Showing posts with label Muttappa Rai. Show all posts
Showing posts with label Muttappa Rai. Show all posts

Friday, May 15, 2020

ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ನಿಧನ

ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ನಿಧನ
ರಾಮನಗರ: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ, ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ (೬೮)  2020 ಮೇ 15ರ ಶುಕ್ರವಾರ ನಸುಕಿನ ಎರಡು ಗಂಟೆ ಸುಮಾರಿಗೆ ನಿಧನರಾದರು. ಒಂದು ವರ್ಷದ ಹಿಂದೆ ಕ್ಯಾನ್ಸರಿಗೆ ತುತ್ತಾಗಿದ್ದ ಅವರು ಕೆಲವು ದಿನದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಯೇ ಕೊನೆಯುಸಿರು ಎಳೆದರು. ಇಬ್ಬರು ಪುತ್ರರು, ಮೂವರು ಸಹೋದರರು ಹಾಗೂ ಒಬ್ಬ ಸಹೋದರಿಯನ್ನು ರೈ ಅಗಲಿದ್ದಾರೆ.

ತುಳು ಭಾಷೆಯ ಬಂಟರ
ಕುಟುಂಬದ ನೆಟ್ಟಲ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿಯ ಪುತ್ರನಾಗಿ ಪುತ್ತೂರಿನಲ್ಲಿ ಜನಿಸಿದ ನೆಟ್ಟಲ ಮುತ್ತಪ್ಪ ರೈ ಒಂದು ಕಾಲದಲ್ಲಿ ಭೂಗತ ಲೋಕದ ಡಾನ್ ಎಂದು ಕುಖ್ಯಾತರಾಗಿದ್ದರು. ಮೊದಲ ಪತ್ನಿ ರೇಖಾ ಸಿಂಗಪುರದಲ್ಲಿ ನಿಧನರಾಗಿದ್ದರು. ರಾಖಿ ಮತ್ತು ರಿಕ್ಕಿ ಇಬ್ಬರು ಪುತ್ರರು.

 ತುಳು ಸಿನಿಮಾ ಕಂಚಿಲ್ದ ಬಾಲೆಯಲ್ಲಿ ಮುತ್ತಪ್ಪ ರೈ ಕಾಣಿಸಿಕೊಂಡಿದ್ದರು. ಜಯ ಕರ್ನಾಟಕ ಸಂಘಟನೆಯನ್ನು ಹುಟ್ಟುಹಾಕಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ನ್ಯಾಯಾಲಯಗಳಲ್ಲಿ ಮುತ್ತಪ್ಪ ರೈ ವಿರುದ್ಧ ಆರೋಪಗಳನ್ನು ಸಾಬೀತುಪಡಿಸಲು ಭದ್ರತಾ ಸಂಸ್ಥೆಗಳು ವಿಫಲವಾದವು. ಆದರೆ ಸಮಾಜ ಅವರನ್ನು ಭೂಗತ ಲೋಕದ ಮಾಜಿ ಡಾನ್ ಎಂದೇ ಗುರುತಿಸುತ್ತಿತ್ತು. ಮುತ್ತಪ್ಪ ರೈ ವಿರುದ್ಧ ಪೊಲೀಸರು ದಂಡ ಸಂಹಿತೆ ೩೦೨ (ಕೊಲೆ) ಮತ್ತು ೧೨೦ಬಿ (ಸಂಚು) ಅನ್ವಯ ಪ್ರಕರಣಗಳನ್ನು ದಾಖಲಿಸಿದ್ದರು. ೨೦೦೧ರಲ್ಲಿ ನಡೆದಿದ್ದ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಸುಬ್ಬರಾಜು ಅವರ ಕೊಲೆ ಪ್ರಕರಣದಲ್ಲಿಯೂ ಮುತ್ತಪ್ಪ ರೈ ಅವರ ಹೆಸರು ಕೇಳಿ ಬಂದಿತ್ತು.

 
ರೌಡಿ ಜಯರಾಜ್ ಕೊಲೆ ಘಟನೆಯ ಬಳಿಕ ದುಬೈ ಸೇರಿದ್ದ ಮುತ್ತಪ್ಪ ರೈ ಅವರನ್ನು ೨೦೦೨ರಲ್ಲಿ ದುಬೈ ಪೊಲೀಸರು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಿದ್ದರು. ಸಿಬಿಐ, ರಾ, ಐಬಿ ಮತ್ತು ಕರ್ನಾಟಕ ಪೊಲೀಸರು ಮುತ್ತಪ್ಪ ರೈ ಅವರ ವಿಚಾರಣೆ ನಡೆಸಿದ್ದರು. ಆದರೆ ಸಾಕ್ಷಿಗಳ ಕೊರತೆಯಿಂದಾಗಿ ರೈ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಲಿಲ್ಲ. ಹಫ್ತಾ ವಸೂಲಿ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬೆದರಿಕೆ, ರಕ್ಷಣೆಗಾಗಿ ಹಣ ವಸೂಲಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗಿನ ನಂಟು ಸೇರಿದಂತೆ ಹತ್ತಾರು ಆರೋಪಗಳು ಮುತ್ತಪ್ಪ ರೈ ಮೇಲಿದ್ದವು.

ಮುತ್ತಪ್ಪ ರೈ ಜೀವನ ಆಧರಿಸಿದ ಚಲನಚಿತ್ರವೊಂದನ್ನು (ರೈ) ರಾಮ್ ಗೋಪಾಲ್ ವರ್ಮಾ ಸಿದ್ಧಪಡಿಸಲು ಯತ್ನಿಸಿದ್ದರು. ಆದರೆ ಚಿತ್ರ ಬಿಡುಗಡೆಯಾಗಲಿಲ್ಲ. ಕ್ಯಾನ್ಸರ್ ನನ್ನನ್ನು ಸಾವಿನ ದವಡೆಗೆ ನೂಕಿರುವುದು ನಿಜ. ಪವಾಡ ಸದೃಶ ರೀತಿಯಲ್ಲಿ ಬದುಕುತ್ತಿದ್ದೇನೆ ಎಂದು ಕಳೆದ ಜನವರಿಯಲ್ಲಿ ಮುತ್ತಪ್ಪ ರೈ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.

‘ವರ್ಷದ ಹಿಂದೆ ಕುಕ್ಕೆಗೆ ಹೋಗುವ ಸಂದರ್ಭದಲ್ಲಿ ಬೆನ್ನು ನೋವು ಕಾಣಿಸಿಕೊಂಡಿತು. ನಂತರದಲ್ಲಿ ಪರೀಕ್ಷೆ ಮಾಡಲಾಗಿ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ನಂತರ ದೆಹಲಿಯ ಮ್ಯಾಕ್ಸ್, ಚೆನ್ಮೈನ ಅಪೋಲೊ, ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದೆ ಎಂದು ಮಾಹಿತಿ ಹಂಚಿಕೊಂಡಿದ್ದರು.

ಶೇ ೯೦ರಷ್ಟು ಗುಣ ಆಗಿರುವುದಾಗಿ ವೈದ್ಯರು ಹೇಳಿದರು. ಆದರೆ ನಂತರದಲ್ಲಿ ಮಿದುಳಿಗೆ ಕ್ಯಾನ್ಸರ್ ತಗುಲಿತ್ತು. ಕೆಲವು ತಿಂಗಳಷ್ಟೇ ಬದುಕುವುದಾಗಿ ವೈದ್ಯರು ಹೇಳಿದರು. ಹೀಗಾಗಿ ಬಿಡದಿಗೆ ವಾಪಸ್ ಆಗಿದ್ದೇನೆ. ನನಗೀಗ ೬೮ ವರ್ಷ. ಐದು ಗುಂಡು ಬಿದ್ದರೂ ಬದುಕಿದವನು. ಸಾವಿಗೆ ಹೆದರುವುದಿಲ್ಲ. ವಿಲ್ ಪವರ್ನಿಂದ ಬದುಕುತ್ತಿದ್ದೇನೆ. ಸಮಾಜ ಸೇವೆ ಮುಂದುವರಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ಮಾತನಾಡಿದ್ದರು.

ವರ್ಷಕ್ಕೆ ೨೫-೩೦ ಕೋಟಿ ತೆರಿಗೆ ಕಟ್ಟುತ್ತಿದ್ದೇನೆ. ಆಸ್ತಿ ಕುರಿತು ಈಗಾಗಲೇ ವಿಲ್ ಮಾಡಿಸಿದ್ದು, ಮಕ್ಕಳಿಗೂ ತಿಳಿಸಿದ್ದೇನೆ. ಕಳೆದ ೧೫-೨೦ ವರ್ಷದಿಂದ ನನ್ನ ಜೊತೆಗಿರುವವರಿಗೆ ಒಂದೊಂದು ನಿವೇಶನ ಕೊಡುವಂತೆ ತಿಳಿಸಿದ್ದೇನೆ. ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಿಸಿದ್ದೇನೆ ಎಂದು ತಮ್ಮ ಅನುಪಸ್ಥಿತಿಯಲ್ಲಿಯೂ ತಮ್ಮನ್ನು ನಂಬಿದವರ ಯೋಗಕ್ಷೇಮಕ್ಕೆ ವ್ಯವಸ್ಥೆ ಮಾಡಿದ್ದ ವಿವರ ತಿಳಿಸಿದ್ದರು. ಪುತ್ತೂರು ಮಹಾಲಿಂಗೇಶ್ವರ  ದೇವಾಲಯಕ್ಕೆ ಬ್ರಹ್ಮರಥವನ್ನು ಸಮರ್ಪಿಸಿದ್ದರು.

Advertisement