Showing posts with label Gram Panchayats. Show all posts
Showing posts with label Gram Panchayats. Show all posts

Tuesday, December 12, 2023

ಪುಸ್ತಕಗಳ ಬಿಡುಗಡೆ ಹೀಗಾಯ್ತು ನೋಡಿ…

 ಪುಸ್ತಕಗಳ ಬಿಡುಗಡೆ ಹೀಗಾಯ್ತು ನೋಡಿ…

ಸಂಪೂರ್ಣ ಸ್ವರಾಜ್‌ ಫೌಂಡೇಷನ್ನಿನ ಸಂಸ್ಥಾಪಕ, ವ್ಯವಸ್ಥಾಪಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ಅವರು ಬರೆದ ʼ21ನೇ ಶತಮಾನದ ಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಮತ್ತು ಅದರ ಆಂಗ್ಲ ಆವೃತ್ತಿ ʼರಿಬೂಟಿಂಗ್‌ ಡೆಮಾಕ್ರಸಿ ಇನ್‌ ಗ್ರಾಮ್‌ ಪಂಚಾಯತ್ಸ್‌ʼ (Rebooting Democracy in Gram Panchayats) ಪುಸ್ತಕಗಳನ್ನು ಮಾಜಿ ಮಾಹಿತಿ ತಂತ್ರಜ್ಞಾನ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಅವರು 2023 ಡಿಸೆಂಬರ್‌ 9ರ ಶನಿವಾರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಚಿತ್ರಕಲಾ ಪರಿಷತ್‌ ಅಧ್ಯಕ್ಷ
, ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್.‌ ಶಂಕರ್‌, ಅಜೀಮ್‌ ಪ್ರೇಮ್‌ ಜಿ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ಶಾಮ್‌ ಕಶ್ಯಪ್‌ ಹಾಜರಿದ್ದರು. ಚಾಣಕ್ಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಸದಾನಂದ ಜಾನೆಕೆರೆ ಅಧ್ಯಕ್ಷತೆ ವಹಿಸಿದ್ದರು.

ಚಿತ್ರದ ಸಮೀಪ ನೋಟಕ್ಕೆ ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ,

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


ಕೆಳಗಿನ ಸುದ್ದಿಗಳನ್ನೂ ಓದಿರಿ:

ಭ್ರಷ್ಟಾಚಾರ, ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ

ಏನಿದೆ ಈ ಪುಸ್ತಕಗಳಲ್ಲಿ?

Sunday, December 10, 2023

ಭ್ರಷ್ಟಾಚಾರ, ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ

 ಭ್ರಷ್ಟಾಚಾರ, ಮಧ್ಯವರ್ತಿ ನಿವಾರಣೆಗೆ ತಂತ್ರಜ್ಞಾನ ಪರಿಹಾರ

ಬೆಂಗಳೂರು: ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿಯಿಂದಾಗಿ ಪ್ರಾತಿನಿಧಿಕ ಪ್ರಜಾಪ್ರಭುತ್ವ ಎಂಬುದು ಇಂದು ಒಂದು ಕಟ್ಟುಕಥೆಯಂತಾಗಿದೆ. ಇದರ ನಿವಾರಣೆಗೆ ತಂತ್ರಜ್ಞಾನಗಳ ಅಳವಡಿಕೆ ಉತ್ತಮ ಪರಿಹಾರ ಆಗಬಲ್ಲುದು ಎಂದು ಮಾಜಿ ಮಾಹಿತಿ ತಂತ್ರಜ್ಞಾನಸಚಿವ ಪ್ರೊಫೆಸರ್‌ ಬಿ‌ ಕೆ ಚಂದ್ರಶೇಖರ್‌ ಅವರು 2023 ಡಿಸೆಂಬರ್‌ 9ರ ಶನಿವಾರ ಇಲ್ಲಿ ಹೇಳಿದರು.

ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಸಂಸ್ಥಾಪಕ, ವ್ಯವಸ್ಥಾಪಕ ಟ್ರಸ್ಟಿ ಡಾಕ್ಟರ್ ಶಂಕರ ಕೆ ಪ್ರಸಾದ್‌ ಅವರು ಬರೆದ ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಮತ್ತು ಅದರ ಆಂಗ್ಲ ಆವೃತ್ತಿ ʼರಿಬೂಟಿಂಗ್‌ ಡೆಮಾಕ್ರೆಸಿ ಇನ್‌ ಗ್ರಾಮ್‌ ಪಂಚಾಯತ್ಸ್‌ʼ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ಭ್ರಷ್ಟಾಚಾರ ಮತ್ತು ದಲ್ಲಾಳಿಗಳ ಪರಿಣಾಮವಾಗಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ, ಗ್ರಾಮಗಳಿಗೆ ತಲುಪುವಾಗ ಶೇಕಡಾ 15ಕ್ಕಿಂತಲೂ ಕೆಳಗಿನ ಪ್ರಮಾಣಕ್ಕೆ ಇಳಿಯುತ್ತದೆ ಎಂಬ ಕಾರಣಕ್ಕಾಗಿಯೇ ಇದರ ನಿವಾರಣೆಗೆ ಅಧಿಕಾರ ವಿಕೇಂದ್ರೀಕರಣವೇ ಮದ್ದು ಎಂದು ಯೋಚಿಸಿ ರಾಜ್ಯದಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಕೇಂದ್ರದಲ್ಲಿ ಆಗಿನ ಪ್ರಧಾನಿ ರಾಜೀವ ಗಾಂಧಿ ಅವರು ಗ್ರಾಮ ಪಂಚಾಯಿತಿ ಕಾಯ್ದೆಗಳನ್ನು ತಂದರು. ಆದರೆ ಅದರ ಆಶಯಗಳು ಈಡೇರಲಿಲ್ಲ ಎಂದು ಅವರು ಹೇಳಿದರು.

ಜನರಿಗೆ ಅತ್ಯಂತ ಸಮೀಪದ ಸಂಸ್ಥೆ ಗ್ರಾಮ ಸಭೆ. ಆದರೆ ಗ್ರಾಮಗಳ ಜನರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಗ್ರಾಮ ಸಭೆಗೆ ಇರುವ ಅಧಿಕಾರ, ಅಲ್ಲಿಗೆ ಬರುವ ಅನುದಾನಗಳು, ಸಂಪನ್ಮೂಲ ಕ್ರೋಡೀಕರಣದ ಬಗ್ಗೆ ಗೊತ್ತಿರುವುದಿಲ್ಲ. ಗ್ರಾಮ ಸಭೆಗಳಿಗೆ ಜನ ಬರುವುದೂ ಇಲ್ಲ. ಅವುಗಳನ್ನು ಬಲಪಡಿಸಲು ಸರ್ಕಾರದ ಬೆಂಬಲ ಅಗತ್ಯ ಎಂದು ಅವರು ನುಡಿದರು.

ಇಂಗಾಲ ಮುಕ್ತ ಪರಿಸರದ ನಿರ್ಮಾಣವನ್ನು ಪ್ರತಿಪಾದಿಸಿದ ಅವರು ಇದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಗಬೇಕು.. ಗ್ರಾಮ ಪಂಚಾಯಿತಿಗಳು ಇಂಗಾಲ ಮುಕ್ತ ಗ್ರಾಮ ಪಂಚಾಯಿತಿಗಳಾಗಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಿಎಲ್‌ ಶಂಕರ್‌ ಅವರು ಮಾತನಾಡಿ ʼಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಬದಲಿಗೆ ಗಾಮ ಪಂಚಾಯಿತಿಗಳೇ ಅಭಿವೃದ್ಧಿಯ ಕೇಂದ್ರವಾಗಬೇಕು. ಗ್ರಾಮಗಳಲ್ಲಿನ ಅಭಿವೃದ್ಧಿಯ ಎಲ್ಲ ಸಂಸ್ಥೆಗಳು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಅಡಿಯಲ್ಲಿ ಬರಬೇಕು. ಆದರೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾದರೂ ನಮ್ಮ ಜನಪ್ರತಿನಿಧಿಗಳಿಗೇ ಈ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ನುಡಿದರು.

ಗ್ರಾಮ ಪಂಚಾಯಿತಿಗಳ ಮಹತ್ವವನ್ನು ಸಮರ್ಪಕವಾಗಿ ಮನಗಂಡಿದ್ದವರು ಮಹಾತ್ಮ ಗಾಂಧೀಜಿ. 73 ಮತ್ತು 74ನೇ ತಿದ್ದುಪಡಿಗಳನ್ನು ರಾಜೀವ ಗಾಂಧಿಯವರು ತಂದರೂ ಅದು ವಿಫಲವಾಯಿತು. ಈ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡಿದ್ದು ಪಿ ವಿ ನರಸಿಂಹ ರಾವ್.‌ ಅದಕ್ಕೂ ಮುನ್ನ ರಾಮಕೃಷ್ಣ ಹೆಗಡೆ ಅವರು ತಂದಿದ್ದ ಪಂಚಾಯಿತಿ ವ್ಯವಸ್ಥೆ ಇಂದಿನ ಪಂಚಾಯಿತಿ ವ್ಯವಸ್ಥೆಗಿಂತ ಉತ್ತಮವಾಗಿತ್ತು ಎಂಬುದು ಹಳ್ಳಿ ಜನರಿಗೂ ಗೊತ್ತು ಎಂದು ಅವರು ಹೇಳಿದರು.

ತಂತ್ರಜ್ಞಾನ ಬಳಕೆಯಿಂದ ಅನುಕೂಲ ಎಂಬುದು ನಿರ್ವಿವಾದ. ಆದರೆ ಗ್ರಾಮ ಪಂಚಾಯಿತಿಗಳ ವೈಫಲ್ಯಕ್ಕೆ ನಮ್ಮ ಜನಪ್ರತಿನಿಧಿಗಳು, ಶಾಸಕರ ಅಧಿಕಾರ ಬಿಟ್ಟುಕೊಡಲು ಮನಸ್ಸಿಲ್ಲದ ಮಾನಸಿಕತೆಯೇ ಕಾರಣ. ಎಲ್ಲರೂ ಸೇರಿ ದೇಶ ಕಟ್ಟುವ ಮನೋಭಾವ ಬೇಕು ಎಂದು ಅವರು ನುಡಿದರು. ಇಂಗಾಲ ಮುಕ್ತ ಗ್ರಾಮಗಳ ರಚನೆಯ ಅಗತ್ಯವನ್ನು ಶಂಕರ್‌ ಅವರೂ ಪ್ರತಿಪಾದಿಸಿದರು.

ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಅಜೀಮ್‌ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಡಾಕ್ಟರ್‌ ಶಾಮ್‌ ಕಶ್ಯಪ್‌ ಅವರು ತಂತ್ರಜ್ಞಾನಗಳ ಬಳಕೆಯಿಂದ ಗ್ರಾಮ ಪಂಚಾಯಿತಿಗಳ ಸಾಮರ್ಥ್ಯ ಹೆಚ್ಚುತ್ತದೆ ಎಂದರು. ಚಿಕ್ಕಬಳ್ಳಾಪುರದ ಗ್ರಾಮ ಪಂಚಾಯ್ತಿಯೊಂದರ ಮಾಜಿ ಅಧ್ಯಕ್ಷೆ ಗಾಯತ್ರಿ ನ್ಯಾವಿಗೇಷನ್‌ ಲರ್ನಿಂಗ್‌ ತಂತ್ರಜ್ಞಾನದ ಉಪಯುಕ್ತತೆ ಬಗ್ಗೆ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಚಾಣಕ್ಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊಫೆಸರ್‌ ಸದಾನಂದ ಜಾನೆಕೆರೆ ಅವರು ಶಂಕರ ಪ್ರಸಾದ್‌ ಅವರು ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಪ್ರವಚನ ನೀಡುವ ಮೂಲಕ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳ ಮಟ್ಟಕ್ಕೆ ಒಯ್ಯಲಿದ್ದಾರೆ ಎಂದು ಹೇಳಿದರು.

ಡಾಕ್ಟರ್ ಶಂಕರ ಪ್ರಸಾದ್‌ ಅವರು ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಕಳೆದ ಒಂದು ದಶಕದ ಅವಧಿಯಲ್ಲಿ ಮಾಡಿದ ಕಾರ್ಯಗಳ ಪ್ರಾತ್ಯಕ್ಷಿಕೆಯನ್ನೂ ನೀಡಿದರು. ಕೇಶವ ಪ್ರಸಾದ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

ಸುದ್ದಿಯನ್ನು ಆಲಿಸಲು ಕೆಳಗೆ ಕ್ಲಿಕ್‌ ಮಾಡಿರಿ. ಚಿತ್ರಗಳ ಸಮೀಪ ನೋಟಕ್ಕಾಗಿ ಮೇಲಿನ ಚಿತ್ರಗಳನ್ನು ಕ್ಲಿಕ್‌  ಮಾಡಿರಿ.

 

ಕೆಳಗಿನ ಸುದ್ದಿಗಳನ್ನೂ ಓದಿರಿ:

ಏನಿದೆ ಈ ಪುಸ್ತಕಗಳಲ್ಲಿ?

Friday, December 8, 2023

ಏನಿದೆ ಈ ಪುಸ್ತಕಗಳಲ್ಲಿ?

 ಏನಿದೆ ಈ ಪುಸ್ತಕಗಳಲ್ಲಿ?

ಬೆಂಗಳೂರು: ಸಂಪೂರ್ಣ ಸ್ವರಾಜ್‌ ಫೌಂಡೇಷನ್ನಿನ ಡಾ. ಶಂಕರ ಕೆ. ಪ್ರಸಾದ್‌ ಅವರು ಬರೆದಿರುವ ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಮತ್ತು ಅದರ ಆಂಗ್ಲ ಆವೃತ್ತಿ ʼರಿಬೂಟಿಂಗ್‌ ಡೆಮಾಕ್ರಸಿ ಇನ್‌ ಗ್ರಾಮ್‌ ಪಂಚಾಯತ್ಸ್‌ʼ ಪುಸ್ತಕಗಳು 2023 ಡಿಸೆಂಬರ್‌ 9ರ ಶನಿವಾರ ಬೆಳಗ್ಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಬಿಡುಗಡೆಯಾಗಲಿವೆ.

ಈ ಪುಸ್ತಕಗಳಲ್ಲಿ ಏನಿದೆ? ವಿವರ ಇಲ್ಲಿದೆ:

ಭಾರತೀಯ ಸಂವಿಧಾನಕ್ಕೆ 1992ರಲ್ಲಿ ತರಲಾದ 73ನೇ ತಿದ್ದುಪಡಿಯು ʼಪಂಚಾಯತಿ ರಾಜ್‌ ಕಾಯಿದೆʼ ಎಂಬುದಾಗಿಯೇ ಖ್ಯಾತಿ ಪಡೆದಿದೆ. ಗ್ರಾಮ ಪಂಚಾಯಿತಿಗಳನ್ನು ಸಂವಿಧಾನಬದ್ಧಗೊಳಿಸಿ ದೇಶದ ಗ್ರಾಮೀಣ ಪ್ರಜಾಪ್ರಭುತ್ವವನ್ನು ಬಲಪಡಿಸುವುದು ಈ ತಿದ್ದುಪಡಿಯ ಉದ್ದೇಶವಾಗಿತ್ತು. ಅಧಿಕಾರ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಗ್ರಾಮ ಪಂಚಾಯಿತಿಗಳಿಗೆ ವಿಕೇಂದ್ರೀಕರಣ ಮಾಡುವುದು ಇದರ ಮುಖ್ಯ ಗುರಿಯಾಗಿತ್ತು. ಈ ತಿದ್ದುಪಡಿಯ ಪ್ರಕಾರ, ಗ್ರಾಮ ಪಂಚಾಯತಿಗಳಿಗೆ ಹಣಕಾಸು, ಕಾರ್ಯ ನಿರ್ವಹಣೆ ಮತ್ತು ಪದಾಧಿಕಾರಿಗಳ ವಿಚಾರದಲ್ಲಿ ಅಧಿಕಾರಗಳನ್ನು ಸಂವಿಧಾನಬದ್ಧವಾಗಿಯೇ ಒದಗಿಸಲಾಗಿದೆ. ಆದರೆ ಇಂದಿಗೂ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚಿನ ನಿರ್ಧಾರಗಳನ್ನು ಶಾಸಕರು, ಸಂಸದರು ಮತ್ತು ರಾಜ್ಯ ಹಾಗೂ ಕೇಂದ್ರ ಮಟ್ಟದ ಅಧಿಕಾರಿಗಳೇ  ತೆಗೆದುಕೊಳ್ಳುತ್ತಾರೆ.

ಪುಸ್ತಕವು ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳಿಗೆ ಪಂಚಾಯಿತಿ ರಾಜ್‌ ಕಾಯಿದೆಯ ಕುರಿತು ಅರಿವು ಮೂಡಿಸುತ್ತದೆ. ಅದರ ಜೊತೆಗೆ, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಗಳಿಗೆ ಹೊಂದಿಕೆಯಾಗುವಂತೆ ತಮ್ಮ ಸ್ಥಳೀಯ ಸರ್ಕಾರವನ್ನು ಹೇಗೆ ನಡೆಸಬೇಕು ಮತ್ತು ತಮ್ಮ ಗ್ರಾಮದ ಪರಿಸ್ಥಿತಿ, ಅಗತ್ಯಗಳು ಮತ್ತು ಜನರ ಆಶಯಗಳಿಗೆ ಅನುಗುಣವಾಗಿ ಗ್ರಾಮ ಪಂಚಾಯಿತಿಗಳು ಗ್ರಾಮದ ಅಭಿವೃದ್ಧಿಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ಹೇಳುತ್ತದೆ..

ದಿಕ್ಸೂಚಿ ಕಲಿಕಾ ತಂತ್ರಜ್ಞಾನ (ನ್ಯಾವಿಗೇಟೆಡ್ ಲರ್ನಿಂಗ್ ಟೆಕ್ನಾಲಜಿ),  ಸಹಜ ಭಾಷಾ ಸಂಸ್ಕರಣೆ (ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್), ಸಾಧನಗಳ ಅಂತರ್ಜಾಲ (ಐಒಟಿ), ಕೆಲಸದ ಹರಿವಿನ ಸ್ವಯಂಚಲನ (ವರ್ಕ್‌ಫ್ಲೋ ಆಟೊಮೇಷನ್) ಮತ್ತು  ಬ್ಲಾಕ್‌ಚೈನ್ ತಂತ್ರಜ್ಞಾನಗಳಂತಹ ಸೀಮಾತೀತ ತಂತ್ರಜ್ಞಾನಗಳನ್ನು ಗ್ರಾಮಗಳ ವಿಕಾಸಕ್ಕೆ ಗ್ರಾಮ ಪಂಚಾಯತ್ ಹೇಗೆ ಬಳಸಬಹುದು ಎಂಬ ಬಗ್ಗೆ ಪುಸ್ತಕವು ಚರ್ಚಿಸುತ್ತದೆ. ಜೊತೆಗೇ ಈ ಸೀಮಾತೀತ ತಂತ್ರಜ್ಞಾನಗಳ ಬಳಕೆ ಮೂಲಕ ಮಹಾತ್ಮ ಗಾಂಧೀಜಿಯವರ ʼಗ್ರಾಮ ಸ್ವರಾಜ್‌ʼ ಪರಿಕಲ್ಪನೆಯನ್ನು ನನಸುಗೊಳಿಸುವುದು ಹೇಗೆ ಎಂಬ ಬಗ್ಗೆಯೂ ವಿವರಿಸುತ್ತದೆ.

21 ನೇ ಶತಮಾನದಲ್ಲಿ, ಇಡೀ ಜಗತ್ತು "ಡಿಜಿಟಲ್" ಆಗುತ್ತಿದೆ. ಭಾರತವು ಕೂಡಾ "ಡಿಜಿಟಲ್ ಇಂಡಿಯಾ" ಎಂಬುದಾಗಿ ಘೋಷಿಸಿದೆ. ಈ ಹೊತ್ತಿನಲ್ಲಿ ಭಾರತದ ಪ್ರತಿಯೊಂದು ಗ್ರಾಮ ಪಂಚಾಯಿತಿಯನ್ನೂ "ಡಿಜಿಟಲ್ ಗ್ರಾಮ ಪಂಚಾಯಿತಿʼ ಆಗಿ ಪರಿವರ್ತಿಸುವುದು ಅತ್ಯಂತ ಮುಖ್ಯವಾಗಿದೆ.

ಭಾರತದಲ್ಲಿ 2,40,000 ಗ್ರಾಮ ಪಂಚಾಯಿತಿಗಳಿದ್ದು, 6 ಲಕ್ಷ ಹಳ್ಳಿಗಳು ಮತ್ತು 80 ಕೋಟಿ ಜನಸಂಖ್ಯೆ ಇದೆ. ಭಾರತದ ನಗರಗಳ ಜನರು ಮತ್ತು ಗ್ರಾಮೀಣ ಜನರ ಮಧ್ಯೆ ಇಂದು ದೊಡ್ಡ ಪ್ರಮಾಣದ ʼಡಿಜಿಟಲ್‌ ಅಂತರʼ ಇದೆ. ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು, ಅಂತರವನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಡಿಜಿಟಲ್ ಪರಿವರ್ತನೆ ಆಗಬೇಕಾಗಿದ್ದು ದೇಶದ 80 ಕೋಟಿಯಷ್ಟು ಸಂಖ್ಯೆಯಲ್ಲಿ ಇರುವ ಗ್ರಾಮೀಣ ಜನರನ್ನು ಇದರಲ್ಲಿ ಸೇರಿಸುವುದು ಅನಿವಾರ್ಯವಾಗಿದೆ. ತಂತ್ರಜ್ಞಾನದ ಕೊರತೆಯಿಂದ ಯಾರೇ ಒಬ್ಬ ನಾಗರಿಕನೂ ಹಿಂದೆ ಉಳಿಯದಂತೆ ನೋಡಿಕೊಳ್ಳಬೇಕಾಗಿದೆ.

ಸಂಪೂರ್ಣ ಸ್ವರಾಜ್ ಪ್ರತಿಷ್ಠಾನವು ಭಾರತದಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿನ ಜನರ ಪರಿಸ್ಥಿತಿಯ ಅಧ್ಯಯನ ಮಾಡಿದೆ ಮತ್ತು ಗ್ರಾಮ ಪಂಚಾಯಿತಿಗಳಿಗೆ ಸೂಕ್ತವಾಧ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿ ಅನುಷ್ಠಾನಗೊಳಿಸಿದೆ. ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಅದರ ಪ್ರಯೋಗವನ್ನೂ ಮಾಡಿದೆ.

ಉದಾಹರಣೆಗೆ: ಜಿಪಿಎಸ್‌ ಆಧಾರಿತವಾದ ದಿಕ್ಸೂಚಿ ಕಲಿಕಾ ತಂತ್ರಜ್ಞಾನ (ನ್ಯಾವಿಗೇಟೆಡ್‌ ಲರ್ನಿಂಗ್‌ ಟೆಕ್ನಾಲಜಿ). ಹಳ್ಳಿಗರು ಗ್ರಾಮ ಪಂಚಾಯಿತಿ ಆಡಳಿತವನ್ನು ಹೇಗೆ ನಡೆಸಬೇಕೆಂದು ಕಲಿಯಲು, ಪುಸ್ತಕಗಳನ್ನು ಓದುವ ಅಗತ್ಯವಿಲ್ಲ. ಅವರು ತಮ್ಮ ಮೊಬೈಲ್ ಫೋನ್ ಬಳಸಿ ಈ ತಂತ್ರಜ್ಞಾನದ ಮೂಲಕ ಗ್ರಾಮ ಪಂಚಾಯಿತಿ ಆಡಳಿತ ನಡೆಸುವ ಬಗೆಯನ್ನು ಕಲಿಯಬಹುದು.

ಓದಲು ಮತ್ತು ಬರೆಯಲು ಬಾರದ ಹಳ್ಳಿಗರು ತಮ್ಮ ಮಾತೃಭಾಷೆಯಲ್ಲಿ ಮಾತನಾಡಿದಾಗ ಅವರ ಧ್ವನಿಯನ್ನು ಗುರುತಿಸುವ ವ್ಯವಸ್ಥೆಯನ್ನು (ಸಹಜ ಭಾಷಾ ಸಂಸ್ಕರಣೆ) ಅಭಿವೃದ್ಧಿ ಪಡಿಸಲಾಗಿದೆ. ಅವರು ತಮ್ಮ ಮೊಬೈಲ್‌ನಲ್ಲಿಯೇ ಆರೋಗ್ಯ, ಕೃಷಿ ಮತ್ತು ಆಡಳಿತದ ಬಗ್ಗೆ ತಿಳಿದುಕೊಳ್ಳಬಹುದು.

ಗ್ರಾಮಸ್ಥರು ತಮ್ಮ ಮೊಬೈಲ್‌ನಲ್ಲಿರುವ ಕೆಲಸದ ಹರಿವು ಸ್ವಯಂಚಲನ ತಂತ್ರಜ್ಞಾನ (ವರ್ಕ್ ಫ್ಲೋ ಆಟೊಮೇಷನ್) ಆ್ಯಪ್ ಬಳಸಿ ಗ್ರಾಮ ಪಂಚಾಯಿತಿ ಜೊತೆಗಿನ ತಮ್ಮ ಎಲ್ಲ ವ್ಯವಹಾರಗಳನ್ನು ನಡೆಸಬಹುದು ಮತ್ತು ತಮ್ಮ ಕೆಲಸವನ್ನು ಮಾಡಬಹುದು. ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಈ ತಂತ್ರಜ್ಞಾನ ದಕ್ಷತೆ ಮತ್ತು ಹೊಣೆಗಾರಿಕೆಯನ್ನು ತರುತ್ತದೆ ಮತ್ತು ದೋಷರಹಿತ ಗ್ರಾಮ ಪಂಚಾಯತಿಯನ್ನು ಒದಗಿಸುತ್ತದೆ.

ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ, ಗ್ರಾಮ ಪಂಚಾಯಿತಿಗಳು ಪ್ರತಿ ವಹಿವಾಟು, ಭೂ ದಾಖಲೆಗಳನ್ನು ದೃಢೀಕರಿಸಬಹುದು ಮತ್ತು ಮಧ್ಯವರ್ತಿ ಇಲ್ಲದೆಯೇ ಇ-ಕಾಮರ್ಸ್ ಹೆಚ್ಚಿಸಲು ಸಾಧ್ಯವಿದೆ. ಈ ವಿಶ್ವಾಸಾರ್ಹ ವಹಿವಾಟು ತಂತ್ರಜ್ಞಾನವು ನ್ಯಾಯಾಲಯಗಳಿಗೆ ಅಲೆದಾಟವನ್ನು ತಪ್ಪಿಸುತ್ತದೆ ಮತ್ತು ನಾಗರಿಕರಿಗೆ ಸಮಯವನ್ನು ಉಳಿಸುತ್ತದೆ.

ಸಾಧನಗಳ ಅಂತರ್ಜಾಲ (ಇಂಟರ್ನೆಟ್‌ ಆಫ್‌ ಥಿಂಗ್ಸ್) ಅಥವಾ ಐಒಟಿಯನ್ನು ಬಳಸಿಕೊಂಡು

ಹಳ್ಳಿಗರು ಶಾಲೆಗಳ ಕಾರ್ಯಕ್ಷಮತೆ, ಕೃಷಿ ಉತ್ಪಾದನೆ, ಪ್ರಾಣಿಗಳ ಆರೋಗ್ಯ ಮತ್ತು ನಾಗರಿಕರ ಆರೋಗ್ಯದ ಮೇಲೆ ನಿಗಾ ಇಡಬಹುದು.

ಗ್ರಾಮದ ಆಸ್ತಿಗಳು ಮತ್ತು ಸಂಪನ್ಮೂಲಗಳ ಡೇಟಾವನ್ನು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಸಂಗ್ರಹಿಸಬಹುದು ಮತ್ತು  ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫೀಸಿಯಲ್‌ ಇಂಟಲಿಜೆನ್ಸ್)‌ ಬಳಸಿ ಡೇಟಾ ಅನಾಲಿಟಿಕ್ಸ್ ಆಧಾರದ ಮೇಲೆ ಗ್ರಾಮ ಪಂಚಾಯಿತಿಯ  ಭವಿಷ್ಯವನ್ನು ಯೋಜಿಸಬಹುದು. ಜೊತೆಗೆ ಮನುಷ್ಯರು, ಪ್ರಾಣಿಗಳು ಮತ್ತು ಸಸ್ಯಗಳು ಸೇರಿದಂತೆ ಪರಿಸರ ವ್ಯವಸ್ಥೆಯಲ್ಲಿ ಕಂಡುಬರುವ ರೋಗಗಳ ಪ್ರವೃತ್ತಿಯನ್ನು ಊಹಿಸಬಹುದು ಹಾಗೂ ಅವುಗಳನ್ನು ನಿಯಂತ್ರಿಸಲು/ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬಹುದು.

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಈ ತಂತ್ರಜ್ಞಾನಗಳನ್ನು ಹೇಗೆ ಬಳಸಬಹುದು ಎಂಬ ಬಗೆಗೂ ಪುಸ್ತಕವು ಚರ್ಚಿಸುತ್ತದೆ. ವಿಶ್ವಸಂಸ್ಥೆಯು 17 ಗುರಿಗಳನ್ನು ಅನುಷ್ಠಾನಗೊಳಿಸಲು ಕಾಲ ಮಿತಿ ನಿಗದಿ ಪಡಿಸಿದೆ. ಬಡತನ ನಿವಾರಣೆ, ಹಸಿವು ಮುಕ್ತ ಸಮಾಜ ನಿರ್ಮಾಣ, ಸುಸ್ಥಿರ ಆರೋಗ್ಯ, ಉತ್ತಮ ಶಿಕ್ಷಣ, ಹವಾಮಾನ ರಕ್ಷಣಾ ಕ್ರಮ ಇತ್ಯಾದಿಗಳು ಇವುಗಳಲ್ಲಿ ಸೇರಿವೆ.

ಉದಾಹರಣೆಗೆ: ಆರೋಗ್ಯ ಮೇಲ್ವಿಚಾರಣೆಗಾಗಿ ಐಒಟಿ ಸಾಧನಗಳನ್ನು ಹೇಗೆ ಬಳಸಬಹುದು, ವಾಯುಮಾಲಿನ್ಯಕಾರಕ ಇಂಗಾಲವನ್ನು ಹಿಡಿದಿಡುವುದು (ಕಾರ್ಬನ್‌ ಸ್ವೀಕ್ವೆಸ್ಟರಿಂಗ್)‌ ಹೇಗೆ? ಅದಕ್ಕಾಗಿ ಆರ್ಟಿಫೀಸಿಯಲ್‌ ಇಂಟಲಿಜೆನ್ಸ್‌ ಮತ್ತು ಯಂತ್ರಕಲಿಕೆಯನ್ನು (ಎಐಎಂಎಲ್)‌ ಬಳಸುವುದು ಹೇಗೆ ಎಂಬುದನ್ನು ಪುಸ್ತಕವು ಹೇಳುತ್ತದೆ.

ಆಪ್ಟಿಕಲ್ ಫೈಬರ್ ಅಳವಡಿಸದೆಯೇ ಸ್ಥಳೀಯವಾಗಿ ಹೇಗೆ ಇಂಟರ್ನೆಟ್ ಒದಗಿಸಬಹುದು? ಗ್ರಾಮದಲ್ಲಿ ಹಿರಿಯ ನಾಗರಿಕರಿಗೆ ಪಡಿತರ ವಿತರಿಸಲು ಮುಖ ಗುರುತಿಸುವ ತಂತ್ರಜ್ಞಾನವನ್ನು ಹೇಗೆ ಬಳಸಬಹುದು? ರೋಗದ ಮೇಲೆ ನಿಗಾ ಇಡುವಿಕೆ ಮತ್ತು ರೋಗ ನಿಯಂತ್ರಣ ಯೋಜನೆಗೆ ಹೇಗೆ ಜಿಐಎಸ್ ಮ್ಯಾಪಿಂಗ್ ಬಳಸಬಹುದು? ಎಂಬ ಬಗ್ಗೆಯೂ ಪುಸ್ತಕ ವಿವರಿಸುತ್ತದೆ.

ಎಲ್ಲಕ್ಕಿಂತ ಹೆಚ್ಚು ಮುಖ್ಯವಾಗಿ, ಪುಸ್ತಕದಲ್ಲಿ ವಿವರಿಸಿದ ತಂತ್ರಜ್ಞಾನಗಳನ್ನು ಬಳಸಿಕೊಂಡು ಗ್ರಾಮಗಳ ಸ್ಥಳೀಯ ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ತರಲು ಗ್ರಾಮಸ್ಥರ, ಚುನಾಯಿತ ಪ್ರತಿನಿಧಿಗಳ ಮತ್ತು ಗ್ರಾಮ ಪಂಚಾಯಿತಿ ಸಂಸ್ಥೆಯ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಬಹುದು? ಪ್ರತಿ ಗ್ರಾಮ ಪಂಚಾಯಿತಿಯ ಪ್ರಗತಿಯ ಮೇಲೆ ಕಣ್ಣಿಟ್ಟು ಅದನ್ನು ಹೇಗೆ ಪತ್ತೆ ಹಚ್ಚಬಹುದು ಎಂಬುದನ್ನು ಪುಸ್ತಕ ಹೇಳುತ್ತದೆ.

ದೇಶದಾದ್ಯಂತ ಪ್ರತಿ ಚುನಾಯಿತ ಪ್ರತಿನಿಧಿಯು ತಾಂತ್ರಿಕ ತಿಳುವಳಿಕೆಯನ್ನು ಹೊಂದುವಂತೆ ಮಾಡುವುದು ಮತ್ತು ತನ್ನ ಗ್ರಾಮ ಪಂಚಾಯಿತಿಯನ್ನು  ದೇಶದಲ್ಲೇ ಅತ್ಯುತ್ತಮ ಪಂಚಾಯಿತಿಯನ್ನಾಗಿ ಮಾಡಲು ತಂತ್ರಜ್ಞಾನಗಳನ್ನು ಬಳಸುವಂತೆ ಸಕ್ರಿಯಗೊಳಿಸುವುದು ಮತ್ತು  ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯನೂ ತನ್ನ ಗ್ರಾಮ ಪಂಚಾಯಿತಿಯ ಭವಿಷ್ಯಕ್ಕೆ ತಾನೇ ಶಿಲ್ಪಿಯಾಗಬೇಕು ಎಂದು ಪ್ರಚೋದಿಸುವುದು ಈ ಪುಸ್ತಕದ ಮುಖ್ಯ ಉದ್ದೇಶ.

ಈ ಲೇಖನವನ್ನು ಆಲಿಸಲು ಕೆಳಗೆ ಕ್ಲಿಕ್‌ ಮಾಡಿರಿ. ಪುಸ್ತಕದ ಮುಖಪುಟಗಳ ಸಮೀಪ ನೋಟಕ್ಕೆ ಮೇಲಿನ ಚಿತ್ರ ಕ್ಲಿಕ್‌ ಮಾಡಿರಿ.

ಕೆಳಗಿನ ಸುದ್ದಿಗಳನ್ನೂ ಓದಿರಿ:

ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?

Thursday, December 7, 2023

ಪುಸ್ತಕಗಳ ಬಿಡುಗಡೆ ಸಮಾರಂಭ

 ಪುಸ್ತಕಗಳ ಬಿಡುಗಡೆ ಸಮಾರಂಭ

ಬೆಂಗಳೂರು: ಡಾ. ಶಂಕರ ಕೆ. ಪ್ರಸಾದ್‌ ಅವರು ಬರೆದಿರುವ ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿʼ ಮತ್ತು ಅದರ ಇಂಗ್ಲಿಷ್‌ ಆವೃತ್ತಿ ʼರಿಬೂಟಿಂಗ್‌ ಡೆಮಾಕ್ರಸಿ ಇನ್‌ ಗ್ರಾಮ್‌ ಪಂಚಾಯತ್ಸ್‌ʼ ಪುಸ್ತಕಗಳ ಬಿಡುಗಡೆ ಸಮಾರಂಭವು 2023 ಡಿಸೆಂಬರ್‌ 09ರ ಶನಿವಾರ ಬೆಂಗಳೂರಿನ ಕುಮಾರ ಪಾರ್ಕಿನಲ್ಲಿ ಇರುವ ಗಾಂಧಿಭವನದಲ್ಲಿ ನಡೆಯಲಿದೆ.

ಬೆಳಗ್ಗೆ 10.30 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಖಾತೆ ಮಾಜಿ ರಾಜ್ಯ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್‌ ಅವರು ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ವಿಧಾನಪರಿಷತ್ತಿನ ಮಾಜಿ ಸಭಾಪತಿ ಡಾ. ಬಿ. ಎಲ್‌. ಶಂಕರ್‌ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ಶ್ಯಾಮ್‌ ಕಶ್ಯಪ್‌ ಮತ್ತು ಕೋಲಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಗ್ರಾಮ ವಿಕಾಸದ ಅಧ್ಯಕ್ಷ ಶ್ರೀ ಎಮ್.ವಿ.ಎನ್‌. ರಾವ್‌ ಅವರು ಗೌರವಾನ್ವಿತ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಚಾಣಕ್ಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಸದಾನಂದ ಜಾನೆಕೆರೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಸೀಮಾತೀತ ತಂತ್ರಜ್ಞಾನಗಳನ್ನು ಹೇಗೆ ಬಳಸಬಹುದು ಮತ್ತು ತನ್ಮೂಲಕ ಗ್ರಾಮ ಪಂಚಾಯಿತಿಗಳನ್ನು ಹೇಗೆ ಆತ್ಮನಿರ್ಭರವನ್ನಾಗಿ ಮಾಡಬಹುದು ಎಂಬುದನ್ನು ವಿವರಿಸುವ ಈ ಪುಸ್ತಕಗಳನ್ನು ಬೆಂಗಳೂರಿನ ಸಂಪೂರ್ಣ ಸ್ವರಾಜ್‌ ಫೌಂಡೇಷನ್‌ ಪ್ರಕಟಿಸಿದೆ. 

ಆಮಂತ್ರಣ ಪತ್ರಿಕೆಯ ಸಮೀಪ ನೋಟಕ್ಕಾಗಿ ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿರಿ.

 ಸುದ್ದಿಯನ್ನು ಆಲಿಸಲು ಕೆಳಗೆ ಕ್ಲಿಕ್‌ ಮಾಡಿರಿ:


Book Release

Bengaluru: A function on Release of Books ‘Rebooting Democracy in Gram Panchayats’ and its Kannada Version “21ne Shatamanada Atma-Nirbhara Grama Panchayiti’, written by Dr. Shankara K. Prasad, Founder and Managing Trustee of Sampoorna Swaraj Foundation will be held on Saturday, 09th December 2023 at Gandhi Bhavan, Kumar Park, Bengaluru.

Prof. B.K. Chandrashekhar, Former Minister of State for Information Technology, Karnataka Government will release the books wherein Dr. B.L. Shankar, Former Chairman, Legislative Council of Karnataka will participate as Chief Guest.

Dr, Sham Kashyap, Research Professor, Azim Premji University and Shri MVN Rao, President, Gram Panchayat Kolar and Chairman, Gram Vikas will participate as hon’ble guests in the function. Prof. Sadananda Janekere, Adjunt Professor, Chanakya University, Karnataka will preside over the function.

Both books which explain how to use Frontier Technologies to realize Mahatma Gandhi’s dream of Gram Swaraj and thereby make Gram Panchayats self-reliant or Atma-Nirbhar, were published by Sampoorna Swaraj Foundation of Bengaluru.

To Liston the news Click below:  


ಶಿವಮೊಗ್ಗ ಬಾನುಲಿಯಲ್ಲಿ ಬಂತು ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಕಂತು-2
ಸಾಮರ್ಥ್ಯ ವೃದ್ಧಿಗೆ ಡಿಜಿಟಲ್‌ ತಂತ್ರಜ್ಞಾನ ಬಳಕೆ ಹೇಗೆ?

Advertisement