Tuesday, April 1, 2008

Farmer suicides: U.N and P. Sainath says the same..!

Do you know? P. Sainath, Magsaysay Award winner rural journalist of India is saying the same what United Nations says regarding situation of Indian Farmers. Both of them stresses to take emergent action to stop farmers suicides and give importance to agriculture to achieve sustained economic growth of the country. But tragedy is that it is not getting importance in the media!

ಸಾಯಿನಾಥ್ ಹೇಳಿದ್ದನ್ನೇ ವಿಶ್ವಸಂಸ್ಥೆಯೂ

ಹೇಳುತ್ತಿದೆ ಗೊತ್ತಾ?

ದೇಶದ ಜನಸಂಖ್ಯೆಯ ಶೇಕಡಾ 70ರಷ್ಟು ಇರುವ ರೈತರ ಈ ಪರಿ ಆತ್ಮಹತ್ಯೆ ಕೊನೆಗೊಳ್ಳಬೇಕು. ಸುಸ್ಥಿರ ಕೃಷಿಗೆ ಭಾರತ ಗಂಭೀರ ಗಮನ ಕೊಡಬೇಕು. ಆಗ ಮಾತ್ರ ಅದರ ಪ್ರಗತಿ ಸಾಧ್ಯ ಎನ್ನುತ್ತದೆ ವಿಶ್ವಸಂಸ್ಥೆ. ಭಾರತದ ಗ್ರಾಮೀಣ ಪತ್ರಕರ್ತ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಪಿ. ಸಾಯಿನಾಥ್ ಕೂಡಾ ಅದನ್ನೇ ಹೇಳುತ್ತಾರೆ. ಮಾಧ್ಯಮಗಳಲ್ಲಿ ಇವುಗಳಿಗೆ ಮಹತ್ವ ಏಕೆ ಲಭಿಸುತ್ತಿಲ್ಲ?

ನೆತ್ರಕೆರೆ ಉದಯಶಂಕರ

ಚಿತ್ರ: ಜಿ.ಎನ್. ಮೋಹನ್

ನಾನು ಚಿಕ್ಕವನಾಗಿದ್ದಾಗ ನಡೆದ ಘಟನೆ ಅದು. ಕೇಂದ್ರ ಸಚಿವರೊಬ್ಬರು ಭಾಷಣ ಮಾಡುತ್ತಾ ಪತ್ರಿಕೆಗಳು 'ಸ್ಥಳ ಉಳಿಸಬೇಕು. ಅನಗತ್ಯ ಸುದ್ದಿಗಳನ್ನೆಲ್ಲ ದೊಡ್ಡದಾಗಿ ಪ್ರಕಟಿಸಬಾರದು' ಎಂದು ಕರೆ ನೀಡಿದ್ದರು.

ಮರುದಿನ ಬೆಳಗ್ಗೆ ಅವರ ಈ ಭಾಷಣದ ಸುದ್ದಿಯನ್ನು ಒಂದು ಪತ್ರಿಕೆ ಪ್ರಕಟಿಸಿತು. ಆದರೆ ಅದನ್ನು ಓದಲು ಭೂತಕನ್ನಡಿ ಹಿಡಿದು ನೋಡಬೇಕಾಗಿತ್ತು..! ಸಣ್ಣ ಬಾಕ್ಸ್ ಒಂದರಲ್ಲಿ ಮಾಮೂಲಿಯಾಗಿ ಬಳಸುವ ಅಕ್ಷರಗಳಿಗಿಂತ ಅತ್ಯಂತ ಕಿರಿದಾದ ಅಕ್ಷರಗಳಲ್ಲಿ ಅವರ ಭಾಷಣದ ವರದಿ ಪ್ರಕಟವಾಗಿತ್ತು. 'ಪತ್ರಿಕೆಗಳಲ್ಲಿ ಸ್ಥಳ ಉಳಿತಾಯಕ್ಕೆ ಸಚಿವರ ಕರೆ' ಎಂಬ ಶೀರ್ಷಿಕೆ ಬೇರೆ..!

ಸಚಿವರ ಕರೆಗೆ ಪತ್ರಿಕೆ ಸ್ಪಂದಿಸಿತ್ತು..!

ಪತ್ರಿಕೆಗಳು ಯಾವುದೇ ಸುದ್ದಿಯನ್ನು ಹೇಗೆ ಬೇಕಾದರೂ ಜನರ ಮುಂದೆ ಇಡಬಲ್ಲವು ಎಂಬುದಕ್ಕೆ ಇದೊಂದು ಪುಟ್ಟ ಉದಾಹರಣೆ ಅಷ್ಟೆ.

ಇಲ್ಲಿ ಈಗ ಪ್ರಸ್ತಾಪಗೊಳ್ಳುತ್ತಿರುವುದು ಅಂತಹ ಇನ್ನೊಂದು ಘಟನೆ. ಇತ್ತೀಚೆಗೆ ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಬೆಂಗಳೂರಿಗೆ ಬಂದಿದ್ದರು. 'ಜನಶಕ್ತಿ' ಪತ್ರಿಕೆಯ ಅಂತರ್ಜಾಲ ಆವೃತ್ತಿಯ ಉದ್ಘಾಟನೆಗಾಗಿ. ಈ ಸಂದರ್ಭದಲ್ಲಿ ಅವರೊಂದು ಮುಖ್ಯ ವಿಷಯದ ಬಗ್ಗೆ ಪ್ರಸ್ತಾಪಿಸಿದರು. ಮುಖ್ಯ ವಿಷಯ ಎನ್ನುವ ಬದಲು ಮಾಧ್ಯಮಗಳಿಗೆ ಸಂಬಂಧಿಸಿದಂತೆ ಅದು ಅವರ ಮುಖ್ಯ ಆರೋಪವಾಗಿತ್ತು ಎಂದರೂ ತಪ್ಪೇನಿಲ್ಲ.

ಮರುದಿನ ಬೆಳಗ್ಗೆ ಪತ್ರಿಕೆಗಳ ಮೇಲೆ ಕಣ್ಣಾಡಿಸಿದರೆ ಅವರ ಆರೋಪ ಸತ್ಯವಾಗಿತ್ತು. ಬಹಳಷ್ಟು ಪತ್ರಿಕೆಗಳಲ್ಲಿ ಅವರು ಮಾತನಾಡಿದ್ದ ಆ ಕಾರ್ಯಕ್ರಮದ ವರದಿ, ಅವರು ಮಾಡಿದ್ದ ವಿಷಯದ ಪ್ರಸ್ತಾಪ ಕೂಡಾ ಬಂದಿರಲಿಲ್ಲ. ಬಂದ ಪತ್ರಿಕೆಗಳಲ್ಲೂ ಬಹಳಷ್ಟು ಕಡೆ ಅದು ಪತ್ರಿಕೋದ್ಯಮದ ಪರಿಭಾಷೆಯಂತೆ 'ಸಮಾಧಿ' (Burried) ಆಗಿ ಬಿಟ್ಟಿತ್ತು!

ಅವರ ಆರೋಪದ ತಿರುಳು ಏನು ಗೊತ್ತೆ? ರೈತರನ್ನು ಸಮೂಹ ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು. ದೇಶದಲ್ಲಿ ಶೇಕಡಾ 70ರಷ್ಟು ಮಂದಿ ರೈತರಾಗಿದ್ದರೂ ಅವರ ಸುಖದುಃಖಗಳ ಬಗ್ಗೆ ಬರುವ ವರದಿಗಳು ಬೆರಳೆಣಿಕೆಯಷ್ಟು ಮಾತ್ರ. ಆದರೆ ಉಳಿದ ಶೇಕಡಾ 30ರಷ್ಟು ಮಂದಿಗೆ ಸಂಬಂಧಿಸಿದ ಸುದ್ದಿಗಳು ಪತ್ರಿಕೆ, ಟಿವಿಗಳ ತುಂಬೆಲ್ಲಾ ರಂಗು ರಂಗಾಗಿ ಬರುತ್ತವೆ ಎಂಬುದೇ ಅವರ ದುಗುಡವಾಗಿತ್ತು.

'ವಾಸ್ತವ ಬದುಕು ಹಾಗೂ ಸಮೂಹ ಮಾಧ್ಯಮದ ನಡುವಿನ ಸಂಬಂಧ ಕಡಿದುಹೋಗುತ್ತಿದೆ. ಗಾಂಧೀಜಿ ಹಾಗೂ ಅಂಬೇಡ್ಕರ್ ಈ ದೇಶ ಕಂಡ ಮಹಾನ್ ಪತ್ರಕರ್ತರು. ಆದರೆ ಅವರಲ್ಲಿದ್ದ ಬದ್ಧತೆಗೂ ಈಗಿನ ಪತ್ರಕರ್ತರ ದೃಷ್ಟಿಕೋನಕ್ಕೂ ಅಜಗಜಾಂತರವಿದೆ. ಸನ್ನಿವೇಶಗಳಿಗೆ ಮಾಧ್ಯಮಗಳು ಸ್ಪಂದಿಸುತ್ತಿರುವ ರೀತಿ ಸಂಪೂರ್ಣ ಭಿನ್ನವಾಗಿದೆ. ಈ ದೇಶದಲ್ಲಿ ಶೇಕಡಾ 70ರಷ್ಟು ಇರುವ ರೈತರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಆದರೆ ಯಾವುದಾದರೂ ಪತ್ರಿಕೆಯಲ್ಲಿ ಕೃಷಿ ಕ್ಷೇತ್ರದ ಆಗುಹೋಗುಗಳ ಕುರಿತು ವರದಿ ಮಾಡಲು ಪ್ರತ್ಯೇಕ ವರದಿಗಾರರು ಇದ್ದಾರೆಯೇ?'- ಇದು ಸಾಯಿನಾಥ್ ಪ್ರಶ್ನೆ.

ಈ ಪ್ರಶ್ನೆಯನ್ನು ಬೇರೆ ಯಾರೋ ಕೇಳಿದ್ದರೆ ಆ ವಿಚಾರ ಬೇರೆ. ಆದರೆ ಸಾಯಿನಾಥ್ ಕೇಳುತ್ತಾರೆ ಎಂದರೆ ಅದಕ್ಕೆ ಇರುವ ಪ್ರಾಮುಖ್ಯವೇ ಬೇರೆ.

ಏಕೆಂದರೆ ಸಾಯಿನಾಥ್ ಕೇವಲ ಒಬ್ಬ ಸಾಮಾನ್ಯ ಪತ್ರಕರ್ತ ಅಲ್ಲ. ಈ ದೇಶದ ಗ್ರಾಮೀಣ ಕ್ಷೇತ್ರದ, ಅದರಲ್ಲೂ ಕೃಷಿ ಕ್ಷೇತ್ರದ ಬಗ್ಗೆ ಆಳವಾದ ಜ್ಞಾನ ಪಡೆದು, ಅಲ್ಲಿನ ಪರಿಸ್ಥಿತಿ ಸುಧಾರಣೆಗೆ ಸ್ವತಃ ಬದ್ಧರಾದ ಪತ್ರಕರ್ತ.

ಅಭಿವೃದ್ಧಿ ಪತ್ರಿಕೋದ್ಯಮಕ್ಕಾಗಿ 2007ರ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿಯನ್ನು ಗೆದ್ದುಕೊಂಡರೂ ತಮ್ಮನ್ನು ತಾವು 'ಅಭಿವೃದ್ಧಿ ಪತ್ರಕರ್ತ' ಎಂದು ಹೇಳಿಕೊಳ್ಳಲು ಹಿಂಜರಿಯುವ ಸಾಯಿನಾಥರಿಗೆ ತಮ್ಮನ್ನು 'ಗ್ರಾಮೀಣ ಪತ್ರಕರ್ತ' ಇಲ್ಲವೇ ಕೇವಲ 'ಪತ್ರಕರ್ತ' ಇಲ್ಲವೇ 'ಛಾಯಾಚಿತ್ರ ಪತ್ರಕರ್ತ' ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ವಿಚಾರ.

'ದಿ ಹಿಂದು' ಪತ್ರಿಕೆಯಲ್ಲಿ ಗ್ರಾಮೀಣ ವ್ಯವಹಾರಗಳ ಸಂಪಾದಕರಾದ ಸಾಯಿನಾಥ್ 'ಇಂಡಿಯಾ ಟುಡೆ'ಗೆ ಅಂಕಣಕಾರರೂ ಹೌದು. ಸಾಮಾಜಿಕ ಸಮಸ್ಯೆಗಳು, ಗ್ರಾಮೀಣ ವ್ಯವಹಾರಗಳು, ಬಡತನ ಮತ್ತು ಜಾಗತೀಕರಣದ ಬಳಿಕ ಭಾರತದ ಪರಿಸ್ಥಿತಿ- ಇವೆಲ್ಲ ಅವರ ತಲೆ ತಿಂದ ವಿಷಯಗಳು, ಅವರ ಬರವಣಿಗೆಗಳಿಗೆ ಜೀವ ತುಂಬಿದ್ದು ಕೂಡಾ ಇವೇ ವಿಚಾರಗಳು.

ಅವರ ಬರವಣಿಗೆಗಳು ಅದೆಷ್ಟು ಪ್ರಸಿದ್ಧಿ ಪಡೆದಿದ್ದವು ಎಂದರೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೆನ್ ಅವರೂ ಕೂಡಾ ಸಾಯಿನಾಥ್ ಅವರನ್ನು 'ಬರಗಾಲ ಮತ್ತು ಹಸಿವಿನ ಬಗೆಗಿನ ಜಗತ್ತಿನ ಮಹಾನ್ ತಜ್ಞರಲ್ಲಿ ಒಬ್ಬರು' ಎಂಬುದಾಗಿ ಹೊಗಳಿದ್ದುಂಟು.

ಲಕ್ಷ ಕಿ.ಮೀ ಸುತ್ತಾಟ: ಮೂಲತಃ ಆಂಧ್ರಪ್ರದೇಶದವರಾದ ಸಾಯಿನಾಥ್ ಗ್ರಾಮೀಣ ಭಾರತದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ಸುತ್ತಿದ್ದು ಒಂದೆರಡು ಸ್ಥಳಗಳಿಗಲ್ಲ. ಅತಿ ಬಡತನದಿಂದ ನರಳುತ್ತಿದ್ದ ಐದು ರಾಜ್ಯಗಳ 10 ಜಿಲ್ಲೆಗಳು. ಅವರು ಸುತ್ತಿದ ಒಟ್ಟು ದೂರ ಒಂದು ಲಕ್ಷ ಕಿ.ಮೀ.ಗಳು. ಈ ದೂರವನ್ನು ಕ್ರಮಿಸಲು ಅವರು ಓಡಾಡಿದ್ದು ಐಷಾರಾಮೀ ಕಾರಿನಲ್ಲಿ ಅಲ್ಲ. ಅದಕ್ಕಾಗಿ 16 ರೀತಿಯ ವಿವಿಧ ವಾಹನಗಳನ್ನು ಅವರು ಬಳಸಿದ್ದರು. ಸುಮಾರು 5000 ಕಿ.ಮೀಯಷ್ಟು ದೂರವನ್ನು ಅವರು ಸುತ್ತಾಡಿದ್ದು ಕೇವಲ ಕಾಲ್ನಡಗೆಯಲ್ಲೇ ಎಂದರೆ ತಾವು ನಂಬಿದ್ದ ವಿಚಾರದ ಬಗ್ಗೆ ಅವರಿಗೆ ಇದ್ದ ಬದ್ಧತೆ ಎಷು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

'ಬ್ಲಿಟ್ಜ್' ಪತ್ರಿಕೆಯನ್ನು ಬಿಟ್ಟು 'ಟೈಮ್ಸ್ ಆಫ್ ಇಂಡಿಯಾ' ಫೆಲೋಶಿಪ್ಪಿಗಾಗಿ 18 ತಿಂಗಳುಗಳ ಕಾಲ ಹೀಗೆ ಸುತ್ತುತ್ತಾ ಸಾಯಿನಾಥ್ ಅವರು ಕಳುಹಿಸಿದ 84 ವರದಿಗಳನ್ನು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ಪ್ರಕಟಿಸಿತು ಅಂದರೆ ಗ್ರಾಮೀಣ ಸ್ಥಿತಿಗತಿ ಬಗ್ಗೆ ಅವರು ಅದೆಷ್ಟು ಅಧ್ಯಯನ ಮಾಡಿರಬಹುದು ಎಂದು ಲೆಕ್ಕಾ ಹಾಕಿಕೊಳ್ಳಿ.

ಈ ವರದಿಗಳು ಕ್ರೋಡೀಕರಣಗೊಂಡು 'ಎವರಿಬಡಿ ಲವ್ ಎ ಗುಡ್ ಡ್ರಾಟ್' ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಹೊರಬಂದಾಗ, ಮತ್ತೆ ಮತ್ತೆ ಪುನರ್ ಮುದ್ರಣಗೊಂಡು ಸುಮಾರು ಎರಡು ವರ್ಷಗಳ ಕಾಲ ಅತ್ಯುತ್ತಮ ಕಾದಂಬರಿಯೇತರ ಪುಸ್ತಕಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ ನಂಬರ್ 1 ಸ್ಥಾನದ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದೊಂದು ಒಂದು ಅಪೂರ್ವ ದಾಖಲೆ.

ಪೆಂಗ್ವಿನ್ ಇಂಡಿಯಾದ 'ಸಾರ್ವಕಾಲಿಕ ಬೆಸ್ಟ್ ಸೆಲ್ಲರ್' ಎಂಬ ಕೀರ್ತಿಯೂ ಈ ಗ್ರಂಥಕ್ಕೆ ಲಭಿಸಿತು. ಸರ್ಕಾರೇತರ ಸಂಘಟನೆಗಳ ಕಾರ್ಯಕರ್ತರಿಗೆ ಈ ಪುಸ್ತಕ ಒಂದು ಆಕರ ಗ್ರಂಥವಾಯಿತು.

ಕೆನಡಾದ ಸಾಕ್ಷ್ಯಚಿತ್ರ ನಿರ್ಮಾಪಕ ಜೋ ಮೌಲಿನ್ಸ್ ಅವರು 'ಎ ಟ್ರೈಬ್ ಆಫ್ ಹೀಸ್ ಓನ್' ಹೆಸರಿನಲ್ಲಿ ಸಾಯಿನಾಥ್ ಬಗ್ಗೆ ಚಿತ್ರವನ್ನೂ ನಿರ್ಮಿಸಿದರು. ತಮಿಳುನಾಡು, ಒರಿಸ್ಸಾ, ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಬರನಿರ್ವಹಣಾ ಕಾರ್ಯಕ್ರಮಗಳ ಮೇಲೂ ಸಾಯಿನಾಥ್ ಅವರ ಬರಹಗಳು ಪರಿಣಾಮ ಬೀರಿದವು.

'ಎವರಿಬಡಿ ಲವ್ಸ್ ಎ ಗುಡ್ ಡ್ರಾಟ್' ಪುಸ್ತಕ ಜಗತ್ತಿನಾದ್ಯಂತ ಚರ್ಚೆಯ ವಸ್ತುವೂ ಆಯಿತು. ಭಾರತದ ಗ್ರಾಮೀಣ ಬಡತನ ಬಗ್ಗೆ ಸಾರ್ವಜನಿಕರ ಗಮನ ಸೆಳೆಯಿತು. ಜನ ಜಾಗೃತಿ ಮೂಡಿಸುವಲ್ಲೂ ಸಹಕಾರಿಯಾಯಿತು.

ರೈತರ ಸ್ಥಿತಿ: ವಿಶ್ವಸಂಸ್ಥೆ, ಸಾಯಿನಾಥ್

ಇಬ್ಬರು ಹೇಳುವುದೂ ಅದನ್ನೇ!

ಗ್ರಾಮೀಣ ಬಡವರ, ರೈತರ ಸ್ಥಿತಿಗತಿ ಬಗ್ಗೆ ಇಷ್ಟೊಂದು ಆಳವಾದ ಅಧ್ಯಯನ ಮಾಡಿದ ಇನ್ನೊಬ್ಬ ಪತ್ರಕರ್ತ ಸಿಗುವುದು ಕಷ್ಟ ಎಂಬ ಹಿನ್ನೆಲೆಯಲ್ಲೇ ಇತ್ತೀಚೆಗಿನ ಬೆಂಗಳೂರು ಭೇಟಿ ಕಾಲದಲ್ಲಿ ಮಾಧ್ಯಮಗಳ ಬಗ್ಗೆ ಅವರು ವ್ಯಕ್ತಪಡಿಸಿದ ದುಗುಡವನ್ನು ಅರ್ಥ ಮಾಡಿಕೊಳ್ಳಲು ನಾವು ಯತ್ನಿಸಬೇಕು.

2001-2005ರ ಅವಧಿಯಲ್ಲಿ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡು ಒಟ್ಟು ರೈತರ ಸಂಖ್ಯೆ 86,922 ಎಂದು ವಿಶ್ವಸಂಸ್ಥೆಯ ಏಷ್ಯಾ ಮತ್ತು ಶಾಂತ ಮಹಾಸಾಗರ ವಲಯದ ಆರ್ಥಿಕ ಮತ್ತು ಸಾಮಾಜಿಕ ಕಮೀಷನ್ನಿನ ಸಮೀಕ್ಷಾ ವರದಿ ಹೇಳುತ್ತದೆ.

ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ, ಲಾಭಾಂಶದಲ್ಲಿ ಕಡಿತ, ಹೆಚ್ಚಿದ ಬಡ್ಡಿದರ, ಮಾರುಕಟ್ಟೆಯಲ್ಲಿನ ಏರಿಳಿತ ಇತ್ಯಾದಿ ಕಾರಣದಿಂದ ಸಾಲದ ಸುಳಿಯಲ್ಲಿ ಸಿಗುವ ರೈತರು ಆತ್ಮಹತ್ಯೆಗೆ ಮೊರೆಹೋಗುತ್ತಾರೆ ಎನ್ನುತ್ತದೆ ಈ ವರದಿ.

ಈ ವರದಿಯ ಪ್ರಕಾರ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇಕಡಾ 54ರಷ್ಟು ರೈತರು ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರದವರು.

ಭಾರತ ಆರ್ಥಿಕವಾಗಿ ಸಧೃಡವಾಗಬೇಕು ಎಂದರೆ ಈ ಪ್ರಮಾಣದ ರೈತರ ಆತ್ಮಹತ್ಯೆ ಕೊನೆಗೊಳ್ಳಬೇಕು. ಅದಕ್ಕಾಗಿ ಭಾರತ ಸರ್ಕಾರ ಕೃಷಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೃಷಿ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಂಡರೆ ಭಾರತ ಶೇಕಡಾ 9ರ ದರದ ಸುಸ್ಥಿರ ಬೆಳವಣಿಗೆ ಸಾಧಿಸಲು ಸಾಧ್ಯ ಎನ್ನುತ್ತಾರೆ ವಿಶ್ವಸಂಸ್ಥೆಯ ಏಷ್ಯಾ ಮತ್ತು ಶಾಂತಸಾಗರ ವಲಯದ ಆರ್ಥಿಕ ಮತ್ತು ಸಾಮಾಜಿಕ ಕಮೀಷನ್ನಿನ ಪ್ರಧಾನ ಕಾರ್ಯದರ್ಶಿ ನಿಯೋಲೀನ್ ಹೀಜೆರ್.

ವಿಶ್ವ ಸಂಸ್ಥೆಯ ಆಯೋಗ ಲೆಕ್ಕಕ್ಕೆ ತೆಗೆದುಕೊಂಡದ್ದು 2001-2005ರ ನಡುವಣ ಅವಧಿಯ ಮಾಹಿತಿ ಮಾತ್ರ. ಸಾಯಿನಾಥ್ ಅವರು ಕಳೆದ ಒಂದು ದಶಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಲೆಕ್ಕ ಕೊಡುತ್ತಾರೆ. ಅವರ ಅಂಕಿ ಅಂಶಗಳ ಪ್ರಕಾರ ಕಳೆದ ಒಂದು ದಶಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 1.66 ಲಕ್ಷ.

ಇದಕ್ಕಿಂತಲೂ ಆತಂಕಕಾರಿಯಾದ ಮಾಹಿತಿಯನ್ನು ಸಾಯಿನಾಥ್ ಬಹಿರಂಗ ಪಡಿಸುತ್ತಾರೆ. '2004ರಿಂದ ದೇಶದಲ್ಲಿ ಪ್ರತಿ 30 ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ' ಎಂಬುದೇ ಈ ಮಾಹಿತಿ. ಇದರ ಜೊತೆಗೆ 80 ಲಕ್ಷ ಕೃಷಿಕರು ಕೃಷಿಗೆ ವಿದಾಯ ಹೇಳಿದ್ದಾರೆ ಎಂಬ ಅವರ ಮಾಹಿತಿ ಗಾಯದ ಮೇಲಿನ ಬರೆಯಂತೆ ಚುಚ್ಚಿ ಮನಸ್ಸನ್ನು ಕಲಕುತ್ತದೆ!

ಇಂತಹ ಹಿನ್ನೆಲೆಯಲ್ಲೇ ವಿಶ್ವಸಂಸ್ಥೆ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಭಾರತ ಕೃಷಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳುತ್ತಿರುವುದು. ಆದರೆ ಭಾರತದಲ್ಲಿನ ಪರಿಸ್ಥಿತಿ? .... ಸಂಪೂರ್ಣ ವ್ಯತಿರಿಕ್ತ!

ಹಾಗಾದರೆ ರೈತರು ಏಕೆ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ಎಲ್ಲಿಗೆ ವಲಸೆ ಹೋಗಿದ್ದಾರೆ? ಅವರ ಸ್ಥಿತಿ ಹೇಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ಮಾಡುವ ಮಹತ್ತರ ಕಾರ್ಯವನ್ನು ಮಾಧ್ಯಮಗಳು ಮಾಡಬೇಕಿತ್ತು. ಆದರೆ ಅದು ಆಗುತ್ತಿಲ್ಲ ಎಂಬುದು ಸಾಯಿನಾಥ್ ಅಸಮಾಧಾನ.

ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ (ಜಿಡಿಪಿ) ರೈತರು ಕೊಡುವ ಕಾಣಿಕೆ ಶೇಕಡಾ 53. ಆದರೆ ಶ್ರೀಮಂತರ ಕೊಡುಗೆ ಶೇಕಡಾ 31 ಮಾತ್ರ. ಅದರೂ ಷೇರುಪೇಟೆಯಲ್ಲಿ ಕುಸಿತ ಕಂಡುಬಂದರೆ ಟಿವಿ ಚಾನೆಲ್ಲುಗಳು ತಜ್ಞರನ್ನೆಲ್ಲ ಕರೆದು ಕೂರಿಸಿಕೊಂಡು ಚರ್ಚೆ ನಡೆಸುತ್ತವೆ. ಅದೇ ರಾಷ್ಟ್ರೀಯ ಉತ್ಪನ್ನಕ್ಕೆ ಸಿಂಹಪಾಲು ನೀಡುತ್ತಿರುವ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರೆ ಈ ಬಗ್ಗೆ ಚರ್ಚೆ ನಡೆಯುವುದಿಲ್ಲ.

ಬೆರಳೆಣಿಕೆ ಸಂಖ್ಯೆಯ ಶತಕೋಟಿ ಆಸ್ತಿ ಒಡೆಯರು ಆಗಾಗ ಮಾಧ್ಯಮಗಳಲ್ಲಿ ಸುದ್ದಿಯಲ್ಲಿ ಬರುತ್ತಿರುತ್ತಾರೆ. ಒಂದು ಹೊತ್ತಿನ ಅನ್ನಕ್ಕೆ ಪರದಾಡುವ ಸಾಮಾನ್ಯರ ಬದುಕಿನ ಬಗ್ಗೆ ಮಾತ್ರ ಮಾತನಾಡುವವರು ಯಾರೂ ಇಲ್ಲ.

ಒಂದೆಡೆಯಿಂದ ದೇಶ ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿದೆ. ಕೋಟ್ಯಧಿಪತಿಗಳ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿದೆ. ಇದೇ ವೇಳೆಗೆ ಅಸಮಾನತೆಯೂ ಹೆಚ್ಚುತ್ತಿದೆ. ಶ್ರೀಮಂತರ ಕೈಯಲ್ಲಿ ಸಂಪತ್ತು ಕೇಂದ್ರೀಕೃತವಾಗುತ್ತಿದೆ. ಇನ್ನೊಂದೆಡೆಯಲ್ಲಿ ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಬೆಳೆಯುತ್ತಿರುವ ಈ ಆರ್ಥಿಕ ಅಸಮಾನತೆಯೇ ರಾಷ್ಟ್ರದ ಎಲ್ಲ ಸಮಸ್ಯೆಗಳ ಮೂಲ.

ಬೆರಳೆಣಿಕೆ ಶ್ರೀಮಂತರ ಸಂಪಾದನೆ ಕೋಟಿಗಟ್ಟಲೆ ಆಗಿದ್ದರೆ, 800 ದಶಲಕ್ಷ ಜನರ ದಿನದ ಸಂಪಾದನೆ ಕೇವಲ 20 ರೂಪಾಯಿ. ರೈತ ಕುಟುಂಬಗಳ ತಿಂಗಳ ಆದಾಯ ಕೇವಲ 502 ರೂಪಾಯಿ. ದೇಶದಲ್ಲಿ 200 ದಶಲಕ್ಷ ಮಂದಿಗೆ ವೈದ್ಯಕೀಯ ಸೇವೆಯೇ ಲಭಿಸುತ್ತಿಲ್ಲ.

ಜಾಗತಿಕ ಮಟ್ಟದಲ್ಲಿ ಹಸಿವಿನಿಂದ ನರಳುತ್ತಿರುವವರ ಪಟ್ಟಿಯಲ್ಲಿ ಭಾರತಕ್ಕೆ 94ನೇ ಸ್ಥಾನವಿದೆ.

ಸಾಯಿನಾಥ್ ಅವರು ಗ್ರಾಮೀಣ ಬದುಕಿನ ಬಗ್ಗೆ ಹೀಗೆ ಬಿಚ್ಚುತ್ತಾ ಹೋಗುವ ಆತಂಕಕಾರಿ ಮಾಹಿತಿಯ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತದೆ. ಈ ಯಾವ ಮಾಹಿತಿಯೂ ಬಹುತೇಕ ಮಾಧ್ಯಮಗಳಲ್ಲಿ ಬೆಳಕು ಕಾಣಲಿಲ್ಲ.

ಯುವ ಪತ್ರಕರ್ತರು ಮತ್ತು ಈ ವೃತ್ತಿಗೆ ಪ್ರವೇಶ ಬಯಸುವವರು ಸಾಕಷ್ಟು ಉತ್ತಮ ಪುಸ್ತಕ ಓದಬೇಕು. ಎಲ್ಲವನ್ನೂ ಓದಬೇಕು. ಆದರೆ ಓದಿದ್ದೆಲ್ಲವನ್ನೂ ಸತ್ಯ ಎಂದು ನಂಬಬಾರದು. ಯಾವುದೇ ವಿಚಾರವನ್ನು ಆಳವಾಗಿ ಅಧ್ಯಯನ ಮಾಡಿಕೊಳ್ಳಬೇಕೇ ಹೊರತು, ಅದೇನು ಮಹಾ ಎಂಬ ಸಿನಿಕತನ, ಉಡಾಫೆಯ ಪ್ರವೃತ್ತಿ ಬೆಳೆಸಿಕೊಳ್ಳಬಾರದು ಎನ್ನುತ್ತಾರೆ ಸಾಯಿನಾಥ್.

ಈಗ ಹೇಳಿ: ಸಾಹಿತಿ ಬರಗೂರು ರಾಮಚಂದ್ರಪ್ಪ, ಪತ್ರಕರ್ತರಾದ ಜಿ.ಎನ್. ಮೋಹನ್, ಎಸ್.ವೈ. ಗುರುಶಾಂತ್ ಕೂಡಾ ಹಾಜರಿದ್ದ, ಸಾಯಿನಾಥ್ ವಿಚಾರ ಸ್ಫೋಟದ ಈ ಕಾರ್ಯಕ್ರಮಕ್ಕೆ ಮಾಧ್ಯಮಗಳಲ್ಲಿ ಇನ್ನಷ್ಟು ಮಹತ್ವ ಸಿಕ್ಕಿದ್ದರೆ ಒಳ್ಳೆಯದಿತ್ತು ಎಂದು ಅನ್ನಿಸಿದರೆ ತಪ್ಪಾ?

(ಇಲ್ಲಿರುವ ಸಾಯಿನಾಥ್ ಅವರ ಚಿತ್ರಗಳು ಅವರ ಇತ್ತೀಚಿನ ಬೆಂಗಳೂರು ಭೇಟಿಯದ್ದು. ಕೃಪೆ: ಜಿ.ಎನ್. ಮೋಹನ್ ಅವರ
http://www.flickr.com/photos/gnmohan )

3 comments:

Anonymous said...

Great!!!
Jayakishore Bayadi

shivarampailoor said...

ಸಾಯಿನಾಥ್ ಕಾರ್ಯಕ್ರಮ ಕಾಳಜಿ ಹೊಂದಿರುವ ಪತ್ರಕರ್ತರ ಮೇಲೆ ಒಳ್ಳೆಯ ಪರಿಣಾಮ ಬೀರಿದೆ ಎಂದು ಕೇಳಿದ್ದೇನೆ. ಕಾರ್ಯಕ್ರಮ ಮುಗಿದು ಇಷ್ಟು ದಿನಗಳಾದ ಬಳಿಕವೂ ಅಲ್ಲಲ್ಲಿ ಈ ಬಗ್ಗೆ ಮಾತನಾಡುತ್ತಿದ್ದಾರೆ. ಸಾಯಿನಾಥ್ ಇರುವುದರಿಂದಲೇ ಅನೇಕರಿಗೆ ಧೈರ್ಯ; ಭರವಸೆ.

ಶಿವರಾಂ ಪೈಲೂರು

deadmanoncampus said...

Sainath seems to be another power hungry guy,another Ellsworth Monkton Toohey.This is my blog post on Sainath relating to NREGA.

http://memorymaniac.blogspot.com/2008/06/lets-create-unemployment.html

Advertisement