

ಕೇರಳ, ದಕ್ಷಿಣ ಕನ್ನಡ, ಉಡುಪಿ ದೇವಾಲಯಗಳ ಮಾದರಿಯ  ದರ್ಶನಬಲಿ, ದೇವನೃತ್ಯ, ರಂಗಪೂಜೆ, ಮತ್ತು ವಿಶೇಷವಾಗಿ ಚೆಂಡೆ ವಾದನ, ಕೊಂಬು ಕಹಳೆಯೊಂದಿಗೆ ಮಹಾರಥೋತ್ಸವ ಜರುಗಿತು.


ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕೂಡಾ ೨೦೨೨ರಲ್ಲಿ ಕೇರಳ, ಕರ್ನಾಟಕದ ಪಶ್ಚಿಮ ಕರಾವಳಿ ಮಾದರಿಯಲ್ಲೇ ನೆರವೇರಿತ್ತು.


ಏಪ್ರಿಲ್‌ ೩೦ರಂದು ನಡೆದ ಮಹಾಗಣಪತಿ ದೇವರ ರಥೋತ್ಸವ ಸಂಭ್ರಮದ ವಿಡಿಯೋಗಳು ಇಲ್ಲಿವೆ.


Wednesday, August 17, 2022

ಪಿಂಚಣಿ ಮುಂದೂಡಿದ ವೇತನ, ಪಿಂಚಣಿ ಹಕ್ಕು ಸಾಂವಿಧಾನಿಕ: ಕೇರಳ ಹೈಕೋರ್ಟ್

 ಪಿಂಚಣಿ ಮುಂದೂಡಿದ ವೇತನ, ಪಿಂಚಣಿ ಹಕ್ಕು ಸಾಂವಿಧಾನಿಕ: ಕೇರಳ ಹೈಕೋರ್ಟ್

ತಿರುವನಂತಪುರಂ: ಪಿಂಚಣಿಯು ಉದ್ಯೋಗದಾತರ ಇಚ್ಛೆಯಂತೆ ಪಾವತಿಸಬೇಕಾದ ವರದಾನವಲ್ಲ; ನಿಧಿಯ ಕೊರತೆಯನ್ನು ಸಮರ್ಥಿಸುವ ಮೂಲಕ ಉದ್ಯೋಗದಾತನು ಜವಾಬ್ದಾರಿಯಿಂದ ಹೊರಗುಳಿಯುವಂತಿಲ್ಲ.

ಪಿಂಚಣಿ ಪಡೆಯುವ ಹಕ್ಕು ಸಾಂವಿಧಾನಿಕ ಹಕ್ಕು. ಅದು ಉದ್ಯೋಗದಾತರ ಇಚ್ಛೆಯಂತ ನಿವೃತ್ತ ಉದ್ಯೋಗಿಗಳಿಗೆ ಪಾವತಿ ಮಾಡಬೇಕಾದ ವರದಾನ ಅಲ್ಲ. ನಿಧಿಯ ಕೊರತೆಯನ್ನು ಮುಂದಿಟ್ಟ ಉದ್ಯೋಗದಾತ ತನ್ನ ಜವಾಬ್ದಾರಿ ತಪ್ಪಿಸಿಕೊಳ್ಳುವಂತಿಲ್ಲ ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿದೆ.

೨೦೨೨ರ ಆಗಸ್ಟ್‌ ೫ರ ಶುಕ್ರವಾರ ಈ ಮಹತ್ವದ ತೀರ್ಪು ನೀಡಿದ ಕೇರಳ ಹೈಕೋರ್ಟ್‌ ನ್ಯಾಯಮೂರ್ತಿ ವಿ.ಜಿ. ಅರುಣ್‌ ಅವರು ʼನಿವೃತ್ತಿ ವೇತನವು ಮುಂದೂಡಿಕೆಯಾಗಿರುವ ವೇತನ. ನಿವೃತ್ತಿ ವೇತನದ ಹಕ್ಕು ಭಾರತೀಯ ಸಂವಿಧಾನದ ೩೦೦ ಎ ವಿಧಿಯ ಅಡಿಯಲ್ಲಿ ಇರುವ ಆಸ್ತಿ ಹಕ್ಕಿಗೆ ಹೋಲುತ್ತದೆ ಎಂದು ಹೇಳಿದರು.

"ಪಿಂಚಣಿಯು ಇನ್ನು ಮುಂದೆ ಉದ್ಯೋಗದಾತರ ಇಚ್ಛೆ ಮತ್ತು ಆಸೆಗಳಿಗೆ ಅನುಗುಣವಾಗಿ ಪಾವತಿಸಬೇಕಾದ ವರದಾನವಲ್ಲ. ಪಿಂಚಣಿಯು ಮುಂದೂಡಿಕೆಯಾಗಿರುವ  ಸಂಬಳವಾಗಿದೆ, ಇದು ಸಂವಿಧಾನದ 300 ಎ ಯಂತೆ ಇರುವ ಆಸ್ತಿ ಹಕ್ಕನ್ನು ಹೋಲುತ್ತದೆ. ಪಿಂಚಣಿ ಹಕ್ಕು, ಮೂಲಭೂತ ಹಕ್ಕಲ್ಲದಿದ್ದರೆ, ಖಂಡಿತವಾಗಿಯೂ ಒಂದು ಸಾಂವಿಧಾನಿಕ ಹಕ್ಕು. ಕಾನೂನಿನ ಅಧಿಕಾರವನ್ನು ಹೊರತುಪಡಿಸಿ ನಿವೃತ್ತ ಉದ್ಯೋಗಿಯು ಈ ಹಕ್ಕಿನಿಂದ ವಂಚಿತರಾಗಲು ಸಾಧ್ಯವಿಲ್ಲ." ಎಂದು ತೀರ್ಪು ಹೇಳಿದೆ.

ರಾಜ್ಯ ಸರ್ಕಾರದ ಸಂಪೂರ್ಣ ಸ್ವಾಮ್ಯದ ನೋಂದಾಯಿತ ಸೊಸೈಟಿಯಾದ ಕೇರಳ ಬುಕ್ಸ್ ಅಂಡ್ ಪಬ್ಲಿಕೇಷನ್ಸ್ ಸೊಸೈಟಿಯ (ಕೆಬಿಪಿಎಸ್) ಹಾಲಿ ಮತ್ತು ನಿವೃತ್ತ ನೌಕರರು ಸಲ್ಲಿಸಿದ ಅರ್ಜಿಗಳ ಸಮೂಹದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ತೀರ್ಪು ನೀಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್), ವಿವಿಧ ನಿಬಂಧನೆಗಳ ಕಾಯಿದೆ ಮತ್ತು ಉದ್ಯೋಗಿಗಳ ಪಿಂಚಣಿ ಯೋಜನೆಗಳನ್ನು ಕೆಬಿಪಿಎಸ್ ಉದ್ಯೋಗಿಗಳಿಗೆ ಅನ್ವಯಿಸುವಂತೆ ಮಾಡಲಾಗಿದೆ ಎಂದು ಅದು ಹೇಳಿದೆ.

ಕೆಬಿಪಿಎಸ್‌ ಸಂಪೂರ್ಣವಾಗಿ ಸರ್ಕಾರದ ಒಡೆತನದಲ್ಲಿ ಇದ್ದರೂ ಸರ್ಕಾರಿ ನೌಕರರು ಮತ್ತು ಕೆಬಿಪಿಎಸ್‌ ನೌಕರರ ನಡುವಿನ ಸಂಬಳ ಮತ್ತು ಪಿಂಚಣಿಗಳಲ್ಲಿನ ಗಮನಾರ್ಹ ವ್ಯತ್ಯಾಸ ಇರುವುದನ್ನು ಕಾರ್ಮಿಕ ಸಂಘಟನೆಗಳು ಎತ್ತಿ ತೋರಿಸಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಮಿಕ ನ್ಯಾಯಾಲಯದ ನಿರ್ದೇಶನದಂತೆ, ಕೆಬಿಪಿಎಸ್ ನೌಕರರಿಗೆ ಪ್ರತ್ಯೇಕ ಪಿಂಚಣಿ ನಿಧಿಯನ್ನು ರಚಿಸುವ ಸಾಧ್ಯತೆಯ ಬಗ್ಗೆ ವರದಿ ಸಲ್ಲಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿತ್ತು.

ವರದಿಯು ಕೇರಳ ಸೇವಾ ನಿಯಮಗಳ ಭಾಗ III ರ ಅಡಿಯಲ್ಲಿ ಒದಗಿಸಲಾದ ಪಿಂಚಣಿ ಪಾವತಿಯನ್ನು ಸೂಚಿಸಿದೆ ಸರ್ಕಾರ ಮತ್ತು ರಾಜ್ಯದಿಂದ ಬಜೆಟ್ ಬೆಂಬಲದೊಂದಿಗೆ ಅಂತಿಮವಾಗಿ ಕೆಬಿಪಿಎಸ್‌ (KBPS) ನೌಕರರ ಕೊಡುಗೆ ಪಿಂಚಣಿ ಮತ್ತು ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2014 ಇವುಗಳನ್ನು ಪ್ರಕಟಿಸಲು ಮಂಜೂರಾತಿ ನೀಡಲಾಗಿತ್ತು..

ನ್ಯಾಯಾಲಯದಲ್ಲಿ ನಿವೃತ್ತ ನೌಕರರು ವಕೀಲರಾದ ಕಾಳೀಶ್ವರಂ ರಾಜ್ ಮತ್ತು ಟಿ.ಎಂ.ರಾಮನ್ ಕರ್ತಾ ಅವರ ಮೂಲಕ ವಾದ ಮಂಡಿಸಿದರು ಮತ್ತು ಪಿಂಚಣಿ ನಿಯಮಗಳಿಗೆ ಅನುಸಾರವಾಗಿ ನಿವೃತ್ತಿಯಾದ ದಿನಾಂಕದಿಂದ ಪೂರ್ಣ ಪಿಂಚಣಿ ಪಡೆಯಲು ನಿವೃತ್ತರು ಅರ್ಹರು ಎಂದು ವಕೀಲರು ವಾದಿಸಿದರು.

ಮತ್ತೊಂದೆಡೆ, ಹಾಲಿ ನೌಕರರು ವಕೀಲರಾದ ಪಿ. ರಾಮಕೃಷ್ಣನ್ ಮತ್ತು ಶೆರ್ರಿ ಜೆ. ಥಾಮಸ್ ಅವರ ಮೂಲಕ ಹಾಜರಾಗಿ, ಇಪಿಎಫ್ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಉಲ್ಲೇಖಿಸಿ ಪಿಂಚಣಿ ನಿಯಮಾವಳಿಗಳನ್ನು ಸೂಚಿಸುವ ಸರ್ಕಾರಿ ಆದೇಶವನ್ನು ರದ್ದುಗೊಳಿಸಬೇಕು ಎಂದು ಪ್ರತಿಪಾದಿಸಿದರು.

ಕೆಬಿಪಿಎಸ್ ಪರ ವಕೀಲೆ ಲತಾ ಆನಂದ್ ವಾದ ಮಂಡಿಸಿ, ಸೊಸೈಟಿಯು ಭಾರೀ ಲಾಭದಲ್ಲಿ ನಡೆಯುತ್ತಿಲ್ಲ, ಯಾವುದೇ ಸಂದರ್ಭದಲ್ಲೂ ಸೊಸೈಟಿಯಿಂದ ಬರುವ ಆದಾಯವನ್ನು ನಿವೃತ್ತ ನೌಕರರಿಗೆ ಪಿಂಚಣಿ ಪಾವತಿಗೆ ಬಳಸಲಾಗದು. ಈಗಾಗಲೇ ನೀಡಿದ ಕೊಡುಗೆಯನ್ನು ಇಪಿಎಫ್ ಸಂಸ್ಥೆ ಮರುಪಾವತಿಸಿದರೆ ಅಥವಾ ಸರ್ಕಾರದಿಂದ ಬರಬೇಕಾದ ದೊಡ್ಡ ಮೊತ್ತವನ್ನು ಪಾವತಿಸಿದರೆ ಮಾತ್ರ ಪೂರ್ಣ ಪಿಂಚಣಿ ಪಾವತಿಸಬಹುದು ಎಂದು ಹೇಳಿದರು.

ಪಿಂಚಣಿ ನಿಯಮಾವಳಿಗಳ ಪ್ರಕಾರ, ನೌಕರನು ತನ್ನ ನಿವೃತ್ತಿಯ ಮರುದಿನದಿಂದ ಪಿಂಚಣಿಗೆ ಅರ್ಹನಾಗುತ್ತಾನೆ. ಪಿಂಚಣಿದಾರರಿಗೆ ನ್ಯಾಯಸಮ್ಮತವಾಗಿ ಪಾವತಿಸಬೇಕಾದ ಮೊತ್ತಕ್ಕಿಂತ ಕಡಿಮೆ ಮೊತ್ತವನ್ನು ಪಾವತಿಸಲು ಉದ್ಯೋಗದಾತರಿಗೆ ಅನುವು ಮಾಡಿಕೊಡುವ ಯಾವುದೇ ನಿಬಂಧನೆಗಳನ್ನು ನಿಯಮಾವಳಿಗಳು ಒಳಗೊಂಡಿಲ್ಲ ಎಂದು ನ್ಯಾಯಾಲಯವು ವಿಶ್ಲೇಷಿಸಿತು.  

"ಪಿಂಚಣಿ ಮೂಲ ನಿಧಿಯ ಒಂದು ಗಮನಾರ್ಹ ಭಾಗವು ಇಪಿಎಫ್ ಸಂಸ್ಥೆಯಿಂದ ಮರುಪಾವತಿಸಬೇಕಾದ ಮೊತ್ತವನ್ನು ಒಳಗೊಂಡಿರುತ್ತದೆ ಎಂಬುದು ನಿಜವಿರಬಹುದು. ವಾಸ್ತವವಾಗಿ ಇದುವರೆಗೆ ಯಾವುದೇ ಮೊತ್ತವನ್ನು ಮರುಪಾವತಿ ಮಾಡಲಾಗಿಲ್ಲ ಎಂಬ ಅಂಶವೂ ವಿವಾದಿತವಾಗಿಲ್ಲ. ಆಗಲೂ, ಈ ಹಿನ್ನೆಲೆಯಲ್ಲಿ ನಿವೃತ್ತ ನೌಕರರಿಗೆ ಪಿಂಚಣಿ ನಿರಾಕರಿಸಬಹುದೇ ಎಂಬುದೇ ಪ್ರಶ್ನೆ”.

ಸುಪ್ರೀಂ ಕೋರ್ಟ್ ಪೂರ್ವನಿದರ್ಶನಗಳನ್ನು ಅವಲೋಕಿಸಿದ ನಂತರ, ನ್ಯಾಯಮೂರ್ತಿ ಅರುಣ್ ಅವರು ಪಿಂಚಣಿ ಬಾಕಿಯನ್ನು ಪೂರ್ಣವಾಗಿ ಪಾವತಿಸಲು ಕೆಬಿಪಿಎಸ್‌ (KBPS) ಬದ್ಧವಾಗಿದೆ ಎಂದು ಹೇಳಿದರು.

"ಪಿಂಚಣಿ ನಿಯಮಗಳನ್ನು ರೂಪಿಸಿದ ನಂತರ ಮತ್ತು ಇಪಿಎಫ್ ಪಿಂಚಣಿ ನಿಧಿಗೆ ಕೊಡುಗೆ ಪಾವತಿಯನ್ನು ನಿಲ್ಲಿಸಿದ ನಂತರ, ಹಣದ ಕೊರತೆಯನ್ನು ಸಮರ್ಥಿಸುವ ಮೂಲಕ ಸೊಸೈಟಿಯು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ."

ಆದ್ದರಿಂದ, ಕೆಬಿಪಿಎಸ್ ತನ್ನ ಲಾಭ ಅಥವಾ ಆದಾಯದಿಂದ ಅಗತ್ಯವಿರುವ ಹಣವನ್ನು ನೀಡಬೇಕು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿತು. ಇಪಿಎಫ್ ಸಂಘಟನೆಯೊಂದಿಗಿನ ವಿವಾದ ಮತ್ತು ಇಪಿಎಫ್ ಕೊಡುಗೆಯನ್ನು ಮರಳಿ ಪಡೆಯುವಲ್ಲಿನ ವಿಳಂಬವು ನಿವೃತ್ತ ಉದ್ಯೋಗಿಗಳಿಗೆ ಅರ್ಹ ಪಿಂಚಣಿಗಳನ್ನು ಪಾವತಿಸದಿರುವುದಕ್ಕೆ ಸಕಾರಣವಾದ ಸ್ವೀಕಾರಾರ್ಹ ಕಾರಣವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟ ಪಡಿಸಿತು.

ಅದರಂತೆ ನಿವೃತ್ತ ಹಾಗೂ ಹಾಲಿ ನೌಕರರು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್‌ ಮಾನ್ಯ ಮಾಡಿತು.

ಇಪಿಎಫ್‌ ಪಿಂಚಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಮೇಲ್ಮನವಿಗಳ ಮೇಲಿನ ತನ್ನ ತೀರ್ಪನ್ನು ಸುಪ್ರೀಂಕೋರ್ಟ್‌ ತ್ರಿಸದಸ್ಯ ಪೀಠ ಕಾಯ್ದಿರಿಸಿದ ಬಳಿಕ ಕೇರಳ ಹೈಕೋರ್ಟ್‌ ಈ ತೀರ್ಪು ಬಂದಿರುವುದು ಗಮನಾರ್ಹವಾಗಿದೆ.

ಪ್ರಕರಣ:: ಅಭಿಲಾಷ್ ಕುಮಾರ್ ಆರ್. ವಿರುದ್ಧ ಕೇರಳ ಬುಕ್ಸ್ ಅಂಡ್ ಪಬ್ಲಿಕೇಷನ್ ಸೊಸೈಟಿ & ಆರ್ಸ್.

ತೀರ್ಪು:  5ನೇ ಆಗಸ್ಟ್ 2022 ಶುಕ್ರವಾರ.

Sunday, August 22, 2021

ವಾರೇ ವಾಹ್ ಕೇರಳದ ಓಣಂ ಮತ್ತು ತುಳುವರ ದೀಪಾವಳಿ..!

 ವಾರೇ ವಾಹ್  ಕೇರಳದ ಓಣಂ ಮತ್ತು ತುಳುವರ ದೀಪಾವಳಿ..!

ಭಾರತದ ಈ ಸಂಸ್ಕೃತಿಗೆ ವಾರೇ ವಾಹ್ ಎನ್ನಲೇಬೇಕು. ಎಂತಹ ಸಾಮ್ಯತೆ ನೋಡಿ. ಕೇರಳದಲ್ಲಿ ಈಗ (ಇದು ಬರೆಯುವಾಗ ದಿನ: 22 ಆಗಸ್ಟ್ 2021) ಓಣಂ ಸಂಭ್ರಮ.  ಇದೇ ಸಂಭ್ರಮ  ತುಳುನಾಡು ಅಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಥವಾ ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಹಾಗೂ ಕರ್ನಾಟಕ-ಕೇರಳದ ಗಡಿನಾಡು ಕಾಸರಗೋಡಿನಲ್ಲಿ ದೀಪಾವಳಿಯ ವೇಳೆಯಲ್ಲಿ ಕಂಡು ಬರುತ್ತದೆ.

ಎರಡೂ ಸಂದರ್ಭಗಳಲ್ಲಿ  ಕಂಡು ಬರುವ ಸಾಮ್ಯತೆ ಬಲಿಯೇಂದ್ರ ಇಲ್ಲವೇ ಬಲಿ ಚಕ್ರವರ್ತಿ ಅಥವಾ ರಾಜಾಮಹಾಬಲಿಗೆ ನೀಡುವ ಸಂಭ್ರಮದ ಸ್ವಾಗತ.

ಈಗ ಕೇರಳದಲ್ಲಿ ಮಾತ್ರವೇ ಅಲ್ಲ ತಾವಿರುವ ಎಲ್ಲ ಕಡೆಗಳಲ್ಲೂ ಕೇರಳಿಗರು ಸಂಭ್ರಮದಿಂದ ಆಚರಿಸುತ್ತಿರುವ ಓಣಂ ಕಡೆಗೆ ಗಮನ ಹರಿಸಿ.

ಓಣಂ ಹಬ್ಬವು ಕೇರಳಿಗರು ನಂಬುವ ಪ್ರಕಾರ ರಾಜ ಮಹಾಬಲಿಯ ತಾಯ್ನಾಡಿನಲ್ಲಿ ಅಂದರೆ ಕೇರಳದಲ್ಲಿ ಆಚರಿಸಲ್ಪಡುತ್ತದೆ.  ಇದು 10 ದಿನಗಳ ಕಾಲ ನಡೆಯುತ್ತದೆ.  ಮುಖ್ಯ ಹಬ್ಬವನ್ನು ಆಗಸ್ಟ್ 21-23 ರಿಂದ ಮೂರು ದಿನಗಳವರೆಗೆ ಆಚರಿಸಲಾಗುತ್ತದೆ.

ಮಹಾಬಲಿ, ರಾಕ್ಷಸ ರಾಜ. ಆದರೆ  ಉದಾರ ಮತ್ತು ದಯಾಮಯ ಎಂದು ಪ್ರತೀತಿ. ಆತನ ಆಡಳಿತವನ್ನು  ಸುವರ್ಣ ಯುಗಕ್ಕೆ ಹೋಲಿಕೆ ಮಾಡಲಾಗುತ್ತದೆ,   ಕಾರಣದಿಂದಾಗಿ, ಪ್ರತಿವರ್ಷ ಮಹಾಬಲಿ ತನ್ನ ತಾಯ್ನಾಡಿಗೆ ಭೇಟಿ ನೀಡಿ ಮರಳುವ ಸಂದರ್ಭವನ್ನು  ವ್ಯಾಪಕವಾಗಿ ಆಚರಿಸಲಾಗುತ್ತದೆ. ಹಬ್ಬವನ್ನು ಮಲಯಾಳಂ ಕ್ಯಾಲೆಂಡರ್ ತಿಂಗಳಾದ ಚಿಂಗಂನಲ್ಲಿ ಆಚರಿಸಲಾಗುತ್ತದೆ. ಈ ಓಣಂ  ಸುಗ್ಗಿಯ ಹಬ್ಬ ಕೂಡಾ.

ಪುರಾಣ ಕಥೆಗಳ ಪ್ರಕಾರ ಅಸುರ ನಾಯಕಾಗಿದ್ದ ರಾಜಾ ಮಹಾಬಲಿಯು ದೇವತೆಗಳನ್ನು  ಸೋಲಿಸಿ ಮೂರು ಲೋಕಗಳನ್ನು ವಶಪಡಿಸಿಕೊಂಡನು.. ಇದು ದೇವತೆಗಳನ್ನು ವ್ಯಗ್ರಗೊಳಿಸಿತು.  ಅವರು ರಾಕ್ಷಸ ರಾಜನ ವಿರುದ್ಧ ಹೋರಾಡಲು ಅವರಿಗೆ ಸಹಾಯ ಮಾಡಲು ಭಗವಾನ್ ವಿಷ್ಣುವನ್ನು ಪ್ರಾರ್ಥಿಸಿದರು.

ರಾಜಾ ಮಹಾಬಲಿ ಭಗವಾನ್ ವಿಷ್ಣುವಿನ ಭಕ್ತ.  ಭಗವಾನ್ ವಿಷ್ಣುವಿಗೆ ಉಭಯ ಸಂಕಟ. ವಿಷ್ಣೂ ಭಗವಾನ್ ವಿಷ್ಣು ವಾಮನ  ಅಂದರೆ ಕುಬ್ಜ ಗಾತ್ರದ ಬ್ರಾಹ್ಮಣ ವಟು  ರೂಪದಲ್ಲಿ  ಮಹಾಬಲಿಯನ್ನು ಭೇಟಿ ಮಾಡಿದ  ಮತ್ತು ಮೂರು ಹೆಜ್ಜೆ ಜಾಗವನ್ನು ತನಗೆ ದಾನವಾಗಿ ನೀಡುವಂತೆ ಮಹಾಬಲಿ ಬಳಿ ಪ್ರಾರ್ಥಿಸಿದ. ದಾನಶೂರನಾದ ಮಹಾಬಲಿ  ಅದಕ್ಕೆ ಒಪ್ಪಿದ.

ಬಳಿಕ ವಾಮನ  ಗಾತ್ರದ ವಟುವಿನ ಗಾತ್ರ ಹಿಗ್ಗಿತು.  ಆತ ಕೇಳಿದ  ಎರಡು ಹೆಜ್ಜೆಗಳನ್ನು ಇಡುವಷ್ಟರಲ್ಲಿ ರಾಜಾ ಮಹಾಬಲಿಯ ಆಳ್ವಿಕೆಗೆ ಒಳಪಟ್ಟ ಸಮಸ್ತ ಭೂಮಂಡಲ ಮುಗಿದು ಹೋಯಿತು. ಮೂರನೇ ಹೆಜ್ಜೆ ಇಡಲು ಯಾವುದೇ ಸ್ಥಳ ಇಲ್ಲದೇ ಹೋದಾಗ ಮಹಾಬಲಿ ತನ್ನ ತಲೆಯ ಮೇಲೆಯೇ ಮೂರನೇ ಹೆಜ್ಜೆ ಇಡಲು ಮನವಿ ಮಾಡಿದ.

ಮಹಾಬಲಿಯ ನಡತೆಗೆ ಮೆಚ್ಚಿದ ಭಗವಾನ್ ವಿಷ್ಣು ಆತನಿಗೆ ಪ್ರತಿ  ವರ್ಷದಲ್ಲಿ ಒಂದು ಬಾರಿ ಭೂಮಿಯಲ್ಲಿನ ಆತನ ಸಾಮ್ಯಾಜ್ಯಕ್ಕೆ ಬರಲು ಅವಕಾಶ ನೀಡಿದ. 

ಹೀಗೆ ಪ್ರತಿ ವರ್ಷ ಮಹಾಬಲಿ ಭೂಮಿಯಲ್ಲಿನ ಆತನ ಸಾಮ್ರಾಜ್ಯಕ್ಕೆ ಬರುವ ಕಾಲವನ್ನೇ ಕೇರಳದಲ್ಲಿ ‘ಓಣಂ’ ಎಂಬುದಾಗಿ ಆಚರಿಸಲಾಗುತ್ತದೆ.

ಕೇರಳದಲ್ಲಿ ಅತ್ಯಂತ ಸಂಭ್ರಮದೊಂದಿಗೆ ಆಚರಿಸಲಾಗುವ  ಹಬ್ಬದಲ್ಲಿ ಗಮನ ಸೆಳೆಯುವುದು ರಂಗೋಲಿ ಅಲಂಕಾರ ಮತ್ತು ಬಾಳೆ ಎಲೆಯಲ್ಲಿ ಬಡಿಸಲಾಗುವ ಬಗೆ ಬಗೆಯ ಭಕ್ಷ್ಯ ಭೋಜ್ಯಗಳ ಭೋಜನ.

ಇಲ್ಲಿರುವ ಪುಟ್ಟ ವಿಡಿಯೋ ಈ ‘ಭೋಜನ ಸಂಭ್ರಮವನ್ನು’ ತೋರಿಸುತ್ತದೆ.


ಈ ಜನರು ‘ವಲ್ಲಂ ಕಾಳಿ’ ಎಂದು ಕರೆಯಲಾಗುವ  ದೋಣಿ ಓಟಗಳಲ್ಲಿ ಭಾಗವಹಿಸಿ ಸಂಭ್ರಮ ಆಚರಿಸುತ್ತಾರೆ.

ತುಳುನಾಡಿನಲ್ಲಿ:

ಇದು ಕೇರಳದ ಕಥೆಯಾದರೆ, ಕರ್ನಾಟಕದ ತುಳುನಾಡು ಅಂದರೆ ಪಶ್ಚಿಮ ಕರಾವಳಿಯಲ್ಲಿ ಇದೇ ರಾಜಾ ಮಹಾಬಲಿಯನ್ನು  ಬಲಿಯೇಂದ್ರ ಹೆಸರಿನಲ್ಲಿ ಪ್ರತಿವರ್ಷವೂ ಸಡಗರದೊಂದಿಗೆ ಬರಮಾಡಿಕೊಳ್ಳುತ್ತಾರೆ. ಆದರೆ ಕೇರಳಿಗರ  ಓಣಂ ಸಂದರ್ಭದಲ್ಲಿ ಅಲ್ಲ- ಭಾರತದಾದ್ಯಂತ ಸಂಭ್ರಮದಿಂದ ಆಚರಿಸಲಾಗುವ ದೀಪಾವಳಿಯ ಸಂದರ್ಭದಲ್ಲಿ.

ಕತ್ತಲೆಯಿಂದ ಬೆಳಕಿನ ಕಡೆಗೆ,  ಅಜ್ಞಾನದಿಂದ ಜ್ಞಾನದ ಕಡೆಗೆ ಮತ್ತು ಬಡತನದಿಂದ ಸಮೃದ್ಧಿಯತ್ತ ಸಾಗುವ ನಮ್ಮ ಸಹಜ ಆಕಾಂಕ್ಷೆಯ ಸಂಕೇತವಾಗಿ  ದೀಪಾವಳಿಯನ್ನು ಆಚರಿಸಲಾಗುತ್ತದೆ. ಇದು  ಪ್ರಕೃತಿಮಾತೆಗೆ ಕೃತಜ್ಞತೆ ಸಲ್ಲಿಸುವ ಹಬ್ಬ ಕೂಡಾ ಹೌದು.  ದೀಪಾವಳಿ ಎಂದರೆ ದೀಪಗಳ ಸಮೂಹ.

ಆಧುನಿಕ, ಸಕಾರಾತ್ಮಕ ಚಿಂತನೆಯ ಶೈಲಿಯ ವಿವರಣೆಗಳ ಹೊರತಾಗಿಯೂ, ಉತ್ಸವವನ್ನು ಮೂಲತಃ  ಬಲಿಯೇಂದ್ರನ ಸಾಮ್ರಾಜ್ಯದ  ವ್ಯಾಪ್ತಿಗೆ ಒಳಪಟ್ಟ ತುಳುನಾಡಿನ ಪ್ರಜೆಗಳು  ತಮ್ಮ ರಾಜನನ್ನು ಸ್ವಾಗತಿಸಿ ಆದರಿಸುವ ಹಬ್ಬವಾಗಿ ಆಚರಿಸುತ್ತಾರೆ.

ಬಲಿಯೇಂದ್ರ ಅಥವಾ ಬಲಿ ಚಕ್ರವರ್ತಿಯನ್ನು ಮನೆ ಮನೆಗಳಲ್ಲೂ ದೀಪ ಬೆಳಗಿ ಊಟ ಇಟ್ಟು  ಬಲಿಯೇಂದ್ರ ಪಠಣದ ಮೂಲಕ ಸ್ವಾಗತಿಸಿ ಸಂಭ್ರಮಿಸುವ ಆಚರಣೆ ತುಳುನಾಡಿನಲ್ಲಿದೆ. ಬಲಿಗೆ ಸಂಬಂಧಿಸಿದಂತೆ ತುಳುನಾಡಿನಲ್ಲಿ ಕೂಡಾ ಪ್ರಚಲಿತವಾಗಿರುವುದು ಕೇರಳದಲ್ಲಿ ಪ್ರಚಲಿತವಾಗಿರುವ ಈ ವಾಮನಾವತಾರದ ಕಥೆಯೇ..

ಅಸುರ ರಾಜ ಬಲಿಯೇಂದ್ರ ಮಾಡಿದ  ಮಹಾಪಾಪ ಏನು?

ಮಹಾಬಲಿ ಅಸುರನಾಗಿದ್ದರೂ  ಹೃದಯವಂತ.  ಲೋಕೋಪಕಾರಿ.  ಅಗತ್ಯವಿದ್ದವರಿಗೆ ಉಚಿತ ಉಡುಗೊರೆಗಳನ್ನು ಮನಃಪೂರ್ವಕವಾಗಿ ನೀಡುತ್ತಿದ್ದ.

ದಂತಕಥೆಯ ಪ್ರಕಾರ  ರಾಜಾ ಬಲಿಯೇಂದ್ರ ತನ್ನಿಂದ ದಾನ ಪಡೆಯುವವರು ಏನನ್ನೇ ಕೇಳಿದರೂ ಅದನ್ನು ಕೊಟ್ಟು ಬಿಡುತ್ತಿದ್ದ.  ದೇವತೆಗಳ ಮೊರೆಗೆ ಓಗೊಟ್ಟ ಭಗವಾನ್ ವಿಷ್ಣು  ರಾಜಾ ಬಲಿಯೇಂದ್ರನ    ಗುಣವನ್ನೇ ಬಳಸಿಕೊಂಡ. ಮತ್ತು  ಕುಬ್ಜ ವಟುವಿನ ಗಾತ್ರದಲ್ಲಿ ಬಂದು ಮೂರು  ಅಡಿ ಇಡುವಷ್ಟು ಗಾತ್ರದ ಭೂಮಿಯನ್ನು ನೀಡುವಂತೆ ಕೋರಿದ. ರಾಜಾ ಬಲಿಯೇಂದ್ರ  ಮಾತುಕೊಟ್ಟ ಬಳಿಕ ಬೃಹದಾಕಾರವಾಗಿ ಬೆಳೆದ ವಾಮನ ಎರಡು ಅಡಿಗಳನ್ನು ಸಂಪೂರ್ಣ ಭೂಮಂಡಲವನ್ನೇ ಪಡೆದುಕೊಂಡ. ಮೂರನೇ ಅಡಿ ಇಡಲು ಜಾಗವೇ ಇರಲಿಲ್ಲ. ಬಲಿಯೇಂದ್ರ ಮೂರನೇ ಹೆಜ್ಜೆ ಇಡಲು ತನ್ನ ತಲೆಯನ್ನೇ ಒಡ್ಡಿದ.

ಬಲಿಯೇಂದ್ರನ ತಲೆಯ ಮೇಲೆ ತನ್ನ ಪಾದವನ್ನು ಊರಿದ ವಿಷ್ಣು ಭಗವಾನ್ ಆತನನ್ನು ಪಾತಾಳಕ್ಕೆ ತಳ್ಳಿದ.  ಆದರೆ ಬಲಿಯೇಂದ್ರನ ತ್ಯಾಗಕ್ಕೆ ಮೆಚ್ಚಿದ ಭಗವಾನ್ ವಿಷ್ಣು, ಪ್ರತಿವರ್ಷ ಮೂರು ದಿನ ತನ್ನ ಸಾಮ್ರಾಜ್ಯಕ್ಕೆ ಹಿಂತಿರುಗಿ ಪ್ರಜೆಗಳಿಂದ ಆದರಾತಿಥ್ಯ ಪಡೆಯಲು ಅವಕಾಶ ನೀಡಿದ. ತುಳುನಾಡಿನಲ್ಲಿ ಇದನ್ನೇ ದೀಪಾವಳಿ ಹಬ್ಬವಾಗಿ ಆಚರಿಸಲಾಗುತ್ತಿದೆ.

ದೀಪಾವಳಿ ರಾತ್ರಿಯ ಸಮಯದಲ್ಲಿ ತುಳುನಾಡು ಗ್ರಾಮೀಣ ಭಾಗದಲ್ಲಿ 'ಪೊಲಿ ಪೊಲಿ ಬಲಿಯೇಂದ್ರ' ಪಠಣವು ಬಲಿಯೇಂದ್ರನನ್ನು  ಸ್ವಾಗತಿಸುವ ಪ್ರಾಚೀನ ಸಂಪ್ರದಾಯವನ್ನು ಪ್ರತಿಧ್ವನಿಸುತ್ತದೆ.

ಇಲ್ಲಿರುವ ಪುಟ್ಟ ವಿಡಿಯೋ ತುಳುವರು ಬಲಿಯೇಂದ್ರನನ್ನು ‘ಪೊಲಿ ಪೊಲಿ ಬಲಿಯೇಂದ್ರ’ ಎಂಬುದಾಗಿ ಪಠಿಸುತ್ತಾ ದೀಪ ಹಚ್ಚಿ ಸ್ವಾಗತಿಸುವುದನ್ನು ತೋರಿಸುತ್ತದೆ. 

ಒಂದೇ ಕಥೆ, ಒಂದೇ ಸಂಭ್ರಮ -  ಎರಡು ರಾಜ್ಯಗಳಲ್ಲಿನ ಸಾಮ್ಯತೆಯನ್ನು ಕಣ್ತುಂಬಿಕೊಳ್ಳಿ.

-ನೆತ್ರಕೆರೆ ಉದಯಶಂಕರ

Advertisement