Showing posts with label politcs. Show all posts
Showing posts with label politcs. Show all posts

Wednesday, October 21, 2020

ಮಹಾರಾಷ್ಟ್ರ: ಎನ್‌ಸಿಪಿ ಸೇರಲು ಬಿಜೆಪಿ ತ್ಯಜಿಸಿದ ಏಕನಾಥ ಖಡ್ಸೆ

 ಮಹಾರಾಷ್ಟ್ರ: ಎನ್‌ಸಿಪಿ ಸೇರಲು ಬಿಜೆಪಿ ತ್ಯಜಿಸಿದ ಏಕನಾಥ ಖಡ್ಸೆ

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಏಕನಾಥ್ ಖಡ್ಸೆ ಅವರು 2020 ಅಕ್ಟೋಬರ್ 21ರ ಬುಧವಾರ ಪಕ್ಷವನ್ನು ತೊರೆದಿದ್ದು,  ಅಕ್ಟೋಬರ್ 23ರ ಶುಕ್ರವಾರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ (ಎನ್‌ಸಿಪಿ) ಸೇರಲಿದ್ದಾರೆ. ರಾಜ್ಯ ಎನ್‌ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಘೋಷಣೆ ಮಾಡಿದರು.

ಬಿಜೆಪಿಯನ್ನು ತೊರೆಯಲು ನಿರ್ಧರಿಸಿರುವುದಾಗಿ ಖಡ್ಸೆ ಅವರು ತಮಗೆ "ಸ್ವಲ್ಪ ಸಮಯದ ಹಿಂದೆ" ತಿಳಿಸಿರುವುದಾಗಿ ಪಾಟೀಲ್ ಪ್ರಕಟಿಸಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ಹಿರಿಯ ಬಿಜೆಪಿ ನಾಯಕ ಏಕನಾಥ್ ಖಡ್ಸೆ ತಮ್ಮ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದಾರೆ. ಸ್ವಲ್ಪ ಸಮಯದ ಹಿಂದೆ ಅವರು ತಮ್ಮ ನಿರ್ಧಾರದ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ. ಇದು ಎನ್‌ಸಿಪಿಗೆ ಅವರ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿದೆ. ಶುಕ್ರವಾರ ಮಧ್ಯಾಹ್ನ ಖಡ್ಸೆ ಔಪಚಾರಿಕವಾಗಿ ಪಕ್ಷವನ್ನು ಸೇರುತ್ತಾರೆ ಎಂದು ಪಾಟೀಲ್ ಹೇಳಿದರು.

ಖಡ್ಸೆ ಅವರು ಬುಧವಾರ ರಾಜೀನಾಮೆ ನೀಡಿದ ನಂತರ, ತಮ್ಮ ಪಕ್ಷ ತೊರೆಯುವ ನಿರ್ಧಾರಕ್ಕೆ  ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಹೊಣೆಗಾರರನ್ನಾಗಿ ಮಾಡಿದರು.  ತಮ್ಮ ಸೊಸೆ ಮತ್ತು ಪಕ್ಷದ ಸಂಸದ ರಕ್ಷಾ ಖಡ್ಸೆ ಅವರು ಬಿಜೆಪಿಗೆ ಕೆಲಸ ಮಾಡುವುದನ್ನು ಮುಂದುವರೆಸಲಿದ್ದಾರೆ ಮತ್ತು ಬೇರೆ ಯಾವುದೇ ಪಕ್ಷದ ಶಾಸಕರು ಅಥವಾ ಸಂಸದರು ತಮ್ಮೊಂದಿಗೆ ಎನ್‌ಸಿಪಿ ಸೇರ್ಪಡೆ ಆಗುತ್ತಿಲ್ಲ ಎಂದೂ ಅವರು ನುಡಿದರು.

ಖಡ್ಸೆ ಅವರ ಆಪ್ತ ಸಹಾಯಕರ ಪ್ರಕಾರ, ಅವರು ರಾಜ್ಯಪಾಲರ ಕೋಟಾ ಮೂಲಕ ವಿಧಾನಪರಿಷತ್ ಸ್ಥಾನವನ್ನು ಪಡೆಯುವ ನಿರೀಕ್ಷೆಯಿದೆ. ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ವಿಧಾನ ಪರಿಷತ್ತಿನ ೧೨ ಸದಸ್ಯರ ನೇಮಕಕ್ಕೆ ರಾಜ್ಯಪಾಲ ಭಗತ್ ಸಿಂಗ್ ಕೊಶಾರಿ ಅವರಿಗೆ ಇನ್ನೂ ಹೆಸರುಗಳನ್ನು ಶಿಫಾರಸು ಮಾಡಿಲ್ಲ.

ಭ್ರಷ್ಟಾಚಾರದ ಆರೋಪ ಎದುರಿಸಿದ ನಂತರ ೨೦೧೬ ಜೂನ್‌ನಲ್ಲಿ ಕಂದಾಯ ಸಚಿವ ಸ್ಥಾನ ಮತ್ತು ಇತರ ೧೧ ಇಲಾಖೆಗಳಿಗೆ ರಾಜೀನಾಮೆ ನೀಡಿದ್ದ ಖಡ್ಸೆ, ನಾಲ್ಕು ದಶಕಗಳ ಕಾಲ ಪಕ್ಷದಲ್ಲಿ ಕೆಲಸ ಮಾಡಿದ ಬಳಿಕ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಅವರು ವಿಧಾನಸಭೆಯಲ್ಲಿ ಜಲಗಾಂವ್ ಜಿಲ್ಲೆಯ ಮುಖೈನಗರ ಕ್ಷೇತ್ರವನ್ನು ಹಲವಾರು ಬಾರಿ ಪ್ರತಿನಿಧಿಸಿದ್ದರು.

ಫಡ್ನವಿಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷದ ಮುಖಂಡರೊಂದಿಗೆ ತಮಗೆ ಅಸಮಾಧಾನ ಇಲ್ಲ್ಲ ಎಂದು ಖಡ್ಸೆ ಜಲಗಾಂವ್‌ನಲ್ಲಿ ಹೇಳಿದರು.

ರಾಷ್ಟ್ರೀಯ ಅಥವಾ ರಾಜ್ಯ ನಾಯಕತ್ವದ ಬೇರೆ ಯಾವುದೇ ನಾಯಕರ ವಿರುದ್ಧ ನನಗೆ ಯಾವುದೇ ದೂರುಗಳಿಲ್ಲ. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಬಗ್ಗೆ ನನಗೆ ಬಗ್ಗೆ ಅಸಮಾಧಾನವಿದೆ, ಅವರು ಪೊಲೀಸರ ಮೂಲಕ ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದರು. ಆಗಿನ ಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದ ಫಡ್ನವೀಸ್ ಅವರ ಆದೇಶದ ಮೇರೆಗೆ ಮಹಿಳೆಯೊಬ್ಬರ ಜೊತೆ ಅಸಭ್ಯತೆ ಪ್ರದರ್ಶಿಸಿದ ಪ್ರಕರಣ ನನ್ನ ವಿರುದ್ಧ ದಾಖಲಾಗಿದೆ. ಹಾಗೆಯೇ ಭೋಸ್ರಿ ಭೂ ವ್ಯವಹಾರದಲ್ಲಿನ ಭ್ರಷ್ಟಾಚಾರ ಪ್ರಕರಣಗಳು ನನ್ನ ವಿರುದ್ಧ ದಾಖಲಾಗಿವೆ, ಆದರೂ ಅವುಗಳಿಂದ ಯಾವುದೇ ಅಂಶವೂ ಹೊರಬಂದಿಲ್ಲ. ಶಿಕ್ಷೆಗೆ ಕಾರಣಗಳನ್ನು ನೀಡುವಂತೆ ನನ್ನ ಪಕ್ಷದ ನಾಯಕತ್ವ ಮತ್ತು ಫಡ್ನವೀಸ್ ಅವರನ್ನು ವಿವಿಧ ವೇದಿಕೆಗಳಲ್ಲಿ ಒತ್ತಾಯಿಸಿದ್ದೇನೆ, ಆದರೆ ನನಗೆ ಯಾವತ್ತೂ ಉತ್ತರ ಸಿಕ್ಕಿಲ್ಲ ಎಂದೂ ಅವರು ಹೇಳಿದರು.

ಕಳೆದ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಖಡ್ಸೆ ಅವರಿಗೆ ಚುನಾವಣಾ ಟಿಕೆಟ್ ನಿರಾಕರಿಸಲಾಗಿತ್ತು.

Saturday, October 17, 2020

ನ್ಯೂಜಿಲೆಂಡ್ ಚುನಾವಣೆ: ಜಸಿಂಡಾ ಅರ್ಡೆರ್ನ್‌ಗೆ ಪ್ರಚಂಡ ಬಹುಮತ, ಪುನರಾಯ್ಕೆ

 ನ್ಯೂಜಿಲೆಂಡ್ ಚುನಾವಣೆ: ಜಸಿಂಡಾ ಅರ್ಡೆರ್ನ್‌ಗೆ
ಪ್ರಚಂಡ ಬಹುಮತ, ಪುನರಾಯ್ಕೆ

ವೆಲ್ಲಿಂಗ್ಟನ್: ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ಅವರು ನ್ಯೂಜಿಲೆಂಡ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಂಡ ವಿಜಯ ಸಾಧಿಸಿ ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ.

ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಮತ್ತು ಸಾಮಾಜಿಕ ಅಸಮಾನತೆಯನ್ನು ನಿಭಾಯಿಸಲು ಜನಾದೇಶವನ್ನು ಬಳಸಿಕೊಳ್ಳುವುದಾಗಿ ಅರ್ಡೆನ್ 2020 ಅಕ್ಟೋಬರ್ 17ರ ಶನಿವಾರ  ಹೇಳಿದರು.

"ಮುಂದಿನ ಮೂರು ವರ್ಷಗಳಲ್ಲಿ ಹೆಚ್ಚಿನ ಕೆಲಸಗಳಿವೆ" ಎಂದು ಅವರು ಆಕ್ಲೆಂಡ್‌ನಲ್ಲಿ ಬೆಂಬಲಿಗರಿಗೆ ತಿಳಿಸಿದರು. "ನಾವು ಕೋವಿಡ್ ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸುತ್ತೇವೆ ಮತ್ತು ಚೇತರಿಕೆಯನ್ನು ತ್ವರಿತಗೊಳಿಸಲು ಮತದಾರರು ನಮಗೆ ಆದೇಶ ನೀಡಿದ್ದಾರೆ ಎಂದು ಅವರು ನುಡಿದರು.

ಶೇಕಡಾ ೮೭ರಷ್ಟು ಮತಗಳ ಎಣಿಕೆಯ ವೇಳೆಗೆ ಅರ್ಡೆರ್ನ್ ಅವರ ಲೇಬರ್ ಪಕ್ಷವು ಶೇಕಡಾ ೪೯ರಷ್ಟು ಬೆಂಬಲವನ್ನು ಪಡೆದಿತ್ತು. ೧೯೩೦ರ ನಂತರ ಪಕ್ಷವು ಇದೇ ಮೊದಲ ಬಾರಿಗೆ ಅತಿದೊಡ್ಡ ಗೆಲುವಿನತ್ತ ಸಾಗಿದೆ. ಅನೇಕ ನಗರ ಮತ್ತು ಪ್ರಾಂತೀಯ ಮತದಾರರಲ್ಲಿ ಎಡಪಕ್ಷದತ್ತ ಜನರಿಂದ ಭಾರಿ ಪ್ರಮಾಣದ ಒಲವು ವ್ಯಕ್ತವಾಗುವುದರೊಂದಿಗೆ ವಿರೋಧಿ ನ್ಯಾಷನಲ್ ಪಾರ್ಟಿಯ ಬೆಂಬಲ ಶೇಕಡಾ ೨೭ಕ್ಕೆ ಕುಸಿಯಿತು. ಇದು ೨೦೦೨ರ ಬಳಿಕ ಪಕ್ಷದ ಅತ್ಯಂತ ಕಳಪೆ ಸಾಧನೆಯಾಗಿದೆ.

೪೦ರ ಹರೆಯದ ಆರ್ಡರ್ನ್, ನುರಿತ ಬಿಕ್ಕಟ್ಟು ನಿರ್ವಹಣೆಯ ತಮ್ಮ ಚಾಲಾಕಿತನದಿಂದ ನ್ಯೂಜಿಲೆಂಡ್ ರಾಜಕೀಯದಲ್ಲಿ ಕೇಂದ್ರ ನೆಲವನ್ನು ವಶಪಡಿಸಿಕೊಂಡಿದ್ದಾರೆ. ಬಿಕ್ಕಟ್ಟು ನಿರ್ವಹಣೆಯ ಅವರ ಕುಶಲತೆಯ  ವಿದೇಶದಲ್ಲೂ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿದೆ. ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಅವರ ಸಾಮರ್ಥ್ಯ ಪ್ರದರ್ಶಿತವಾಗಿದೆ. ಅಧಿಕಾರದ ಮೊದಲ ಅವಧಿಯಲ್ಲಿ ನೀಡಲಾಗಿದ್ದ ಕೆಲವು ಪ್ರಮುಖ ಭರವಸೆಗಳನ್ನು ಈಡೇರಿಸಿಲ್ಲ ಎಂಬ ಅವರ ಮೇಲಿನ ಆಕ್ಷೇಪಗಳನ್ನು ಪ್ರಚಂಡ ವಿಜಯವು ಇದೀಗ ಮೂಲೆಗುಂಪು ಮಾಡಿದೆ.

ನ್ಯೂಜಿಲೆಂಡಿನ ಎಲ್ಲರಿಗಾಗಿ ನಾನು ಆಡಳಿತ ನಡೆಸುತ್ತೇನೆ ಎಂದು ಹೇಳಿದ ಆರ್ಡೆನ್, ಅಂತಿಮ ಫಲಿತಾಂಶ ಬರುವವರೆಗೆ ಗ್ರೀನ್ ಪಾರ್ಟಿಯನ್ನು ಸರ್ಕಾರಕ್ಕೆ ಆಹ್ವಾನಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರ ಹೇಳಲಾಗದು ಎಂದು ಸ್ಪಷ್ಟ ಪಡಿಸಿದರು. ಗ್ರೀನ್ ಪಾರ್ಟಿಯು ಈವರೆಗೆ ಶೇಕಡಾ . ಬೆಂಬಲವನ್ನು ಪಡೆದಿದೆ.

ಈಗಿನ ಭರ್ಜರಿ ಗೆಲುವು ಮೂರು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಾಗ ನೀಡಿದ್ದ ಪರಿವರ್ತನೆಯ ಭರವಸೆಯನ್ನು ಈಡೇರಿಸಲು ಅರ್ಡೆರ್ನ್ ಅವರಿಗೆ ಹೆಚ್ಚಿನ ಕಾಲಾವಕಾಶವನ್ನು ನೀಡುತ್ತದೆ.

ವಿಶೇಷವಾಗಿ ಬಡತನ ಮತ್ತು ಹವಾಮಾನ ಬದಲಾವಣೆಯಂತಹ ವಿಷಯಗಳಲ್ಲಿ ಹೆಚ್ಚು ಪ್ರಗತಿಪರವಾಗುವಂತೆ ಗ್ರೀನ್ಸ್ ಪಾರ್ಟಿ ಒತ್ತಾಯಿಸುತ್ತಿದ್ದರೆ, ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಸಾಲವು ಹೆಚ್ಚುತ್ತಿರುವ ಸಮಯದಲ್ಲಿ ಹೆಚ್ಚಿದ ಸಾಮಾಜಿಕ ಖರ್ಚಿನೊಂದಿಗೆ ಅವರು ಎಚ್ಚರದಿಂದ ಇರಬೇಕಾಗುತ್ತದೆ.

ಇಂಗ್ಲೆಂಡ್, ಅಮೆರಿಕ ಮತ್ತು ನೆರೆಯ ಆಸ್ಟ್ರೇಲಿಯಾದಂತಹ ದೇಶಗಳು ಕೊರೋನಾವೈರಸ್ ನಿಗ್ರಹಕ್ಕಾಗಿ ಇನ್ನೂ ಹೋರಾಡುತ್ತಲೇ ಇರುವಾಗ, ಕೋವಿಡ್-೧೯ರ ಸಮುದಾಯ ಪ್ರಸರಣವನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾದುದಕ್ಕಾಗಿ ಮತದಾರರು ಆರ್ಡೆನ್ ಅವರಿಗೆ ಸೂಕ್ತ ಬಹುಮಾನ ನೀಡಿದ್ದಾರೆ.

ಛಿದ್ರಗೊಂಡಿರುವ ವಿರೋಧೀ ನ್ಯಾಷನಲ್ ಪಾರ್ಟಿಯ ಮುಖಂಡ ಜುಡಿತ್ ಕಾಲಿನ್ಸ್ ತಮ್ಮ ಭಾಷಣದಲ್ಲಿ ಸೋಲನ್ನು ಒಪ್ಪಿಕೊಂಡು, ಅರ್ಡರ್ನ್ ಅವರನ್ನು ಅಭಿನಂದಿಸಿರುವುದಾಗಿ ಹೇಳಿದರು.

Tuesday, October 13, 2020

ಮುಖ್ಯಮಂತ್ರಿ ಉದ್ಧವ್- ರಾಜ್ಯಪಾಲ ಕೋಶ್ಯಾರಿ ‘ಪತ್ರ ಸಮರ’

 ಮುಖ್ಯಮಂತ್ರಿ ಉದ್ಧವ್- ರಾಜ್ಯಪಾಲ ಕೋಶ್ಯಾರಿ ‘ಪತ್ರ ಸಮರ

ಮುಂಬೈ: ರಾಜ್ಯದಲ್ಲಿ ಧಾರ್ಮಿಕ ಸ್ಥಳಗಳನ್ನು ತೆರೆಯುವ ಬಗ್ಗೆ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಮತ್ತು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡುವೆ 2020 ಅಕ್ಟೋಬರ್ 13ರ ಮಂಗಳವಾರ ಪತ್ರ ಸಮರ ನಡೆದಿದ್ದು ಉಭಯರ ಜಗಳ ಇನ್ನಷ್ಟು ಉಲ್ಬಣಗೊಂಡಿದೆ. ವಿಷಯದ ಬಗ್ಗೆ ಕೋಶ್ಯಾರಿ ಪತ್ರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜ್ಯಪಾಲರಿಂದ ಹಿಂದುತ್ವದ ಬಗ್ಗೆ ಪ್ರಮಾಣಪತ್ರ ಅಗತ್ಯವಿಲ್ಲ ಎಂದು ಚುಚ್ಚಿದ್ದಾರೆ.

ಪೂಜಾ ಸ್ಥಳಗಳನ್ನು ಪುನಃ ತೆರೆಯುವ ಕುರಿತು ರಾಜ್ಯಪಾಲರು ಬರೆದ ಪತ್ರಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಉದ್ಧವ್, ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂಬುದಾಗಿ ಕರೆದ ವ್ಯಕ್ತಿಯನ್ನು ಸ್ವಾಗತಿಸಲು ತಮ್ಮ ಹಿಂದುತ್ವವು ಅನುಮತಿ ನೀಡುವುದಿಲ್ಲ ಎಂದು ಬರೆದಿದ್ದಾರೆ.

ದೇವಾಲಯಗಳು ಮತ್ತು ಇತರ ಧಾರ್ಮಿಕ ಸ್ಥಳಗಳನ್ನು ತೆರೆಯುವ ಬೇಡಿಕೆಗಳ ಬಗ್ಗೆ ಸರ್ಕಾರ ಸಕ್ರಿಯವಾಗಿ ಯೋಚಿಸುತ್ತಿದೆ. ಆದರೆ, ಸಾಂಕ್ರಾಮಿಕ ಸಮಯದಲ್ಲಿ ಜನರ ಸುರಕ್ಷತೆಯೇ ಅದರ ಪ್ರಾಥಮಿಕ ಕರ್ತವ್ಯ ಎಂದು ಮುಖ್ಯಮಂತ್ರಿ ಪತ್ರದಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ ೧೨ ಪತ್ರದಲ್ಲಿ, ರಾಜ್ಯಪಾಲರು, ಪೂಜಾ ಸ್ಥಳಗಳನ್ನು ಪುನಃ ತೆರೆಯುವುದನ್ನು ಮುಂದೂಡಲು ನೀವು ಯಾವುದೇ ದೈವೀಕ ಮುನ್ಸೂಚನೆಯನ್ನು ಸ್ವೀಕರಿಸುತ್ತೀರಾ ಅಥವಾ ನೀವು ಇದ್ದಕ್ಕಿದ್ದಂತೆ ನೀವೇ ದ್ವೇಷಿಸುತ್ತಿದ್ದ ಜಾತ್ಯತೀತರಾಗಿ ಪರಿವರ್ತನೆಗೊಂಡಿದ್ದೀರಾ ಎಂದು ನಾನು ಆಶ್ಚರ್ಯ ಪಡುತ್ತೇನೆ ಎಂದು ವ್ಯಂಗ್ಯವಾಗಿ ಬರೆದಿದ್ದರು.

ಪತ್ರಕ್ಕೆ ಪ್ರತಿಕ್ರಿಯಿಸಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಮುಖ್ಯಮಂತ್ರಿ, ಧಾರ್ಮಿಕ ಸ್ಥಳಗಳನ್ನು ತೆರೆಯುವುದು ಹಿಂದುತ್ವ ಎಂದು ನೀವು ಅರ್ಥೈಸುತ್ತೀರಾ, ಮತ್ತು ಅವುಗಳನ್ನು ತೆರೆಯದಿರುವುದು ಜಾತ್ಯತೀತ ಎಂದು ಅರ್ಥವೇ? ಜಾತ್ಯತೀತತೆಯು ರಾಜ್ಯಪಾಲರಾಗಿ ನೀವು ಮಾಡಿದ ಪ್ರಮಾಣವಚನದ ನಿರ್ಣಾಯಕ ನೆಲೆಯಾಗಿದೆ. ನೀವು ಅದನ್ನು ನಂಬುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಹಿಂದುತ್ವದ ಬಗ್ಗೆ ಯಾವುದೇ ಉಪದೇಶದ ಅಗತ್ಯವಿಲ್ಲ ಎಂದೂ ಠಾಕ್ರೆ ಹೇಳಿದ್ದಾರೆ. ಸರ್, ನಿಮ್ಮ ಪತ್ರದಲ್ಲಿ ನೀವು ಹಿಂದುತ್ವವನ್ನು ಉಲ್ಲೇಖಿಸಿದ್ದೀರಿ, ಆದರೆ ನನಗೆ ನಿಮ್ಮಿಂದ ಯಾವುದೇ ಪ್ರಮಾಣಪತ್ರ ಅಥವಾ ಹಿಂದುತ್ವದ ಬಗ್ಗೆ ಯಾವುದೇ ಬೋಧನೆ ಅಗತ್ಯವಿಲ್ಲ. ನನ್ನ ಮಹಾರಾಷ್ಟ್ರ ಅಥವಾ ಮುಂಬೈ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಕರೆದ ವ್ಯಕ್ತಿಯನ್ನು ಮನೆಗೆ ಸ್ವಾಗತಿಸಲು ನನ್ನ ಹಿಂದುತ್ವವು ಅನುಮತಿ ನೀಡುವುದಿಲ್ಲ ಎಂದು ಅವರು ಉತ್ತರಿಸಿದ್ದಾರೆ.

ಕೊರೋನವೈರಸ್ ಮಧ್ಯೆ ಅನ್ಲಾಕ್ ಪ್ರಕ್ರಿಯೆಯಲ್ಲಿ ಧಾರ್ಮಿಕ ಸ್ಥಳಗಳನ್ನು ಪುನಃ ತೆರೆಯುವ ಕುರಿತು ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಜ್ಯಪಾಲ ಬಿ.ಎಸ್. ಕೊಶ್ವಾರಿ ನಡುವೆ ಪತ್ರ ಸಮರ ನಡೆಯಿತು. ಮಹಾರಾಷ್ಟ್ರ ರಾಜ್ಯಪಾಲರು ಸೋಮವಾರ ಠಾಕ್ರೆ ಅವರಿಗೆ ಭಗವಾನ್ ರಾಮನ ಬಗೆಗಿನ ಭಕ್ತಿಯನ್ನು ನೆನಪಿಸಿ ಪತ್ರ ಬರೆದಿದ್ದರು. ರಾಮಭಕ್ತಿಯ ಪರಿಣಾಮವಾಗಿ ರಾಜ್ಯದ ಉಸ್ತುವಾರಿ ವಹಿಸಿಕೊಂಡ ನಂತರ ಮುಖ್ಯಮಂತ್ರಿ ಠಾಕ್ರೆ ಅವರು ಅಯೋಧ್ಯೆಗೆ ಭೇಟಿ ನೀಡಿದ್ದನ್ನು ಮತ್ತು ಪಂಡರಾಪುರದ ವಿಠ್ಠಲ-ರುಕ್ಮಿಣಿ ಮಂದಿರ ಪ್ರವಾ ಕೈಗೊಂಡು ಆಷಾಢ ಏಕಾದಶಿ ಪೂಜೆ ನೆರವೇರಿಸಿದ್ದನ್ನೂ ರಾಜ್ಯಪಾಲರು ನೆನಪಿಸಿದ್ದರು.

ರಾಜ್ಯದ ಕೋವಿಡ್ -೧೯ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ ಧಾರ್ಮಿಕ ಪೂಜಾ ಸ್ಥಳಗಳನ್ನು ಪುನಃ ತೆರೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಠಾಕ್ರೆ ಕೋಶ್ಯಾರಿ ಅವರಿಗೆ ಮಾಹಿತಿ ನೀಡಿದರು. ಸ್ಥಳಗಳನ್ನು ಮತ್ತೆ ತೆರೆಯಲು ರಾಜ್ಯಪಾಲರ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸುತ್ತದೆ ಎಂದು ಅವರು ಹೇಳಿದರು.

ಧಾರ್ಮಿಕ ಪೂಜಾ ಸ್ಥಳಗಳನ್ನು ಮತ್ತೆ ತೆರೆಯಬೇಕೆಂದು ಒತ್ತಾಯಿಸಿ ಪ್ರತಿನಿಧಿಗಳಿಂದ ಮೂರು ಮನವಿಗಳನ್ನು  ಸ್ವೀಕರಿಸಿದ್ದೇನೆ ಎಂದು ಕೋಶ್ಯಾರಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಠಾಕ್ರೆ, ಅವರು ಕೋಶ್ಯಾರಿ ಪ್ರಸ್ತಾಪಿಸಿದ ಮೂರು ಪತ್ರಗಳೂ ಬಿಜೆಪಿ ಪದಾಧಿಕಾರಿಗಳು ಮತ್ತು ಬೆಂಬಲಿಗರಿಂದ ಬಂದದ್ದು ಕಾಕತಾಳೀಯ ಎಂದು ಗಮನಸೆಳೆದರು.

ಜಾತ್ಯತೀತತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಠಾಕ್ರೆ, ಕೊಶ್ಯಾರಿ ಹಿಂದುತ್ವಕ್ಕೆ ಕೇವಲ ಧಾರ್ಮಿಕ ಪೂಜಾ ಸ್ಥಳಗಳನ್ನು ಪುನಃ ತೆರೆಯುವುದು ಮತ್ತು ಅವುಗಳನ್ನು ತೆರೆಯದಿದ್ದಲ್ಲಿ ಅವರು ಜಾತ್ಯತೀತರು ಆಗುತ್ತಾರೆಯೇ ಎಂದು ಅಚ್ಚರಿ ವ್ಯಕ್ತ ಪಡಿಸಿದರು.

"ನೀವು ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸುವಾಗ ಪ್ರಮಾಣ ಮಾಡಿದ ಸಂವಿಧಾನದ ಪ್ರಮುಖ ಅಂಶ ಜಾತ್ಯಾತೀತತೆ ಅಲ್ಲವೇ? ಎಂದು ಠಾಕ್ರೆ ರಾಜ್ಯಪಾಲರನ್ನು ಪ್ರಶ್ನಿಸಿದರು.

"ಜನರ ಭಾವನೆಗಳು ಮತ್ತು ನಂಬಿಕೆಗಳನ್ನು ಪರಿಗಣಿಸುವಾಗ, ಅವರ ಜೀವನವನ್ನು ನೋಡಿಕೊಳ್ಳುವುದು ಸಹ ಮುಖ್ಯವಾಗಿದೆ ಮತ್ತು ಇದ್ದಕ್ಕಿದ್ದಂತೆ ದಿಗ್ಬಂಧನವನ್ನು (ಲಾಕ್ ಡೌನ್) ಹೇರುವುದು ಮತ್ತು ತೆರವುಗೊಳಿಸುವುದು ತಪ್ಪು ಎಂದೂ ಠಾಕ್ರೆ ಪತ್ರದಲ್ಲಿ ಬರೆದಿದ್ದಾರೆ.

ಆರ್ಎಸ್ಎಸ್ ಹಿರಿಯರಾದ ಕೋಶ್ಯಾರಿ ಬಿಜೆಪಿಯ ಉಪಾಧ್ಯಕ್ಷ ಮತ್ತು ಪಕ್ಷದ ಉತ್ತರಾಖಂಡ ರಾಜ್ಯ ಘಟಕದ ಮೊದಲ ಅಧ್ಯಕ್ಷರಾಗಿದ್ದಾರೆ, ಅಲ್ಲಿ ಅವರು ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

Advertisement