Thursday, May 22, 2008

Mobile failed to work from day one! / ಖರೀದಿ ದಿನದಿಂದಲೇ ಕೈಕೊಟ್ಟ ಮೊಬೈಲ್..!

Mobile failed to work from day one!

Mr. Krishna Murthy, resident of Chamarajpet, Bangalore has purchased a Mobile handset Sony Erickson 200. But it developed some problems from day one. He complained to the sellers but they didn't showed any interest to repair it or to replace it. What Mr. Krishna Murthy did? How he got justice? Nethrakere Udaya Shankara narrates the story of consumer vigilance.

ಖರೀದಿ ದಿನದಿಂದಲೇ ಕೈಕೊಟ್ಟ ಮೊಬೈಲ್..!

ಪ್ರತಿವಾದಿಯು ಮೊಬೈಲನ್ನು ತತ್ ಕ್ಷಣ ದುರಸ್ತಿ ಮಾಡಿಕೊಡುವ ಬದಲು 23 ದಿನಗಳಿಗೂ ಹೆಚ್ಚು ಕಾಲ ಕಂಬ, ಕಂಬ ಸುತ್ತುವಂತೆ ಮಾಡಿದರು.

ನೆತ್ರಕೆರೆ ಉದಯಶಂಕರ

ಇದು ಮೊಬೈಲ್ ಯುಗ. ಎಲ್ಲಿ ನೋಡಿದರಲ್ಲಿ ಮೊಬೈಲ್. ಕಷ್ಟಪಟ್ಟು ದುಡಿದ ಹಣವನ್ನು ಈ ಮೊಬೈಲಿಗಾಗಿ ಹಾಕಿದ ಬಳಿಕ ಅದು ಕೈಕೊಟ್ಟರೆ? ಯಾರೊಂದಿಗೂ ಮಾತನಾಡಲಾಗದ ಕಷ್ಟ. ಜೊತೆಗೆ ಹಣವೂ ಹೋಯಿತಲ್ಲ ಎಂಬ ಚಿಂತೆ..!

ಆದರೆ ಗ್ರಾಹಕರು ಎದೆಗುಂದಬೇಕಾಗಿಲ್ಲ. ಗ್ರಾಹಕ ಸಂರಕ್ಷಣಾ ಕಾಯ್ದೆ ನಿಮ್ಮ ನೆರವಿಗೆ ಬರುತ್ತದೆ.

ಬೆಂಗಳೂರು ನಗರ ಜಿಲ್ಲಾ ಗ್ರಾಹಕ ಸಂರಕ್ಷಣಾ ನ್ಯಾಯಾಲಯವು ತನ್ನ ಮುಂದೆ ಬಂದ ಇಂತಹ ಪ್ರಕರಣವೊಂದರಲ್ಲಿ ಅರ್ಜಿದಾರನಿಗೆ ನ್ಯಾಯ ಒದಗಿಸಿದೆ.

ಈ ಪ್ರಕರಣದ ಅರ್ಜಿದಾರರು: ಬೆಂಗಳೂರು ಚಾಮರಾಜಪೇಟೆಯ ನಿವಾಸಿ ಕೃಷ್ಣಮೂರ್ತಿ. ಪ್ರತಿವಾದಿಗಳು: (1) ಬೆಂಗಳೂರು ಚಾಮರಾಜ ಪೇಟೆಯ ವಿ. ಮೊಬೈಲ್ಸ್ ಮತ್ತು (2) ಸೋನಿ ಎರಿಕ್ಸನ್ ಕೋರಮಂಗಲ, ಬೆಂಗಳೂರು.

ಅರ್ಜಿದಾರ ಕೃಷ್ಣಮೂರ್ತಿ ದೂರಿನ ಪ್ರಕಾರ ಅವರು 4-9-2007ರಂದು ಎರಡನೇ ಪ್ರತಿವಾದಿ ಸೋನಿ ಎರಿಕ್ಸನ್ ಅವರಿಂದ 3750 ರೂಪಾಯಿ ಬೆಲೆ ಹಾಗೂ 150 ರೂಪಾಯಿ ತೆರಿಗೆ ಪಾವತಿ ಮಾಡಿ ಸೋನಿ ಎರಿಕ್ಸನ್ ಕೆ-200 ಮೊಬೈಲ್ ಹ್ಯಾಂಡ್ ಸೆಟ್ ಖರೀದಿಸಿದರು. ಅದಕ್ಕೆ ಒಂದು ವರ್ಷದ ವಾರಂಟಿ ನೀಡಲಾಗಿತ್ತು.

ಖರೀದಿಸಿದ ಮೊದಲ ದಿನದಿಂದಲೇ ಈ ಮೊಬೈಲ್ ಹ್ಯಾಂಡ್ ಸೆಟ್ ದೋಷಪೂರಿತವಾಗಿ ಇದ್ದುದನ್ನು ಅರ್ಜಿದಾರರು ಗಮನಿಸಿದರು.

ಅರ್ಜಿದಾರರು ತತ್ ಕ್ಷಣವೇ ಪ್ರತಿವಾದಿಯನ್ನು ಸಂಪರ್ಕಿಸಿ ಮೊಬೈಲನ್ನು ದುರಸ್ತಿ ಮಾಡಿಕೊಡುವಂತೆ ಅಥವಾ ಬದಲಾಯಿಸಿ ಬೇರೆ ಹ್ಯಾಂಡ್ ಸೆಟ್ ಕೊಡುವಂತೆ ಮನವಿ ಮಾಡಿದರು. ಆದರೆ ಪ್ರತಿವಾದಿಯು ಮೊಬೈಲನ್ನು ತತ್ ಕ್ಷಣ ದುರಸ್ತಿ ಮಾಡಿಕೊಡುವ ಬದಲು 23 ದಿನಗಳಿಗೂ ಹೆಚ್ಚು ಕಾಲ ಕಂಬ, ಕಂಬ ಸುತ್ತುವಂತೆ ಮಾಡಿದರು.

ಕೊನೆಗೆ 2007ರ ಸೆಪ್ಟೆಂಬರ್ 27ರಂದು ಪ್ರತಿವಾದಿಯು ದುರಸ್ತಿಗಾಗಿ ಅದನ್ನು ಅಂಗೀಕರಿಸಿದರು. ಆದರೆ ಅದರಲ್ಲಿನ ದೋಷ ಪತ್ತೆ ಹಚ್ಚುವಲ್ಲಿ ವಿಫಲರಾದರು. ತನ್ನದಲ್ಲದ ತಪ್ಪಿಗಾಗಿ ಅರ್ಜಿದಾರರು ಹಣ ನಷ್ಟದ ಜೊತೆಗೆ ಮಾನಸಿಕ ಹಿಂಸೆ ಅನುಭವಿಸಿದರು.

ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಮೊಬೈಲಿಗಾಗಿ ಸುರಿದರೂ ಅದರ ಲಾಭ ಅವರಿಗೆ ಲಭಿಸಲಿಲ್ಲ.

ಇದು ಪ್ರತಿವಾದಿಯ ಪಾಲಿನ ಸೇವಾಲೋಪ ಎಂಬುದಾಗಿ ಭಾವಿಸಿದ ಅರ್ಜಿದಾರರು ತಮಗೆ ನ್ಯಾಯ ಒದಗಿಸುವಂತೆ ಕೋರಿ ಗ್ರಾಹಕ ನ್ಯಾಯಾಲಯದ ಮೆಟ್ಟಲೇರಿದರು.

ಅಧ್ಯಕ್ಷ ಎ.ಎಂ. ಬೆನ್ನೂರು, ಸದಸ್ಯರಾದ ಸೈಯದ್ ಉಸ್ಮಾನ್ ರಜ್ವಿ ಮತ್ತು ಯಶೋದಮ್ಮ ಅವರನ್ನು ಒಳಗೊಂಡ ಪೀಠವು ಅರ್ಜಿಯನ್ನು ದಾಖಲಿಸಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು.

ಮೊದಲ ಪ್ರತಿವಾದಿ ವಿ. ಮೊಬೈಲ್ಸ್ ಗೈರು ಹಾಜರಾದರೆ, ಎರಡನೇ ಪ್ರತಿವಾದಿ ಸೋನಿ ಎರಿಕ್ಸನ್ ಸಂಸ್ಥೆಯು, ಅರ್ಜಿದಾರರು ಮಾಡಿದ ಎಲ್ಲ ಆರೋಪಗಳನ್ನೂ ಅಲ್ಲಗಳೆದು ಪ್ರಮಾಣ ಪತ್ರ ಸಲ್ಲಿಸಿತು.

ಒಂದನೇ ಪ್ರತಿವಾದಿಯ ಗೈರು ಹಾಜರಿಯಲ್ಲೇ ವಿಚಾರಣೆ ಮುಂದುವರೆಸಿದ ನ್ಯಾಯಾಲಯ ಎರಡನೇ ಪ್ರತಿವಾದಿ ಪರ ವಕೀಲ ಸುಜಿತ್ ಸಿ. ಪಾಣಿ ಅವರ ಅಹವಾಲು ಅಲಿಸಿ, ಅರ್ಜಿದಾರರು ಮತ್ತು ಎರಡನೇ ಪ್ರತಿವಾದಿ ಸಲ್ಲಿಸಿದ ಪ್ರಮಾಣಪತ್ರ ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿತು.

ಅರ್ಜಿದಾರರು ತಾನು ಎರಡನೇ ಪ್ರತಿವಾದಿಯಿಂದ ಸೋನಿ ಎರಿಕ್ಸನ್ ಕೆ-200 ಮೊಬೈಲ್ ಖರೀದಿಸಿದ್ದುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ವಿಚಾರಣೆ, ದಾಖಲೆಗಳ ಪರಿಶೀಲನೆ ಕಾಲದಲ್ಲಿ ಅರ್ಜಿದಾರರು ಮೊಬೈಲ್ ಖರೀದಿಸಿದ್ದು ಮೊದಲನೇ ಪ್ರತಿವಾದಿಯಿಂದ ಹೊರತು ಎರಡನೇ ಪ್ರತಿವಾದಿಯಿಂದ ಅಲ್ಲ, ಆದರೆ ಮೊಬೈಲ್ ಸೆಟ್ ನಿರ್ಮಿತವಾದದ್ದು ಮಾತ್ರ ಎರಡನೇ ಪ್ರತಿವಾದಿಯಿಂದ ಎಂಬುದನ್ನು ನ್ಯಾಯಾಲಯ ಗಮನಿಸಿತು.

ವಾಸ್ತವವಾಗಿ ಅರ್ಜಿದಾರರು ಎರಡನೇ ಪ್ರತಿವಾದಿಯಿಂದ ನೇರವಾಗಿ ಮೊಬೈಲ್ ಖರೀದಿಸಲೂ ಇಲ್ಲ, ಅವರಿಂದ ಯಾವುದೇ ಸೇವೆಯನ್ನೂ ಪಡೆದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನ್ಯಾಯಾಲಯ, ಖರೀದಿಸಿದ್ದು, ಸೇವೆ ಪಡೆದದ್ದು ಒಂದನೇ ಪ್ರತಿವಾದಿಯಿಂದ ಎಂಬುದನ್ನು ಖಾತ್ರಿ ಮಾಡಿಕೊಂಡಿತು.

ಖರೀದಿಸಿದ ದಿನದಿಂದಲೇ ಮೊಬೈಲ್ ಹ್ಯಾಂಡ್ ಸೆಟ್ ಹಾಳಾಗಿದ್ದುದು, ದುರಸ್ತಿ ಅಥವಾ ಹ್ಯಾಂಡ್ ಸೆಟ್ ಬದಲಾವಣೆ ಕೋರಿದರೂ 23 ದಿನಗಳ ಕಾಲ ಮೊದಲ ಪ್ರತಿವಾದಿ ಅಡ್ಡಾಡಿಸಿದ್ದು, ಕೊನೆಗೆ 27-9-2007ರಂದು ದುರಸ್ತಿಗಾಗಿ ಹ್ಯಾಂಡ್ ಸೆಟ್ಟನ್ನು ಪಡೆದುಕೊಂಡದ್ದು, ದಾಖಲೆಗಳಿಂದ ಖಚಿತವಾಗುತ್ತದೆ ಎಂಬುದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು.

ದೋಷರಹಿತ ಮೊಬೈಲ್ ಸಲುವಾಗಿ ಹಣ ಹಾಕಿದ್ದರೂ ಅರ್ಜಿದಾರರಿಗೆ ಅದು ಉಪಯೋಗಕ್ಕೆ ಬಾರದೇ ಹೋದುದು, ದುರಸ್ತಿಗಾಗಿ ಪಡೆಯುವ ಮೂಲಕ ಅದು ದೋಷಯುಕ್ತವಾಗಿತ್ತು ಎಂಬುದನ್ನು ಒಂದನೇ ಪ್ರತಿವಾದಿ ಒಪ್ಪಿಕೊಂಡದ್ದನ್ನೂ ದಾಖಲೆಗಳು ಸ್ಪಷ್ಟ ಪಡಿಸುತ್ತವೆ ಎಂದು ನ್ಯಾಯಾಲಯ ತೀರ್ಮಾನಿಸಿತು.

ನ್ಯಾಯಾಲಯದಿಂದ ನೋಟಿಸ್ ಹೋದ ಬಳಿಕವೂ ಆಪಾದನೆಗಳಿಗೆ ಉತ್ತರಿಸದೆ ಮೌನವಾಗಿದ್ದುದು ಮತ್ತು ನ್ಯಾಯಾಲಯದ ಕಲಾಪಗಳಿಗೆ ಗೈರು ಹಾಜರಾಗುವ ಮೂಲಕ ಒಂದನೇ ಪ್ರತಿವಾದಿಯು ಅರ್ಜಿದಾರನ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ ಎಂಬ ತೀರ್ಮಾನಕ್ಕೆ ನಾವು ಬರುವಂತೆ ಮಾಡುತ್ತದೆ ಎಂದು ನ್ಯಾಯಾಲಯ ಹೇಳಿತು.

ಈ ಹಿನ್ನೆಲೆಯಲ್ಲಿ ಅರ್ಜಿದಾರರು ಒಂದನೇ ಪ್ರತಿವಾದಿ ವಿರುದ್ಧದ ಸೇವಾಲೋಪದ ಆರೋಪ ಸಾಬೀತುಪಡಿಸುವಲ್ಲಿ ಸಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಮೊಬೈಲ್ ಹ್ಯಾಂಡ್ ಸೆಟ್ಟನ್ನು ದುರಸ್ತಿಪಡಿಸಿ ಹಿಂತಿರುಗಿಸಬೇಕು, ದುರಸ್ತಿಯಾಗದ್ದಿದರೆ ಹೊಸ ಸೆಟ್ ನೀಡಬೇಕು, ಇಲ್ಲದೇ ಇದ್ದಲ್ಲಿ 3750 ರೂಪಾಯಿಗಳನ್ನು 500 ರೂಪಾಯಿ ಖಟ್ಲೆ ವೆಚ್ಚ ಸಹಿತವಾಗಿ ಮರುಪಾವತಿ ಮಾಡಬೇಕು ಎಂದು ಒಂದನೇ ಪ್ರತಿವಾದಿಗೆ ಆಜ್ಞಾಪಿಸಿತು.

ಎರಡನೇ ಪ್ರತಿವಾದಿ ಸಂಸ್ಥೆಯ ವಿರುದ್ಧದ ಆರೋಪವನ್ನು ತಳ್ಳಿಹಾಕಿದ ನ್ಯಾಯಾಲಯ ಅದರ ವಿರುದ್ಧದ ದೂರನ್ನು ವಜಾ ಮಾಡಿತು.

1 comment:

Anonymous said...

blog is very interesting.

Advertisement