Showing posts with label Bollywood. Show all posts
Showing posts with label Bollywood. Show all posts

Sunday, February 6, 2022

ಗಾಯನ ನಿಲ್ಲಿಸಿದ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್

 ಗಾಯನ ನಿಲ್ಲಿಸಿದ ’ಗಾನ ಕೋಗಿಲೆ’ ಲತಾ ಮಂಗೇಶ್ಕರ್

ಮುಂಬೈ: ‘ಭಾರತದ ಗಾನ ಕೋಗಿಲೆ’ ಎಂಬುದಾಗಿಯೇ  ಖ್ಯಾತರಾಗಿದ್ದ ಗಾಯಕಿ ಲತಾ ಮಂಗೇಶ್ಕರ್ (೯೨) ಅವರು 2022 ಫೆಬ್ರುವರಿ 6ರ ಭಾನುವಾರ ನಿಧನರಾದರು.

ಕೋವಿಡ್-೧೯ ದೃಢಪಟ್ಟ ಹಿನ್ನೆಲೆ ಚಿಕಿತ್ಸೆಗಾಗಿ ಅವರನ್ನು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಜನವರಿ ೮ರಂದು ದಾಖಲಿಸಲಾಗಿತ್ತು. ಕೆಲವು ವಾರಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು.

ಇತ್ತೀಚೆಗೆ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿಕೊಂಡಿತ್ತಾದರೂ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, ಭಾನುವಾರ ಬೆಳಿಗ್ಗೆ ಅವರು ಅಗಲಿದರು.

ಗಾನ ಕೋಗಿಲೆ

ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಸುಮಾರು ಏಳು ದಶಕಗಳ ಕಾಲ ಹಿನ್ನೆಲೆ ಗಾಯಕಿಯಾಗಿ ಮನರಂಜಿಸಿದ್ದಾರೆ. ೧೯೪೨ರಿಂದ ಆರಂಭವಾದ ಅವರ ಗಾಯನ ಯಾನದಲ್ಲಿ ೩೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.  ಏ ಮೇರೆ ವತನ್ ಕೆ ಲೋಗೊ, ಲಗ್ ಜಾ ಗಲೇ, ಏಹ್ ಕಹಾ ಆಗಯೇ ಹಮ್ ಹಾಗೂ ಪ್ಯಾರ್ ಕಿಯಾ ತೊ ಡರ್ನಾ ಕ್ಯಾ,...ಸೇರಿದಂತೆ ಅವರ ನೂರಾರು ಹಾಡುಗಳು ಇವತ್ತಿಗೂ ಅಪಾರ ಜನಪ್ರಿಯತೆ ಪಡೆದಿವೆ.

ಭಾರತರತ್ನ, ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿರುವ ಲತಾ ಮಂಗೇಶ್ಕರ್ ಅವರು ಭಾರತೀಯ ಚಿತ್ರರಂಗದ ಐಕಾನ್ ಆಗಿದ್ದು, ದೊಡ್ಡ ಸಂಖ್ಯೆಯ ಹಿಂದಿ ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ. ಮರಾಠಿ ಮತ್ತು ಬಂಗಾಳಿ ಸೇರಿದಂತೆ ಹಲವಾರು ಪ್ರಾದೇಶಿಕ ಭಾಷೆಗಳಲ್ಲೂ ಅವರು ಹಲವಾರು ಹಾಡುಗಳನ್ನು ಹಾಡಿದ್ದಾರೆ.

ಪ್ರತಿಷ್ಠಿತ ಗಾಯಕ ಮನೆತನಕ್ಕೆ ಸೇರಿದ ಲತಾ ಮಂಗೇಶ್ಕರ್ ಅವರು ಸಂಗೀತ ರಚನೆ ಹಾಗೂ ಕೆಲವು ಚಿತ್ರಗಳ ನಿರ್ಮಾಣವನ್ನೂ ಮಾಡಿದ್ದಾರೆ.

೧೯೨೯ರಲ್ಲಿ ಜನಿಸಿದ್ದ ಲತಾ ಅವರು ಐವರು ಮಕ್ಕಳ ಪೈಕಿ ಹಿರಿಯವರು. ಶಾಸ್ತೀಯ ಸಂಗೀತಗಾರರಾಗಿದ್ದ ತಂದೆ ಪಂಡಿತ ದೀನಾನಾಥ್ ಮಂಗೇಶ್ಕರ್ ಅವರು ಕಿರಿಯ ಲತಾ ಮಂಗೇಶ್ಕರ್ ಅವರಿಗೆ ಸಂಗೀತದ ಮೊದಲ ಪಾಠ ಮಾಡಿದ್ದರು. ೧೯೪೨ರಲ್ಲಿ ತಂದೆ ಮೃತರಾದ ಬಳಿಕ, ೧೩ರ ಹರೆಯದ ಲತಾ ಮಂಗೇಶ್ಕರ್ ಅವರು ಮರಾಠಿ ಸಿನಿಮಾಗಳಿಗೆ ಹಾಡುವ ಮೂಲಕ ಗಾಯನ ವೃತ್ತಿಯನ್ನು ಆರಂಭಿಸಿದರು.

೧೯೪೫ರಲ್ಲಿ ಲತಾ ಅವರು ಮಧುಬಾಲಾ ನಟನೆಯ ಮಹಲ್ ಚಲಚಿತ್ರದ ’ಆಯೇಗಾ ಆನೇವಾಲ’ ಚಿತ್ರದ ಮೂಲಕ ಮೊತ್ತ ಮೊದಲಿಗೆ ಪ್ರಸಿದ್ಧಿಗೆ ಬಂದರು. ಆ ಬಳಿಕ ಲತಾ ಮಂಗೇಶ್ಕರ್ ಅವರ ಧ್ವನಿ ಮತ್ತು ಗಾಯನ ವೃತ್ತಿ ಹೊಸ ಉತ್ತುಂಗಕ್ಕೆ ಏರಿತು..

ಬೈಜು ಬಾವ್ರಾ, ಮದರ್ ಇಂಡಿಯಾ ಮತ್ತು ಮುಘಲ್-ಇ-ಆಜಂ ದಂತಹ ಚಿತ್ರಗಳಲ್ಲಿ ನೌಶದ್ ರಚನೆಯ ರಾಗ ಆಧಾರಿತ ಹಾಡುಗಳನ್ನು ಅವರು ಹಾಡಿದರು. ಶಂಕರ್ ಜೈಕಿಷನ್ ಅವರ ಹಿಟ್ ಸಿನಿಮಾಗಳಾದ ಬರ್ಸಾತ್, ಶ್ರೀ ೪೨೦, ಸಲೀಲ್ ಚೌಧರಿ ಮಧುಮತಿ ಚಿತ್ರದ ಹಾಡುಗಳು ಲತಾ ಮಂಗೇಶ್ಕರ್ ಅವರಿಗೆ ಅತ್ಯುತ್ತಮ ಹಿನ್ನೆಲೆಗಾಯಕಿ  ಫಿಲಂಫೇರ್ ಪ್ರಶಸ್ತಿಯನ್ನು ತಂದು ಕೊಟ್ಟವು. ಬಳಿಕ ಬೀಸ್ ಸಾಲ್ ಬಾದ್, ಖಾನ್ದಾನ್ ಮತ್ತು ಜೀನೆ ಕಿ ರಾಹ್ ಚಿತ್ರಗಳ ಹಾಡುಗಳಿಗೂ ಅವರಿಗೆ ಇನ್ನೂ ಮೂರು ಫಿಲಂಫೇರ್ ಪ್ರಶಸ್ತಿಗಳು ಬಂದವು. ಪರಿಚಯ್, ಕೋರಾ ಕಾಗಜ್ ಮತ್ತು ಲೇಕಿನ್ ಚಿತ್ರಗಳಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ಅವರಿಗೆ  ಮೂರು ರಾಷ್ಟ್ರೀಯ ಪ್ರಶಸ್ತಿಗಳು ಬಂದವು.

ಪಾಕೀಜಾ, ಅಭಿಮಾನ್, ಅಮರ್ ಪ್ರೇಮ್, ಆನಂದಿ, ಸಿಲ್ ಸಿಲಾ, ಚಾಂದನಿ, ಸಾಗರ್, ರುಡಾಲಿ, ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೆ ಇತ್ಯಾದಿ ಚಿತ್ರಗಳು ಅವರ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ಪ್ರಸಿದ್ಧವಾಗಿವೆ.

ಲತಾ ಮಂಗೇಶ್ಕರ್ ಅವರ ದೇಶಭಕ್ತಿ ಗೀತೆಗಳಲ್ಲಿ ೧೯೬೨ರಲ್ಲಿ ಚೀನಾ ಜೊತೆಗಿನ ಸಮರದಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸ್ಮರಣೆಗಾಗಿ ಹಾಡಿದ ’ಆಯೇ ಮೇರೆ ವತನ್ ಕೆ ಲೋಗೋ’ ಅತ್ಯಂತ ಖ್ಯಾತಿ ಪಡೆದ ಹಾಡಾಗಿದ್ದು ಇದನ್ನು ೧೯೬೩ರ ಗಣರಾಜ್ಯೋತ್ಸವ ದಿನ ನವದೆಹಲಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಹಾಡಲಾಗಿತ್ತು. ಲತಾ ಮಂಗೇಶ್ಕರ್ ಅವರು ಈ ಹಾಡನ್ನು ರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಮತ್ತು ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಮ್ಮುಖದಲ್ಲಿ ಹಾಡಿದ್ದರು.

ಲತಾ ಮಂಗೇಶ್ಕರ್ ಅವರು ಹಿಡಿಯಷ್ಟು ಮರಾಠಿ ಚಿತ್ರಗಳಿಗೆ ಸಂಗೀತ ರಚನೆಯನ್ನೂ ಮಾಡಿದ್ದಾರೆ. ಇವುಗಳಲ್ಲಿ ಸಧಿ ಮನಸೆ ಚಿತ್ರವು  ಅವರಿಗೆ ಮಹಾರಾಷ್ಟ್ರ ರಾಜ್ಯ ಸರ್ಕಾರದ ಅತ್ಯುತ್ತಮ ಸಂಗೀತ ನಿರ್ದೇಶಕಿ ಪ್ರಶಸ್ತಿಯನ್ನು ೧೯೬೫ರಲ್ಲಿ ತಂದುಕೊಟ್ಟಿತ್ತು. ಅವರು ನಿರ್ಮಿಸಿದ ಕೆಲವೇ ಕೆಲವು ಚಿತ್ರಗಳ ಪೈಕಿ ೧೯೯೦ರಲ್ಲಿ ನಿರ್ಮಿಸಿದ ಲೇಖಿನ್ ಚಿತ್ರವೂ ಒಂದಾಗಿದ್ದು ಅದರಲ್ಲಿ ಸ್ವತಃ ಲತಾ ಅವರೇ ಹಾಡಿದ್ದರು.

ಲತಾ ಮಂಗೇಶ್ಕರ್ ಅವರ ಮೈ ನವಿರೇಳಿಸುವ ಒಂದು ಹಾಡಿನ ಪರಿ ಇಲ್ಲಿದೆ ನೋಡಿ.

ಲತಾ ಹಾಡಿನ ಮೋಡಿ



Sunday, August 2, 2020

ಅಮಿತಾಭ್ ಬಚ್ಚನ್ ಕೊರೋನಾದಿಂದ ಗುಣಮುಖ

ಅಮಿತಾಭ್ ಬಚ್ಚನ್ ಕೊರೋನಾದಿಂದ ಗುಣಮುಖ

ಮುಂಬೈ: ಕೊರೋನಾವೈರಸ್ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮುಂಬೈಯ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಬಾಲಿವುಡ್ ಚಿತ್ರ ನಟ ಅಮಿತಾಭ್ ಬಚ್ಚನ್ 2020 ಆಗಸ್ಟ್ 02ರ ಭಾನುವಾರ ಬಿಡುಗಡೆಯಾದರು.

ಆಸ್ಪತ್ರೆಗೆ ದಾಖಲಾದ ೨೩ ದಿನಗಳ ಬಳಿಕ ಅಮಿತಾಬ್ ಬಚ್ಚನ್ ಬಿಡುಗಡೆಯಾಗಿದ್ದು, ಅವರ ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ  ಚಿಕಿತ್ಸೆ ಮುಂದುವರೆದಿದೆ.

೭೭ ವರ್ಷದ ಅಮಿತಾಬ್ ಬಚ್ಚನ್ ಅವರಿಗೆ ಜುಲೈ ೧೧ ರಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ನಂತರ ಅವರ ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಮತ್ತು ಮೊಮ್ಮಗಳಿಗೂ ಕೋವಿಡ್ ಇರುವುದು ಬೆಳಕಿಗೆ ಬಂದಿತ್ತು. 

ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅಮಿತಾಬ್ ಅವರು ಮುಂಬೈನ ತಮ್ಮ ನಿವಾಸದಲ್ಲಿ ಕ್ವಾರಂಟೈನ್ ಆಗಿರುವುದಾಗಿ ಟ್ವೀಟ್ ಮಾಡಿದರು.

ನನ್ನ ಕೋವಿಡ್ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಬಂದಿದೆ. ನನ್ನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ನಾನು ಮನೆಗೆ ಮರಳಿ ಹೋಮ್ ಕ್ವಾರಂಟೈನ್ ಆಗಿದ್ದೇನೆ. ದೇವರ ಕೃಪೆ, ಅಪ್ಪ-ಅಮ್ಮನ ಆಶೀರ್ವಾದ, ಆತ್ಮೀಯ ಸ್ನೇಹಿತರ ಪ್ರಾರ್ಥನೆ, ಅಭಿಮಾನಿಗಳ ಹರಕೆ ಮತ್ತು ನಾನಾವತಿ ಆಸ್ಪತ್ರೆಯ ಅತ್ಯುತ್ತಮ ಆರೈಕೆ ಮತ್ತು ಶುಶ್ರೂಷೆಯಿಂದ ನನಗೆ ದಿನವನ್ನು ಕಾಣಲು ಸಾಧ್ಯವಾಗಿದೆ ಎಂದು ಅಮಿತಾಬ್ ಬಚ್ಚನ್  ಟ್ವಿಟ್ಟರ್ ಸಂದೇಶದಲ್ಲಿ ಬರೆದರು. 

Thursday, June 4, 2020

ಬಾಲಿವುಡ್ ಸಿನಿಮಾ ನಿರ್ದೇಶಕ ಬಸು ಚಟರ್ಜಿ ಇನ್ನಿಲ್ಲ

ಬಾಲಿವುಡ್  ಸಿನಿಮಾ ನಿರ್ದೇಶಕ ಬಸು ಚಟರ್ಜಿ ಇನ್ನಿಲ್ಲ

ನವದೆಹಲಿ: ಬಾಲಿವುಡ್‌ನ ಖ್ಯಾತ ಹಾಗೂ ದಂತಕಥೆ ಎನ್ನಿಸಿಕೊಂಡಿದ್ದ ನಿರ್ದೇಶಕ ಬಸು ಚಟರ್ಜಿ (೯೦ವರ್ಷ)  2020 ಜೂನ್ 04ರ ಗುರುವಾರ ವಿಧಿವಶರಾಗಿದ್ದಾರೆ ಎಂದು ವರದಿ ತಿಳಿಸಿತು.

ರಜನಿಗಂಧ, ಚೋಟಿ ಸಿ ಬಾತ್, ಖಟ್ಟಾ ಮೀಠಾ, ಬಾತೋನ್ ಬಾತೋನ್ ಮೈನ್, ಸೌಕೀನ್ ಸೇರಿದಂತೆ ಹಲವಾರು ಕ್ಲಾಸಿಕ್ ಚಿತ್ರಗಳ ನಿರ್ದೇಶಕರಾಗಿ ಹೆಸರಾಗಿದ್ದವರು ಬಸು ಚಟರ್ಜಿ.


Thursday, April 30, 2020

ಬಾಲಿವುಡ್ ಹಿರಿಯ ನಟ ‘ಒರಿಜಿನಲ್ ಚಾಕೋಲೇಟ್ ಬಾಯ್’ ರಿಷಿ ಕಪೂರ್ ನಿಧನ

ಬಾಲಿವುಡ್  ಹಿರಿಯ  ನಟ  ಒರಿಜಿನಲ್  ಚಾಕೋಲೇಟ್ ಬಾಯ್’  ರಿಷಿ  ಕಪೂರ್   ನಿಧನ
ಮುಂಬೈ:  ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಹಿರಿಯ ನಟ, ’ಒರಿಜಿನಲ್ ಚಾಕೋಲೇಟ್ ಬಾಯ್ ರಿಷಿ ಕಪೂರ್ (೬೭) ಅವರು   2020  ಏಪ್ರಿಲ್  30ರ  ಗುರುವಾರ ಬೆಳಗ್ಗೆ ಮುಂಬೈ  ಆಸ್ಪತ್ರೆಯಲ್ಲಿ ನಿಧನರಾದರು.

೨೦೧೮ರಲ್ಲಿ  ಕ್ಯಾನ್ಸರ್  ಬಾಧೆಗೆ  ಗುರಿಯಾದ  ರಿಷಿ  ಕಪೂರ್ ಅಮೆರಿಕಕ್ಕೆ ತೆರಳಿ ನ್ಯೂಯಾರ್ಕ್ನಲ್ಲಿ ಚಿಕಿತ್ಸೆ ಪಡೆದಿದ್ದರು.  ಬುಧವಾರ ಉಸಿರಾಟದ ಸಮಸ್ಯೆ ಕಂಡು ಬಂದಿದ್ದರಿಂದ  ಮುಂಬೈಯ ಸರ್ ಹೆಚ್. ಎನ್. ರಿಲಯನ್ಸ್ ಫೌಂಡೇಶನ್  ಆಸ್ಪತ್ರೆಗೆ ದಾಖಲಾಗಿದ್ದರು.

ರಿಷಿ ಕಪೂರ್ ನಿಧನದ ಸುದ್ದಿಯನ್ನು ಅವರ ಸಹೋದರ ರಣಧೀರ್ ಕಪೂರ್ ಖಚಿತಪಡಿಸಿದರು.

ಬುಧವಾರವಷ್ಟೇ ನಟ ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡ ದುಃಖ ಮಾಸುವ ಮೊದಲೇ ಭಾರತೀಯ ಚಿತ್ರರಂಗದ ಮತ್ತೊಬ್ಬ ದಿಗ್ಗಜ ರಿಷಿ ಕಪೂರ್ ಇಂದು ನಮ್ಮನಗಲಿದರು.

ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ವಾಪಾಸಾದ ಬಳಿಕ, ಕಳೆದ ಫೆಬ್ರುವರಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ರಿಷಿ ಕಪೂರ್ ಎರಡು ಭಾರೀ  ಆಸ್ಪತ್ರೆಗೆ ದಾಖಲಾಗಿದ್ದರು.

ದೀಪಿಕಾ ಪಡುಕೋಣೆ ಜೊತೆ ಸಿನಿಮಾ ಮಾಡುವುದಾಗಿಯೂ ರಿಷಿ ಕಪೂರ್ ಇತ್ತೀಚೆಗಷ್ಟೇ ಘೋಷಣೆ ಕೂಡ ಮಾಡಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದ ರಿಷಿ ಕಪೂರ್ ಟ್ವಿಟರ್ ಖಾತೆಯಿಂದ ಏಪ್ರಿಲ್ ೨ರ ನಂತರ ಯಾವುದೇ ಟ್ವೀಟ್ ಪ್ರಕಟವಾಗಿರಲಿಲ್ಲ.

ಖ್ಯಾತ ನಟ ರಾಜ್ ಕಪೂರ್ ಹಾಗೂ ಕೃಷ್ಣ ರಾಜ್ ಕಪೂರ್ ಪುತ್ರನಾದ ರಿಷಿ ಕಪೂರ್, ‘ಮೇರಾ ನಾಮ್ ಜೋಕರ್’ ಮೂಲಕ ೧೯೭೦ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಸಿನಿಮಾದಲ್ಲಿ ಬಾಲನಟನಾಗಿ ನಟಿಸಿದ್ದ ಅವರಿಗೆ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.

ರಿಷಿ ಕಪೂರ್ ಅವರು ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಬಾಬಿ (೧೯೭೩). ಚಿತ್ರದಲ್ಲಿ ಡಿಂಪಲ್ ಕಪಾಡಿಯಾ ಅವರು ರಿಷಿಗೆ ನಾಯಕಿಯಾಗಿದ್ದರು. ಚಿತ್ರದಲ್ಲಿನ ನಟನೆಗಾಗಿ ರಿಷಿ ಕಪೂರ್ ೧೯೭೪ರಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದರು. ನಂತರ ರಿಷಿ ನಟಿಸಿದ್ದ ಹಲವು ಸಿನಿಮಾಗಳು ಅವರ ಖ್ಯಾತಿಯನ್ನು ಹೆಚ್ಚಿಸುವಂತೆ ಮಾಡಿದ್ದವು.

ಅವರು ನಟಿಸಿದ್ದಹೀನಾ ಚಿತ್ರವನ್ನು ಸಹೋದರ ರಣಧೀರ್ ಕಪೂರ್ ಮತ್ತು ತಂದೆ ರಾಜ್ ಕಪೂರ್ ನಿರ್ದೇಶಿಸಿದ್ದರು. ಅಂತೆಯೇ, ‘ಪ್ರೇಮ್ ಗ್ರಂಥ್ ಸಿನಿಮಾವನ್ನು ಮೂವರು ಸಹೋದರರೇ (ರಿಷಿ ಕಪೂರ್, ರಣಧೀರ್ ಕಪೂರ್ ಮತ್ತು ರಾಜೀವ್ ಕಪೂರ್) ನಿರ್ಮಿಸಿದ್ದರು.

೧೯೮೦ರಲ್ಲಿ ಮೊದಲ ಸಾರಿ ಸಹೋದರ gಣಧೀರ್ ಕಪೂರ್ ಜೊತೆಖಜಾನ ಸಿನಿಮಾದಲ್ಲಿ ರಿಷಿ ನಟಿಸಿದ್ದರು.
೨೦೦೦ ನಂತರದ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಪೂರ್, ೨೦೧೨ರಲ್ಲಿ ಹೃತಿಕ್ ರೋಷನ್ ನಟಸಿದ್ದಅಗ್ನಿಪಥ್ ಸಿನಿಮಾದಲ್ಲಿ ಖಳನಟನಾಗಿ ಮಿಂಚಿದ್ದರು. ಇದು ರಿಷಿ ಕಪೂರ್ ತಮ್ಮ ವೃತ್ತಿ ಬದುಕಿನಲ್ಲಿ ಖಳನಟನಾಗಿ ಕಾಣಿಸಿಕೊಂಡ ಮೊದಲ ಸಿನಿಮಾ.

ಡೋಂಟ್ ಸ್ಟಾಪ್ ಡ್ರೀಮಿಂಗ್, ‘ಸಂಬಾರ್ ಸಾಲ್ಸಾನಂತಹ ಹಾಲಿವುಡ್ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದರು.

ರಿಷಿ ಕಪೂರ್ ನಟಿಸಿದ ಕೊನೆಯ ಸಿನಿಮಾ, ‘೧೦೨ ನಾಟ್ಔಟ್.

ಪತ್ನಿ ನೀತು ಮತ್ತು ಪುತ್ರಿ ರಿದ್ಧಿಮಾ ಕಪೂರ್ ಸಾಹ್ನಿ, ಪುತ್ರ ರಣಬೀರ್ ಕಪೂರ್ ಅವರನ್ನು ರಿಷಿ ಕಪೂರ್ ಅಗಲಿದ್ದಾರೆ.

ಲ್ಯುಕೇಮಿಯಾ ಕಾಯಿಯೊಂದಿಗೆ ಎರಡು ವರ್ಷ ಹೋರಾಡಿದ್ದ ರಿಷಿ ಕಪೂರ್  ಕೊನೆಯ ಉಸಿರಿನವರೆಗೂ ನಮ್ಮನ್ನು ರಂಜಿಸಿದರು ಎಂದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಪ್ರತಿಕ್ರಿಯಿಸಿದರು.

ಅತ್ಯಂತ ಸ್ನೇಹಪರರಾಗಿದ್ದ ರಿಷಿ ಕಪೂರ್, ಬದುಕನ್ನು ಸಂಪೂರ್ಣವಾಗಿ ಅನುಭವಿಸಬೇಕು ಎಂಬ ಮನಃಸ್ಥಿತಿ ಹೊಂದಿದ್ದರು. ಎರಡು ಖಂಡಗಳಲ್ಲಿ ಚಿಕಿತ್ಸೆ ಪಡೆದುಕೊಂಡರು. ಚಿಕಿತ್ಸೆಯ ಅವಧಿಯಲ್ಲಾಗಲಿ, ರೋಗ ಬಾಧೆಯಾಗಲಿ ತಮ್ಮ ಉತ್ಸಾಹವನ್ನು ಕಿತ್ತುಕೊಳ್ಳಲು ರಿಷಿ ಅವಕಾಶ ಕೊಡಲಿಲ್ಲ. ಕುಟುಂಬ, ಗೆಳೆಯರು, ಆಹಾರ ಮತ್ತು ಚಲನಚಿತ್ರಗಳು ಅವರ ಗಮನದ ಕೇಂದ್ರವಾಗಿದ್ದವು. ಕಾಯಿಲೆಯ ಅವಧಿಯಲ್ಲಿ ರಿಷಿಯನ್ನು ಭೇಟಿಯಾದವರೆಲ್ಲರೂ ಅವರ ಉತ್ಸಾಹ ಕಂಡು ಅಚ್ಚರಿಪಡುತ್ತಿದ್ದರು.

ವಿಶ್ವದ ವಿವಿಧೆಡೆಗಳಿಂದ ಅಭಿಮಾನಿಗಳು ಹರಿಸಿದ ಪ್ರೀತಿಗೆ ರಿಷಿ ಅಭಾರಿಯಾಗಿದ್ದರು. ತಮ್ಮನ್ನು ಅಭಿಮಾನಿಗಳು ಸದಾ ನಗುವಾಗಿ ನೆನಪಿಡಬೇಕು, ಕಣ್ಣೀರಾಗಿ ಅಲ್ಲ ಎನ್ನುವುದು ಅವರ ಆಸೆಯಾಗಿತ್ತು.

ವೈಯಕ್ತಿಕವಾಗಿ ನಮ್ಮ ಕುಟುಂಬಕ್ಕೆ ಇದು ಅತಿದೊಡ್ಡ ನಷ್ಟ. ಆದರೆ ಜಗತ್ತು ಇಂದು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಜನರು ಸೇರುವುದಕ್ಕೆ ಹಲವು ನಿರ್ಬಂಧಗಳಿವೆ. ಎಲ್ಲ ಅಭಿಮಾನಿಗಳು, ಗೆಳೆಯರು ಮತ್ತು ಹಿತೈಷಿಗಳು ನೆಲದ ಕಾನೂನನ್ನು ಮೊದಲು ಗೌರವಿಸಬೇಕೆಂದು ನಾವು ವಿನಂತಿಸುತ್ತೇವೆ.
ರಿಷಿ ಕಪೂರ್ ಅವರಿಗೂ ಕಾನೂನನ್ನು ಗೌರವಿಸುವುದು ಅತ್ಯಂತ ಇಷ್ಟದ ಕೆಲಸವಾಗಿತ್ತು. ಆದ್ದರಿಂದ ಎಲ್ಲ ಅಭಿಮಾನಿಗಳೂ ಕಾನೂನು ಮುರಿಯದೇ ಸಹಕರಿಸಬೇಕು ಎಂದು ರಿಷಿ ಕಪೂರ್ ಕುಟುಂಬ ಅಭಿಮಾನಿಗಳಿಗೆ ಮನವಿ ಮಾಡಿತು.

ರಿಷಿ ಕಪೂರ್ ನಿಧನಕ್ಕೆ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ಅವರು ಹೊರಟರು. ನಾನು ಕಳೆದುಕೊಂಡೆ ಎಂದು ಭಾವುಕವಾಗಿ ಟ್ವೀಟ್ ಮಾಡುವ ಮೂಲಕ ಶೋಕ ವ್ಯಕ್ತ ಪಡಿಸಿದರು.

ಅಕ್ಷಯ್ ಕುಮಾರ್, ರಜನೀಕಾಂತ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರೂ ರಿಷಿ ಕಪೂರ್ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ್ದಾರೆ.

Advertisement