Showing posts with label ಮಿಸ್.‌ ಟ್ಯಾಂಗ್‌ ಯು. Show all posts
Showing posts with label ಮಿಸ್.‌ ಟ್ಯಾಂಗ್‌ ಯು. Show all posts

Thursday, September 8, 2022

ರೊಬೋಟ್‌ ಮಹಿಳೆ ʼಮಿಸ್‌ ಟ್ಯಾಂಗ್‌ ಯುʼ: ವಿಶ್ವದ ಮೊತ್ತ ಮೊದಲ ಕಂಪೆನಿ ಸಿಇಒ

 ರೊಬೋಟ್‌ ಮಹಿಳೆ ʼಮಿಸ್‌ ಟ್ಯಾಂಗ್‌ ಯುʼ: ವಿಶ್ವದ ಮೊತ್ತ ಮೊದಲ ಕಂಪೆನಿ ಸಿಇಒ

ಬೆಂಗಳೂರು: ವಿಶ್ವದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ʼರೊಬೋಟ್‌ ಮಹಿಳೆʼ ಚೀನಾದ ಕಂಪೆನಿಯೊಂದರ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಕಗೊಂಡಿದೆ. ಯಂತ್ರಗಳು ಮತ್ತು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ/AI) ಶೀಘ್ರದಲ್ಲೇ ಗೇಮ್ ಚೇಂಜರ್ ಆಗಲಿವೆ ಎಂಬ ನಂಬಿಕೆ ಇದರೊಂದಿಗೆ ಇದೀಗ ನನಸಾಗಿದೆ.

ವೈಜ್ಞಾನಿಕ ಕಾಲ್ಪನಿಕ ಚಿತ್ರಗಳಲ್ಲಿ ಯಂತ್ರ ಮಾನವರು ಮಾನವರನ್ನೂ ಮೀರಿಸುವಂತೆ ವರ್ತಿಸುವುದನ್ನು ನಾವು ಕಂಡಿದ್ದೇವೆ. ಆದರೆ ಕೃತಕ ಬುದ್ಧಿಮತ್ತೆ ಇಂತಹ ಪರಿವರ್ತನೆಯನ್ನು ತರುವುದೇ ಎಂಬುದರ ಸ್ಪಷ್ಟ ಕಲ್ಪನೆ ಇನ್ನೂ ಮನುಷ್ಯರಿಗೆ ಬಂದಿಲ್ಲ. ಆದರೆ ಇದು ಸಾಧ್ಯ ಎಂಬುದನ್ನು ಚೀನಾದ ಮೆಟಾವರ್ಸ್‌ ಕಾರ್ಪೋರೇಷನ್‌ ಸಾಬೀತು ಪಡಿಸಿದೆ.

ಚೀನಾದ ಈ ಕಂಪೆನಿಯು ತನ್ನ ಸಿಇಒ ಆಗಿ ʼರೊಬೋಟ್‌ ಮಹಿಳೆʼಯನ್ನು ನೇಮಕ ಮಾಡಿದೆ.

ಚೀನಾದ ಮೆಟಾವರ್ಸ್ ಕಂಪೆನಿ ನೆಟ್‌ಡ್ರಾಗನ್ ವೆಬ್‌ಸಾಫ್ಟ್ ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಮಿಸ್ ಟ್ಯಾಂಗ್ ಯು ಎಂದು ಹೆಸರಿಸಲಾದ ʼರೊಬೋಟ್‌ ಮಹಿಳೆʼಯನ್ನು (ಹುಮನಾಯ್ಡ್ ರೋಬೋಟ್) ನೇಮಿಸಿದೆ ಎಂದು ʼದಿ ಮೆಟ್ರೋʼ ವರದಿ ಮಾಡಿದೆ. ಕಂಪೆನಿಯೊಂದರಲ್ಲಿ ರೋಬೋಟ್‌ಗೆ ಆಡಳಿತಾತ್ಮಕ ಸ್ಥಾನವನ್ನು ನೀಡಿರುವುದು ಜಗತ್ತಿನಲ್ಲಿ ಇದೇ ಮೊದಲು.

ರೋಬೋಟ್ ಅನ್ನು ಮಹಿಳೆಯ ಮಾದರಿಯಲ್ಲಿ ರಚಿಸಲಾಗಿದೆ. ಇಂತಹ ಬೆಳವಣಿಗೆಯೊಂದನ್ನು ಅಲಿಬಾಬಾ ಸಂಸ್ಥಾಪಕ ಮತ್ತು ಅಧ್ಯಕ್ಷ ಜಾಕ್ ಮಾ 2017ರಲ್ಲಿ ʼಟೈಮ್‌ʼ ನಿಯತಕಾಲಿಕದಲ್ಲಿ ಅವರು ಭವಿಷ್ಯ ನುಡಿದಿದ್ದರು. ಮುಂದಿನ 10 ವರ್ಷಗಳಲ್ಲಿ ಸಿಇಒ ಆಗಿ ರೋಬೋಟ್ ಬರಲಿದೆ ಎಂದು ಜಾಕ್‌ ಮಾ ನಂಬಿದ್ದರು.  ಜಗತ್ತು ಅದನ್ನು ಕೇವಲ 5 ವರ್ಷದಲ್ಲಿ ಸಾಧ್ಯವಾಗಿಸಿದೆ.

ಟ್ಯಾಂಗ್ ಯು ಕಂಪೆನಿಯ ಸಿಇಒ (CEO) ಆಗಿ ವ್ಯವಹಾರದ ಸಂಘಟನೆ ಮತ್ತು ದಕ್ಷತೆಯ ವಿಭಾಗವನ್ನು ಮುನ್ನಡೆಸುತ್ತದೆ ಎಂದು ಕಂಪೆನಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 10 ಶತಕೋಟಿ ಡಾಲರ್ (ರೂ. 7,97,05,05,00,000) ಮಾರುಕಟ್ಟೆ ಬಂಡವಾಳ ಹೊಂದಿರುವ ನೆಟ್‌ ಡ್ರ್ಯಾಗನ್‌ ವೆಬ್‌ ಸಾಫ್ಟ್‌ ಕಂಪೆನಿಯ ಕಾರ್ಯಾಚರಣೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ʼಟ್ಯಾಂಗ್‌ ಯುʼ ಹೊರುತ್ತದೆ.

"ಕೃತಕ ಬುದ್ಧಿಮತ್ತೆಯು (AI) ಕಾರ್ಪೊರೇಟ್ ನಿರ್ವಹಣೆಯ ಭವಿಷ್ಯ ಎಂದು ನಾವು ನಂಬುತ್ತೇವೆ ಮತ್ತು ಮಿಸ್‌. ಟ್ಯಾಂಗ್ ಯು ಕೆಲಸವು, ನಮ್ಮ ಕಾರ್ಯಾಚರಣೆಯ ವಿಧಾನ ಬದಲಾಯಿಸಲು ಕೃತಕ ಬುದ್ಧಿಮತ್ತೆ (AI )ಬಳಕೆಯನ್ನು ನಿಜವಾಗಿಯೂ ಅಳವಡಿಸಿಕೊಳ್ಳುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆಎಂದು ನೆಟ್‌ ಡ್ರ್ಯಾಗನ್‌ ಅಧ್ಯಕ್ಷ ಡಾ. ಡೆಜಿಯನ್ ಲಿಯು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ವ್ಯಾಪಾರ ಮತ್ತು ಅಂತಿಮವಾಗಿ ನಮ್ಮ ಭವಿಷ್ಯದ ಕಾರ್ಯತಂತ್ರದ ಬೆಳವಣಿಗೆಗೆ ಚಾಲನೆ ನೀಡಲಿರುವ ಟ್ಯಾಂಗ್ ಯು ಕೆಲಸವು ಕಾರ್ಯಚಟುವಟಿಕೆಗಳ ಗುಣಮಟ್ಟ, ದಕ್ಷತೆ ಮತ್ತು ಪ್ರಕ್ರಿಯೆಯ ಹರಿವನ್ನು ಸುಧಾರಿಸುತ್ತದೆ. ಟ್ಯಾಂಗ್ ಯು ನೈಜ-ಸಮಯದ ಡೇಟಾ ಹಬ್ ಮತ್ತು ಹೆಚ್ಚು ಪರಿಣಾಮಕಾರಿ ಅಪಾಯ ನಿರ್ವಹಣಾ ವ್ಯವಸ್ಥೆಯ ಅಭಿವೃದ್ಧಿ ನಿಟ್ಟಿನಲ್ಲಿ ಸಹಾಯ ಮಾಡಲು ವಿಶ್ಲೇಷಣಾತ್ಮಕ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ, ಜೊತೆಗೆ ದಿನನಿತ್ಯದ ಕಾರ್ಯಾಚರಣೆಗಳಲ್ಲಿ ತರ್ಕಬದ್ಧ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಉತ್ತೇಜಿಸುತ್ತದೆ.ಎಂದು ಲಿಯು ಹೇಳಿದ್ದಾರೆ.

ನೆಟ್‌ಡ್ರಾಗನ್ ವೆಬ್‌ಸಾಫ್ಟ್ ಮಲ್ಟಿಪ್ಲೇಯರ್  ಕಂಪೆನಿಯು ಮೊಬೈಲ್ ಅಪ್ಲಿಕೇಶನ್‌ಗಳನ್ನು ರಚಿಸುವುದರ ಜೊತೆಗೆ, ಆನ್‌ಲೈನ್ ಆಟಗಳನ್ನು ನಿರ್ಮಿಸುತ್ತದೆ ಮತ್ತು ನಿರ್ವಹಿಸುತ್ತದೆ.

Advertisement