ಇಂದಿನ ಇತಿಹಾಸ
ಮೇ 22
ಭಾರತದ (ಸಂವಿಧಾನದ 7ನೇ ಶೆಡ್ಯೂಲಿನಲ್ಲಿ ಸೇರ್ಪಡೆಯಾಗಿರುವ) ಯಾವುದೇ ಭಾಷೆಯ ಸೃಜನಾತ್ಮಕ ಸಾಹಿತ್ಯ ಕೃತಿಯನ್ನು ಗೌರವಿಸುವ ಸಲುವಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. 1965ರಲ್ಲಿ ಮೊದಲ ಪ್ರಶಸ್ತಿಯನ್ನು ಜಿ. ಶಂಕರ ಕುರುಪ್ ಅವರಿಗೆ ಮಲಯಾಳಂ ಕವನಗಳಿಗಾಗಿ ನೀಡಲಾಯಿತು.
2007: ತಮ್ಮ ನಿವಾಸದಲ್ಲಿ ಕೊಕೇನ್ ಹೊಂದಿದ್ದ ಆರೋಪದ ಮೇರೆಗೆ ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಮಣಿಂದರ್ ಸಿಂಗ್ ಅವರನ್ನು ಬಂಧಿಸಲಾಯಿತು. ದೆಹಲಿಯ ಅವರ `ಪ್ರೀತ್ ವಿಹಾರ್' ನಿವಾಸದಿಂದ 1.5 ಗ್ರಾಂನಷ್ಟು ಕೊಕೇನ್ ವಶಪಡಿಸಿಕೊಳ್ಳಲಾಯಿತು. ಎಡಗೈ ಸ್ಪಿನ್ನರ್ ಮಣಿಂದರ್ 35 ಟೆಸ್ಟ್ ಹಾಗೂ 59 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
2007: ಅವ್ಯವಹಾರಗಳಿಗಾಗಿ ತಮಗೆ ವಿಧಿಸಲಾಗಿರುವ ಸೆರೆವಾಸದ ವಿರುದ್ಧ ಮೇಲ್ಮನವಿ ಸಲ್ಲಿಸುವುದರ ಜೊತೆಗೆ ತಮ್ಮ ವಚನದಂತೆ 100 ಕೋಟಿ ಅಮೆರಿಕನ್ ಡಾಲರುಗಳನ್ನು ಧಾರ್ಮಿಕ ದತ್ತಿ ಸಂಸ್ಥೆಗಳಿಗೆ ದಾನ ನೀಡುವುದಾಗಿ ದಕ್ಷಿಣ ಕೊರಿಯಾದ ಪ್ರಮುಖ ಆಟೋಮೊಬೈಲ್ ಸಂಸ್ಥೆ ಹುಂಡೈ ಮೋಟಾರ್ಸ್ ಮುಖ್ಯಸ್ಥ ಚುಂಗ್ ಮೊಂಗ್ -ಕೂ ಪ್ರಕಟಿಸಿದರು.
2007: ಲಿಕ್ವಿಡ್ ಕ್ರಿಸ್ಟಲ್ ಡಿಸ್ ಪ್ಲೇ (ಎಲ್ಸಿಡಿ) ಜನಕ, ನೊಬೆಲ್ ಪ್ರಶಸ್ತಿ ಪುರಸ್ಕೃತ ಫ್ರಾನ್ಸಿನ ಪಿಯರೆ ಗಿಲಸ್ ಡೆ ಜನಸ್ (74) ಪ್ಯಾರಿಸ್ಸಿನಲ್ಲಿ ನಿಧನರಾದರು. 1991ರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಪುರಸ್ಕೃತ ಡೆ ಜನಸ್ ಅವರು ಲಿಕ್ವಿಡ್ ಕ್ರಿಸ್ಟಲ್ ಮತ್ತು ಪಾಲಿಮಾರ್ಸ್ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದವರು. ಎಲ್ಸಿಡಿ ತಂತ್ರಜ್ಞಾನ ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಪ್ರಮುಖ ಪಾತ್ರ ವಹಿಸಿದೆ. 1932ರಲ್ಲಿ ಜನಿಸಿದ ಡೆ ಜನಸ್ 1974ರಲ್ಲಿ ಪ್ರಕಟಿಸಿದ `ದಿ ಫಿಸಿಕ್ಸ್ ಆಫ್ ಲಿಕ್ವಿಡ್ ಕ್ರಿಸ್ಟಲ್ಸ್' ಈ ಕ್ಷೇತ್ರದ ಮಹತ್ವದ ಕೃತಿ ಎಂಬುದಾಗಿ ಹೆಸರು ಪಡೆದಿದೆ.
2007: ಹತ್ತು ಕೋಟಿ ರೂಪಾಯಿ ಮೌಲ್ಯದ ವಿದೇಶೀ ಕರೆನ್ಸಿ ಒಯ್ಯುವ ವೇಳೆ ಸಿಕ್ಕಿಬಿದ್ದ ನೈಜೀರಿಯಾ ರಾಜತಾಂತ್ರಿಕನನ್ನು ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿತು. ಆದರೆ ಹಣವನ್ನು ವಶಪಡಿಸಿಕೊಳ್ಳಲಾಯಿತು.
2006: ಬುಧಿಯಾಸಿಂಗ್ ಮ್ಯಾರಥಾನ್ ಓಟದಿಂದ ಪ್ರೇರಿತನಾದ ಒರಿಸ್ಸಾದ ಮತ್ತೊಬ್ಬ ಪೋರ, ಭುವನೇಶ್ವರದಿಂದ 15 ಕಿ.ಮೀ. ದೂರದ ಪಿಪ್ಲಿಯ 12 ವರ್ಷದ ಬಾಲಕ ದಿಲೀಪ ರಾಣಾ 45 ಕಿ.ಮೀ. ದೂರವನ್ನು ಐದೂವರೆ ತಾಸಿನಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದ.
2006: ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಅನುಷ್ಠಾನಗೊಳಿಸುವುದನ್ನು ಪ್ರತಿಭಟಿಸಿ ರಾಷ್ಟ್ರೀಯ ಜ್ಞಾನ ಆಯೋಗದ ಇಬ್ಬರು ಪ್ರಮುಖ ಸದಸ್ಯರಾದ ಪ್ರತಾಪ್ ಭಾನು ಮೆಹ್ತಾ ಮತ್ತು ಆಂಡ್ರೆ ಬೆಟೀಲಿ ರಾಜೀನಾಮೆ ನೀಡಿದರು. ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದ ರಾಷ್ಟ್ರೀಯ ಜ್ಞಾನ ಆಯೋಗದ ಸಭೆಯಲ್ಲಿ ಮೀಸಲಾತಿ ಪ್ರಸ್ತಾವಗಳನ್ನು ವಿರೋಧಿಸಿದ ಆರು ಮಂದಿ ಸದಸ್ಯರಲ್ಲಿ ಮೆಹ್ತಾ ಮತ್ತು ಬೆಟೀಲಿ ಸೇರಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಆಯೋಗದ ಅಭಿಪ್ರಾಯಗಳನ್ನು ತೀವ್ರವಾಗಿ ಟೀಕಿಸಿದ್ದರು.
2006: ಪಾಕಿಸ್ತಾನಿ ಪ್ರಧಾನಿ ಶೌಕತ್ ಅಜೀಜ್ ಅವರ ಮೇಲೆ ವಿಫಲ ಆತ್ಮಹತ್ಯಾದಾಳಿ ನಡೆಸಿದ್ದಕ್ಕಾಗಿ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವೊಂದು ನಾಲ್ಕು ಮಂದಿ ಉಗ್ರಗಾಮಿಗಳಿಗೆ ಮರಣದಂಡನೆ ಮತ್ತು ಇತರ ಮೂರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಸಾಕ್ಷ್ಯದ ಅಭಾವ ಕಾರಣ ಇನ್ನೊಬ್ಬ ಆರೋಪಿಯನ್ನು ಆರೋಪಮುಕ್ತ ಗೊಳಿಸಿತು. ರಾವಲ್ಪಿಂಡಿಯಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಸಫ್ದರ್ ಮಲಿಕ್ ಅವರು ಈ ತೀರ್ಪು ನೀಡಿದರು. 2004ರ ಜುಲೈ 30ರಂದು ಅಟೋಕ್ ಜಿಲ್ಲೆಯ ಫತೇ ಜಂಗ್ ಸಮೀಪದ ಜಾಫ್ರ್ ಮೋರ್ನಲ್ಲಿ ಶೌಕತ್ ಅಜೀಜ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ನಡೆದ ಈ ದಾಳಿಯಲ್ಲಿ 6 ಜನ ಸತ್ತು 48 ಮಂದಿ ಗಾಯಗೊಂಡಿದ್ದರು.
1989: ಭಾರತವು ಒರಿಸ್ಸಾದ ಚಂಡೀಪುರದಲ್ಲಿ `ಅಗ್ನಿ' ಕ್ಷಿಪಣಿಯನ್ನು ಹಾರಿಸಿತು. ಇದರೊಂದಿಗೆ ಭಾರತ ಜಗತ್ತಿನಲ್ಲಿ ಮಧ್ಯಂತರಗಾಮೀ ಯುದ್ಧ ಕ್ಷಿಪಣಿ ಸಾಮರ್ಥ್ಯ ಹೊಂದಿದ 6ನೇ ರಾಷ್ಟ್ರವಾಯಿತು.
1969: ಕಲಾವಿದ ಪ್ರಕಾಶ ಪಿ. ಶೆಟ್ಟಿ ಜನನ.
1967: ಕಲಾವಿದ ಸೋಮಶೇಖರ ಬಿಸಲ್ವಾಡಿ ಜನನ.
1961: ಭಾರತದ (ಸಂವಿಧಾನದ 7ನೇ ಶೆಡ್ಯೂಲಿನಲ್ಲಿ ಸೇರ್ಪಡೆಯಾಗಿರುವ) ಯಾವುದೇ ಭಾಷೆಯ ಸೃಜನಾತ್ಮಕ ಸಾಹಿತ್ಯ ಕೃತಿಯನ್ನು ಗೌರವಿಸುವ ಸಲುವಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. 1965ರಲ್ಲಿ ಮೊದಲ ಪ್ರಶಸ್ತಿಯನ್ನು ಜಿ. ಶಂಕರ ಕುರುಪ್ ಅವರಿಗೆ ಮಲಯಾಳಂ ಕವನಗಳಿಗಾಗಿ ನೀಡಲಾಯಿತು.
1961: ಕಲಾವಿದ ವಿಶ್ವನಾಥ ನಾಕೋಡ್ ಜನನ.
1960: `ಗಾಮಾ ಪೆಹಲ್ವಾನ್' ಎಂದೇ ಜನಪ್ರಿಯರಾಗಿದ್ದ ಭಾರತೀಯ ಕುಸ್ತಿಪಟು ಗುಲಾಂ ಮಹಮ್ಮದ್ ತಮ್ಮ 80ನೇ ವಯಸ್ಸಿನಲ್ಲಿ ಲಾಹೋರಿನಲ್ಲಿ ಮೃತರಾದರು. ಭಾರತೀಯ ಕುಸ್ತಿಯನ್ನು ಜನಪ್ರಿಯಗೊಳಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.
1949: ಕಲಾವಿದ ಎಸ್. ಕೆ. ರುದ್ರಮೂರ್ತಿ ಜನನ.
1940: ಭಾರತದ ಖ್ಯಾತ ಬೌಲರುಗಳಲ್ಲಿ ಒಬ್ಬರಾದ ಎರಪಲ್ಲಿ ಪ್ರಸನ್ನ ಹುಟ್ಟಿದ ದಿನ. 1970ರ ದಶಕದಲ್ಲಿ ಸ್ಪಿನ್ ಬೌಲರುಗಳಾದ ಬೇಡಿ, ಚಂದ್ರಶೇಖರ್ ಮತ್ತು ವೆಂಕಟರಾಘವನ್ ಜೊತೆಗೆ ಪ್ರಸನ್ನ ಕೂಡಾ ಮಿಂಚಿದ್ದರು.
1917: ಕಲಾವಿದ ಟಿ.ಎಸ್. ತಾತಾಚಾರ್ ಜನನ.
1916: ಕೀರ್ತನರತ್ನ, ಕೀರ್ತನ ಕೇಸರಿ ಇತ್ಯಾದಿ ಬಿರುದುಗಳಿಗೆ ಪಾತ್ರರಾಗಿದ್ದ ಖ್ಯಾತ ಕೀರ್ತನಕಾರ ಕೊಣನೂರು ಸೀತಾರಾಮ ಶಾಸ್ತ್ರಿ (22-5-1916ರಿಂದ 28-5-1970) ಅವರು ಶ್ರೀಕಂಠ ಶಾಸ್ತ್ರಿ ಅವರ ಮಗನಾಗಿ ಕೊಣನೂರಿನಲ್ಲಿ ಜನಿಸಿದರು.
1772: ಭಾರತದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸುಧಾರಕ ರಾಮಮೋಹನ್ ರಾಯ್ (1772-1833) ಜನ್ಮದಿನ. ಸಾಂಪ್ರದಾಯಿಕ ಹಿಂದೂ ಸಂಸ್ಕೃತಿಯನ್ನು ಪ್ರಶ್ನಿಸಿದ ಇವರನ್ನು `ಆಧುನಿಕ ಭಾರತದ ಪಿತಾಮಹ' ಎಂದು ಕರೆಯಲಾಗಿದೆ.
1545: ಕಾಲಿಂಜರಿನಲ್ಲಿ ಸಂಭವಿಸಿದ ಸ್ಫೋಟವೊಂದರಲ್ಲಿ ಆಫ್ಘನ್ ದೊರೆ ಶೇರ್ ಶಹ ಸೂರಿ ಅಸು ನೀಗಿದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment