A Farmers Convention organized by Sri Ramachandra pura Math at Goloka in Kaggalipura of Dinnepalya, Bangalore neither requested the Government to provide subsidy nor to waive loans. It appealed to support the farmers to re-introduce conventional cultivation system based on cows of Indian Breed. It firmly expressed the confidence that Cow based Agriculture is the lone alternative to protect farmers from suicides.
ಗೋಲೋಕದಲ್ಲಿ ರೈತ ಸಮಾವೇಶ
ಆತ್ಮಹತ್ಯೆ ವಿರುದ್ಧ ಹೋರಾಟಕ್ಕೆ ಅವರು
ಗೋವಿನ ನೆರವು ಕೇಳಿದರು..!
ಈ ಸಮಾವೇಶ ಬೇಡಿಕೆಗಳ ಉದ್ದುದ್ದ ಪಟ್ಟಿಯನ್ನು ಸರ್ಕಾರದ ಮುಂದೆ ಇಡಲಿಲ್ಲ. ರಸಗೊಬ್ಬರದ ಏರುತ್ತಿರುವ ಬೆಲೆಗಳನ್ನು ಇಳಿಸಿ ಎಂದು ಕೂಗು ಹಾಕಲಿಲ್ಲ. ಸಾಲ ಮನ್ನಾ ಮಾಡಿ ಎಂದು ಗೋಳಿಡಲಿಲ್ಲ, ಕೃಷಿಗೆ ಸಬ್ಸಿಡಿ ಕೊಡಿ ಎಂದು ಮನವಿ ಮಾಡಲೂ ಇಲ್ಲ. ರೈತ ಸಮಾವೇಶ ಸರ್ಕಾರಗಳಿಗೆ ಮಾಡಿದ್ದು ಒಂದೇ ಒಂದು ಮನವಿ: ಗೋವು ಆಧಾರಿತ ಕೃಷಿ ಕೈಗೆತ್ತಿಕೊಳ್ಳಲು ರೈತರಿಗೆ ಸಂಪೂರ್ಣ ಬೆಂಬಲವಾಗಿ ನಿಲ್ಲಿ. ಅಷ್ಟು ಸಾಕು. ನಾವು ಸ್ವಾವಲಂಬಿಗಳಾಗಬಲ್ಲೆವು.
ನೆತ್ರಕೆರೆ ಉದಯಶಂಕರ
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ಕೊಟ್ಟದ್ದಾಯಿತು. ರಾಜಕೀಯ ಧುರೀಣರು ರೈತರ ಸಾಲ ಮನ್ನಾ ಘೋಷಣೆಯ ಕೂಗು ಹಾಕಿದ್ದಾಯಿತು. ಕೇಂದ್ರ ಸರ್ಕಾರ ಕೋಟಿಗಟ್ಟಲೆ ರೂಪಾಯಿಗಳ ಪ್ಯಾಕೇಜ್ ಪ್ರಕಟಿಸಿದ್ದೂ ಆಯಿತು.
ಆದರೆ ರೈತರ ಆತ್ಮಹತ್ಯೆಗಳ ಸರಣಿ ಮಾತ್ರ ನಿಲ್ಲಲಿಲ್ಲ.. ಜಾಗತೀಕರಣ ಆರಂಭವಾದ ಬಳಿಕ ಹೆಚ್ಚು ಕಡಿಮೆ ಒಂದು ದಶಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ದುರಂತ ವರ್ತಮಾನವನ್ನು ಪತ್ರಿಕೆಗಳಲ್ಲಿ ಓದಿದ್ದು, ಟಿವಿಯಲ್ಲಿ ನೋಡಿದ್ದಾಯಿತು. ಅದನ್ನು ತಡೆಯಲೆಂದು ಏನೆಲ್ಲ ಪ್ರಯತ್ನ ಮಾಡಿದ ಬಳಿಕವೂ ಈಗ ಬಂದಿರುವ ವರದಿಗಳ ಪ್ರಕಾರ ರಾಷ್ಟ್ರದಲ್ಲಿ ಕಳೆದ ವರ್ಷದ ಕೇವಲ ಆರು ತಿಂಗಳ ಅವಧಿಯಲ್ಲಿ ಮತ್ತೆ 800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರದ ರೈತರ ಸಲುವಾಗಿಯೇ ಭಾರೀ ಪ್ಯಾಕೇಜನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದರೂ ಮತ್ತ್ತೆ 607 ರೈತರನ್ನು ಆ ರಾಜ್ಯ ಕಳೆದುಕೊಂಡಿದೆ. ಆಂಧ್ರ ಪ್ರದೇಶದಲ್ಲಿ 114, ಕರ್ನಾಟಕದಲ್ಲಿ 73. ಕೇರಳದಲ್ಲಿ 13 ರೈತರು ಆತ್ಮಹತ್ಯೆಗೆ ಶರಣಾದರು ಎಂದು ಹೇಳುತ್ತದೆ ವರದಿ.
ಇದು ಕೇಂದ್ರ ಸರ್ಕಾರಕ್ಕೆ ಲಭಿಸಿದ ಅಧಿಕೃತ ಅಂಕಿಅಂಶಗಳು ಮಾತ್ರ. ಪಂಜಾಬ್, ಹರಿಯಾಣ, ದೆಹಲಿ, ಗುಜರಾತ್, ರಾಜಸ್ಥಾನ, ಗೋವಾ ಮತ್ತಿತರ ರಾಜ್ಯಗಳು ಈ ಸಂಬಂಧದಲ್ಲಿ ಸಮರ್ಪಕವಾದ ಮಾಹಿತಿಯನ್ನೇ ಒದಗಿಸಿಲ್ಲ.
ಅಂದರೆ ಸರ್ಕಾರಗಳು ತಿಪ್ಪರಲಾಗ ಹಾಕಿದರೂ ರೈತರ ಆತ್ಮಹತ್ಯೆಯ ಪ್ರವೃತ್ತಿಗೆ ಕಡಿವಾಣ ಬಿದ್ದಿಲ್ಲ, ರೈತರಲ್ಲಿ ಭವಿಷ್ಯದ ಬಗೆಗಿನ ಭೀತಿ ದೂರವಾಗಿಲ್ಲ ಎಂದೇ ಅರ್ಥ. ಎಲ್ಲಿಯವರೆಗೆ ರೈತರಲ್ಲಿ ಕೃಷಿ ಮಾಡುವುದರಿಂದ ನನ್ನ ಭವಿಷ್ಯಕ್ಕೆ ಅಪಾಯವಿಲ್ಲ ಎಂಬ ಭಾವನೆ ಮೂಡುವುದಿಲ್ಲವೋ ಅಲ್ಲಿಯವರೆಗೆ ಈ ಆತ್ಮಹತ್ಯೆಯ ಪ್ರವೃತ್ತಿ ತಗ್ಗಲು ಸಾಧ್ಯವೇ ಇಲ್ಲ ಎಂಬುದೇ ಇದರಿಂದ ಕಲಿಯಬೇಕಾದ ಪಾಠ.
ಹಾಗಾದರೆ ಆತ್ಮಹತ್ಯೆಯ ಈ ಸರಣಿಯಿಂದ ರೈತರನ್ನು ಪಾರು ಮಾಡುವುದಾದರೂ ಹೇಗೆ?
ಇಂತಹ ಗಂಭೀರ ಚಿಂತನೆ ಬೆಂಗಳೂರಿನ ದಿಣ್ಣೆಪಾಳ್ಯದ ಕಗ್ಗಲಿಪುರದಲ್ಲಿರುವ ಗೋಲೋಕದಲ್ಲಿ ಇತ್ತೀಚೆಗೆ, ಫೆಬ್ರುವರಿ 17ರಂದು ನಡೆಯಿತು. ಆದರೆ ಸರ್ಕಾರದ ವತಿಯಿಂದ ಅಲ್ಲ, ನಶಿಸುತ್ತಿರುವ ಭಾರತೀಯ ಗೋ ಸಂತತಿಯ ಉಳಿವಿಗಾಗಿ ತಮ್ಮ ಜೀವಮಾನವನ್ನೇ ಮುಡುಪಾಗಿ ಇಟ್ಟಿರುವ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಪ್ರೇರಣೆಯಿಂದ ನಡೆದ ರೈತ ಸಮಾವೇಶ- ಸಮರ್ಪಣ ಕಾರ್ಯಕ್ರಮದ ಸಂದರ್ಭದಲ್ಲಿ.
ಸ್ವಾವಲಂಬಿಯಾದ ಪಾರಂಪರಿಕ ಗೋ ಆಧಾರಿತ ಸುಸ್ಥಿರ ಕೃಷಿಗೆ ಮರಳುವುದೊಂದೇ ಆತ್ಮಹತ್ಯೆಗಳ ವಿಷವರ್ತುಲದಿಂದ ಪಾರಾಗಲು ರೈತರಿಗೆ ಉಳಿದಿರುವ ಏಕೈಕ ಮಾರ್ಗ ಎಂಬುದು ಈ ರೈತ ಸಮಾವೇಶದಲ್ಲಿ ಮೂಡಿ ಬಂದ ಅಭಿಪ್ರಾಯ.
ಈ ಸಮಾವೇಶ ಬೇಡಿಕೆಗಳ ಉದ್ದುದ್ದ ಪಟ್ಟಿಯನ್ನು ಸರ್ಕಾರದ ಮುಂದೆ ಇಡಲಿಲ್ಲ. ರಸಗೊಬ್ಬರದ ಏರುತ್ತಿರುವ ಬೆಲೆಗಳನ್ನು ಇಳಿಸಿ ಎಂದು ಕೂಗು ಹಾಕಲಿಲ್ಲ. ಸಾಲ ಮನ್ನಾ ಮಾಡಿ ಎಂದು ಗೋಳಿಡಲಿಲ್ಲ, ಕೃಷಿಗೆ ಸಬ್ಸಿಡಿ ಕೊಡಿ ಎಂದು ಮನವಿ ಮಾಡಲೂ ಇಲ್ಲ.
ರೈತ ಸಮಾವೇಶ ಸರ್ಕಾರಗಳಿಗೆ ಮಾಡಿದ್ದು ಒಂದೇ ಒಂದು ಮನವಿ: ಗೋವು ಆಧಾರಿತ ಕೃಷಿ ಕೈಗೆತ್ತಿಕೊಳ್ಳಲು ರೈತರಿಗೆ ಸಂಪೂರ್ಣ ಬೆಂಬಲವಾಗಿ ನಿಲ್ಲಿ. ಅಷ್ಟು ಸಾಕು. ನಾವು ಸ್ವಾವಲಂಬಿಗಳಾಗಬಲ್ಲೆವು. ರಾಕೆಟ್, ವಿಮಾನ, ಕಂಪ್ಯೂಟರ್ ಇತ್ಯಾದಿ ಏನೇ ಸಂಶೋಧನೆ ಮಾಡದಿದ್ದರೂ ಜನ ಬದುಕಬಹುದು, ಆದರೆ ರೈತ ಆಹಾರ ಬೆಳೆಯದಿದ್ದರೆ ವಿಜ್ಞಾನಿಗಳೂ ಸೇರಿ ಸಮಾಜದಲ್ಲಿ ಯಾರೂ ಬದುಕಲು ಸಾಧ್ಯವಿಲ್ಲ.
ರಾಜ್ಯ ಪ್ರಶಸ್ತಿ ವಿಜೇತ ಗೋವು ಆಧಾರಿತ ಕೃಷಿಕ ರಮೇಶ ರಾಜು ಅವರು ದೇಶೀ ಗೋವುಗಳ ತಳಿಗಳನ್ನು ಆಧರಿಸಿ ಕೃಷಿಯನ್ನು ಹೇಗೆ ಸುಸ್ಥಿರಗೊಳಿಸಬಹುದು ಎಂಬುದನ್ನು ತಮ್ಮ ಅನುಭವದ ಆಧಾರದಲ್ಲೇ ವಿವರಿಸಿದ್ದು ವಿಶೇಷ. ರಾಜು ಅವರು ತಮ್ಮ 20 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿರುವುದು 10 ಎಕರೆಯಲ್ಲಿ ಮಾತ್ರ. ಅದಕ್ಕೆ ಅವರು ಬಳಸುತ್ತಿರುವ ನೀರು ಉಳಿದ ರೈತರು ಒಂದು ಎಕರೆಗೆ ಬಳಸುವಷ್ಟು ನೀರು ಅಷ್ಟೆ!. ಉತ್ಪಾದನೆ ಮಾತ್ರ ಇತರ ರೈತರು 10 ಎಕರೆಯಲ್ಲಿ ಗಳಿಸುವುದಕ್ಕಿಂತ ಹೆಚ್ಚು. ವೆಚ್ಚ ತುಂಬಾ ಕಡಿಮೆ. ಅವರು ಹೇಳುವಂತೆ ಇದು ಶೂನ್ಯ ಬಂಡವಾಳದ ಕೃಷಿಯೇ ಸರಿ.
ಆರಂಭದಲ್ಲಿ ರಮೇಶರಾಜು ಮತ್ತು ಅವರ ಜೊತೆಗೆ ಈ ಕೃಷಿ ಮಾಡುತ್ತಿದ್ದವರ ಸಂಖ್ಯೆ ಮಂಡ್ಯ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರ. ಈಗ ಅವರ ದಾರಿಯಲ್ಲಿ ಸಾಗುತ್ತಿರುವ ಗೋವು ಆಧಾರಿತ ಕೃಷಿಕರ ದಂಡಿನ ಬಲ ಅಂದಾಜು 500ಕ್ಕೆ ಏರಿದೆ.
"ನಾವು ಅನುಸರಿಸುತ್ತಿರುವುದು ಸುಭಾಷ ಪಾಳೇಕರ್ ಅವರು ಬೋಧಿಸುತ್ತಾ ಬಂದಿರುವ ಜೀವಾಮೃತ ಕೃಷಿ ಪದ್ಧತಿ. 200 ಲೀಟರ್ ಡ್ರಂನಲ್ಲಿ 10 ಕಿಲೋ ಸಗಣಿ, 10 ಲೀಟರ್ ಗೋಮೂತ್ರ, ಎರಡು ಕಿಲೋ ಯಾವುದೇ ದ್ವಿದಳ ಧಾನ್ಯದ ಹುಡಿ, ಎರಡು ಕಿಲೋ ಕಪ್ಪು ಬೆಲ್ಲ ಮತ್ತು ಒಂದು ಮುಷ್ಠಿಯಷ್ಟು ನಮ್ಮ ಜಮೀನಿನ ಮಣ್ಣು ಹಾಗೂ ನೀರು. ದಿನಕ್ಕೆರಡು ಸಲ ಅದನ್ನು ಕದಡಿ, ಒಂದೆರಡು ದಿನದ ಬಳಿಕ ಏಳು ದಿನಗಳ ಒಳಗೆ ಅದನ್ನು ಬಳಸುತ್ತೇವೆ. ಇಷ್ಟು ಜೀವಾಮೃತ ಒಂದು ಎಕರೆ ಪ್ರದೇಶಕ್ಕೆ ಒಂದು ತಿಂಗಳಿಗೆ ಸಾಕು. ನಮ್ಮ ಭೂಮಿಗೆ ನಾವು ಹಾಕುವ ಗೊಬ್ಬರ ಇಷ್ಟೇ".
ಕಣ್ಣಿಗೆ ಕಾಣಿಸುವುದು ಇಷ್ಟೇ. ಆದರೆ ಇದರ ಪ್ರಭಾವ ಅಸಾಮಾನ್ಯ. ನಾಟಿ ಹಸುವಿನ ಮಹಾನತೆಯ ಅರಿವಾಗುವುದೂ ಇದರಿಂದಲೇ ಎನ್ನುತ್ತಾರೆ ರಮೇಶ ರಾಜು.
ನಮ್ಮ ವಿಜ್ಞಾನಿಗಳ ಪ್ರಕಾರ ಮಣ್ಣು ನಿರ್ಜೀವ. ಆದರೆ ವಾಸ್ತವವಾಗಿ ಮಣ್ಣು ನಿರ್ಜೀವ ಅಲ್ಲ, ಸಜೀವ. ಒಂದು ಗ್ರಾಮ್ ಮಣ್ಣಿನಲ್ಲಿ 100 ಕೋಟಿ ಸೂಕ್ಷ್ಮಜೀವಿಗಳಿವೆ. ಈ ಸೂಕ್ಷ್ಮಜೀವಿಗಳಿಗೆ ಪೂರಕವಾಗಿ ಇರುವುದು ನಾಟಿ ಹಸುವಿನ ಸಗಣಿ. ದೇಶೀ ಗೋವಿನ ಕರುಳು ಸೂಕ್ಷ್ಮಜೀವಿಗಳ ಸಾಗರ. ಈ ನಾಟಿ ಹಸುವಿನ ಒಂದು ಗ್ರಾಮ್ ಸಗಣಿಯಲ್ಲಿ 300ರಿಂದ 500 ಕೋಟಿ ಸೂಕ್ಷ್ಮ ಜೀವಿಗಳಿವೆ.
ಜೀವಾಮೃತ ಮಾಡುವಾಗ ಈ ಮಣ್ಣು ಮತ್ತು ಸಗಣಿಯ ಈ ಸೂಕ್ಷ್ಮಜೀವಿಗಳು ಪ್ರತಿ ಇಪ್ಪತ್ತು ನಿಮಿಷಕ್ಕೆ ದ್ವಿಗುಣಗೊಳ್ಳುತ್ತಾ ಬೆಳೆಯುತ್ತವೆ. ಹೀಗಾಗಿ ವಾರದೊಳಗೆ ಜೀವಾಮೃತದಲ್ಲಿ ಸೂಕ್ಷ್ಮಜೀವಿಗಳ ಮಹಾಸಾಗರವೇ ನಿರ್ಮಾಣವಾಗುತ್ತದೆ. ಈ ಸೂಕ್ಷ್ಮಜೀವಿಗಳ ಸಾಗರ ಭೂಮಿಗೆ ಇಳಿದು ಭೂಮಿ ಫಲವತ್ತಾಗುತ್ತದೆ.
ಆದರೆ ಇಂದು ಆಧುನಿಕ ಕೃಷಿಯ ಹೆಸರಿನಲ್ಲಿ ನಾವು ಈ ಗೋವು ಆಧಾರಿತ ಪಾರಂಪರಿಕ ಕೃಷಿ ಕೈಬಿಟ್ಟಿದ್ದೇವೆ. ರೈತರು ನಿರಂತರ ನಷ್ಟದಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಲು ಇದೇ ಮುಖ್ಯ ಕಾರಣ ಎಂಬುದು ಸಮಾವೇಶದ ವಿಶ್ಲೇಷಣೆ.
ಅದು ಹೇಗೆ?
ಗೋ ಆಧಾರಿತ ಕೃಷಿ ಮಾಡುತ್ತಿದ್ದ ನಮ್ಮ ಪೂರ್ವಜರು ಉಳುಮೆಗೆ ಎತ್ತುಗಳನ್ನು ಬಳಸುತ್ತಿದ್ದರು. ಬೀಜಗಳನ್ನು ಸ್ವತಃ ತಯಾರಿಸಿಕೊಳ್ಳುತ್ತಿದ್ದರು. ಗೊಬ್ಬರಕ್ಕೆ ಎತ್ತುಗಳು, ದನಗಳು ಹಾಕುವ ಸಗಣೆ, ಗೋಮೂತ್ರವನ್ನೇ ಬಳಸುತ್ತಿದ್ದರು. ಕೀಟಗಳ ಕಾಟಕ್ಕೆ ಗೋಮೂತ್ರ, ಬೇವು, ಮಜ್ಜಿಗೆ ಇತ್ಯಾದಿ ಮನೆಗಳಲ್ಲೇ ಲಭ್ಯವಿದ್ದ ವಸ್ತುಗಳನ್ನು ಬಳಸಿ ಕೀಟನಾಶಕ ತಯಾರಿಸಿಕೊಳ್ಳುತ್ತಿದ್ದರು.
ಹೀಗಾಗಿ ಕೃಷಿ ಸಂಪೂರ್ಣವಾಗಿ ಸುಸ್ಥಿರವೂ ಸ್ವಾವಲಂಬಿಯೂ, ಬಂಡವಾಳ ರಹಿತವೂ ಆಗಿತ್ತು. ಸಾಲ ಮಾಡುವ ಆವಶ್ಯಕತೆ ರೈತರಿಗೆ ಬರುತ್ತಿರಲಿಲ್ಲ. ಹಾಗಾಗಿ ಉತ್ತಮ ಬೆಲೆ ಬಂದಾಗ ಬೆಳೆದುದನ್ನು ಮಾರುತ್ತಿದ್ದರು. ಸಮಾಜದ ಜನ ರೈತರ ಸುತ್ತ ಸುತ್ತುವ ಸ್ಥಿತಿ ಇತ್ತು.
ಸ್ವಾತಂತ್ರ್ಯದ ಬಳಿಕ ಪ್ರಗತಿಪರ ಕೃಷಿ, ಹಸಿರು ಕ್ರಾಂತಿ, ಆಧುನಿಕ ಕೃಷಿಯ ಹೆಸರಿನಲ್ಲಿ ಉಳುಮೆಗೆ ಎತ್ತುಗಳ ಬದಲು ದುಬಾರಿ ಟ್ರ್ಯಾಕ್ಟರುಗಳನ್ನು ತರಲಾಯಿತು. ಅವುಗಳ ಖರೀದಿಗಾಗಿ ರೈತ ಮೊದಲ ಸಾಲ ಮಾಡಬೇಕಾಯಿತು. ನಂತರ ಅದರ ನಿರ್ವಹಣೆಗಾಗಿ ಪೆಟ್ರೋಲ್, ಡೀಸೆಲ್ ಇತ್ಯಾದಿ ವೆಚ್ಚ. ಅದಕ್ಕಾಗಿ ರೈತ ಹೊರಗಿನವರಿಗೆ ಹಣ ಕೊಡಬೇಕಾಗಿ ಬಂತು. ಆದರೆ ಎತ್ತುಗಳನ್ನು ಬಳಸುವಾಗ ಅವುಗಳಿಗೆ ಬೇಕಾದ ಹುಲ್ಲು ರೈತರಿಗೆ ಅವರ ಹೊಲಗಳಲ್ಲೇ ಲಭ್ಯವಿತ್ತು.
ಎತ್ತುಗಳು ನಿತ್ಯ ತಿಂದ ಆಹಾರಕ್ಕೆ ಪ್ರತಿಯಾಗಿ ಸಗಣಿ, ಗಂಜಲ ನೀಡುತ್ತಿದ್ದವು. ಇದರಿಂದ ಬೇಕಾದ ಗೊಬ್ಬರ ಮನೆಯಲ್ಲೇ ಉಚಿತವಾಗಿ ತಯಾರಾಗುತ್ತಿತ್ತು. ಸರಕು ಸಾಗಣೆಗೂ ಈ ಎತ್ತುಗಳೇ ಆಧಾರವಾಗಿದ್ದವು. ಟ್ರ್ಯಾಕ್ಟರುಗಳು ಸಗಣಿ, ಗಂಜಲ ನೀಡುವುದಿಲ್ಲ. ಹೀಗಾಗಿ ಗೊಬ್ಬರಕ್ಕೆ ಹೊರಗಿನ ಕಂಪೆನಿಗಳನ್ನೇ ಅವಲಂಬಿಸಬೇಕಾಯಿತು. ಬಣ್ಣ ಬಣ್ಣದ ಚೀಲಗಳಲ್ಲಿ ಕಂಪೆನಿಗಳು ಬಿಡುಗಡೆ ಮಾಡಿದ ರಾಸಾಯನಿಕ ಗೊಬ್ಬರಗಳು ದುಬಾರಿ, ಪುಕ್ಕಟೆ ಅಲ್ಲ. ಹೀಗಾಗಿ ಅವುಗಳ ಖರೀದಿಗಾಗಿ ರೈತ ಮತ್ತೆ ಸಾಲದ ಮೊರೆ ಹೋಗಬೇಕಾಯಿತು.
ನಾಟಿ ಬೀಜಗಳು ಹೆಚ್ಚು ಫಲ ನೀಡುವುದಿಲ್ಲ, ಹೈಬ್ರಿಡ್ ಬೀಜ ಬಳಸಿ ಎಂದು ರೈತರಿಗೆ ಬೋಧಿಸಲಾಯಿತು. ಬಹುಬೆಳೆ ಪದ್ಧತಿಯ ಬದಲು ಲಾಭದಾಯಕವಾದ ಏಕಬೆಳೆ ಬೆಳೆಯಲು ಪ್ರಚೋದಿಸಲಾಯಿತು. ರೈತರು ಮನೆಗಳಲ್ಲಿ ಉಚಿತವಾಗಿ ಬೀಜ ತಯಾರಿ ಮಾಡುವುದು ಬಿಟ್ಟು ಹೈಬ್ರಿಡ್ ಬೀಜಗಳಿಗಾಗಿ ಕಂಪೆನಿಗಳ ಮೊರೆ ಹೊಕ್ಕರು. ಇಲ್ಲಿಗೆ ರೈತರ ಮೂರನೇ ಪರಾವಲಂಬನೆ- ಮೂರನೇ ಸಾಲ ಅನಿವಾರ್ಯವಾಯಿತು.
ಗೋವಿನ ಅವಲಂಬನೆ ಕಡಿಮೆಯಾದ್ದರಿಂದ ಮನೆಗಳಲ್ಲಿ ಸ್ವತಃ ಉಚಿತವಾಗಿ ತಯಾರಿಸಲಾಗುತ್ತಿದ್ದ ಗೋಮೂತ್ರ, ಮಜ್ಜಿಗೆಯ ಕೀಟನಾಶಕ ಕಾಣೆಯಾಯಿತು. ಕೀಟಗಳ ನಿವಾರಣೆಗಾಗಿ ಮತ್ತೆ ಕಂಪೆನಿಗಳೇ ಬಿಡುಗಡೆ ಮಾಡುವ ಕೀಟನಾಶಕಗಳಿಗೆ ರೈತರು ಮೊರೆ ಹೋಗಬೇಕಾಯಿತು. ಅಲ್ಲಿಗೆ ಅವರ ಮೇಲೆ ನಾಲ್ಕನೇ ಸಾಲದ ಹೊರೆ ಬಿತ್ತು.
ಕ್ಷೀರಕ್ರಾಂತಿಯ ಹೆಸರಿನಲ್ಲಿ ದೇಶೀ ಗೋವುಗಳ ಸ್ಥಳಕ್ಕೆ ವಿದೇಶೀ ಹಸುಗಳು ಬಂದವು. ಅವುಗಳ ಗಂಡು ಕರುಗಳು ಮೊದಲೇ ನಿತ್ರಾಣ. ಜೊತೆಗೆ ಉಳುಮೆಗೆ ಬೇಕಿಲ್ಲವಾದ್ದರಿಂದ ಅವುಗಳನ್ನು ಕಸಾಯಿಖಾನೆಗೆ ಮಾರುವ ಪರಿಪಾಠ ಶುರುವಾಯಿತು. ಹೀಗೆ ರೈತರ ಮನೆಯಿಂದ ಗೋ ಸಂತತಿ ಅವಸಾನದತ್ತ ಸಾಗಿತು.
ಇವೆಲ್ಲದರ ಪರಿಣಾಮ ರೈತರು ಸ್ವಾವಲಂಬನೆ ಬಿಟ್ಟು ಸಂಪೂರ್ಣವಾಗಿ ಕಂಪೆನಿಗಳ ಅಡಿಯಾಳುಗಳಾದರು. ಟ್ರ್ಯಾಕ್ಟರ್, ಅವುಗಳಿಗೆ ಇಂಧನ, ಬೀಜ, ಗೊಬ್ಬರ ಹೀಗೆ ಎಲ್ಲಕ್ಕೂ ಪರಾವಲಂಬನೆ ಮಾಡಬೇಕಾಗಿ ಬಂದ ಕಾರಣ ಎಲ್ಲಕ್ಕೂ ಸಾಲ ಮಾಡುವುದು ಅನಿವಾರ್ಯವಾಯಿತು. ಸ್ವಾವಲಂಬಿಯಾಗಿದ್ದ ರೈತ ಸಾಲದ ಕೂಪದಲ್ಲಿ ಬಿದ್ದ, ಬಡ್ಡಿ ನೀಡಲು ಹೆಣಗಾಡಿದ. ಸಾಲಗಾರರು ಹಿಂದೆ ಬಿದ್ದಾಗ ಬೆಳೆದದ್ದನ್ನು ಅವಸರದಲ್ಲಿ ಮಾರಲು ಹೊರಟ. ಬೆಳೆಗೆ ಸೂಕ್ತ ಬೆಲೆ ಸಿಗದೇ ಹೋದಾಗ ಅದನ್ನು ವಾಪಸ್ ತರಲೂ ಕಾಸಿಲ್ಲದೆ ರಸ್ತೆಯಲ್ಲಿ ಸುರಿದ. ಚಿಂತಿತನಾಗಿ ಮನೆಗೆ ಬಂದ ಅವನಿಗೆ ಸಮಸ್ಯೆಗಳಿಂದ ಮುಕ್ತನಾಗಲು ಕಂಡ ದಾರಿ ಅದೇ ಕಂಪೆನಿಗಳು ಮಾರಿದ್ದ ಕೀಟನಾಶಕಗಳು. ಕುಡಿದು ಆತ್ಮಹತ್ಯೆ ಮಾಡಿಕೊಂಡ.
ಕಂಪೆನಿಗಳು ನೀಡುವ ರಸಗೊಬ್ಬರ, ಕೀಟನಾಶಕಗಳೆಲ್ಲ ಒಂದು ರೀತಿಯ ಪ್ರಚೋದಕಗಳು ಇದ್ದಂತೆ ಮಾತ್ರ. ಹಿರಿಯರು ನೂರಾರು ವರ್ಷಗಳಿಂದ ಸಗಣಿ, ಗೋಮೂತ್ರ ಬಳಸಿ ಕೃಷಿ ಮಾಡಿದ್ದರಿಂದ ಫಲವತ್ತಾಗಿದ್ದ ಭೂಮಿ, ಈ ಪ್ರಚೋದಕಗಳ ಪರಿಣಾಮವಾಗಿ ಬಂಪರ್ ಬೆಳೆ ನೀಡಿತು. ಆದರೆ ಭೂಮಿಯಲ್ಲಿ ಸ್ವಯಂ ಸತ್ವ ಇಲ್ಲದೆ ಇದ್ದರೆ ಕೇವಲ ಪ್ರಚೋದಕಗಳು ಏನು ಮಾಡಿಯಾವು? ಕಂಪೆನಿಗಳು ನೀಡಿದ ಕೀಟನಾಶಕಗಳಿಂದ ಭೂಮಿಯಲ್ಲಿದ್ದ ಸೂಕ್ಷ್ಮಜೀವಿಗಳು ಅಳಿದು ಭೂಮಿ ಬರಡಾಯಿತು. ಹೀಗಾಗಿ ಈಗ ಎಷ್ಟು ರಸಗೊಬ್ಬರ ಸುರಿದರೂ ಉತ್ಪನ್ನ ಸೊನ್ನೆ.
ಇಂತಹ ಪರಿಸ್ಥಿತಿಯಲ್ಲಿ ಯಾವ ಸರ್ಕಾರಗಳೂ ರೈತನನ್ನು ಪಾರು ಮಾಡಲು ಸಾಧ್ಯವೇ ಇಲ್ಲ. ರೈತರನ್ನು ಮತ್ತೆ ಗೋ ಆಧಾರಿತ ಕೃಷಿಯತ್ತ ತೊಡಗಿಸುವುದೊಂದೇ ದಾರಿ. ಸರ್ಕಾರಗಳೆಲ್ಲವೂ ಇದಕ್ಕೆ ಬೆಂಬಲವಾಗಿ ನಿಲ್ಲಬೇಕು- ಇದು ರಮೇಶರಾಜು ಕಳಕಳಿಯ ಮನವಿ.
ದೇಶೀ ತಳಿಯ ಗೋವುಗಳೇ ಏಕೆ? ವಿದೇಶೀ ತಳಿಗಳ ಗೊಬ್ಬರ ಆಗದೇ ಎಂಬ ಪ್ರಶ್ನೆ ಸಮಾವೇಶದಲ್ಲಿ ಮೂಡಿಬಂತು. ವಿದೇಶೀ ತಳಿಗಳ ಸಗಣಿಯಲ್ಲಿ ಸೂಕ್ಷ್ಮ ಜೀವಿಗಳ ಸಂಖ್ಯೆ ಬಹಳ ಕಡಿಮೆ. ಅವುಗಳ ಗರ್ಭಧಾರಣೆ, ಸಾಕಣೆಗೆ ಕೂಡಾ ಅನೈಸರ್ಗಿಕ ಕ್ರಮ ಅನುಸರಿಸುವುದರಿಂದ, ಅವುಗಳ ಸಗಣಿಯಲ್ಲಿ ಇರುವ ಸೂಕ್ಷ್ಮಜೀವಿಗಳು ಕೂಡಾ ಸಹಜ ಸ್ವಭಾವ ಕಳೆದುಕೊಂಡು ಪ್ರತಿಕೂಲ ಪರಿಣಾಮವನ್ನೇ ಬೀರುತ್ತವೆ ಎಂಬುದು ರಮೇಶರಾಜು ವಿವರಣೆ.
ಸಮಾವೇಶದಲ್ಲಿ ಪಾಲ್ಗೊಂಡ ಮಾಜಿ ಸಚಿವ ಆರ್. ಅಶೋಕ ಅವರೂ ದೇಶೀ ಗೋ ತಳಿಗಳ ಸಂರಕ್ಷಣೆಗೆ ಒತ್ತು ನೀಡಿದರು. ಹಿಂದೆ ಗೋವುಗಳ ಸಂಖ್ಯೆಯ ಆಧಾರದಲ್ಲಿ ವ್ಯಕ್ತಿಗಳ ಪ್ರತಿಷ್ಠೆ ಲೆಕ್ಕ ಹಾಕಲಾಗುತ್ತಿತ್ತು. ಈಗ ಗೋವು ಇದ್ದರೆ ಅಂತಹ ಮನೆಗೆ ಹೆಣ್ಣು ಕೊಡುವುದಿಲ್ಲ ಎಂದು ಹೇಳುವ ಪರಿಸ್ಥಿತಿ ಬಂದಿದೆ ಎಂಬುದು ಅವರ ವಿಷಾದ.
ನಮಗೆ ರಸಗೊಬ್ಬರದ ರುಚಿ ಹತ್ತಿಸಿದ ವಿದೇಶಗಳು ಎಚ್ಚೆತ್ತುಕೊಂಡಿವೆ. ಸಾವಯವ ಮಳಿಗೆಗಳನ್ನೇ ತೆರೆದು ಪ್ರೋತ್ಸಾಹ ನೀಡುತ್ತಿವೆ ಎನ್ನುವ ಅಶೋಕ ಅವರಂತಹವರು ರಾಜಕಾರಣಿಗಳ ವಲಯದಲ್ಲಿ ಈ ವಿಚಾರವಾಗಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯ ಇದೆ.
ಇಲ್ಲಿ ಇನ್ನೊಂದು ವಿಶೇಷವೂ ಇದೆ. ದೇಶೀ ಗೋವುಗಳ ಸಂರಕ್ಷಣೆಗಾಗಿ ಸ್ಥಾಪಿಸಲಾದ ಈ ಗೋಲೋಕದ ನಿರ್ಮಾಣಕ್ಕೆ ಕೋಲ್ಕತ್ತದ ಉದ್ಯಮಿಗಳ ದಂಡು ನೆರವು ನೀಡಿದೆ. ಇಲ್ಲಿ ನಡೆದ ಸಮರ್ಪಣ ಕಾರ್ಯಕ್ರಮದಲ್ಲಿ ಸ್ವತಃ ಈ ಉದ್ಯಮಿಗಳ ದಂಡು ಕೂಡಾ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ನೀಡಿತ್ತು. ಈ ಉದ್ಯಮಿಗಳ ನೆರವಿನಿಂದಾಗಿಯೇ ಈ ಗೋಲೋಕದಲ್ಲಿ ಈಗ 26 ದೇಶೀ ತಳಿಗಳ 300ಕ್ಕೂ ಹೆಚ್ಚು ಹಸುಗಳನ್ನು 4 ಗೋಶಾಲೆಗಳಲ್ಲಿ ಸಂರಕ್ಷಿಸಲಾಗುತ್ತಿದೆ.
ಗೋಲೋಕದ ರೈತ ಸಮಾವೇಶವು ನೀಡಿದ ಗೋ ಆಧಾರಿತ ಕೃಷಿಯತ್ತ ಸಾಗಬೇಕೆಂಬ ಮಹತ್ವದ ಸಂದೇಶವು ಸರ್ಕಾರಗಳ ಕಣ್ಣು ತೆರೆಸುವುದೇ?
No comments:
Post a Comment