Wednesday, February 27, 2008

In the memory of Chandra Shekhar Azad

Mr. Chandra Shekhar Azad, the first revolutionary of India who fought for the independence of the nation with weapons against oppressive British, committed 'Atma Balidan' on this day of 27 February 1931. He declared himself as Azad means 'Free' and remained free until his death.

ನಾನು 'ಆಜಾದ್': ಹೀಗೆ ಆತ ಘೋಷಿಸಿದ್ದ...!

ಹದಿನೈದನೆಯ ವಯಸ್ಸಿನಲ್ಲಿ ಪೊಲೀಸರಿಗೆ ಸೆರೆಸಿಕ್ಕಿದ ಹೊತ್ತಿನಲ್ಲಿ ತನ್ನನ್ನು ತಾನು 'ಆಜಾದ್' ಎಂಬುದಾಗಿ ಘೋಷಿಸಿಕೊಂಡ ಚಂದ್ರಶೇಖರ ಮುಂದೆಂದೂ ಬ್ರಿಟಿಷರ ಕೈವಶವಾಗಲೇ ಇಲ್ಲ. ಕ್ರಾಂತಿಕಾರಿ ಹೋರಾಟದ ದಾರಿಯಲ್ಲಿ ತನ್ನ ಗೆಳೆಯರೊಂದಿಗೆ ಭಾರತಮಾತೆಯ ಬಂಧಮುಕ್ತಿಗಾಗಿ ಶಸ್ತ್ರ ಹಿಡಿದು ಸಾಗಿದ. ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾದ!

ನೆತ್ರಕೆರೆ ಉದಯಶಂಕರ

ಆಗ ಆ ಬಾಲಕನಿಗೆ ಕೇವಲ ಹದಿನೈದು ವರ್ಷ. ಪೊಲೀಸರು ಬಂಧಿಸಿ ಮ್ಯಾಜಿಸ್ಟ್ರೇಟರ ಎದುರು ನಿಲ್ಲಿಸಿದ್ದರು.

ಮ್ಯಾಜಿಸ್ಟ್ರೇಟರು ಕೇಳಿದರು: ನಿನ್ನ ಹೆಸರೇನು?

ಆ ಬಾಲಕ ಉತ್ತರಿಸಿದ: ಆಜಾದ್. ಉರ್ದುವಿನಲ್ಲಿ ಆಜಾದ್ ಎಂದರೆ 'ಸ್ವತಂತ್ರ' ಎಂದು ಅರ್ಥ.

ಮ್ಯಾಜಿಸ್ಟ್ರೇಟರು ಮತ್ತೆ ಮತ್ತೆ ಪ್ರಶ್ನಿಸಿದಾಗಲೂ ಆ ಬಾಲಕನಿಂದ ಪುನಃ ಪುನಃ ಮಾರ್ದನಿಸಿದ ಉತ್ತರ ಅದೇ ' ಮೈ ಆಜಾದ್ ಹೂಂ!'

ಈ ಉತ್ತರ ಕೊಟ್ಟದ್ದಕ್ಕೆ ಸಿಟ್ಟಿಗೆದ್ದ ಮ್ಯಾಜಿಸ್ಟ್ರೇಟರು ಆ ಪುಟ್ಟ ಬಾಲಕನಿಗೆ ಕೊಟ್ಟ ಶಿಕ್ಷೆ 16 ಛಡಿ ಏಟುಗಳು!

ಸೆರೆಮನೆಯೊಳಗೆ ಆತನಿಗೆ ಒಂದೊಂದು ಛಡಿ ಏಟು ಬೀಳುವಾಗಲೂ ಆತನಿಂದ ಹೊರಹೊಮ್ಮುತ್ತಿದ್ದ ಘೋಷಣೆ: ಭಾರತ ಮಾತಾ ಕೀ ಜಯ್ ಮತ್ತು ಮಹಾತ್ಮ ಗಾಂಧಿ ಕೀ ಜಯ್!

ಅಂದು ತನ್ನನ್ನು 'ಆಜಾದ್' ಎಂಬುದಾಗಿ ಘೋಷಿಸಿಕೊಂಡ ಆತ ತನ್ನ ಅಂತಿಮ ಕ್ಷಣದವರೆಗೂ ಸ್ವತಂತ್ರನಾಗಿಯೇ ಉಳಿದ. ಒಂದು ಹಂತದಲ್ಲಿ ಪೊಲೀಸರ ಬಂಧನಕ್ಕೆ ಒಳಗಾಗುವ ಸಂದರ್ಭ ಬಂದಾಗ, ತನ್ನ ಜೊತೆಗಿದ್ದವರನ್ನೆಲ್ಲ ಪಾರು ಮಾಡಿ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಾಹುತಿ ಮಾಡಿಕೊಂಡ!

ನೆನಪಿಡಬೇಕು. ಈ ಬಾಲಕ ಇಷ್ಟೆಲ್ಲ ಮಾಡಿದ್ದು: ಭಯೋತ್ಪಾದನೆಗಾಗಿ ಅಲ್ಲ, ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ.ಈತ ಮಾತೆಯ ಬಂಧಮುಕ್ತಿಗಾಗಿ ತನ್ನನ್ನು ತಾನು ಬಲಿದಾನ ಮಾಡಿಕೊಂಡ ಪವಿತ್ರ ದಿನ ಇಂದು. ಫೆಬ್ರುವರಿ 27.

ಈ ವ್ಯಕ್ತಿಯೇ ಚಂದ್ರಶೇಖರ ಆಜಾದ್!

ಭಾರತದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಆರಂಭವಾದಾಗ ಶ್ರೀಸಾಮಾನ್ಯನೊಬ್ಬ ಅವರೊಂದಿಗೆ ಹೋರಾಡಲು ಬಂದೂಕು ಕೈಗೆತ್ತಿಕೊಂಡು, ಗೆಳೆಯರ ಬಳಗ ಕಟ್ಟಿಕೊಂಡು ಹಲವಾರು ಸಂಘಟನೆಗಳನ್ನೂ ಹುಟ್ಟುಹಾಕಿ ಕ್ರಾಂತಿಕಾರಿ ಹೋರಾಟಕ್ಕೆ ನಾಂದಿ ಹಾಡಿದ ಮೊತ್ತ ಮೊದಲನೆಯ ವ್ಯಕ್ತಿ.

ಮಧ್ಯ ಪ್ರದೇಶದ ಜಬುವಾ ಜಿಲ್ಲೆಯ ಭುವ್ರಾದಲ್ಲಿ ಪಂಡಿತ ಸೀತಾರಾಮ ತಿವಾರಿ ಮತ್ತು ಜಗರಾಣಿ ದೇವಿ ಅವರ ಪುತ್ರನಾಗಿ 1906ರ ಜುಲೈ 26ರಂದು ಜನಿಸಿದ ಚಂದ್ರಶೇಖರ ಕಟ್ಟಾ ಬ್ರಾಹ್ಮಣ, ಹನುಮಂತನ ಮಹಾಭಕ್ತ. ಪಂಡಿತಜಿ ಎಂದೇ ಹೆಸರಾಗಿದ್ದ ಚಂದ್ರಶೇಖರ, ಕ್ರಾಂತಿಕಾರಿಗಳಾಗಿ ಖ್ಯಾತರಾದ ಭಗತ್ ಸಿಂಗ್, ಸುಖ್ ದೇವ್, ರಾಜಗುರು, ಬಟುಕೇಶ್ವರದತ್, ರಾಮ ಪ್ರಸಾದ ಬಿಸ್ಮಿಲ್, ಅಸ್ಫಾಖ್ಉಲ್ಲಾ ಖಾನ್ ಇವರನ್ನೆಲ್ಲ ರೂಪಿಸಿದ ಗುರು.

ಕಟ್ಟಾ ಬ್ರಾಹ್ಮಣನಾಗಿದ್ದ ಆಜಾದ್ ಇತರಿಗಾಗಿ ಹೋರಾಡಬೇಕಾದ್ದು ತನ್ನ ಧರ್ಮ ಎಂಬುದಾಗಿ ನಂಬಿ ಅದಕ್ಕಾಗಿ ಬಾಳಿ ಬದುಕಿದ ಮಹಾನ್ ವ್ಯಕ್ತಿ.

1919ರಲ್ಲಿ ಪಂಜಾಬಿನ ಜಲಿಯನ್ ವಾಲಾ ಬಾಗಿನಲ್ಲಿ ಬ್ರಿಟಿಷರು ಶಸ್ತ್ರರಹಿತರಾಗಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಗುಂಡಿನ ಮಳೆಗರೆದು ಮಾರಣಹೋಮ ನಡೆಸಿದ ಘಟನೆ ಚಂದ್ರಶೇಖರನ ರಕ್ತ ಕುದಿಸಿತು. ಮಹಾತ್ಮಾ ಗಾಂಧೀಜಿ ಅಸಹಕಾರ ಚಳವಳಿಯ ಹಾದಿಗೆ ಇಳಿದರೆ, ಚಂದ್ರಶೇಖರ ಆಜಾದ್ ಬ್ರಿಟಿಷರ ವಿರುದ್ಧ ಶಸ್ತ್ರ ಕೈಗೆತ್ತಿಕೊಳ್ಳುವ ಸಂಕಲ್ಪ ಮಾಡಿದ. ಹೀಗೆ ಕೈಗೆತ್ತಿಕೊಂಡ ಶಸ್ತ್ರವನ್ನು ಕೊನೆಯ ಕ್ಷಣದವರೆಗೂ ಚಂದ್ರಶೇಖರ ಬಿಡಲೇ ಇಲ್ಲ.

1926ರಲ್ಲಿ ನಡೆದ ಕಾಕೋರಿ ರೈಲು ದರೋಡೆ, ಅದೇ ವರ್ಷ ವೈಸ್ರಾಯ್ ತೆರಳುತ್ತಿದ್ದ ರೈಲುಗಾಡಿ ಸ್ಫೋಟ ಯತ್ನ, ಬ್ರಿಟಿಷ್ ಪೊಲೀಸರ ಹಲ್ಲೆಯ ಪರಿಣಾಮವಾಗಿ ಮೃತರಾದ ಲಾಲಾ ಲಜಪತರಾಯ್ ಅವರ ಅವರ ಸಾವಿನ ಸೇಡು ತೀರಿಸಲು 1928ರಲ್ಲಿ ಲಾಹೋರಿನಲ್ಲಿ ಸ್ಯಾಂಡರ್ಸ್ ಮೇಲೆ ಗುಂಡು ಹಾರಿಸಿದ ಘಟನೆ ಇವೆಲ್ಲದರಲ್ಲೂ ಚಂದ್ರಶೇಖರ್ ಕೈವಾಡವಿತ್ತು. ಬ್ರಿಟಿಷರ ವಿರುದ್ಧ ಹೋರಾಟಕ್ಕಾಗಿ ಹಿಂದುಸ್ಥಾನ್ ರಿಪಬ್ಲಿಕನ್ ಅಸೋಸಿಯೇಶನ್ ಹುಟ್ಟು ಹಾಕಿದ ಆಜಾದ್, ನೌಜವಾನ್ ಭಾರತ್ ಸಭಾ, ಕಿಸಾನ್ ಪಾರ್ಟಿಗಳಲ್ಲೂ ಸಕ್ರಿಯನಾಗಿದ್ದ.

ಹದಿನೈದನೆಯ ವಯಸ್ಸಿನಲ್ಲಿ ಪೊಲೀಸರಿಗೆ ಸೆರೆಸಿಕ್ಕಿದ ಹೊತ್ತಿನಲ್ಲಿ ತನ್ನನ್ನು ತಾನು 'ಆಜಾದ್' ಎಂಬುದಾಗಿ ಘೋಷಿಸಿಕೊಂಡ ಚಂದ್ರಶೇಖರ ಮುಂದೆಂದೂ ಬ್ರಿಟಿಷರ ಕೈವಶವಾಗಲೇ ಇಲ್ಲ. ಕ್ರಾಂತಿಕಾರಿ ಹೋರಾಟದ ದಾರಿಯಲ್ಲಿ ತನ್ನ ಗೆಳೆಯರೊಂದಿಗೆ ಭಾರತಮಾತೆಯ ಬಂಧಮುಕ್ತಿಗಾಗಿ ಶಸ್ತ್ರ ಹಿಡಿದು ಸಾಗಿದ. ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾದ!

1931ರ ಫೆಬ್ರುವರಿ 27. ಆಜಾದ್ ಪಾಲಿನ ಕೆಟ್ಟ ದಿನ. ಜೀವಂತವಾಗಿಯಾದರೂ ಸರಿ, ಮೃತದೇಹದ ರೂಪದಲ್ಲಾದರೂ ಸರಿ ಚಂದ್ರಶೇಖರನನ್ನು ಸೆರೆ ಹಿಡಿಯಲೇ ಬೇಕೆಂದು ಬಯಸಿದ್ದ ಬ್ರಿಟಿಷರ ಪಾಲಿಗೆ ಸುದಿನ. ತನ್ನ ಇಬ್ಬರು ಕ್ರಾಂತಿಕಾರಿ ಗೆಳೆಯರ ಜೊತೆಗೆ ಉತ್ತರ ಪ್ರದೇಶದ ಅಲಹಾಬಾದಿನ ಅಲ್ಫ್ರೆಡ್ ಪಾರ್ಕಿನಲ್ಲಿ ಚಂದ್ರಶೇಖರ ಆಜಾದ್ ಇರುವ ವಿಚಾರ ಬ್ರಿಟಿಷ್ ಪೊಲೀಸರಿಗೆ ಗೊತ್ತಾಯಿತು. ಜೊತೆಗೇ ಇದ್ದ ಮಿತ್ರದ್ರೋಹಿಯೊಬ್ಬ ಬ್ರಿಟಿಷರಿಗೆ ಆಜಾದ್ ಇದ್ದ ತಾಣದ ಸುಳಿವನ್ನು ಬ್ರಿಟಿಷರಿಗೆ ನೀಡಿದ್ದ.

ಪಾರ್ಕಿಗೆ ಮುತ್ತಿಗೆ ಹಾಕಿದ ಪೊಲೀಸರು ಶರಣಾಗತರಾಗುವಂತೆ ಆಜಾದ್ ಮತ್ತು ಗೆಳೆಯರಿಗೆ ಆಜ್ಞಾಪಿಸಿದರು. ಆದರೆ ಚಂದ್ರಶೇಖರ ಜಗ್ಗಲಿಲ್ಲ. ಬ್ರಿಟಿಷರ ವಿರುದ್ಧ ಹೋರಾಡುತ್ತಾ ಇಬ್ಬರು ಮಿತ್ರರನ್ನು ಪಾರು ಮಾಡಿ ಬ್ರಿಟಿಷರಿಗೆ ಸಿಗದಂತೆ ತಪ್ಪಿಸಿದ. ಕೊನೆಯವರೆಗೂ ಬ್ರಿಟಿಷರ ವಿರುದ್ಧ ತಾನೊಬ್ಬನೇ ಧೀರೋಧಾತ್ತ ಹೋರಾಟ ನಡೆಸಿದ. ಇನ್ನೇನು ಕಟ್ಟ ಕಡೆಯ ಗುಂಡು ಉಳಿದಿದೆ ಎಂದು ಖಚಿತವಾದಾಗ ತನಗೆ ತಾನೇ ಗುಂಡು ಹಾರಿಸಿಕೊಂಡ.

ತನ್ನ ಹೆಸರು 'ಆಜಾದ್' ಎಂಬುದಾಗಿ ಘೋಷಿಸಿ ಬ್ರಿಟಿಷರ ಎದೆ ಗುಂಡಿಗೆ ನಡುಗಿಸಿದ್ದ ಚಂದ್ರಶೇಖರ ಕಡೆಗೂ ಬ್ರಿಟಿಷರಿಗೆ ಸೆರೆ ಸಿಕ್ಕದೆ ಸ್ವತಂತ್ರನಾಗಿಯೇ ಸಾವನ್ನಪ್ಪುವ ಮೂಲಕ ತನ್ನ ಹೆಸರು, ಘೋಷಣೆಯನ್ನು ಅಮರವಾಗಿಸಿದ.

ಇಂತಹ ಮಹಾನ್ ಹೋರಾಟಗಾರನ ಬಲಿದಾನದ ಮಹಾ ಪವಿತ್ರ ದಿನ ಇಂದು. ಭಯೋತ್ಪಾದನೆಯ ಭೀಕರ ಕರಿನೆರಳಿನಲ್ಲಿ ನಲುಗುತ್ತಿರುವ ಭಾರತೀಯರು ಇಂತಹ ಅಮರ ಕ್ರಾಂತಿಕಾರಿಗಳನ್ನು ಕ್ಷಣ ಹೊತ್ತಾದರೂ ಸ್ಮರಿಸಿ, ಅವರಿಂದ ಸ್ವಾತಂತ್ರ್ಯ ರಕ್ಷಣೆಯ ಕಾರ್ಯಕ್ಕೆ ಪ್ರೇರಣೆ ಪಡೆದುಕೊಳ್ಳಬೇಕಾದ ಸುದಿನ.

ಅಂತಹ ಸ್ಮರಣೀಯ ಕಾರ್ಯಕ್ಕೆ ಕಟಿಬದ್ಧರಾಗೋಣವೇ?

(Picture cour'tesy: www.answers.com)

1 comment:

Anonymous said...

ಚೆನ್ನಾಗಿ ಬರೆದಿದ್ದೀರಿ

ಬ್ಲಾಗ್ ಚೆನ್ನಾಗಿದೆ

Advertisement