Showing posts with label Meera Manzhi. Show all posts
Showing posts with label Meera Manzhi. Show all posts

Sunday, December 31, 2023

ಅಯೋಧ್ಯೆಯ ಮೀರಾ ಮಾಂಝಿ ಮನೆಗೆ ಪ್ರಧಾನಿ ಮೋದಿ

 ಅಯೋಧ್ಯೆಯ ಮೀರಾ ಮಾಂಝಿ ಮನೆಗೆ ಪ್ರಧಾನಿ ಮೋದಿ

ಈಕೆ 10,00,00,000ನೇ ಉಜ್ವಲಾ ಫಲಾನುಭವಿ!


ಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು 2023 ಡಿಸೆಂಬರ್‌  30ರ ಶನಿವಾರ ಅಯೋಧ್ಯೆಗೆ ಭೇಟಿ ನೀಡಿದರು. ಈ ಸಮಯದಲ್ಲಿ ಅವರು ಉಜ್ವಲ ಫಲಾನುಭವಿ ಮೀರಾ ಮಾಂಝಿ ಅವರ ಮನೆಗೆ ಭೇಟಿ ನೀಡಿದರು. ಅವರ ಮನೆಯಲ್ಲಿ ಕುಶಲ ಮಾತುಕತೆ ನಡೆಸಿ ಅಲ್ಲಿಯೇ ಚಹಾ ಸೇವಿಸಿದರು.

ಮೀರಾ ಮಾಂಝಿ ಅವರು ಪ್ರಧಾನಮಂತ್ರಿ ಉಜ್ವಲಾ ಯೋಜನೆಯ 10,00,00,000ನೇ (10 ಕೋಟಿ) ಫಲಾನುಭವಿಯಾಗಿದ್ದಾರೆ.

ರೈಲು ನಿಲ್ದಾಣದಿಂದ ಹೋಗುವಾಗ ಪ್ರಧಾನಿ ಮೋದಿ ಮೀರಾ ಮಾಂಝಿ ಅವರ ಮನೆಯ ಒಳಕ್ಕೆ ನಡೆದರು. ಪ್ರಧಾನಿ ಅವರು ಮೀರಾ ಮನೆಗೆ ತೆರಳಿ ಅಲ್ಲಿ ಮಾತುಕತೆ ನಡೆಸಿದ ವಿಡಿಯೋವನ್ನು ಸುದ್ದಿ ಸಂಸ್ಥೆ ಎ ಎನ್‌ ಐ (ANI) ಹಂಚಿಕೊಂಡಿದೆ.

ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಮೀರಾ ಅವರ ಕುಟುಂಬ ಸದಸ್ಯರು, ಪತಿ, ಅತ್ತೆ-ಮಾವಂದಿರು ಮತ್ತು ಮಗುವಿನೊಂದಿಗೆ ಮಾತುಕತೆ ನಡೆಸುತ್ತಿರುವುದನ್ನು ಕಾಣಬಹುದು. ಮನೆಗೆ ಬರುತ್ತಿದ್ದಂತೆಯೇ ಮೀರಾ ಮತ್ತಿತರರು ಪ್ರಧಾನಿ ಮೋದಿಯವರ ಪಾದಗಳನ್ನು ಮುಟ್ಟಲು ಮುಂದಾದರು. ತತ್‌ ಕ್ಷಣ ಅವರನ್ನು ತಡೆದ ಪ್ರಧಾನಿ ಅವರೊಂದಿಗೆ ಮಾತುಕತೆಗೆ ಕುಳಿತರು. "ನಾನೇಕೆ ಇಲ್ಲಿಗೆ ಬಂದಿದ್ದೇನೆ ಗೊತ್ತಾ ಮೀರಾ? ನಾವು ದೇಶದಲ್ಲಿ 10 ಕೋಟಿ ಗ್ಯಾಸ್ ಸಂಪರ್ಕವನ್ನು ನೀಡಿದ್ದೇವೆ. ನಾನು 10 ನೇ ಕೋಟಿ ಫಲಾನುಭವಿಯನ್ನು ಭೇಟಿ ಮಾಡಲು ನಿರ್ಧರಿಸಿದೆ. ಅದು ನೀವೇ ಮತ್ತು ನೀವು ಅಯೋಧ್ಯೆಯಲ್ಲಿ ಇದ್ದೀರಿ ಎಂದು ಗೊತ್ತಾಯಿತು” ಎಂದು ಪ್ರಧಾನಿ ಮೋದಿ ಹೇಳಿದರು.

"ನೀವು ಗ್ಯಾಸಿನಿಂದ ಏನು ಬೇಯಿಸುತ್ತೀರಿ?" ಎಂದು ಪ್ರಧಾನಿ ಮೋದಿ ಕೇಳಿದರು.. "ಇಂದು ನಾನು ಅಕ್ಕಿ, ಉದ್ದು ಮತ್ತು ತರಕಾರಿಗಳನ್ನು ಬೇಯಿಸಿದ್ದೇನೆ ಮತ್ತು ನಿಮಗಾಗಿ ಚಹಾವನ್ನು ಸಹ ತಯಾರಿಸಿದ್ದೇನೆ" ಎಂದು ಮೀರಾ ಉತ್ತರಿಸಿದರು.

"ಪಿಲಾವ್ ನಾ ಫಿರ್ (ಹಾಗಾದರೆ ಚಹಾ ನೀಡಿ)" ಎಂದು ಪ್ರಧಾನಿ ಮೋದಿ ಹೇಳಿದರು. ಮೀರಾ ಅಡುಗೆ ಮನೆಗೆ ಹೋಗಿ ಪ್ರಧಾನಿಯವರಿಗೆ  ಚಹಾ ತಂದರು. ʼಇದು ಹಾಲಿನ ಚಹಾʼ ಎಂದ ಪ್ರಧಾನಿ ಮೋದಿ ನಿಮಗೆ ಹಾಲು ಎಲ್ಲಿ ಸಿಗುತ್ತದೆ ಎಂದು ಪ್ರಶ್ನಿಸಿದರು. "ನೀವು ತುಂಬಾ ಸಿಹಿಯಾದ ಚಹಾ ಸೇವಿಸುವ ಅಭ್ಯಾಸ ಇಟ್ಟುಕೊಂಡಿದ್ದೀರಿʼ ಮೋದಿ ಹೇಳಿದರು.

ಗ್ಯಾಸ್‌ ಬಳಸಲು ನಿಮಗೆ ಗೊತ್ತಾ ಎಂದು ಮೋದಿ ಕೇಳಿದಾಗ ಮೀರಾ ಮಾಂಝಿ ಅವರು ಒಂದು ದಿನದೊಳಗೆ ಗ್ಯಾಸ್ ಬಳಸಲು ಕಲಿತೆ ಎಂದು ಉತ್ತರಿಸಿದರು.  "ನಿಮಗೆ ಮನೆ, ವಿದ್ಯುತ್, ನೀರು ಮತ್ತು ಈಗ ಗ್ಯಾಸ್ ಸಿಕ್ಕಿದೆ. ಸರ್ಕಾರದ ಯೋಜನೆಯಿಂದ ಆಹಾರಧಾನ್ಯವೂ ಸಿಗುತ್ತದೆಯೇ?" ಎಂದು ಪ್ರಧಾನಿ ಕೇಳಿದರು. ಸರ್ಕಾರದಿಂದ 10 ಕೆಜಿ ಧಾನ್ಯ ಸಿಗುತ್ತದೆ ಎಂದರು ಮೀರಾ.

ಒಂದು ಹಂತದಲ್ಲಿ ಮೀರಾ ಅವರ ಕುಟುಂಬದ ಸದಸ್ಯರು ಪ್ರಧಾನಿ ಮೋದಿ ಅವರಿಗೆ ʼನೀವು ದೇವರಿದ್ದಂತೆʼ ಎಂದು ಹೇಳಿದರು. ಅದಕ್ಕೆ ಪ್ರಧಾನಿ ಮೋದಿ, "ಇಲ್ಲ ಇಲ್ಲ, ದೇವರು ಶ್ರೀರಾಮ" ಎಂದು ಹೇಳಿದರು.

ಸಂವಾದದ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಮೀರಾ ಅವರಿಗೆ ವಸತಿ ಯೋಜನೆಯಲ್ಲಿ ಎಷ್ಟು ಹಣವನ್ನು ಪಡೆದರು ಮತ್ತು ಅದಕ್ಕಾಗಿ ನೀವು ಯಾರಿಗಾದರೂ ಲಂಚ ನೀಡಬೇಕಾಯಿತೇ ಎಂದು ವಿಚಾರಿಸಿದರು.

ಬಿಪಿಎಲ್ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಕ್ಕಾಗಿ ಆರ್ಥಿಕ ನೆರವು ನೀಡುವ ಸರ್ಕಾರದ ಉಜ್ವಲ ಯೋಜನೆಯ 10 ನೇ ಕೋಟಿ ಫಲಾನುಭವಿಯಾಗಿರುವ ಮೀರಾ ಮಾಂಝಿ ಅಯೋಧ್ಯೆಯ ಮನೆಗೆ ಪ್ರಧಾನಿ ನರೇಂದ್ರ ಮೋದಿ ನಡೆದರು. ಹಿಂದಿನ ದಿನವಷ್ಟೇ (ಶುಕ್ರವಾರ) ಕುಟುಂಬದವರು ಗ್ಯಾಸ್ ಸಂಪರ್ಕ ಪಡೆದಿದ್ದರು.

ಪ್ರಧಾನಿ ಮೋದಿಯವರು ಅಲ್ಲಿ ಒಂದು ಕಪ್ ಚಹಾವನ್ನು ಸೇವಿಸುತ್ತಿದ್ದಂತೆ, "ಚಹಾ ನಿಜವಾಗಿಯೂ ಚೆನ್ನಾಗಿದೆ. ಮತ್ತು ನಾನು ಚಾಯ್ವಾಲಾ ಆಗಿದ್ದರಿಂದ ನನಗೆ ತಿಳಿದಿದೆ" ಎಂದು ಹೇಳಿದರು.

ಜನವರಿ 22 ರಂದು ರಾಮಮಂದಿರ ಉದ್ಘಾಟನೆಗೆ ಮುನ್ನ ಪ್ರಧಾನಿ ಮೋದಿ ಅವರು ಶನಿವಾರ ಅಯೋಧ್ಯೆಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಅಯೋಧ್ಯೆಯ ಹೊಸ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ, ನವೀಕರಿಸಿದ ರೈಲು ನಿಲ್ದಾಣ ಮತ್ತು 15,700 ಕೋಟಿ ರೂಪಾಯಿಗಳ ವಿವಿಧ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


Advertisement