ಆಹಾರವಸ್ತು ಬೆಲೆ ಏರಿಕೆಗೆ ಭಾರತ ಕಾರಣವಂತೆ..!
ರೈತರ ಆತ್ಮಹತ್ಯೆಗಳಿಗೆ
ಕಾರಣರಾರು ಸ್ವಾಮೀ..?
ಬುಷ್ ಸಾಹೇಬರ ಹೇಳಿಕೆಗೆ ಪ್ರತಿಯಾಗಿ ಖಾರದ ಹೇಳಿಕೆ ನೀಡುವ ಭಾರತದ ಧುರೀಣರು ನಿಜವಾಗಿಯೂ ರೈತರ ಬದುಕು ಸಮೃದ್ಧವಾಗುವ ನಿಟ್ಟಿನಲ್ಲಿ ಯೋಚಿಸಬಲ್ಲರೇ? ಬುಷ್ ಉಪಾಯವಾಗಿ ತಮ್ಮ ರೈತರ ಹಿತಾಸಕ್ತಿ ಕಾಯ್ದುಕೊಳ್ಳುತ್ತಾರೆ. ನಮ್ಮ ನಾಯಕರು ಒಣ ಹೇಳಿಕೆಗಳಲ್ಲಷ್ಟೇ ರೈತರ ಹಿತ ಕಾಯುತ್ತಾರೆ ಎಂದು ಹೇಳಿದರೆ ಅದು ಉತ್ಪ್ರೇಕ್ಷೆ ಆದೀತೇ?
ನೆತ್ರಕೆರೆ ಉದಯಶಂಕರ
ಭಾರತದಂತಹ ರಾಷ್ಟ್ರಗಳು ಹೆಚ್ಚು ಶ್ರೀಮಂತವಾಗುತ್ತಿರುವುದರಿಂದ ಪೌಷ್ಠಿಕ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಿ ವಿಶ್ವದಾದ್ಯಂತ ಬೆಲೆ ಏರಿಕೆ ಆಗಿದೆಯಂತೆ- ಹಾಗಂತ ಜಗತ್ತಿನ ಹಿರಿಯಣ್ಣ ಎಂದು ಅಂದುಕೊಂಡಿರುವ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಮಹಾಶಯರು ಅಪ್ಪಣೆ ಕೊಡಿಸಿದ್ದಾರೆ!
ಭಾರತ ಮತ್ತು ಚೀನಾದಲ್ಲಿ ಪೌಷ್ಠಿಕ ಆಹಾರ ಪದಾರ್ಥಗಳ ಬಳಕೆ ಹೆಚ್ಚಿರುವುದರಿಂದ ಇಂತಹ ಆಹಾರ ಪದಾರ್ಥಗಳ ರಫ್ತು ಹೆಚ್ಚಿ ಜಗತ್ತಿನಲ್ಲಿ ಆಹಾರ ಬಿಕ್ಕಟ್ಟು ಉಂಟಾಗಿದೆ ಎಂಬುದಾಗಿ ಅಮೆರಿಕದ ವಿದೇಶಾಂಗ ಖಾತೆಯ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಹೇಳಿದ ಬೆನ್ನಲ್ಲೇ ಬುಷ್ ಮಹಾಶಯರ ಈ ಅಪ್ಪಣೆ ಹೊರಬಿದ್ದಿದೆ.
ಮಿಸ್ಸೌರಿಯಲ್ಲಿ ಆರ್ಥಿಕ ವಿಚಾರ ಕುರಿತು ನಡೆದ ಸಂವಾದದ ಸಂದರ್ಭದಲ್ಲಿ ಬುಷ್ ಅವರಿಗೆ ಈ ವಿಚಾರವಾಗಿ 'ಜ್ಞಾನೋದಯ' ಆಗಿದೆ. ಅವರ ಪ್ರಕಾರ ಆಹಾರ ಬಿಕ್ಕಟ್ಟಿಗೆ ಹಲವಾರು ಕಾರಣಗಳಿವೆ. ಇಥೆನಾಲ್ ನಂತಹ ಜೈವಿಕ ಇಂಧನ ಉತ್ಪಾದನೆಗೆ ಬಂಡವಾಳ ತೊಡಗಿಸಿರುವುದೂ ಅವುಗಳಲ್ಲಿ ಒಂದು ಕಾರಣ.
ಅಭಿವೃದ್ಧಿಶೀಲ ರಾಷ್ಟ್ರಗಳು ಶ್ರೀಮಂತವಾಗುತ್ತಿರುವುದು ಆಹಾರ ಬಿಕ್ಕಟ್ಟಿಗೆ ಇನ್ನೊಂದು ಕಾರಣ ಎಂಬುದು ಅವರ ಇನ್ನೊಂದು ಸಂಶೋಧನೆ. 'ನೀವು ಶ್ರೀಮಂತರಾಗುತ್ತಿರುವುದು ಬಹಳ ಒಳ್ಳೇದಪ್ಪ. ಆದರೆ ನೀವು ಶ್ರೀಮಂತರಾಗುತ್ತಿದ್ದಂತೆಯೇ ನಿಮಗೆ ಪೌಷ್ಠಿಕ ಆಹಾರ ಬೇಕು ಅನ್ನಿಸುತ್ತದೆ. ಸಹಜವಾಗಿಯೇ ಅದಕ್ಕೆ ಬೇಡಿಕೆ ಹೆಚ್ಚುತ್ತದೆ. ಮತ್ತಿನ್ನೇನು? ಆಹಾರ ವಸ್ತುಗಳ ಬೆಲೆ ಏರುತ್ತದೆ'- ಇದು ಬುಷ್ ವಿಶ್ಲೇಷಣೆ.
ಬುಷ್ ಸಾಹೇಬರ ಬಾಯಿಯಿಂದ ಈ ಅಣಿಮುತ್ತುಗಳು ಉದುರುವುದೇ ತಡ ಭಾರತದ ನಾಯಕಮಣಿಗಳಿಂದ ಬುಷ್ ಸಾಹೇಬರ ಹೇಳಿಕೆಗೆ ಕಟು ಟೀಕೆಯೂ ವ್ಯಕ್ತವಾಗಿದೆ.
ಕಾಂಗ್ರೆಸ್ಸು, ಸಿಪಿಐ (ಎಂ), ಸಿಪಿಐ, ಬಿಜೆಪಿ ಈ ಎಲ್ಲ ಪಕ್ಷಗಳ ಧುರೀಣರು ಒಟ್ಟಾಗಿಯೇ ಬುಷ್ ಸಾಹೇಬರ ಮೇಲೆ ಮುಗಿ ಬಿದ್ದಿದ್ದಾರೆ.
'ಅಮೆರಿಕ ತನ್ನ ನೆಲವನ್ನು ಆಹಾರ ಉತ್ಪನ್ನದಿಂದ ಜೈವಿಕ ಇಂಧನ ಭೂಮಿಯನ್ನಾಗಿ ಬದಲಾಯಿಸಿದ್ದು ಸ್ವಾಮೀ ಇಂದಿನ ಆಹಾರ ಬಿಕ್ಕಟ್ಟಿಗೆ ಕಾರಣ. ಬದಲಾಗಿ ಆಹಾರ ವಸ್ತುಗಳಿಗೆ ಬೇಡಿಕೆ ಹೆಚ್ಚಿದ್ದಲ್ಲ!' ಎಂದು ಕಾಂಗ್ರೆಸ್ಸು ಮತ್ತು ಎಡ ಪಕ್ಷಗಳು ಏಕದನಿಯಲ್ಲಿ ಕೂಗು ಹಾಕಿವೆ.
'ಜಾರ್ಜ್ ಬುಷ್ ಅವರಿಗೆ ಆರ್ಥಿಕ ವಿಚಾರಗಳ ಬಗ್ಗೆ ಏನಾದರೂ ಗೊತ್ತಾ? ಭಾರತದಲ್ಲಿ ಆಹಾರ ವಸ್ತುಗಳಿಗೆ ಬೇಡಿಕೆ ಹೆಚ್ಚಿದ್ದು ಜಾಗತಿಕ ಆಹಾರ ವಸ್ತುಗಳ ಬೆಲೆ ಏರಿಕೆಗೆ ಕಾರಣ ಎಂಬ ಬುಷ್ ಸಾಹೇಬರ ಆರ್ಥಿಕ ಲೆಕ್ಕಾಚಾರ ಸಂಪೂರ್ಣ ತಪ್ಪು. ಏಕೆಂದರೆ ಭಾರತ ಆಹಾರ ಆಮದು ಮಾಡಿಕೊಳ್ಳುವ ರಾಷ್ಟ್ರವಲ್ಲ, ಆಹಾರ ರಫ್ತು ಮಾಡುವ ರಾಷ್ಟ್ರ' ಎಂಬ ಸಮಜಾಯಿಷಿ ಈ ಧುರೀಣರದು.
ಅಭಿವೃದ್ಧಿ ಹೊಂದಿದ ಜಗತ್ತಿನಲ್ಲಿ ಕೃಷಿ ಭೂಮಿ ಎಥೆನಾಲ್ ಉತ್ಪಾದನಾ ಭೂಮಿಯಾಗಿ ಪರಿವರ್ತನೆ ಹೊಂದಿದ್ದು. ಜೊತೆಗೆ ವಾತಾವರಣದಲ್ಲಿ ಆಗಿರುವ ಬದಲಾವಣೆಗಳು ಇದಕ್ಕೆ ಕಾರಣ ಸ್ವಾಮೀ ಎಂಬುದು ಭಾರತದ ಕಾಂಗ್ರೆಸ್ಸು- ಎಡಪಕ್ಷಗಳ ಧುರೀಣರ ವಾದ.
'ಬುಷ್ ಸಾಹೇಬರ ಈ ಅಸಂಬದ್ಧ ಹೇಳಿಕೆ ಯುಪಿಎ ಸರ್ಕಾರದ ಸಚಿವರ ಹೇಳಿಕೆಗಳಿಗೆ ಒಂದು ಚೌಕಟ್ಟು ಇದ್ದ ಹಾಗೆ ಇದೆ. ನಾಗರಿಕ ವಿಮಾನಯಾನ ಸಚಿವ ಪ್ರಫುಲ್ಲ ಪಟೇಲರೇ ಆಹಾರ ಅಭ್ಯಾಸಗಳ ಬದಲಾವಣೆ ಕಾರಣ ಬೆಲೆ ಏರಿಕೆ ಆಗುತ್ತಿದೆ ಎಂದು ಹೇಳಿದ್ದಾರಲ್ಲ' ಎಂದು ಸಂದರ್ಭವನ್ನು ತನ್ನ ಮೂಗಿನ ನೇರಕ್ಕೆ ಟೀಕಿಸಲು ಬಿಜೆಪಿ ಬಳಸಿಕೊಂಡಿದೆ!
ಬುಷ್ ಸಾಹೇಬರ ಹೇಳಿಕೆ ಮಾತ್ರವೇ ಅಲ್ಲ, ಅವರ ಹೇಳಿಕೆಯನ್ನು ಖಂಡ ತುಂಡವಾಗಿ ಖಂಡಿಸಿದ ಭಾರತದ ಈ ವಿವಿಧ ರಾಜಕೀಯ ಪಕ್ಷಗಳ ಹೇಳಿಕೆಗಳನ್ನು ಕಂಡು ಭಾರತದ ನಾಗರಿಕರು ಅದರಲ್ಲೂ ಮುಖ್ಯವಾಗಿ ರೈತರು ತಲೆ ತಲೆ ಚಚ್ಚಿಕೊಳ್ಳಬೇಕಾಗಿದೆ!
'ಹೌದು ಆಹಾರ ವಸ್ತುಗಳ ಬೆಲೆ ಇಡೀ ಜಗತ್ತಿನಲ್ಲಿ ಇಷ್ಟೆಲ್ಲ ಏರುತ್ತಿದ್ದರೂ ಭಾರತದಲ್ಲಿ ಲಕ್ಷಾಂತರ ರೈತರು ಆತ್ಮಹತ್ಯೆ ಮಾಡುಕೊಳ್ಳುತ್ತಿದ್ದಾರಲ್ಲ ಸ್ವಾಮೀ ಏಕೆ?' ಇದು ಭಾರತದ ಕೃಷಿಕರ ಪ್ರಶ್ನೆ.
'ರೈತರನ್ನು ಬಚಾವು ಮಾಡಲು ದೊಡ್ಡ ದೊಡ್ಡ ಕೊಡುಗೆ, ಸಾಲಮನ್ನಾದಂತಹ ಭಾರೀ ಕ್ರಮಗಳನ್ನು ಕೈಗೊಂಡ ಬಳಿಕವೂ ಪ್ರತಿದಿನ ರೈತರು ನೇಣಿಗೆ, ಕ್ರಿಮಿನಾಶಕಗಳಿಗೆ ಮೊರೆ ಹೋಗುತ್ತಿದ್ದಾರಲ್ಲಾ ಯಾಕೆ?'
ಬುಷ್ ಸಾಹೇಬರು ಭಾರತದ ಜನ ಅದರಲ್ಲೂ ಮಧ್ಯಮ ವರ್ಗದ ಜನ ಶ್ರೀಮಂತರಾಗುತ್ತಿರುವುದರಿಂದ ಆಹಾರ ವಸ್ತುಗಳ ಬೆಲೆ ಏರುತ್ತಿದೆ ಅನ್ನುತ್ತಾರೆ. ನಮ್ಮ ಧುರೀಣರೋ ಭಾರತ ಆಹಾರ ವಸ್ತುಗಳ ರಫ್ತುದಾರ ರಾಷ್ಟ್ರ, ಆಮದು ರಾಷ್ಟ್ರವಲ್ಲ ಅನ್ನುತ್ತಿದ್ದಾರೆ- ಅಂದರೆ ಉಭಯ ನಾಯಕರ ಹೇಳಿಕೆಗಳ ಅರ್ಥವೋ ಒಂದೇ: ನಮ್ಮಲ್ಲಿ ಬೇಕಾದಷ್ಟು ಆಹಾರ ವಸ್ತುಗಳ ಉತ್ಪಾದನೆ ಆಗುತ್ತಿದೆ, ಅವುಗಳಿಗೆ ಭಾರಿ ಬೆಲೆಯೂ ಬರುತ್ತಿದೆ ಎಂದು ಅಲ್ಲವೇ? ಮತ್ತೆ ಯಾಕೆ ರೈತರು ಸಾಲದ ಬಲೆಯಲ್ಲಿ ಒದ್ದಾಡುತ್ತಿದ್ದಾರೆ? ಅದರಿಂದ ಅವರನ್ನು ಪಾರು ಮಾಡಲು ಸರ್ಕಾರ ಸಾಲಮನ್ನಾದಂತಹ ದೊಡ್ಡ ದೊಡ್ಡ ಯೋಜನೆಗಳನ್ನು ಏಕೆ ಮಾಡಬೇಕು?
ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ರೈತರು ಪ್ರತಿನಿತ್ಯ ಕಣೀರು ಸುರಿಸುವ ಪರಿಸ್ಥಿತಿ ಈಗಲೂ ಉಂಟಲ್ಲ ಯಾಕೆ? ರೈತರ ಮಕ್ಕಳು ಕೃಷಿ ನಂಬಿದರೆ ಬದುಕೇ ಇಲ್ಲ ಅಂದುಕೊಂಡು ನಗರಗಳಿಗೆ ವಲಸೆ ಹೋಗುತ್ತಿದ್ದಾರಲ್ಲ ಏಕೆ?
ಬುಷ್ ಸಾಹೇಬರು ಜಾಣತನದಿಂದ ಹೇಳದೆ ನಮ್ಮನ್ನು ವಂಚಿಸಿದ್ದು ಯಾವ ವಿಚಾರದಲ್ಲಿ ಗೊತ್ತಾ?ಆಹಾರ ಉತ್ಪಾದನೆ ಬಹಳ ಮುಖ್ಯ ವಿಚಾರ ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಅಮೆರಿಕದಲ್ಲಿ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ಕೊಡುತ್ತಿದ್ದಾರೆ. ತಮ್ಮ ರಾಷ್ಟ್ರದ ರೈತರ ಆರ್ಥಿಕತೆ ಉತ್ತಮ ಗೊಳ್ಳಲಿ ಎಂದೇ ಅಲ್ಲಿ ಜೈವಿಕ ಇಂಧನಗಳ ಉತ್ಪಾದನೆಗೂ ಪ್ರೋತ್ಸಾಹ ಕೊಡುತ್ತಿದ್ದಾರೆ. ಆದರೆ ಜಾಗತೀಕರಣದ ನೆಪ ಹಿಡಿದು ಭಾರತ, ಚೀನಾದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ರೈತರಿಗೆ ಸಬ್ಸಿಡಿ ಸಿಗದಂತೆ ಹುನ್ನಾರ ಮಾಡಿದ್ದಾರೆ.
ಅವರದ್ದು ವಿಶಾಲವಾದ ದೇಶ. ಜನಸಂಖ್ಯೆ ಕಡಿಮೆ. ಆಹಾರ ಉತ್ಪಾದನೆ ಕಡಿಮೆಯಾದರೂ ಶ್ರೀಮಂತಿಕೆಯ ಬಲದಿಂದ ಆಹಾರಗಳನ್ನು ಆಮದು ಮಾಡಿಕೊಳ್ಳಬಹುದೆಂಬ ವಿಶ್ವಾಸ ಅವರದು.
ಇನ್ನು ನಮ್ಮ ಸರ್ಕಾರ...? ಜಾಗತೀಕರಣದ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ವಿವಿಧ ಉದ್ಯಮಗಳಿಗಾಗಿ ವಿಶೇಷ ವಿತ್ತ ವಲಯಗಳನ್ನು ರಚಿಸುತ್ತಾ ಅವುಗಳಿಗಾಗಿ ಲಕ್ಷಾಂತರ ಎಕರೆ ಕೃಷಿ ಭೂಮಿಯನ್ನು ಬರಡು ಮಾಡುತ್ತಿದೆ.
ಕೃಷಿ ರಫ್ತುದಾರ ರಾಷ್ಟ್ರ ನಮ್ಮದು ಎಂದು ಕೊಚ್ಚಿಕೊಳ್ಳುವ ನಾಯಕರಿಗೆ ಕೃಷಿ ಉತ್ಪನ್ನ ಏರಿಸಲು ವಿಶೇಷ ಕೃಷಿ ವಲಯಗಳನ್ನು ವಿಶೇಷ ವಿತ್ತ ವಲಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸ್ಥಾಪಿಸಬೇಕು ಎಂಬ ಯೋಚನೆ ಕೂಡಾ ಬರುವುದಿಲ್ಲ!
ಸಾಲ ಮನ್ನಾದಂತಹ ಅಲ್ಪ ತೃಪ್ತಿಯ ಯೋಜನೆಗಳ ಬದಲಿಗೆ ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ದರ ಒದಗಿಸುವ ಉತ್ತಮ ಮಾರುಕಟ್ಟೆ ವ್ಯವಸ್ಥೆ, ರೈತರಿಗೆ ಅಗತ್ಯ ವಿದ್ಯುತ್ತು, ಇಂಧನ ಸೌಲಭ್ಯ, ಕಡಿಮೆ ವೆಚ್ಚದ ಸಾವಯವ, ಗೋ ಆಧಾರಿತ ಕೃಷಿಗೆ ಉತ್ತೇಜನ, ರೈತರ ಉತ್ಪನ್ನಗಳನ್ನು ದೀರ್ಘಕಾಲ ಕಾಪಿಡಲು ಸಹಾಯಕವಾಗುವ ಶೈತ್ಯಾಗಾರ, ರೈತರ ಹೊಲದಿಂದ ಆಚೆ ಹೋಗುವ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗಾಗಿ ರೈತ ಯುವಕರಿಗಾಗಿ ಪುಟ್ಟ ಪುಟ್ಟ ಸಂಸ್ಕರಣಾ ಘಟಕಗಳನ್ನು ರಚಿಸಿಕೊಡಬೇಕು ಎಂಬಂತಹ ಯೋಚನೆಗಳೇ ಇಲ್ಲ.
ಕೋಟ್ಯಂತರ ರೂಪಾಯಿ ಸುರಿದು ಅಣೆಕಟ್ಟು ಕಟ್ಟುವ ಯೋಚನೆ ಬರುತ್ತದೆ. ಆದರೆ ಕಡಿಮೆ ವೆಚ್ಚದಲ್ಲಿ ಇಂಗು ಗುಂಡಿ, ಕೃಷಿ ಹೊಂಡ, ಕಟ್ಟ, ಪುಟ್ಟ ಪುಟ್ಟ ಬಾವಿಗಳಂತಹ ರಚನೆಗಳ ಮೂಲಕ ಬರುವ ಮಳೆಯ ನೀರನ್ನು ಹಿಡಿದು ಇಡುವ ಮೂಲಕ ಕಡಿಮೆ ವೆಚ್ಚದ ನೈಸರ್ಗಿಕ ಕೃಷಿಗೆ ಒತ್ತು ಕೊಡಬೇಕೆಂಬ ಜ್ಞಾನೋದಯ ಆಗುವುದಿಲ್ಲ!
ಆಹಾರ ವಸ್ತುಗಳ ಬೆಲೆ ಏರುತ್ತಿದೆ ಎಂಬುದು ನಿಜ. ಆದರೆ ಅದಕ್ಕೆ ರೈತರು - ರೈತ ಮಕ್ಕಳು ಸೂಕ್ತ ಬೆಂಬಲ, ಪ್ರೋತ್ಸಾಹ ಇಲ್ಲದೆ ಕೃಷಿ ಬಗ್ಗೆ ಅನಾಸ್ಥೆ ತಾಳುವಂತಾಗಿರುವುದು, ಪರಿಣಾಮವಾಗಿ ಉತ್ಪಾದನೆ ಕುಗ್ಗುತ್ತಿರುವುದು ಕಾರಣ ಎಂಬುದು ನಾಯಕ ಮಣಿಗಳಿಗೆ ಅರ್ಥವಾಗುವುದು ಯಾವಾಗ? ಈ ಕಾರಣದಿಂದಲೇ ಈ ಉತ್ಪನ್ನಗಳ ಬೆಲೆ ಏರಿದರೂ ರೈತರಿಗೆ ಅವುಗಳ ಲಾಭ ಆಗುತ್ತಿಲ್ಲ ಎಂಬುದು ಚಿಕ್ಕಮಕ್ಕಳಿಗೆ ಅರ್ಥವಾದರೂ, ರಾಜಕಾರಣಿಗಳಿಗೆ ಅರ್ಥ ಆಗುತ್ತಿಲ್ಲವಲ್ಲ?
ಬುಷ್ ಸಾಹೇಬರ ಹೇಳಿಕೆಗೆ ಪ್ರತಿಯಾಗಿ ಖಾರದ ಹೇಳಿಕೆ ನೀಡುವ ಭಾರತದ ಧುರೀಣರು ನಿಜವಾಗಿಯೂ ರೈತರ ಬದುಕು ಸಮೃದ್ಧವಾಗುವ ನಿಟ್ಟಿನಲ್ಲಿ ಯೋಚಿಸಬಲ್ಲರೇ? ಬುಷ್ ಉಪಾಯವಾಗಿ ತಮ್ಮ ರೈತರ ಹಿತಾಸಕ್ತಿ ಕಾಯ್ದುಕೊಳ್ಳುತ್ತಾರೆ. ನಮ್ಮ ನಾಯಕರು ಒಣ ಹೇಳಿಕೆಗಳಲ್ಲಷ್ಟೇ ರೈತರ ಹಿತ ಕಾಯುತ್ತಾರೆ ಎಂದು ಹೇಳಿದರೆ ಅದು ಉತ್ಪ್ರೇಕ್ಷೆ ಆದೀತೇ ?
1 comment:
ವಿಶೇಷ ಕೃಷಿ ವಲಯಗಳನ್ನು ಸ್ಥಾಪಿಸುವುದಕ್ಕೆ ರಾಜಕಾರಣಿಗಳಿಗೆ ಯಾರು ಕಮಿಷನ್ ಕೊಡುತ್ತಾರೆ ಸ್ವಾಮಿ...ಅಲ್ಲದೆ ವಿಶೇಷ ಕೃಷಿ ವಲಯಗಳಿಂದ ರಾಜಕಾರಣಿಗಳಿಗೆ ಆಗುವ ಅನುಕೂಲವಾದರೂ ಏನು ಅಂತ ನಾನು ಕೇಳೋದು.
ವಿಶೇಷ ಆಥಿಕವಲಯಗಳಿಂದ ರಾಜಕಾರಣಿಗಳಿಗೆ ಕಮೀಷನ್, ಪ್ರವಾಸ, ಮೋಜು ಇನ್ನೂ ಏನೇನೋ ದೊರಕಬಹುದು ಏಕೆಂದರೆ ಇವರು ಅವರಿಗೆ ರಿಯಾಯಿತಿ ದರದಲ್ಲಿ ನಮ್ಮ ವಿದ್ಯುತ್, ನೀರು, ನಮ್ಮ ನೆಲ...ಕೊಟ್ಟಿರುತ್ತಾರಲ್ಲ ಅದಕ್ಕೆ.
ಗಿರೀಶ ಕೆ.ಎಸ್
girisha_giri123@yahoo.co.in
Post a Comment