ಪಿಎಂಒ, ವಿಮಾನಗಳಿಗೆ ಹುಸಿಬಾಂಬ್ ಬೆದರಿಕೆ ಹಾಕಿದ್ದೇಕೆ ಗೊತ್ತೇ?
ಬೆಂಗಳೂರು: ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ)
ಹಾಗೂ ವಿವಿಧ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಿ ಸುಮಾರು ೧೦೦ಕ್ಕೂ ಹೆಚ್ಚು ಮಿಂಚಂಚೆಗಳನ್ನು ಕಳುಹಿಸಿದ
ವ್ಯಕ್ತಿಯನ್ನು ಮಹಾರಾಷ್ಟ್ರದ ಪೊಲೀಸರು ಬಂಧಿಸಿದ್ದಾರೆ.
ಆತನ ವಿಚಾರಣೆಯಿಂದ ಕುತೂಹಲಕಾರಿ ವಿಚಾರವೊಂದು ಬೆಳಕಿಗೆ
ಬಂದಿದೆ. ಸುಮಾರು ೧೦೦ಕ್ಕೂ ಹೆಚ್ಚು ಬಾಂಬ್ ಬೆದರಿಕೆಗಳ ಮಿಂಚಂಚೆ ಕಳುಹಿಸಿದ್ದ ಈ ವ್ಯಕ್ತಿ ಭಯೋತ್ಪಾದನೆಗೆ
ಸಂಬಂಧಿಸಿದ ತನ್ನ ಪುಸ್ತಕ ಪ್ರಕಟಿಸಲು ಕೋರಿದ ನೆರವು ಲಭಿಸದೇ ಇದ್ದುದಕ್ಕಾಗಿ ಈ ಬಾಂಬ್ ಬೆದರಿಕೆಯ
ಮಿಂಚಂಚೆಗಳನ್ನು ಕಳುಹಿಸಿದ್ದನಂತೆ.
ಮಹಾರಾಷ್ಟ್ರದ ಪೊಲೀಸರಿಂದ ಬಂಧಿತನಾಗಿರುವ ಮಹಾರಾಷ್ಟ್ರದ
ಮಾವೋವಾದಿ ನಕ್ಸಲೀಯ ಹಾವಳಿಪೀಡಿತ ಜಿಲ್ಲೆ ಗೊಂಡಿಯಾದ ಈ ವ್ಯಕ್ತಿಯ ಹೆಸರು ಜಗದೀಶ್ ಉಯಿಕೆ ಅಂತ.
ಈತನ ವಯಸ್ಸು ೩೫ ವರ್ಷ.
ಪೊಲೀಸರ ಪ್ರಕಾರ ಕಳೆದ ಜನವರಿಯಿಂದ ಇಲ್ಲಿಯವರೆಗೆ
ಈತ ಪಿಎಂಒ ಮತ್ತು ಇತರ ಅಧಿಕಾರಿಗಳಿಗೆ ಸುಮಾರು ೧೦೦ ಬಾರಿ ಬಾಂಬ್ ಬೆದರಿಕೆಯ ಮಿಂಚಂಚೆಗಳನ್ನು ಕಳುಹಿಸಿದ್ದಾನೆ.
ಈತ ಬರೆದ ಪುಸ್ತಕದ ಹೆಸರು ʼಆತಂಕ್ ವಾದ್ - ಏಕ್ ತೂಫಾನಿ
ರಾಕ್ಷಸ್ʼ (ಭಯೋತ್ಪಾದನೆ- ಒಂದು ರಕ್ಕಸ ಬಿರುಗಾಳಿ).
ಈ ಪುಸ್ತಕವನ್ನು ಪ್ರಕಟಿಸಲು ಅನುಮತಿ ಹಾಗೂ ನೆರವು ನೀಡಬೇಕು ಎಂಬುದು ಈತನ ಕೋರಿಕೆಯಾಗಿತ್ತಂತೆ.
ಮೊದ ಮೊದಲಿಗೆ ತನ್ನ ಕೋರಿಕೆ ಮಿಂಚಂಚೆಗಳನ್ನು ಕಳುಹಿಸಿದ
ಈತ, ಬಹುಶ: ಅದಕ್ಕೆ ಯಾವುದೇ ಸ್ಪಂದನೆ ಸಿಗಲಿಲ್ಲ ಎಂಬುದಾಗಿ ಭ್ರಮನಿರಸನಗೊಂಡು ಬಾಂಬ್ ಬೆದರಿಕೆಯ ಮಿಂಚಂಚೆಗಳನ್ನು
ಕಳುಹಿಸಲು ಆರಂಭಿಸಿದ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ನಾಗಪುರ ಸೈಬರ್ ಕ್ರೈಮ್ ಡಿಸಿಪಿ
ಲೋಹಿತ್ ಮತಾನಿ ಬಹಿರಂಗ ಪಡಿಸಿದ್ದಾರೆ.
ನಾಗ್ಪುರದ ಹೆಚ್ಚುವರಿ ಸಿಪಿ, ಸಂಜಯ್ ಪಾಟೀಲ್ ಪ್ರಕಾರ, ಉಯಿಕೆಯ ಪುಸ್ತಕವು ಆನ್‌ಲೈನ್‌ನಲ್ಲಿ ಸುಲಭವಾಗಿ
ಲಭ್ಯವಿರುವ ಭಯೋತ್ಪಾದಕ ಸಿದ್ಧಾಂತಗಳ ಮೂಲ ಸಂಕಲನವಾಗಿದೆ ಎಂದು ವರದಿಗಳು ತಿಳಿಸಿವೆ.