Showing posts with label Balaji Layout. Show all posts
Showing posts with label Balaji Layout. Show all posts

Thursday, November 2, 2023

ಶ್ರೀ ಬಾಲಾಜಿ ಕೃಪಾ ಬಡಾವಣೆ ರಾಜ್ಯೋತ್ಸವ ಸಂಭ್ರಮ

ಶ್ರೀ ಬಾಲಾಜಿ ಕೃಪಾ ಬಡಾವಣೆ ರಾಜ್ಯೋತ್ಸವ ಸಂಭ್ರಮ

ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವವನ್ನು ೨೦೨೩ ನವೆಂಬರ್‌ ೦೧ರ ಬುಧವಾರ ಆಚರಿಸಲಾಯಿತು.

 ಬಡಾವಣೆಯ ಹಿರಿಯ ಸದಸ್ಯ, ಕೆಜಿಎಫ್‌ ಗೋಲ್ಡನ್‌ ವ್ಯಾಲಿ ಎಜುಕೇಷನ್‌ ಟ್ರಸ್ಟ್‌ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಚ್.‌ ಆರ್.‌ ಸೇತೂರಾಂ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಬೆಸ್ಕಾಂ ಅಸಿಸ್ಟೆಂಟ್‌ ಎಂಜಿನಿಯರ್‌ ಮೊಹಮ್ಮದ್‌ ಇರ್ಫಾನ್‌ ಅಲಿ ಅವರು ಈ ಸಂದರ್ಭದಲ್ಲಿ ಹಾಜರಿದ್ದು ಬಡಾವಣೆಯ ನಿವಾಸಿಗಳಿಗೆ ವಿದ್ಯುತ್‌ ಸರಬರಾಜಿಗೆ ಸಂಬಂಧಿಸಿದ ಮಾಹಿತಿ ಒದಗಿಸಿದರು.

ಸಂಘದ ಅಧ್ಯಕ್ಷ ರಾಜೇಶ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನೆತ್ರಕೆರೆ ಉದಯಶಂಕರ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಬಿಎಲ್.‌ ಪ್ರಭಾವತಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಪ್ರವೀಣ್‌ ಕುಮಾರ್ ವಂದನೆಗಳನ್ನು ಸಲ್ಲಿಸಿದರು.


ಬಡಾವಣೆಯ ಮಹಳೆಯರು, ಹಿರಿಯ ಸದಸ್ಯರು ಸೇರಿದಂತೆ ಬಡಾವಣೆಯ ನಿವಾಸಿಗಳು ಅತ್ಯುತ್ಸಾಹದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಬಡಾವಣೆಯ ಹಿರಿಯ ಸದಸ್ಯ ನ್ಯಾಯವಾದಿ ಮುನಿರಾಜು ಅವರು ಉಪಾಹಾರದ ವ್ಯವಸ್ಥೆ ಮಾಡಿದ್ದರು.

ಧ್ವಜಾರೋಹಣ ಎಚ್.‌ ಆರ್.‌ ಸೇತೂರಾಂ ಅವರಿಂದ.


ಅಧ್ಯಕ್ಷೀಯ ಭಾಷಣ ರಾಜೇಶ ಕೆ. ಹೆಗಡೆ ಅವರಿಂದ.


ಬೆಸ್ಕಾಂ ಅಸಿಸ್ಟೆಂಟ್‌ ಎಂಜಿನಿಯರ್‌ ಮೊಹಮ್ಮದ್‌ ಇರ್ಫಾನ್‌ ಅಲಿ ಅವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಇರ್ಫಾನ್‌ ಅವರಿಂದ ಎರಡು ಮಾತು.

Tuesday, September 26, 2023

ಶ್ರೀ ಬಾಲಾಜಿ ಕೃಪಾ ಬಡಾವಣೆ ಗಣೇಶೋತ್ಸವ: ಚೆಂಡೆ ಸಂಭ್ರಮ

 ಶ್ರೀ ಬಾಲಾಜಿ ಕೃಪಾ ಬಡಾವಣೆ ಗಣೇಶೋತ್ಸವ: ಚೆಂಡೆ ಸಂಭ್ರಮ

ಬೆಂಗಳೂರು: ಚೆಂಡೆ ಧ್ವನಿಯ ಅನುರಣನ, ಬಾನಿನಲ್ಲಿ ಪಟಾಕಿ ಚಿತ್ತಾರದ ಸಂಭ್ರಮದೊಂದಿಗೆ ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೨ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಶ್ರೀ ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ೨೦೨೩ ಸೆಪ್ಟೆಂಬರ್‌ ೨೪ರ ಭಾನುವಾರ ಸಡಗರದೊಂದಿಗೆ ನಡೆಯಿತು.

ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ ಆದ ಶ್ರೀ ಕೃಷ್ಣ ಬೈರೇಗೌಡ, ಬಡಾವಣೆಯ ನಿರ್ಮಾಪಕ ಶ್ರೀ ಎಸ್.‌ ಎನ್.‌ ಕೃಷ್ಣಯ್ಯ ಶೆಟ್ಟಿ, ರಾಜಕೀಯ ನಾಯಕರಾದ ಜಯಗೋಪಾಲ ಗೌಡ ಮತ್ತು ಶಿವಕುಮಾರ್‌ ಅವರು ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡರು.

ಸೆಪ್ಟೆಂಬರ್‌ ೨೩ರ ಶನಿವಾರ ಮಧ್ಯಾಹ್ನ ವರುಣ ಸಿಂಚನದ ಶುಭಾಶೀರ್ವಾದದೊಂದಿಗೆ ಮಕ್ಕಳು ಮತ್ತು ಮಹಿಳೆಯರ ಆಟೋಟ ಸ್ಪರ್ಧೆಗಳು ನಡೆದವು. ಇದೇ ವೇಳೆಯಲ್ಲಿ ಬಾಲಕ ಬಾಲಕಿಯರು ತಮ್ಮಿಷ್ಟದ ಹಾಡುಗಳಿಗೆ ಹೆಜ್ಜೆ ಹಾಕಿ ನರ್ತಿಸುತ್ತಾ ಸಂಭ್ರಮಿಸಿದರು.


ಅದೇ ದಿನ ರಾತ್ರಿ ವರುಣನ ಅಮೃತ ಧಾರೆಯೊಂದಿಗೆ ಶುದ್ಧಗೊಂಡ ಬಡಾವಣೆಯ ಉದ್ಯಾನವನ ವಿದ್ಯುದ್ದೀಪಗಳ ಅಲಂಕಾರದೊಂದಿಗೆ ಗಣಪನ ಆಹ್ವಾನಕ್ಕೆ ಸಜ್ಜಾಯಿತು. ಬೆಳಗ್ಗೆ ಬಡಾವಣೆಯ ನಿವಾಸಿಗಳು ಉತ್ಸಾಹದ ಶ್ರಮದಾನದೊಂದಿಗೆ ಉದ್ಯಾನದಲ್ಲಿ ತುಂಬಿದ್ದ ನೀರನ್ನು ತೆರವುಗೊಳಿಸಿ ಕಸ ತೆಗೆದು ಶುದ್ಧಗೊಳಿಸಿದರು. ಮಹಿಳೆಯರು ರಂಗೋಲಿ, ಪುಷ್ಪಗಳಿಂದ ಅಲಂಕಾರ ಮಾಡಿ ಹಾಕಿ ವಿಘ್ನ ವಿನಾಯಕನಿಗೆ ಸ್ವಾಗತ ಕೋರಿದರು.

ಬಡಾವಣೆಯಲ್ಲಿ ಗಣಪನ ದೇಗುಲ ನಿರ್ಮಾಣ, ಬಡಾವಣೆಯ ನೀರಿನ ಸಮಸ್ಯೆಯ ನಿವಾರಣೆ, ಎಲ್ಲ ನಿವಾಸಿಗಳ ಆಯುರಾರೋಗ್ಯ, ಸುಖ ಸಂಪತ್ತಿನ ವೃದ್ಧಿಯಾಗಬೇಕೆಂಬ ಸಂಕಲ್ಪದೊಂದಿಗೆ ಗಣಹೋಮ, ಗಣಪತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಿತು.


ಗಣಪನ ಪ್ರಾಣ ಪ್ರತಿಷ್ಠೆಯ ಹೊತ್ತಿಗೆ ಸರಿಯಾಗಿ ಆಗಮಿಸಿದ ಬಡಾವಣೆಯ ನಿರ್ಮಾಪಕ ಶ್ರೀ ಕೃಷ್ಣಯ್ಯ ಶೆಟ್ಟಿ ಅವರು ಗಣಪನಿಗೆ ಲಡ್ಡು ಪ್ರಸಾದವನ್ನು ಸಮರ್ಪಿಸಿದರು.

ಗಣಹೋಮದ ಪೂರ್ಣಾಹುತಿಯ ಹೊತ್ತಿಗೆ ಸರಿಯಾಗಿ ಆಗಮಿಸಿದ ಸಚಿವ ಶ್ರೀ ಕೃಷ್ಣ ಬೈರೇಗೌಡ, ಶಿವಕುಮಾರ್‌, ಜಯಗೋಪಾಲ ಗೌಡ ಅವರು ಹೋಮದ ಪೂರ್ಣಾಹುತಿ, ಮಹಾಪೂಜೆಯಲ್ಲಿ ಪಾಲ್ಗೊಂಡರು. ಕೇರಳದ ಚೆಂಡೆಯ ನಿನಾದ ಗಣಪನ ಮಹಾಪೂಜೆಗೆ ರಂಗೇರಿಸಿತು.

ಮಹಾಪೂಜೆ, ಪ್ರಸಾದ ವಿತರಣೆಯ ಜೊತೆಗೇ ಸುಮಾರು ಎರಡು ಗಂಟೆಗೂ ಹೆಚ್ಚುಕಾಲ ನಡೆದ ಕೇರಳ ಚೆಂಡೆಯ ಅನುರಣಕ್ಕೆ ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ ಬಡಾವಣೆಯ ನಿವಾಸಿಗಳು ಹೆಜ್ಜೆ ಹಾಕಿ ಸಂಭ್ರಮಿಸಿದರು.

ಬಡಾವಣೆಯ ನ್ಯಾಯವಾದಿ ಶ್ರೀ ಮುನಿರಾಜು ಅವರು ಭಕ್ತರಿಗೆ ಶುಚಿ-ರುಚಿಯಾದ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು.

ಮಧ್ಯಾಹ್ನದ ಬಳಿಕ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಗಣಪತಿಯನ್ನು ಅಲಂಕರಿಸಲು ಬಳಸಲಾದ ಶಾಲಿನ ಹರಾಜು ನಡೆಯಿತು.



ಕರಾವಳಿ ಚೆಂಡೆಯ ಅನುರಣನ, ಬಾನಿನಲ್ಲಿ ವೈವಿದ್ಯಮಯ ಪಟಾಕಿಗಳ ಚಿತ್ತಾರದೊಂದಿಗೆ ಸಂಭ್ರಮದೊಂದಿಗೆ ಗಣಪತಿಯ ಮಹಾಮಂಗಳಾರತಿ, ಶೋಭಾಯಾತ್ರೆ ನಡೆಯಿತು.

ರಾಚೇನಹಳ್ಳಿ ಕೆರೆಯಲ್ಲಿ ಗಣಪನ ವಿಸರ್ಜನೆ ನಡೆಯಿತು.

ಜಾತಿ, ಮತ, ರಾಜಕೀಯ ಭಿನ್ನಾಭಿಪ್ರಾಯಗಳ ಭೇದವಿಲ್ಲದೆ ಬಡಾವಣೆಯ ಎಲ್ಲ ನಿವಾಸಿಗಳು ಪಾಲ್ಗೊಂಡದ್ದು,


ಶೋಭಾಯಾತ್ರೆಯಲ್ಲೂ ನಲಿದು ನರ್ತಿಸಿದ್ದು, ಟೆಂಟಿಗೆ ಬಡಾವಣೆಯ ನಿವಾಸಿ ಸಿರಾಜ್, ಕೇರಳ ಚೆಂಡೆಗೆ ಬಡಾವಣೆಯ ಮಲಯಾಳಂ ಬಂಧುಗಳು, ವಿವಿಧ ಸ್ಪರ್ಧೆಗಳ ಬಹುಮಾನ, ಪಟಾಕಿ ವೆಚ್ಚವನ್ನು ಶಿವಕುಮಾರ್‌, ಗಣಪನ ವಿಗ್ರಹವನ್ನು ಗಣೇಶ ಮತ್ತು ಸಂದೀಪ ಪ್ರಾಯೋಜಿಸಿದ್ದುದು ವಿಶೇಷವಾಗಿತ್ತು.

 

 


Sunday, August 15, 2021

ಶ್ರಿ ಬಾಲಾಜಿ ಕೃಪಾ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವ

 ಶ್ರಿ ಬಾಲಾಜಿ ಕೃಪಾ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವ


ಬೆಂಗಳೂರು:  ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ  ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2021 ಆಗಸ್ಟ್ 15ರ ಭಾನುವಾರ ಸರಳವಾಗಿ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.


ಬಡಾವಣೆಯ ಹಿರಿಯ ಸದಸ್ಯ ಮೊಹಮ್ಮದ್ ಅಹ್ಮದ್ ಶರೀಫ್  ಅವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ಲಭಿಸುವುದಕ್ಕೆ ಮುನ್ನ ಭಾರತದ ಸ್ಥಿತಿಗತಿ ಬಗ್ಗೆ ಮಾತನಾಡಿದರು. ಸಂಘದ ಅಧ್ಯಕ್ಷ ಶಿವಪ್ಪ ಶಾಂತಪ್ಪನವರ್ ಅವರು ಸ್ವಾತಂತ್ರ್ಯಾನಂತರದ ಭಾರತದ ಸಾಧನೆಯನ್ನು ವಿವರಿಸಿದರು.


ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಡಾವಣೆಯ ಹಿರಿಯ ಸದಸ್ಯರಾದ  ಶರೀಫ್, ಚೌಡ ರೆಡ್ಡಿ, ಎಚ್.ವಿ. ಉದಯಶಂಕರ್ ಹಾಗೂ ಅಧ್ಯಕ್ಷ  ಶಿವಪ್ಪ ಶಾಂತಪ್ಪನವರ್  ಬಿದಿರಿನ ಗಿಡಗಳನ್ನು ಬಡಾವಣೆಯ ಉದ್ಯಾನದಲ್ಲಿ ನೆಟ್ಟರು. ಕಾರ್ಯದರ್ಶಿ ನೆತ್ರಕೆರೆ ಉದಯಶಂಕರ ಕಾರ್ಯಕ್ರಮ ನಿರ್ವಹಿಸಿದರು.







Saturday, October 4, 2014

‘ಸ್ವಚ್ಛ ಭಾರತ’ ಅಭಿಯಾನದ ಮರುದಿನ ಬೆಂಗಳೂರಿನ ‘ಹೆಗಡೆ ನಗರ’..! Hegade Nagara : Next day of ‘Clean India’ Campaign

‘ಸ್ವಚ್ಛ ಭಾರತ’ ಅಭಿಯಾನದ ಮರುದಿನ ಬೆಂಗಳೂರಿನ ‘ಹೆಗಡೆ ನಗರ’..!

ಮಹಾತ್ಮಾ ಗಾಂಧೀಜಿಯವರ 150ನೇ ಹುಟ್ಟು ಹಬ್ಬದ ವರ್ಷವಾದ 2019ರ ವೇಳೆಗೆ ಭಾರತದ ಸಂಪೂರ್ಣ ಕೊಳೆ  ತೊಳೆಯುವ ಸಂಕಲ್ಪ ತೊಟ್ಟ ಪ್ರಧಾನಿ ನರೇಂದ್ರ ಮೋದಿ ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2ರಂದು ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಚಾಲನೆ ನೀಡಿದರು. 30 ಲಕ್ಷಕ್ಕೂ ಹೆಚ್ಚು ಮಂದಿಗೆ ಸ್ವಚ್ಛ ಭಾರತ ನಿರ್ಮಿಸುವ ಕೆಲಸಕ್ಕಾಗಿ ವಾರದಲ್ಲಿ ಕನಿಷ್ಠ 2 ಗಂಟೆಯಂತೆ ವರ್ಷದಲ್ಲಿ 100 ಗಂಟೆ ಮೀಸಲಿಡುವುದಾಗಿ ಪ್ರಮಾಣ ಬೋಧಿಸಿದರು.

ರಾಜಕೀಯ ಬದಿಗೊತ್ತಿ ರಾಜಕಾರಣಿಗಳು, ಸರ್ಕಾರಿ ನೌಕರರು, ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳು, ಶಾಲಾ ಮಕ್ಕಳು ಸೇರಿದಂತೆ ದೇಶಕ್ಕೆ ದೇಶವೇ ಪ್ರಧಾನಿ ಕರೆಗೆ ಓಗೊಟ್ಟಿತು.

ಗಾಂಧಿ ಜಯಂತಿಯ ದಿನ ದೇಶಾದ್ಯಂತ ಪೊರಕೆಗಳು ರಸ್ತೆ, ರಸ್ತೆಗಳಲ್ಲೂ ಚಲಿಸಿದವು. ಮೋದಿಯವರು ರಾಜಘಾಟಿನಲ್ಲಿ ಮಹಾತ್ಮಾ ಅವರ ಸ್ಮಾರಕಕ್ಕೆ ಭೇಟಿ ನೀಡಿ ಬಳಿಕ ವಾಲ್ಮೀಕಿ ಬಸ್ತಿಯಲ್ಲಿ ಸ್ವತಃ ಪೊರಕೆ ಹಿಡಿದು ಗುಡಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಅದಕ್ಕೂ ಮುನ್ನ ದಾರಿಯಲ್ಲಿ ಪೊಲೀಸ್ ಸ್ಟೇಷನ್ನಿಗೆ ದಿಢೀರ್ ಭೇಟಿ ನೀಡಿ ಅಲ್ಲಿದ್ದ ಕಸ ಕಂಡು ಸ್ವತಃ ಗುಡಿಸಿದರು.

ಈ ಯೋಜನೆಯಡಿಯಲ್ಲಿ ದೇಶಾದ್ಯಂತ ಅಂದಾಜು 2 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 11.11 ಕೋಟಿ ಶೌಚಾಲಯ ನಿರ್ಮಿಸಲು ಕೇಂದ್ರ ಪಣ ತೊಟ್ಟಿತು. ಅಭಿಯಾನ ಯಶಸ್ವಿಗೊಳಿಸಲು ದೇಶದ 2.47 ಲಕ್ಷ ಗ್ರಾಮ ಪಂಚಾಯತಿಗಳಿಗೆ ವಾರ್ಷಿಕ ತಲಾ 20 ಲಕ್ಷ ರೂಪಾಯಿಗಳ ಅನುದಾನ ಘೋಷಿಸಿತು. ಇದಲ್ಲದೆ ಅಗತ್ಯಕ್ಕೆ ತಕ್ಕಂತೆ ಅಗತ್ಯ ಹಣ ಬಿಡುಗಡೆ ಮಾಡುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ನಿತಿನ್ ಗಡ್ಕರಿ ಘೋಷಿಸಿದರು. ಗ್ರಾಮೀಣ ಪ್ರದೇಶದಲ್ಲಿ ಸಿಗುವ ಜೈವಿಕ ರಸಗೊಬ್ಬರ ಹಾಗೂ ವಿವಿಧ ಶಕ್ತಿ ಮೂಲಗಳನ್ನು ಬಳಸಿಕೊಂಡು ಕಸದಿಂದ ರಸ ಮಾಡುವ ತಾಂತ್ರಿಕತೆಯನ್ನೂ ಯೋಜನೆಯಡಿ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಯೋಜನೆಯ ಯಶಸ್ವಿಗಾಗಿ ಸಹಕರಿಸುವಂತೆ ಒಂಬತ್ತು ಕ್ಷೇತ್ರಗಳ ಗಣ್ಯರಾದ ಸಚಿನ್ ತೆಂಡೂಲ್ಕರ್, ಅಮೀರ್ ಖಾನ್, ಬಾಬಾ ರಾಮದೇವ್, ಅನಿಲ್ ಅಂಬಾನಿ, ಪ್ರಿಯಾಂಕಾ ಛೋಪ್ರಾ, ಕಮಲಹಾಸನ್, ಸಲ್ಮಾನ್ ಖಾನ್, ಮೃದುಲಾ ಸಿನ್ಹಾ ಮತ್ತು ಶಶಿ ತರೂರ್ ಅವರಿಗೆ ಕರೆ ಕೊಟ್ಟರು.

ವಿಜ್ಞಾನಿಗಳ ಶ್ರಮದಿಂದ ಮಂಗಳ ಗ್ರಹ ತಲುಪಲು ಸಾಧ್ಯವಾಗಿರುವಾಗ ನಮಗೆ ಮಹಾತ್ಮಾ ಗಾಂಧೀಜಿಯವರ ಕನಸಾದ ಸ್ವಚ್ಛ ಭಾರತದ ನಿರ್ಮಾಣ ಸಾಧ್ಯವಿಲ್ಲವೇ ಎಂದು ಜನತೆಗೆ ಪ್ರಶ್ನೆ ಹಾಕಿದರು ಪ್ರಧಾನಿ ನರೇಂದ್ರ ಮೋದಿ.

ಅಭಿಯಾನದ ಮೊದಲ ದಿನದ ಸ್ಪಂದನೆ ಖಂಡಿತ ಅಭಿನಂದನೀಯ. ಸ್ವಚ್ಛತೆಯ ಕಾರ್ಯ ನಿರಂತರವಾಗಬೇಕು.
ಆದರೆ ಸ್ವಚ್ಛತೆಯ ಅಭಿಯಾನ ನಗರಗಳಲ್ಲಿ ವಾರ್ಡು ಮಟ್ಟಗಳಿಗೆ ಹಾಗೆಯೇ ಹಳ್ಳಿಗಳ ಮಟ್ಟಕ್ಕೆ ಮುಟ್ಟಿದೆಯೇ ಎಂಬ ಪ್ರಶ್ನೆ ಹಾಕಿಕೊಂಡರೆ ನಿರಾಶೆಯಾಗುತ್ತದೆ.

ಬೆಂಗಳೂರಿನ ಹೃದಯಭಾಗವಾದ ವಿಧಾನಸೌಧದಿಂದ 13 ಕಿಮೀಗಳಿಗೂ ಕಡಿಮೆ ದೂರದಲ್ಲಿ ಇರುವ ರಾಮಕೃಷ್ಣ ಹೆಗಡೆ ನಗರಕ್ಕೆ ಒಮ್ಮೆ ಭೇಟಿ ಕೊಟ್ಟು ನೋಡಿ. ನಿಮಗೆ ಇದು ಖಾತರಿಯಾಗುತ್ತದೆ.

ಕರ್ನಾಟಕದ ದಕ್ಷ ಮುಖ್ಯಮಂತ್ರಿ ಎಂಬುದಾಗಿ ಹೆಸರು ಗಳಿಸಿದ್ದ ರಾಮಕೃಷ್ಣ ಹೆಗಡೆ ಅವರು ಬೆಂಗಳೂರಿಗೆ ಕೊಟ್ಟ ಹಲವಾರು ಕೊಡುಗೆಗಳಲ್ಲಿ ಪ್ರಮುಖವಾದ ಒಂದು ಕೊಡುಗೆ ಬೆಂಗಳೂರಿನ ರಸ್ತೆ ರಸ್ತೆಗಳಲ್ಲೂ ಲಕ್ಷಾಂತರ ಸಂಖ್ಯೆಯಲ್ಲಿ ಗಿಡಮರಗಳನ್ನು ನೆಡಿಸಿ ರಾಜಧಾನಿಯನ್ನು ತಂಪಾಗಿಸಿದ್ದು. ಅವರ ಕಾಲದಲ್ಲಿ ಸಸಿಗಳಾಗಿ ನಂತರ ಹೆಮ್ಮರಗಳಾಗಿ ಬೆಳೆದ ಮರಗಳ ಗತಿ ಬೆಂಗಳೂರಿನಲ್ಲಿ ಏನಾಗಿದೆ ಎಂದು ಕೇಳಿದರೆ ಪುಟ್ಟ ಮಕ್ಕಳೂ ಉತ್ತರ ಕೊಡಬಲ್ಲರು.


ಅಭಿವೃದ್ಧಿಯ ಹೆಸರಿನಲ್ಲಿ ‘ಮರಹತ್ಯೆ’ಗಳು ನಿರಂತರ ನಡೆದು ಈಗ ಯಾವುದೇ ರಸ್ತೆಯಲ್ಲಿ ಬಸ್ಸು ನಿಲ್ಲುವ ಜಾಗದಲ್ಲೇ ಇರಲಿ, ಟ್ರಾಫಿಕ್ ಸಂಕೇತಗಳು ಇರುವ ರಸ್ತೆಗಳಲ್ಲೇ ಇರಲಿ ನಿಂತರೆ ಸಾಕು ತಲೆ ಬಿಸಿಯಾಗಿ ಸಿಡಿಯತೊಡಗುತ್ತದೆ. ಮರಗಳೆಲ್ಲಾ ನಿರ್ನಾಮವಾಗಿ ಹೋಗಿ, ಅವುಗಳ ಜಾಗದಲ್ಲಿ ‘ಬುಶ್’ ಮಾದರಿಯ ಹೆಚ್ಚೆಂದರೆ ಆರಡಿ ಬೆಳೆಯುವ ಪುಟ್ಟ ಸಸ್ಯಗಳು ಬೆಂಗಳೂರಿನ ರಸ್ತೆಗಳ ಅಂದ ಹೆಚ್ಚಿಸಲು ಬಂದು ನಿಂತಿವೆ.

ಬೆಂಗಳೂರಿನ ಕೇಂದ್ರ ಪ್ರದೇಶದ ಬೆಳವಣಿಗೆ ಕಾಲದಲ್ಲಿ ವಸತಿ ಸ್ಥಳ ಕಳೆದುಕೊಂಡ ಬಡ ಜನರಿಗೆ ನಗರದ ಹೊರಭಾಗದಲ್ಲಿ ಜಾಗ ಒದಗಿಸಿದ್ದ ಕಾರಣಕ್ಕಾಗಿ ರಾಮಕೃಷ್ಣ ಹೆಗಡೆಯವರ ಹೆಸರನ್ನೇ ಈ ಜನ ಇಟ್ಟುಕೊಂಡದ್ದರಿಂದ ಥಣಿಸಂದ್ರದ ಬಳಿಕದ ಜಾಗಕ್ಕೆಲ್ಲ ರಾಮಕೃಷ್ಣ ಹೆಗಡೆ ನಗರ ಎಂಬ ಹೆಸರು ಬಂತು ಎಂದು ಇಲ್ಲಿನ ಬಿಳಿತಲೆಗಳು ನೆನಪು ಮಾಡಿಕೊಳ್ಳುತ್ತವೆ.

ಈ ರಾಮಕೃಷ್ಣ ಹೆಗಡೆ ನಗರ ಗಣ್ಯಾತಿಗಣ್ಯರ ಕ್ಷೇತ್ರವೆಂದರೆ ತಪ್ಪಲ್ಲ. ಹಿಂದಿನ ನಾಯಕರಾದ ಜಾಫರ್ ಷರೀಫ್, ಡಿ.ಬಿ. ಚಂದ್ರೇಗೌಡ, ಸಾಂಗ್ಲಿಯಾನರಂತಹವರೆಲ್ಲ ಪ್ರತಿನಿಧಿಸಿದ್ದ ಕ್ಷೇತ್ರ ಎನ್ನುವುದನ್ನು ಬಿಟ್ಟು ಬಿಡಿ. ಕೇಂದ್ರದ ಹಾಲಿ ರೈಲ್ವೇ ಸಚಿವರಾದ ಡಿ.ವಿ. ಸದಾನಂದ ಗೌಡ, ಕರ್ನಾಟಕದ ಕೃಷಿ ಸಚಿವರಾದ ಕೃಷ್ಣ ಭೈರೇಗೌಡ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹಣಕಾಸು ಸಮಿತಿಯಂತಹ ಪ್ರಮುಖ ಸ್ಥಾಯಿಸಮಿತಿಯ ನೇತೃತ್ವ ವಹಿಸಿದ್ದ ಮುನೀಂದ್ರ ಕುಮಾರಂತಹವರು ಈಗಲೂ ಈ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ಇಂತಿಪ್ಪ ಗಣ್ಯಾತಿಗಣ್ಯರ ಕ್ಷೇತ್ರವಾದ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರನ್ನು ಪ್ರತಿದಿನವೂ ನೆನಪಿಗೆ ತರುವ ಈ ರಾಮಕೃಷ್ಣ ಹೆಗಡೆ ನಗರದ ಮುಖ್ಯರಸ್ತೆಯು, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಹೆಬ್ಬಾಳ-ಯಲಹಂಕದ ಮೂಲಕ ಸಾಗುವ ರಸ್ತೆಗೆ ಪರ್ಯಾಯ ರಸ್ತೆಯೂ ಹೌದು.

ಇನ್ನು ಹೆಚ್ಚು ಉದ್ದ ಎಳೆಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಸ್ವಚ್ಛ ಭಾರತ ಅಭಿಯಾನ’ದ  ಉದ್ಘಾಟನೆ ಮಾಡುತ್ತಾ ಒಂದು ಕರೆ ಕೊಟ್ಟಿದ್ದಾರೆ. ‘ಕೊಳಕು ಇರುವ ಸ್ಥಳಗಳ ಫೊಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ. ಅವುಗಳು ಸ್ವಚ್ಛಗೊಂಡ ಬಗೆಯನ್ನೂ ಪ್ರಸಿದ್ಧಿಸಿ’ ಅಂತ.

ರಾಮಕೃಷ್ಣ ಹೆಗಡೆ ನಗರದ ಮುಖ್ಯರಸ್ತೆಯಲ್ಲಿ ‘ರಾಷ್ಟ್ರೋತ್ಥಾನ ವಿದ್ಯಾಕೇಂದ್ರ’ ಸಮೀಪದಲ್ಲೇ ಇಡೀ ಪುಟ್ಟ್ಟಪಥವನ್ನು (ಫುಟ್ಪಾತ್) ಕೊಳಕು ಕಸ ಹೇಗೆ ಆಕ್ರಮಿಸಿಕೊಂಡಿದೆ? ಹೇಗೆ ಬಯಲು ಮೂತ್ರಾಲಯವಾಗಿ ಬಳಕೆಯಾಗುತ್ತಿದೆ? ಹಾಗೆಯೇ ಮುಖ್ಯರಸ್ಥೆಯಿಂದ ಸ್ವಲ್ಪ ಒಳಗೆ ಇರುವ ಬಾಲಾಜಿ ಲೇಔಟ್ ಪ್ರವೇಶಿಸುವ ಸ್ಥಳ ಹೇಗೆ ಬಡಾವಣೆಯ ಬೋರ್ಡ್ ಬುಡವನ್ನೇ ಕಸದ ಬುಟ್ಟಿಯನ್ನಾಗಿ ಮಾಡಿಕೊಂಡಿದೆ? ಜೊತೆಗೆ ಜಲಮಂಡಳಿಯ ವಾಟರ್ ಟ್ಯಾಂಕ್ ತಳದಲ್ಲೇ ಇರುವ ಬೃಹತ್
ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸಹಾಯ ಕೇಂದ್ರಕ್ಕೆ ಬರುವವರನ್ನು ಎದುರಲ್ಲೇ ಇರುವ ನಾರುವ ಕಸದ ರಾಶಿ ಹೇಗೆ ಸ್ವಾಗತಿಸುತ್ತಿದೆ ಎಂಬುದನ್ನು ಇಲ್ಲಿ ಬರೆಯುವ ಅಗತ್ಯವಿಲ್ಲ. ಚಿತ್ರಗಳೇ ಅದನ್ನು ಹೇಳುತ್ತವೆ.


‘ಪರ್ಯಾಯ’ ದಿನ ಲೆಕ್ಕ ಹಾಕುತ್ತದೆ. ಯಾವಾಗ ಇದು ಸ್ವಚ್ಛವಾಗಿ, ಸ್ವಚ್ಛ ಭಾರತದ ಭಾಗವಾಗುತ್ತದೋ ಎಂದು. ಸ್ವಚ್ಛಗೊಳಿಸಿದ ಫೊಟೋ ಲಭ್ಯವಾದರೆ, ಅದನ್ನೂ ಖಂಡಿತ ಪ್ರಕಟಿಸುತ್ತದೆ.

ಅಕ್ಕ ಪಕ್ಕದ ಸ್ಥಳಗಳಲ್ಲಿ ಇಂತಹ ‘ಕತೆ’ ಇದ್ದರೆ, ಚಿತ್ರ ಸಹಿತ ಬರೆದುಕೊಟ್ಟರೆ ಅದರ ಮೇಲೂ ಬೆಳಕು ಚೆಲ್ಲುತ್ತದೆ.

-ನೆತ್ರಕೆರೆ ಉದಯಶಂಕರ


 Hegade Nagara : Next day of ‘Clean India’ Campaign    



The Photos here are the photos of Rama Krishna Hegade Nagara and sorrunding areas like Balaji Krupa Layout and road towards Bangalore Help Centre near water tank.

These Photos were taken on 3rd October 2014, next day our Prime Minister Narendra Modi launched ‘Clean India’ Campaign.

This area is represented by Union Railway Minister D.V. Sadananda Gowda, Agriculture Minister Krishna Bairegowda, Corprator Muneendra Kumar.


-Nethrakere Udaya Shankara


Advertisement