ಅಪ್ನಾ ಘರ್: ಕನಸು ಕರ್ನಾಟಕದಲ್ಲಿ ಮುರುಟುತ್ತಿದೆಯೇ?
“‘ಅಪ್ನಾ
ಘರ್ ಹೋ, ಅಪ್ನಾ
ಅಂಗನ್ ಹೋ, ಈಸ್
ಖವಾಬ್ ಮೇ ಹರ್ ಕೋಯಿ ಜೀತಾ ಹೈ; ಇನ್ಸಾನ್ ಕೆ ದಿಲ್ ಕಿ ಯೇ ಚಾಹತ್ ಹೈ ಕಿ ಏಕ್ ಘರ್ ಕಾ ಸಪ್ನಾ ಕಭಿ ನಾ
ಚೂಟೇ' (ಸ್ವಂತ ಮನೆ ಇರಲಿ,
ಸ್ವಂತ ಅಂಗಳ ಇರಲಿ ಎಂಬ ಕನಸು ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲೂ ವಾಸವಾಗಿರುತ್ತದೆ. ಎಂದಿಗೂ
ಕಳೆದುಹೋಗದ ಮನೆಯ ಕನಸು- ಇದು ಎಂದಿಗೂ ಮರೆಯಾಗದ ಹಂಬಲ).
“‘Apna ghar ho, apna aangan ho, is khawab mein har koi jeeta
hai; Insaan ke dil ki ye chahat hai ki ek ghar ka sapna kabhi naa choote’ (To
have one’s own home, one’s own courtyard – this dream lives in every heart.
It’s a longing that never fades, to never lose the dream of a home)."
೨೦೨೪ ನವೆಂಬರ್ ೧೩ರ
ಬುಧವಾರ ಬುಲ್ ಡೋಜರ್ ಓಡಿಸಿ ಮನೆ ಕೆಡವಿ ಹಾಕುವ ಸರ್ಕಾರಿ ಸಿಬ್ಬಂದಿಯ ಕ್ರಮವನ್ನು ಅಮಾನ್ಯಗೊಳಿಸಿದ
ಸುಪ್ರೀಂಕೋರ್ಟ್ ತೀರ್ಪಿನ ಪೀಠಿಕೆ ಭಾಗದಲ್ಲಿ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಉಲ್ಲೇಖಿಸಿರುವ
ಹಿಂದಿ ಕವಿ ಪ್ರದೀಪ್ ಅವರ ಕವನದ ಸಾಲುಗಳಿವು.
ಆದರೆ, ಸ್ವಂತ ಸೂರು,
ಸ್ವಂತ ಮನೆ, ಸ್ವಂತ ಆಸ್ತಿ ಹೊಂದುವ ಅದಕ್ಕಾಗಿ ಅವುಗಳನ್ನು ಖರೀದಿಸಲು ತುದಿಗಾಲ ಮೇಲೆ ನಿಂತಿರುವ
ಸಹಸ್ರಾರು ಮಂದಿಯ ಕನಸು ಕರ್ನಾಟಕದಲ್ಲಿ ಮುರುಟಿಹೋಗುತ್ತಿದೆಯೇ? ಎಂಬ ಪ್ರಶ್ನೆ ರಾಜ್ಯದ ಹಲವರ ಮನಸ್ಸಿನಲ್ಲಿ
ಮೂಡಿದ್ದರೆ ವಿಶೇಷವೇನೂ ಅಲ್ಲ. ಏಕೆಂದರೆ ಕಳೆದ ಎರಡು ತಿಂಗಳುಗಳಿಂದ ಕರ್ನಾಟಕದಲ್ಲಿ ಮನೆ, ಆಸ್ತಿ
ಖರೀದಿಸಬಯಸಿದವರ ಕನಸುಗಳು ಈಡೇರುತ್ತಿಲ್ಲ, ಅವರ ಕ್ರಯಪತ್ರಗಳು ನೋಂದಣಿ ಆಗುತ್ತಿಲ್ಲ.
ಪತ್ರಿಕಾ ವರದಿಗಳ ಪ್ರಕಾರ
ಇದಕ್ಕೆ ಕಾರಣ ಸರ್ಕಾರ ಜಾರಿಗೊಳಿಸಿರುವ ನೀತಿ. ಯಾವುದೇ ಆಸ್ತಿ ಖರೀದಿ, ಮಾರಾಟಕ್ಕೆ ಇ-ಖಾತೆ ಕಡ್ಡಾಯ
ಎಂಬ ನಿಯಮ. ಮಾರಾಟ- ಖರೀದಿ ಕ್ರಯಪತ್ರ ನೋಂದಣಿ ದಿನಾಂಕದವರೆಗಿನ ಇ-ಖಾತೆ ಇರಲೇಬೇಕು ಎಂಬ ಆದೇಶ.
ಆದರೆ ಬೆಂಗಳೂರಿನ ಬಿಬಿಎಂಪಿಯಿಂದ
ಹಿಡಿದು, ಹಳ್ಳಿಗಳ ಗ್ರಾಮ ಪಂಚಾಯಿತಿ, ಪುಟ್ಟ ಪಟ್ಟಣ, ನಗರಗಳ ನಗರಸಭೆಯವರೆಗೂ ಇ-ಖಾತೆ ನೀಡಲು ಸಾಧ್ಯವಾಗುತ್ತಿಲ್ಲ
ಎಂಬುದು ಸಿಬ್ಬಂದಿಯ ಅಳಲು. ಅದಕ್ಕೆ ಅವರು ನೀಡುತ್ತಿರುವ ಕಾರಣ – ಹಿಂದೆ ಭೂಮಿ ತಂತ್ರಾಂಶ ಇತ್ತು.
ಆಗ ಎಲ್ಲವೂ ಸರಳವಾಗಿತ್ತು. ಸರ್ಕಾರ ಈಗ ಹೊಸದಾಗಿ ಕಾವೇರಿ ತಂತ್ರಾಂಶವನ್ನು ಅಳವಡಿಸಿದೆ. ಈ ತಂತ್ರಾಂಶದ
ಜೊತೆಗೆ ನಮ್ಮ ಕಂಪ್ಯೂಟರ್ ವ್ಯವಸ್ಥೆ ಹೊಂದಾಣಿಕೆ ಅಥವಾ ಸಂಯೋಜನೆ ಆಗುತ್ತಿಲ್ಲ ಎಂಬುದು ಅವರ ಅಳಲು.
ಹೀಗೇಕೆ? ಎಂಬ ಪ್ರಶ್ನೆಗೆ
ಲಭಿಸುವ ಉತ್ತರ – ಹಿಂದೆ ಖಾತೆಗಳನ್ನು ಕೈಗಳಲ್ಲೇ ಬರೆದು ಸಹಿ, ಮೊಹರು ಹಾಕಿ ಕೊಟ್ಟರೆ ಸಾಕಿತ್ತು.
ಆದರೆ ಈಗ ಖಾತೆಗಳನ್ನು ಇ-ಸ್ವತ್ತು ಇಲ್ಲವೇ ಇ-ಆಸ್ತಿ ತಂತ್ರಾಂಶದ ಮೂಲಕವೇ ಪಡೆಯಬೇಕು. ಆದರೆ ಇ-ಸ್ವತ್ತು
ಇಲ್ಲವೇ ಇ-ಆಸ್ತಿ ಮೂಲಕ ಖಾತೆ ಪಡೆಯಲು ಅದಕ್ಕೆ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ನೀಡಲಾಗುವ ಋಣಭಾರ
ಪತ್ರ ಲಗತ್ತಿಸಲ್ಪಡಬೇಕು. ಆದರೆ ಅದು ಕಾವೇರಿ ತಂತ್ರಾಂಶ ಮೂಲಕ ತಾನೇ ತಾನಾಗಿ ಇ-ಸ್ವತ್ತು ಇಲ್ಲವೇ
ಇ-ಆಸ್ತಿ ದಾಖಲೆಗಳ ಜೊತೆಗೆ ಸಂಯೋಜನೆಯಾಗಬೇಕು. ಆದರೆ, ಸಬ್ ರಿಜಿಸ್ಟ್ರಾರ್ ಕಚೇರಿಯ ಕಾವೇರಿ ತಂತ್ರಾಂಶದ
ಜೊತೆಗೆ ನಮ್ಮ ತಂತ್ರಾಂಶಗಳನ್ನು ಜೋಡಿಸಲು ನೀಡಬೇಕಾದ ಕೋಡ್ ಈವರೆಗೂ ಸರಿಯಾಗಿ ಎಲ್ಲ ಪಂಚಾಯತ್,
ನಗರಸಭೆಗಳಿಗೆ ಸಿಕ್ಕಿಲ್ಲ ಎಂಬುದು ಉಡುಪಿಯ ನಗರಸಭೆಯ ಸಿಬ್ಬಂದಿಯೊಬ್ಬರ ಹೇಳಿಕೆ.
ಕಳೆದೆರಡು ತಿಂಗಳುಗಳಲ್ಲಿ
ಈ ಸಂಯೋಜನೆಯ ಅಭಾವದ ಪರಿಣಾಮವಾಗಿ ಸಹಸ್ರಾರು ಕ್ರಯಪತ್ರಗಳು ನೋಂದಣಿಯಾಗದೆ ಸರ್ಕಾರಕ್ಕೆ ಕೋಟಿಗಟ್ಟಲೆ
ರೂಪಾಯಿ ನಷ್ಟವಾಗಿರುವ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ ವರದಿಗಳು ಬಂದಿವೆ.
ಕಾವೇರಿ ತಂತ್ರಾಂಶವು
ಕೇಂದ್ರ ಸರ್ಕಾರದ ಎನ್ ಐಸಿ ರೂಪಿಸಿದ ತಂತ್ರಾಂಶಗಳ ಜೊತೆಗೂ ಹೊಂದಾಣಿಕೆಯಾಗದ ಪರಿಣಾಮವಾಗಿ ಕೇಂದ್ರ
ಸರ್ಕಾರದಿಂದ ಗ್ರಾಮ ಪಂಚಾಯತಿಗಳಿಗೆ ಬರಬೇಕಾದ ಅನುದಾನ ಕೂಡಾ ಕೂಡಾ ರಾಜ್ಯಕ್ಕೆ ಬಂದಿಲ್ಲ ಎಂದು ಪಂಚಾಯತ್
ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಕೆಲ ಸಮಯದ ಹಿಂದೆ ಹೇಳಿದ್ದರು.
ಅಂದರೆ ರಾಜ್ಯ ಸರ್ಕಾರ
ಜಾರಿಗೆ ತಂದಿರುವ ತಂತ್ರಾಂಶಗಳು ರಾಜ್ಯದಲ್ಲೇ ಬಿಬಿಎಂಪಿ, ನಗರಸಭೆ, ಪಂಚಾಯತಿಗಳ ಜೊತೆಷ್ಟೇ ಅಲ್ಲ,
ಕೇಂದ್ರ ಸರ್ಕಾರದ ತಂತ್ರಾಂಶಗಳ ಜೊತೆಗೂ ಸಮರ್ಪಕವಾಗಿ ಹೊಂದಾಣಿಕೆ ಅಥವಾ ಸಂಯೋಜನೆ ಆಗುತ್ತಿಲ್ಲ ಎಂದಾಯಿತು.
ಇದರಿಂದಾಗಿಯೇ ಇ-ಖಾತೆ ನೀಡಲು ಸಮಸ್ಯೆಯಾಗುತ್ತಿದೆ, ಪರಿಣಾಮವಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ
ಆಸ್ತಿ ವಿಕ್ರಯ, ಖರೀದಿ ಕ್ರಯಪತ್ರಗಳ ನೋಂದಣಿ ಆಗುತ್ತಿಲ್ಲ ಎಂದಾಯಿತು.
ಆದರೆ ಇದೇ ವೇಳೆಯಲ್ಲಿ
ಇನ್ನೊಂದು ವಿದ್ಯಮಾನವೂ ಇದರ ಜೊತೆಗೆ ತಳಕು ಹಾಕಿಕೊಂಡಂತೆ ಕಾಣುತ್ತಿದೆ. ವರ್ಷದ ಹಿಂದೆ ನಕಲಿ ದಾಖಲೆಗಳ
ನೋಂದಣಿಗೆ ತಡೆ ಹಾಕಲು ರಾಜ್ಯ ಸರ್ಕಾರವು ನೋಂದಣಿ ಕಾಯ್ದೆಗೆ ಮಹತ್ವದ ತಿದ್ದುಪಡಿಯೊಂದನ್ನು ಮಾಡಿ
ಕಾಯ್ದೆ ರೂಪಿಸಿತ್ತು. ಈ ಕಾಯ್ದೆಗೆ ರಾಷ್ಟ್ರಪತಿಯವರು ಇತ್ತೀಚೆಗೆ ತಮ್ಮ ಅನುಮೋದನೆ ನೀಡಿದ್ದರು.
ಈ ಅನುಮೋದನೆ ಬಳಿಕ ಅದನ್ನು ರಾಜ್ಯಪತ್ರದಲ್ಲೂ ಪ್ರಕಟಿಸಲಾಗಿದ್ದು ಅದೀಗ ಕಾನೂನಾಗಿ ಜಾರಿಗೊಂಡಿದೆ.
ಈ ಕಾನೂನನ್ನು ವಿರೋಧಿಸಿ
ಸಬ್ ರಿಜಿಸ್ಟ್ರಾರ್ ಗಳು ರಾಜ್ಯವಾಪಿ ಮುಷ್ಕರ ಆರಂಭಿಸಿದ್ದರು. ಈ ಮುಷ್ಕರದ ಸ್ಥಿತಿ ಏನಾಗಿದೆ ಎಂಬುದು
ಆ ನಂತರ ಪತ್ರಿಕೆಗಳಲ್ಲಿ ವರದಿ ಬಂದಿಲ್ಲ. ಈ ಮುಷ್ಕರ ಕೂಡಾ ಕ್ರಯಪತ್ರಗಳ ನೋಂದಣಿ ಸ್ಥಗಿತದ ಹಿಂದೆ
ಕೆಲಸ ಮಾಡಿರಬಹುದೇ ಎಂಬ ಅನುಮಾನವೂ ಇದೆ.
ಅಂತೂ ಇಂತೂ ಕುಂತಿ
ಮಕ್ಕಳಿಗೆ ವನವಾಸ ಎಂಬ ಗಾದೆಯಂತೆ, ಕಾರಣ ಏನೇ ಇದ್ದರೂ ಸ್ವಂತ ಮನೆ, ಸ್ವಂತ ನಿವೇಶನ, ಸ್ವಂತ ಆಸ್ತಿ
ಹೊಂದುವ ಹಲವರ ಕನಸಿಗೆ ಮಾತ್ರ ನಿತ್ಯ ತಣ್ಣೀರು ಅಭಿಷೇಕವಾಗುತ್ತಿದೆ.
ಸರ್ಕಾರ ಈ ಸಮಸ್ಯೆ
ಬಗೆ ಹರಿಸಲು ವಿವಿಧ ಇಲಾಖಾ ಅಧಿಕಾರಿಗಳನ್ನು ಒಳಗೊಂಡ
ʼಜಂಟಿ ಕಾರ್ಯಪಡೆʼ ರಚಿಸುವ
ನಿರ್ಧಾರವನ್ನು ಬುಧವಾರ (೧೩.೧೧.೨೦೨೪) ಕೈಗೊಂಡಿದೆ. ವರದಿ ಕೊಡಲು ಕಾರ್ಯಪಡೆಗೆ ಎರಡು ತಿಂಗಳ ಗಡುವು
ನೀಡಲಾಗಿವೆ ಎನ್ನುತ್ತಿವೆ ವರದಿಗಳು.
ಆದರೆ ಜ್ವಲಂತ ಪ್ರಶ್ನೆ
ಇದಲ್ಲ. ಈಗಾಲೇ ಕ್ರಯಪತ್ರಗಳನ್ನು ಸಿದ್ಧ ಪಡಿಸಿಕೊಂಡು, ಬ್ಯಾಂಕುಗಳಿಂದ ಸಾಲ ಮಂಜೂರು ಮಾಡಿಸಿಕೊಂಡು
ಕ್ರಯಪತ್ರಗಳ ನೋಂದಣಿಗಾಗಿ ಕಾದುಕುಳಿತಿರುವ ಸಹಸ್ರಾರು ಮಂದಿ ಈಗ ಏನು ಮಾಡಬೇಕು? ಕಾರ್ಯಪಡೆಯ ವರದಿ
ಬರುವವರೆಗೆ, ಅದನ್ನು ಸರ್ಕಾರ ಪರಿಶೀಲಿಸುವವರೆಗೆ, ಅದನ್ನು ಜಾರಿಗೆ ತರಲು ಕ್ರಮಗಳನ್ನು ಕೈಗೊಳ್ಳುವವರೆಗೆ
ʼಚಾತಕ ಪಕ್ಷಿಗಳಂತೆʼ ಕಾಯುತ್ತಾ
ಕೂರಬೇಕೇ?
ಅಥವಾ ತುರ್ತಾಗಿ ಅಂತಹ
ಮಂದಿಗೆ ನಗರಸಭೆ/ ಪುರಸಭೆಗಳಿಂದ ʼತಾತ್ಕಲಿಕ ಖಾತೆʼ ನೀಡಿ
ನಂತರ ಅದಕ್ಕೆ ಇ-ಖಾತೆ ಸೇರ್ಪಡೆ ಮಾಡಲು ವ್ಯವಸ್ಥೆ ಮಾಡುವ ಮೂಲಕ ಸರ್ಕಾರ ಈ ಸಮಸ್ಯೆ ಬಗೆಹರಿಸುತ್ತದೆಯೇ?
ಈ ಪ್ರಶ್ನೆ/ ಸಮಸ್ಯೆಯನ್ನು
ಬಗೆ ಹರಿಸಬೇಕಾದದ್ದು ಈಗಿನ ತುರ್ತು ಅಗತ್ಯ.
(ಚಿತ್ರಗಳ ಸಮೀಪ
ನೋಟಕ್ಕೆ ಅವುಗಳನ್ನು ಕ್ಲಿಕ್ ಮಾಡಿರಿ. ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ.)
-ನೆತ್ರಕೆರೆ ಉದಯಶಂಕರ